![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Aug 29, 2023, 7:15 AM IST
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜಲಾಶಯಗಳು ಎಷ್ಟು ಬೇಗ ತುಂಬುತ್ತಿವೆಯೋ ಅಷ್ಟೇ ಬೇಗ ಖಾಲಿಯಾಗುತ್ತಿವೆ. ಅದಕ್ಕೆ ಜಲಾಶಯಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿರುವುದೇ ಕಾರಣ. ಹೀಗಾಗಿ ನೀರಿನ ಸಂಗ್ರಹ ಸಾಮರ್ಥ್ಯ ಇಳಿಕೆಯಾಗುತ್ತ ಹೋಗುತ್ತಿದೆ.
ಮಳೆಗಾಲದಲ್ಲಿ ಜಲಾಶಯಕ್ಕೆ ಹರಿದು ಬರುವ ನೀರು, ಬೇಸಗೆಗೆ ಮೊದಲೇ ಖಾಲಿಯಾಗುತ್ತಿದೆ. ಅತ್ತ ಹೂಳೆತ್ತಲೂ ಆಗದೆ, ಇತ್ತ ಸಮತೋಲಿತ ಜಲಾಶಯಗಳನ್ನೂ ಕಟ್ಟಲಾಗದೆ ಜಲಸಂಪನ್ಮೂಲ ಇಲಾಖೆ ಕಂಗಾಲಾಗಿದೆ. ಹೂಳು ಹೆಚ್ಚುತ್ತಿರುವುದು ಸರಕಾರದ ಗಮನ ದಲ್ಲಿದ್ದರೂ ಪರ್ಯಾಯ ಮಾರ್ಗಗಳು ಮಾತ್ರ ಹೊಳೆಯುತ್ತಿಲ್ಲ.
ರಾಜ್ಯದ ಪ್ರಮುಖ 22 ಜಲಾಶಯಗಳ ಪೈಕಿ ಕಾವೇರಿ ಕಣಿವೆಯ ಹಾರಂಗಿ, ಹೇಮಾವತಿ, ಕೆಆರ್‌ಎಸ್, ಕಬಿನಿಯಲ್ಲಿ 114.57 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ ಮಳೆ ಕೊರತೆಯಿಂದ 72.03 ಟಿಎಂಸಿ ನೀರಿದೆ. ಕೃಷ್ಣಾ ಜಲಾನಯನ ಪ್ರದೇಶದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ ಜಲಾಶಯಗಳಲ್ಲಿ 422.45 ಟಿಎಂಸಿ ಬದಲು 341.11 ಟಿಎಂಸಿ ನೀರಿದೆ. ಪ್ರಮುಖವಾಗಿ ಜಲವಿದ್ಯುತ್ ಉತ್ಪಾದನೆಗಾಗಿ ಆಶ್ರಯಿಸಿರುವ ಲಿಂಗನಮಕ್ಕಿ, ಸೂಪಾ, ವಾರಾಹಿ ಜಲಾಶಯಗಳ ಸಂಗ್ರಹಣ ಸಾಮರ್ಥ್ಯವು 328.18 ಟಿಎಂಸಿಯಾಗಿದ್ದರೂ ಈಗ 160.20 ಟಿಎಂಸಿ ನೀರಿದೆ. ಈ ಪೈಕಿ ಕನಿಷ್ಠ ಕಾಲು ಭಾಗದಷ್ಟು ಹೂಳು ಇದೆ.
10 ವರ್ಷಗಳಿಗೊಮ್ಮೆ ಸಮೀಕ್ಷೆ
ಪ್ರತೀ 10 ವರ್ಷಗಳಿಗೊಮ್ಮೆ ಜಲಾಶಯಗಳ ಜಲವಿಜ್ಞಾನ ಸಮೀಕ್ಷೆ (ಹೈಡ್ರೋಲಾಜಿಕಲ್ ಸರ್ವೇ) ನಡೆಸಲಾಗುತ್ತದೆ. ಈ ಹಿಂದೆ 2012ರಲ್ಲಿ ನಡೆದಿತ್ತು. ಇತ್ತೀಚೆಗಷ್ಟೇ ಕೆಆರ್‌ಎಸ್, ಕಬಿನಿ, ಆಲಮಟ್ಟಿ, ನಾರಾಯಣಪೂರ ಹಾಗೂ ಮಲಪ್ರಭಾ ಜಲಾಶಯಗಳ ಹೈಡ್ರೋಲಾಜಿಕಲ್ ಸಮೀಕ್ಷೆ ನಡೆದಿದ್ದು, ಅದರ ವರದಿ ಬಿಡುಗಡೆ ಆಗಬೇಕಿದೆ. ಒಂದು ಅಂದಾಜಿನ ಪ್ರಕಾರ ಬಹುತೇಕ ಜಲಾಶ ಯಗಳಲ್ಲಿ 2-3 ಟಿಎಂಸಿಯಷ್ಟು ಹೂಳು ಇದೆ.
