ಸಂಘಟನೆಗಳ ಮೇಲೆ ನಿಗಾ: ಉದಯಪುರ ಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈಅಲರ್ಟ್
ದಾವತ್ ಇ-ಇಸ್ಲಾಮಿ ಸಂಘಟನೆ ಕುರಿತು ಮಾಹಿತಿ ಸಂಗ್ರಹ
Team Udayavani, Jun 30, 2022, 7:40 AM IST
ಉದಯಪುರ: ಕನ್ಹಯ್ಯಲಾಲ್ ಅಂತ್ಯಕ್ರಿಯೆ ಸಂದರ್ಭ ಕುಟುಂಬಿಕರ ರೋದನ.
ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಭೀಕರ ಹತ್ಯೆ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವಂತೆಯೇ ರಾಜ್ಯದಲ್ಲಿರುವ ಕೆಲವು ಸಂಘಟನೆಗಳ ಮೇಲೆ ಪೊಲೀಸರ ಕಣ್ಣು ನೆಟ್ಟಿದೆ.
ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿದ ಬೆನ್ನಲ್ಲೇ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಬಗ್ಗೆ ನಿಗಾ ಇರಿಸುವಂತೆ ಪ್ರತೀ ಜಿಲ್ಲಾ ವರಿಷ್ಠರಿಗೆ ಸೂಚಿಸಲಾಗಿದೆ. ಜತೆಗೆ ಇಬ್ಬರು ಹಂತಕರು ಸಂಪರ್ಕದಲ್ಲಿದ್ದ ಪಾಕಿಸ್ಥಾನದ ಕರಾಚಿ ಮೂಲದ ದಾವತ್ ಇ-ಇಸ್ಲಾಮಿ ಸಂಘಟನೆ ರಾಜ್ಯದಲ್ಲೂ ಇದೆಯೇ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಆದೇಶಿಸಲಾಗಿದೆ.
ಹತ್ಯೆಯನ್ನು ಖಂಡಿಸಿ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸಮಾಜ ಘಾತಕ ಶಕ್ತಿಗಳು ಅದರ ದುರ್ಲಾಭ ಪಡೆಯದಂತೆ ಎಚ್ಚರಿಕೆ ವಹಿಸಬೇಕು. ಕೆಲವು ಸಂಘಟನೆಗಳ ಮಾಹಿತಿ ಪಡೆಯುತ್ತಿರಬೇಕು.
ಅಂತಹ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವವರ ಬಗ್ಗೆಯೂ ಗಮನಹರಿಸಬೇಕು. ಯಾವುದೇ ರೀತಿಯಲ್ಲೂ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಎಸ್‌ಡಿಪಿಐ, ಪಿಎಫ್ಐ, ಎಸ್‌ಎಫ್ಐ ಸಹಿತ ಎಲ್ಲ ಮುಸ್ಲಿಂ ಸಂಘಟನೆಗಳ ಬಗ್ಗೆ ಕಣ್ಣಿಡಬೇಕು. ಅವುಗಳ ಅಧ್ಯಕ್ಷರು, ಸ್ಥಳೀಯ ಮುಖಂಡರ ಚಟುವಟಿಕೆಗಳ ಕುರಿತು ನಿರಂತರವಾಗಿ ಮಾಹಿತಿ ಸಂಗ್ರಹಿಸಬೇಕು ಎಂದೂ ಆದೇಶಿಸಲಾಗಿದೆ.
