ನಡೆಯದ “ಉತ್ತರಮುಖೀ’ ಚರ್ಚೆ
Team Udayavani, Dec 25, 2018, 9:33 AM IST
ಹುಬ್ಬಳ್ಳಿ: ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ನಡೆಯದ ಚರ್ಚೆ ಬಗ್ಗೆ ಆಡಳಿತ ಪಕ್ಷದ ಕೆಲ ಶಾಸಕರು ಅಸಮಾಧಾನದ ಜತೆಗೆ ಬಿಜೆಪಿ ವರ್ತನೆ ಕಾರಣ ಎಂದಿದ್ದರೆ; ಬಿಜೆಪಿಯವರು “ಇದೊಂದು ಉತ್ತರ ವಿರೋಧಿ ಸರ್ಕಾರ’ ಎಂದು ಎದುರೇಟು ನೀಡಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ನಡೆಯುವುದೇ ಕೇವಲ 10ದಿನ ಅಧಿವೇಶನ. ಅದರಲ್ಲೂ ಶನಿವಾರ, ಭಾನುವಾರ ತೆಗೆದು ಕೊನೇ ಅರ್ಧದಿನ ಪಕ್ಕಕ್ಕಿಟ್ಟರೆ ಕೇವಲ ಏಳು ದಿನ ಮಾತ್ರ ಅಧಿವೇಶನ ನಡೆದಂತಾಗುತ್ತದೆ. ಈ ಭಾಗದಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಡೆದು ಪರಿಹಾರ ದೊರೆಯುತ್ತದೆ ಎಂದು ಭಾವಿಸುವವರಿಗೆ ಈ ಬಾರಿ ನಿರಾಸೆಯಾಗಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಿ ಬರದ ಮೇಲೆ ಚರ್ಚೆ ನಡೆಯಿತಾದರೂ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ನಡೆಯಲಿಲ್ಲ.
ಅಧಿವೇಶನದ ಕೊನೇ ಎರಡು ದಿನ ಕಲಾಪ ಹೋರಾಟಕ್ಕೆ ಬಲಿಯಾಯಿತು.
ನಿರೀಕ್ಷೆ ಹೆಚ್ಚಿಸಿದ ನಿರ್ಧಾರ: ಸುವರ್ಣಸೌಧ ಜನರ ಬಳಕೆಗೆ ಪೂರಕವಾಗಿ ವಿವಿಧ ಇಲಾಖೆಗಳನ್ನು ಇಲ್ಲಿಗೆ
ಸ್ಥಳಾಂತರಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿತ್ತು. ಇದೀಗ ಸಮ್ಮಿಶ್ರ ಸರ್ಕಾರ ವಿವಿಧ ಒಂಭತ್ತು
ಇಲಾಖೆಗಳು, ಅದರ ವಿಭಾಗಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸುವ ಮಹತ್ವದ ನಿರ್ಣಯ
ಕೈಗೊಂಡಿರುವುದು ಆಡಳಿತ ಪಕ್ಷದ ಶಾಸಕರ ಸಮಾಧಾನಕ್ಕೆ ಕಾರಣವಾಗಿದ್ದರೆ, ವಿಪಕ್ಷದವರು ಇದೊಂದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದ್ದಾರೆ. ಅಧಿವೇಶನದ ಸಚಿವ ಸಂಪುಟ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಿ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ನಿಗಮ, ಪುರಾತತ್ವ,
ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಚೇರಿ, ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಪೈಕಿ ಎರಡು ಮಾಹಿತಿ ಆಯುಕ್ತರ ಕಚೇರಿ ಬೆಳಗಾವಿ, ಎರಡು ಕಲಬುರಗಿಗೆ ಹಾಗೂ ಲೋಕಾಯುಕ್ತದ ಎರಡು ಉಪಲೋಕಾಯುಕ್ತ ಕಚೇರಿಯಲ್ಲಿ ಒಂದನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.
ಈ ಮೂಲಕ ಉತ್ತರ ಕರ್ನಾಟಕಕ್ಕೆ ವಿವಿಧ ಕಚೇರಿಗಳ ಸ್ಥಳಾಂತರ ಪರ್ವ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ
ಇನ್ನಷ್ಟು ಕಚೇರಿಗಳು ಬರಲಿವೆ ಎಂಬುದು ಶಾಸಕರ ಅಭಿಮತವಾದರೆ, ಕೃಷ್ಣ ಜಲಭಾಗ್ಯ ನಿಗಮ, ನೀರಾವರಿ ನಿಗಮ ಉ.ಕ ದಲ್ಲಿಯೇ ಇವೆ ಎಂದು ಬಿಜೆಪಿ ಆರೋಪಿಸಿದೆ.
ದಿನಗಳು ಹೆಚ್ಚಿಸಲು ಒತ್ತಾಯ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸರಿಯಾದ ಚರ್ಚೆಯಾಗದಿರುವ ಬಗ್ಗೆ ಉ.ಕ.ದಲ್ಲಿನ ಶಾಸಕರು ಮತ್ತು ವಿಪಕ್ಷ ಬಿಜೆಪಿ ವರಿಷ್ಠರ ಅಭಿಪ್ರಾಯದಲ್ಲಿ ಒಮ್ಮತ ವ್ಯಕ್ತವಾಗಿದೆ. ಉತ್ತರಾಧಿವೇಶನ ಕೇವಲ ಕಾಟಾಚಾರಕ್ಕಾಗದೆ, ಈ ಭಾಗದ ಸಮಸ್ಯೆಗಳಿಗೆ ಕನಿಷ್ಠ ಪರಿಹಾರ ನೀಡಿದ ಸಂದೇಶ ರವಾನಿಸಬೇಕು.
ಆದರೆ ಅದು ಆಗುತ್ತಿಲ್ಲ. ಉ.ಕ. ಸಮಸ್ಯೆ, ಅಭಿವೃದ್ಧಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನು ಸುವರ್ಣ
ವಿಧಾನಸೌಧದಲ್ಲಿ ಕರೆಯಬೇಕು. ಇಲ್ಲವೇ ಅಧಿವೇಶನ 10 ದಿನದ ಬದಲು 15 ದಿನ ನಡೆಸಬೇಕೆಂಬ ಅಭಿಪ್ರಾಯ ಹಾಗೂ ಒತ್ತಾಯ ಹಲವು ಶಾಸಕರದ್ದಾಗಿದೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.