ತುಂಗಭದ್ರಾ ಜಲಾಶಯದಲ್ಲಿ
ಅಧಿಕ ಹೂಳು
ಕೃಷ್ಣಾ ಜಲಾನಯನ ಪ್ರದೇಶದ ತುಂಗಭದ್ರಾ ಜಲಾಶಯದಲ್ಲಿ ಅತ್ಯಧಿಕ ಪ್ರಮಾಣದ ಹೂಳು ತುಂಬಿದೆ. ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ ಸಹಿತ ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ಈ ಹೂಳು ಹೆಚ್ಚಿದೆ. ತುಂಗಭದ್ರಾ ಜಲಾಶಯದ ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ 105.79 ಟಿಎಂಸಿ. ಪ್ರಸ್ತುತ ಇಲ್ಲಿ 81.10 ಟಿಎಂಸಿ ನೀರಿದೆ ಎನ್ನಲಾಗುತ್ತಿದೆ. ಇದರಲ್ಲಿ 32-35 ಟಿಎಂಸಿಯಷ್ಟು ಹೂಳಿದೆ. ಅಂದರೆ ಶೇ. 34ರಷ್ಟು ಶೇಖರಣ ಸಾಮರ್ಥ್ಯ ಕುಸಿತ ಕಂಡಿದೆ. ಇಡೀ ಜಲಾಶಯದ ನೀರು ಖಾಲಿ ಮಾಡಿ ಹೂಳೆತ್ತಲು ಸಾಧ್ಯವಿಲ್ಲ. ಇದಕ್ಕಾಗಿ ಗಂಗಾವತಿ ತಾಲೂಕಿನ ನವಿಲೆ ಬಳಿ ಸಮತೋಲನ ಜಲಾಶಯ ನಿರ್ಮಿಸುವ ಪ್ರಸ್ತಾವನೆಯು ಸರಕಾರದ ಮುಂದಿದ್ದು, ಇದಕ್ಕೆ ಆಂಧ್ರಪ್ರದೇಶ, ತೆಲಂಗಾಣ ಅಡ್ಡಿಪಡಿಸುವ ಆತಂಕ ಇದೆ. ಆಲಮಟ್ಟಿ ಜಲಾಶಯವನ್ನು ಎತ್ತರಿಸಿದರೆ ಪುನರ್ವಸತಿ, ಪುನರ್ನಿರ್ಮಾಣಕ್ಕೆ 8 ಸಾವಿರ ಕೋಟಿ ರೂ. ಖರ್ಚಾಗಲಿದ್ದು, ಹೂಳು ತುಂಬುವ ಜಲಾಶಯಗಳಿಗೆ ಸಮತೋಲನ ಅಣೆಕಟ್ಟುಗಳನ್ನು ಕಟ್ಟುತ್ತ ಹೋದರೆ ಆರ್ಥಿಕ ಹೊರೆ ಹೆಚ್ಚಲಿದೆಯೇ ವಿನಾ ದೂರಗಾಮಿ ಪ್ರಯೋಜನ ಆಗುವುದಿಲ್ಲ. ಅಂತೆಯೇ ನಾರಾಯಣಪೂರ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯವು 33.31 ಟಿಎಂಸಿ ಆಗಿದ್ದು, ಶೇ. 28ರಷ್ಟು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಸರಿಸುಮಾರು 10 ಟಿಎಂಸಿಯಷ್ಟು ನೀರು ಸಂಗ್ರಹಿಸುವ ಜಾಗವನ್ನು ಹೂಳು ತಿನ್ನುತ್ತಿದೆ.
ಸುಲಭದ ಮಾತಲ್ಲ
ಅರಣ್ಯ ನಾಶ ಮತ್ತು ಗಣಿಗಾರಿಕೆಯಂತಹ ಚಟುವಟಿಕೆಗಳಿಂದ ಮಣ್ಣಿನ ಸವಕಳಿ ಹೆಚ್ಚಾಗಿದೆ. ಕೈಗಾರಿಕೆಗಳ ತ್ಯಾಜ್ಯದಿಂದಲೂ ಹೂಳು ತುಂಬುತ್ತಿದೆ. ಜಲಾಶಯದ ತಳ ಸೇರುವ ಹೂಳು ತಾನಾಗಿಯೇ ಹೊರಹೋಗುವುದಿಲ್ಲ. ಇದನ್ನು ಹೊರಗೆತ್ತಿ ಹಾಕುವುದೂ ಅಷ್ಟು ಸುಲಭವಲ್ಲ. ಸಣ್ಣ ನೀರಾವರಿ ಇಲಾಖೆಯಡಿ ಸುಮಾರು 3,419 ಕೆರೆಗಳು ಬರುತ್ತವೆ. ಈ ಪೈಕಿ ಶೇ.25-30ರಷ್ಟು ಕೆರೆಗಳಲ್ಲಿ ಹೂಳು ತುಂಬಿದೆ. ಇದನ್ನು ತೆಗೆಯುವುದೇ ಕಷ್ಟ ಇರುವಾಗ ಜಲಾಶಯದ ಹೂಳೆತ್ತುವುದು ಸುಲಭದ ಮಾತಲ್ಲ. ಜತೆಗೆ ಹೂಳೆತ್ತುವ ಪ್ರಕ್ರಿಯೆಯೂ ದುಬಾರಿ. ಜಲಾಶಯದಿಂದ ತೆಗೆದ ಹೂಳನ್ನು ಎಲ್ಲಿ ಹಾಕಬೇಕು ಎಂಬುದು ಎಲ್ಲದಕ್ಕಿಂತ ದೊಡ್ಡ ತಲೆನೋವು.
ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆಗಳ ಹೂಳೆತ್ತುವುದು ಕಷ್ಟದ ಕೆಲಸ. ಜಲಾಶಯಗಳಲ್ಲಿ
ತುಂಬಿದ ಹೂಳೆತ್ತುವುದು ಇನ್ನೂ ಕಷ್ಟ. ಕ್ರಮೇಣ ಹೂಳು ಕಡಿಮೆ ಮಾಡಬಹುದೇ ವಿನಾ ಒಂದೇ ಬಾರಿಗೆ ಇಡೀ ಜಲಾಶಯದ ಹೂಳೆತ್ತುವುದು ಆರ್ಥಿಕವಾಗಿಯೂ ದುಸ್ತರ.
-ಕ್ಯಾ| ರಾಜಾರಾವ್, ನಿವೃತ್ತ ಎಂಜಿನಿಯರ್
-ಶೇಷಾದ್ರಿ ಸಾಮಗ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.