ದಾವತ್ ಇ-ಇಸ್ಲಾಮಿ ಹೆಸರಿನ ಸಂಘಟನೆ ರಾಜ್ಯದಲ್ಲಿ ಇದೆಯೇ, ಇದ್ದರೆ ಕಾರ್ಯ ಚಟುವಟಿಕೆಗಳೇನು ಎಂಬ ಮಾಹಿತಿ ಪಡೆಯಬೇಕು. ಜಿಲ್ಲಾ ಪೊಲೀಸರು ನಿರಂತರ ಗಸ್ತು ತಿರುಗಬೇಕು. ಗುಪ್ತಚರ ಇಲಾಖೆ, ಆಂತರಿಕಾ ಭದ್ರತಾ ವಿಭಾಗ (ಐಎಸ್‌ಡಿ) ಅಲರ್ಟ್ ಆಗಿರುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ಮಂಗಳೂರಿನಲ್ಲಿ ಹೆಚ್ಚು ನಿಗಾ
ಬೆಂಗಳೂರು, ಮಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಧಾರವಾಡ ಸಹಿತ ರಾಜ್ಯದ ಹಲವೆಡೆ ಘಟನೆ ಖಂಡಿಸಿ ಬುಧವಾರ ಭಾರೀ ಪ್ರತಿಭಟನೆಗಳು ನಡೆದಿವೆ. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕೆಲವು ಹಿಂದೂಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಲು ಸೂಚಿಸಲಾಗಿದೆ. ರಾಜ್ಯದ ಪ್ರತೀ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಳ ಮಾಡಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಕರಾಚಿಗೂ ಭೇಟಿ ನೀಡಿದ್ದ
ಟೈಲರ್ ಕನ್ಹಯ್ಯಲಾಲ್ ಹತ್ಯೆಗೂ ಪಾಕಿಸ್ಥಾನಕ್ಕೂ ನಂಟಿರುವುದು ದೃಢಪಟ್ಟಿದ್ದು, ಮುಖ್ಯ ಆರೋಪಿ ಗೌಸ್ ಮೊಹಮ್ಮದ್ 2014ರಲ್ಲಿ ಕರಾಚಿಗೆ ಭೇಟಿ ನೀಡಿದ್ದ ಎಂದು ರಾಜಸ್ಥಾನ ಪೊಲೀಸ್ ಮುಖ್ಯಸ್ಥ ಎಂ.ಎಲ್. ಲಥೇರ್ ಹೇಳಿದ್ದಾರೆ. ಗೌಸ್‌ಗೆ ಪಾಕ್‌ನ ದಾವತ್-ಇ-ಇಸ್ಲಾಮಿ ಎಂಬ ಸಂಘಟನೆಯೊಂದಿಗೆ ನಂಟಿತ್ತು. ಮುಂಬಯಿ, ದಿಲ್ಲಿಯಲ್ಲೂ ಈ ಸಂಘಟನೆಯ ಕಚೇರಿಗಳಿವೆ. ಆತನ ಮೊಬೈಲ್‌ನಲ್ಲಿ 10 ಪಾಕಿಸ್ಥಾನಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ ಎಂದು ಲಥೇರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸೂಚನೆಯಂತೆ ಈ ಹತ್ಯೆಯನ್ನು “ಭಯೋತ್ಪಾದನೆ ಕೃತ್ಯ’ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಸಂಬಂಧ ಗೌಸ್ ಮತ್ತು ರಿಯಾಜ್ ಸಹಿತ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಇದೇ ವೇಳೆ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ. ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಕನ್ಹಯ್ಯಲಾಲ್ ದೇಹದಲ್ಲಿ 26 ಇರಿತದ ಗಾಯಗಳಿದ್ದವು ಎಂದು ಹೇಳಲಾಗಿದೆ.
ಇಂದು ಜೈಪುರ ಮಾರ್ಕೆಟ್ ಬಂದ್
ವಿಎಚ್‌ಪಿ ಸೇರಿದಂತೆ ಹಿಂದೂ ಸಂಘಟನೆ ಬೆಂಬಲಿತ ವ್ಯಾಪಾರಿ ಸಂಘವು ಗುರುವಾರ ಜೈಪುರ ಮಾರುಕಟ್ಟೆ ಬಂದ್‌ಗೆ ಕರೆ ನೀಡಿದೆ. ರವಿವಾರ ಬೃಹತ್ ಪ್ರತಿಭಟನೆ ನಡೆಸಲು ಸಂಘಟನೆಗಳು ಚಿಂತನೆ ನಡೆಸಿವೆ. ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ ಕನ್ಹಯ್ಯಲಾಲ್ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದ್ದು, ಕಾನ್‌ಸ್ಟೆಬಲ್ ಒಬ್ಬರಿಗೆ ಕತ್ತಿಯಿಂದ ಇರಿದಿದ್ದಾರೆ. ದಿಲ್ಲಿ, ಗುರುಗ್ರಾಮದಲ್ಲೂ ಪ್ರತಿಭಟನೆ ನಡೆದಿವೆ.
