Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Team Udayavani, Dec 5, 2024, 7:30 AM IST
ಬೆಂಗಳೂರು: ಜಲಾಶಯಗಳು ಭರ್ತಿಯಾಗಿದ್ದು ಮುಂದಿನ ಮುಂಗಾರು ವರೆಗೂ ಜಲವಿದ್ಯುತ್ ಉತ್ಪಾದನೆಗೆ ಸಮಸ್ಯೆ ಇಲ್ಲ ಎಂಬುದರ ನಡುವೆಯೇ ರಾಜ್ಯದ ವಿದ್ಯುತ್ ಸರಬ ರಾಜು ಕಂಪೆನಿ (ಎಸ್ಕಾಂ)ಗಳು ಮುಂದಿನ 3 ವರ್ಷಗಳಿಗೆ ಅಂದಾಜು ಮಾಡಿ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಈ ಮೂಲಕ ಬಹುವಾರ್ಷಿಕ ದರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿದ ಅನಂತರದ ಮೊದಲ ಪರಿಷ್ಕರಣೆಯ ಪ್ರಕ್ರಿಯೆ ಕೆಇಆರ್‌ಸಿ ಚಾಲನೆ ನೀಡಿದಂತಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ ಎಸ್ಕಾಂಗಳು ಮೊದಲ ವರ್ಷ ಪ್ರತಿ ಯೂನಿಟ್‌ಗೆ 65-70 ಪೈಸೆ ಹಾಗೂ 2ನೇ ವರ್ಷ 70-75 ಪೈಸೆ ಮತ್ತು 3ನೇ ವರ್ಷ 85-90 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿವೆ. ಒಂದು ವೇಳೆ ಇದಕ್ಕೆ ಅಸ್ತು ಎಂದರೆ ಗ್ರಾಹಕರಿಗೆ “ಶಾಕ್’ ಖಚಿತ.
ವಾರ್ಷಿಕ ಪರಿಷ್ಕರಣೆಗೆ ಸಂಬಂಧಿಸಿ ಪ್ರಸ್ತಾವನೆ ಸಲ್ಲಿಸಲು ನ. 30 ಕೊನೆಯ ದಿನವಾಗಿತ್ತು. ನಿಗದಿತ ಗಡುವಿನಲ್ಲಿ ಐದೂ ಎಸ್ಕಾಂಗಳು 3 ವರ್ಷಗಳಲ್ಲಿ ಆಗಲಿರುವ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಹಾಗೂ ಕೊರತೆಯಾಗಬಹು ದಾದ ವಿದ್ಯುತ್ ಖರೀದಿಯನ್ನು ಅಂದಾಜು ಮಾಡಿ ದರ ಪರಿಷ್ಕರಣೆಯನ್ನು ಲೆಕ್ಕಹಾಕಿ ಪ್ರಸ್ತಾವನೆ ಸಲ್ಲಿಸಿವೆ. 2025-26ನೇ ಸಾಲಿಗೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಕೇಳಿದ ದರ ಹೆಚ್ಚಳ ಒಂದೇ ಮಾದರಿಯಾಗಿದ್ದು ಉಳಿದೆರಡು ವರ್ಷಗಳಲ್ಲಿ ಮಾತ್ರ ತುಸು ವ್ಯತ್ಯಾಸ ಇದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
2025ರ ಮಾರ್ಚ್‌ಗೆ ಆದೇಶ
ಈ ಪ್ರಸ್ತಾವನೆಯ ವಾಸ್ತವಾಂಶಗಳು, ಉದ್ಯಮಿಗಳು, ತಜ್ಞರು, ಸಾಮಾನ್ಯ ಗ್ರಾಹಕರ ಅಹವಾಲುಗಳನ್ನು ಆಲಿಸಿ ಬರುವ 2025ರ ಮಾರ್ಚ್ ವೇಳೆಗೆ ಆಯೋಗವು ಪರಿಷ್ಕರಣೆಗೆ ಸಂಬಂಧಿಸಿದಂತೆ ತನ್ನ ಆದೇಶ ಪ್ರಕಟಿಸಲಿದೆ. ಆದರೆ ಕಳೆದ ಒಂದೂವರೆ ದಶಕದಲ್ಲಿ ವಿದ್ಯುತ್ ದರ ಇಳಿಕೆಯಾದ ಉದಾಹರಣೆಗಳೇ ಇಲ್ಲ. ಹಾಗಾಗಿ, ಹೆಚ್ಚಳದ ಬರೆ ಬೀಳುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.
ಕೈಗಾರಿಕೆಗಳಿಂದ ತೀವ್ರ ಆಕ್ಷೇಪ
ಬಹುವಾರ್ಷಿಕ ದರ ಪದ್ಧತಿಗೆ ಕೈಗಾರಿಕೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಹೀಗೆ 3 ವರ್ಷಗಳ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂಚಿತವಾಗಿಯೇ ಮಾಡುವುದು ವೈಜ್ಞಾನಿಕ ಕ್ರಮವಲ್ಲ. ಇದರಿಂದ ಹೊರೆಯೂ ಆಗಲಿದೆ. ಅಷ್ಟಕ್ಕೂ ದೇಶದ ಇತರ ರಾಜ್ಯಗಳು ಇನ್ನೂ ಈ ನಿಟ್ಟಿನಲ್ಲಿ ಕಾದುನೋಡುವ ತಂತ್ರ ಅನುಸರಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದನ್ನು ಅಳವಡಿಸಿಕೊಳ್ಳುತ್ತಿರುವುದು ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಪೂರಕ ಕ್ರಮವಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಅಪಸ್ವರಗಳ ಮಧ್ಯೆಯೇ ಪರಿಷ್ಕರಣೆಗೆ ಸಿದ್ಧತೆಗಳು ನಡೆದಿವೆ.
“ಬಹುವಾರ್ಷಿಕ ದರ ಪದ್ಧತಿಯು ಈಗಿರುವ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕದ (ಎಫ್ಪಿಪಿಸಿಎ) ಮುಂದುವರಿದ ಭಾಗವಾಗಿದೆ. ಎಫ್ಪಿಪಿಸಿಎಯಲ್ಲಿ ಆಯಾ ಎಸ್ಕಾಂಗಳಿಗೆ ಪ್ರತೀ ತಿಂಗಳು ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಎಂವೈಟಿ ಅಡಿ ಒಮ್ಮೆ ಪರಿಷ್ಕರಣೆಗೆ ಅನುಮೋದನೆ ನೀಡಿದರೆ ಮುಂದಿನ 3 ವರ್ಷಗಳ ಕಾಲ ಮತ್ತೆ ಯಾವುದೇ ರೀತಿಯ ದರ ಪರಿಷ್ಕರಣೆ ಮಾಡುವುದಿಲ್ಲ. ಹೆಚ್ಚೆಂದರೆ ವಾರ್ಷಿಕ ಕಾರ್ಯಸಾಧನೆ ಪರಿಶೀಲನೆಯಲ್ಲಿ (ಎಪಿಆರ್) ಕಂಡುಬರುವ ವ್ಯತ್ಯಾಸಗಳನ್ನು ಸರಿದೂಗಿಸಲು ನಾಲ್ಕೈದು ಪೈಸೆ ಹೆಚ್ಚು-ಕಡಿಮೆ ಆಗುತ್ತದೆ ಅಷ್ಟೇ’ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಗ್ರಾಹಕರಿಗೆ ಹೊರೆ
ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆ “ಗೃಹಜ್ಯೋತಿ’ ಇರುವುದರಿಂದ ಒಂದು ವೇಳೆ ದರ ಏರಿಕೆಯಾದರೂ ಅದರ ಬಿಸಿ ಗೃಹ ಬಳಕೆದಾರರಿಗೆ ನೇರವಾಗಿ ತಟ್ಟದಿರಬಹುದು. ಆದರೆ ತೆರಿಗೆ ಸೇರಿ ಬೇರೆ ಬೇರೆ ರೂಪದಲ್ಲಿ ಪರೋಕ್ಷವಾಗಿ ಇದರ ಬಿಸಿ ತಟ್ಟಲಿದೆ. ಅಂದರೆ ಸರಕಾರ ಸಂಪನ್ಮೂಲ ಸಂಗ್ರಹಿಸಿ ಭರಿಸಬೇಕಾಗುತ್ತದೆ. ಒಂದು ವೇಳೆ ವಿದ್ಯುತ್ ಬಳಕೆಗಿಂತ ನಿಗದಿತ ಶುಲ್ಕ ಹೆಚ್ಚಳ ಮಾಡಿದಾಗ ಅದನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ.
– ವಿಜಯ ಕುಮಾರ ಚಂದರಗಿ