ರವಿವಾರದ ವರೆಗೆ ರಾಜ್ಯದಲ್ಲಿ ಕಟ್ಟೆಚ್ಚರ
ಪ್ರತೀ ಪೊಲೀಸ್ ಠಾಣೆ ವ್ಯಾಪ್ತಿಯ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಳ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಶುಕ್ರವಾರ ಮಸೀದಿಗಳಲ್ಲಿ ಪ್ರಾರ್ಥನೆ ಇರುವುದರಿಂದ ಹೆಚ್ಚಿನ ನಿಗಾ ಇರಿಸಲಾಗಿದ್ದು, ಅಲ್ಲಿಯೂ ಭದ್ರತೆಗೆ ಸೂಚಿಸಲಾಗಿದೆ. ರವಿವಾರದವರೆಗೆ ರಾಜ್ಯದ ಎಲ್ಲೆಡೆ ಎಚ್ಚರಿಕೆ ವಹಿಸಬೇಕು. ಗುರುವಾರ ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾಧ್ಯವಾದರೆ ಸಂಘಟನೆ ಮುಖಂಡರ ಜತೆ ಚರ್ಚಿಸಿ ಶಾಂತಿಯುತವಾಗಿ ವರ್ತಿಸುವಂತೆ ಮನವೊಲಿಸಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಲಾಗಿದೆ.
ಪ್ರತೀ ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಿಸಲಾ ಗಿದೆ. ಗುರುವಾರ ಪ್ರತಿಭಟನೆ ನಡೆಯಲಿರುವ ಕಾರಣ ಹೆಚ್ಚಿನ ಭದ್ರತೆ ನೀಡಲಾಗುತ್ತದೆ.ಪ್ರತಿಭಟನೆಗೆ ಅಡ್ಡಿಪಡಿಸುವುದಿಲ್ಲ. ಆದರೆ ಅಹಿತಕರ ಘಟನೆಗೆ ಅವಕಾಶವಿಲ್ಲ. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಶುಕ್ರವಾರ ಮಸೀದಿಗಳಲ್ಲಿ ಪ್ರಾರ್ಥನೆ ಇರುವುದ ರಿಂದ ಅಲ್ಲಿಯೂ ಭದ್ರತೆಗೆ ಸೂಚಿಸಲಾಗಿದೆ.
-ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ
ಬುದ್ಧಿಜೀವಿಗಳು ಎನಿಸಿ ಕೊಂಡ ಬಹಳ ಜನರು ಧಾರವಾಡದ ನುಗ್ಗಿಕೆರೆಯಲ್ಲಿ ಕಲ್ಲಂಗಡಿ ಒಡೆದು ಹಾಕಿದಾಗ ಮಾತನಾಡಿದರು. ಈಗ ಉದಯಪುರ ಹತ್ಯೆ ವಿಚಾರ ದಲ್ಲಿ ಅವರ ನಾಲಿಗೆಗೆ ಲಕ್ವಾ ಹೊಡೆದಿ ದೆಯೇ? ಒಂದು ವರ್ಗದ ಬಗ್ಗೆ ತೀವ್ರ ಕಿಡಿ, ಮತ್ತೊಂದು ವರ್ಗದ ಮೇಲೆ ವಿಪರೀತ ಪ್ರೀತಿ; ಇದೆಷ್ಟು ಸರಿ?
– ಆರಗ ಜ್ಞಾನೇಂದ್ರ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.