ಉದಯವಾಣಿ ಸಂದರ್ಶನ: ಮುಂದಿನ ಚುನಾವಣೆಗೆ ರೂಟ್‌ಮ್ಯಾಪ್‌ ಸಿದ್ಧ


Team Udayavani, Aug 27, 2020, 6:45 AM IST

ಉದಯವಾಣಿ ಸಂದರ್ಶನ: ಮುಂದಿನ ಚುನಾವಣೆಗೆ ರೂಟ್‌ಮ್ಯಾಪ್‌ ಸಿದ್ಧ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್‌ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಹಲವಾರು ಸಮಸ್ಯೆ-ಸವಾಲುಗಳ ನಡುವೆಯೂ ಪಕ್ಷ ಸಂಘಟನೆ ಬಲವರ್ಧನೆ ಹಾಗೂ ಸರಕಾರವನ್ನು ಸುಭದ್ರಗೊಳಿಸುವಲ್ಲಿ ರಾಜ್ಯಾಧ್ಯಕ್ಷರಾಗಿ ತಮ್ಮ ಹೊಣೆಗಾರಿಕೆ ಯಶಸ್ವಿಯಾಗಿ ನಿರ್ವಹಿಸಿರುವ ನಳಿನ್‌ ಕುಮಾರ್‌ ತಮ್ಮ ಈ ಒಂದು ವರ್ಷದ ಪಯಣದ ಕುರಿತಂತೆ ‘ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

 

ಪಕ್ಷದ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿರುವುದಕ್ಕೆ ಏನು ಹೇಳಬಯಸುವಿರಿ?
– ಬಹಳ ತೃಪ್ತಿ ತಂದಿದೆ. ಏಕೆಂದರೆ, ನಾನು ರಾಜ್ಯಾಧ್ಯಕ್ಷನಾದಾಗ ಸಹಜವಾಗಿಯೇ ಕೆಲವೊಂದು ಮಾತುಗಳು ಕೇಳಿಬಂದಿತ್ತು. ಕರಾವಳಿ ಜಿಲ್ಲೆಯವನು, ಕರಾವಳಿ ಬಿಟ್ಟು ಬೇರೆ ಕಡೆ ನೋಡದವನು, ಹೈದರಾಬಾದ್‌ ಕರ್ನಾಟಕ, ಮಧ್ಯ ಕರ್ನಾಟಕ ಅಥವಾ ಹಳೇ ಮೈಸೂರು ಕರ್ನಾಟಕ ಏನೆಂದು ಗೊತ್ತಿಲ್ಲ ಎನ್ನುವುದು. ಆದರೆ ಈ ಒಂದು ವರ್ಷದಲ್ಲಿ ಇಡೀ ರಾಜ್ಯದಲ್ಲಿ ಏಳು ಬಾರಿ ಸುತ್ತಾಡಿದ್ದೇನೆ. ಭೌಗೋಳಿಕ, ರಾಜಕೀಯ ಹಾಗೂ ಸಾಮಾಜಿಕವಾದ ಅಧ್ಯಯನ ಮಾಡಿಕೊಂಡು ನಾನು ಪಕ್ಷ ಸಂಘಟನ ಕಾರ್ಯ ಯಶಸ್ವಿಗೊಳಿಸಲು ಪ್ರಯತ್ನಿಸಿದ್ದೇನೆ.

ರಾಜ್ಯದ ಮೂಲೆ-ಮೂಲೆಗೆ ನನ್ನ ಪರಿಚಯವಾಗಿದ್ದು, ಹತ್ತಾರು ಯಶಸ್ವಿ ಕಾರ್ಯಕ್ರಮಗಳ ಮೂಲಕ ನನ್ನ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆಲ್ಲ ಸಮರ್ಥ ಉತ್ತರ ನೀಡಿದ್ದೇನೆ. ಅಧ್ಯಕ್ಷನಾಗಿ ಮಹಾನಗರ ಪಾಲಿಕೆ-ಉಪ ಚುನಾವಣೆ, ವಿಧಾನ ಪರಿಷತ್‌- ರಾಜ್ಯಸಭೆ ಚುನಾವಣೆ ಹೀಗೆ ಹಲವು ಸವಾಲುಗಳನ್ನು ಯಶಸ್ವಿ ಯಾಗಿ ಎದುರಿಸಿದ ಹಾಗೂ ನಿಭಾಯಿಸಿದ ವರ್ಷವೂ ಹೌದು. ಹೀಗಿರುವಾಗ, ಪಕ್ಷದೊಳಗೆ ಸೂಕ್ತ ಮಾನದಂಡ ಇಟ್ಟುಕೊಂಡು ಹೊಸತನ ತರುವ ಮೂಲಕ ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಸಾಧಿಸುವಲ್ಲಿ ಬಹಳ ಎಚ್ಚರಿಕೆ ಯಿಂದ ಕೆಲಸ ಮಾಡಿದ್ದೇನೆ ಎನ್ನುವ ಆತ್ಮ ವಿಶ್ವಾಸ ನನಗಿದೆ.

ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಬಲಪಡಿಸುವಲ್ಲಿ ಅಧ್ಯಕ್ಷರಾದ ವೇಳೆ ನಿಮಗಿದ್ದ ನಿರೀಕ್ಷೆಗಳು ಸಫಲವಾಗಿವೆಯೇ?
– ಖಂಡಿತವಾಗಿಯೂ ನನ್ನ ಹಲವಾರು ನಿರೀಕ್ಷೆಗಳು ಈ ಒಂದು ವರ್ಷದ ಅವಧಿಯಲ್ಲಿ ಸಾಕಾರಗೊಂಡಿವೆ. ಪ್ರಾರಂಭದಲ್ಲಿ ಒಂದು ರೀತಿಯಲ್ಲಿ ನನಗೂ ಸಣ್ಣ ಭಯವಿತ್ತು. ಇಷ್ಟು ದೊಡ್ಡ ಪಕ್ಷ, ಅದರಲ್ಲಿಯೂ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಒಂದೆಡೆ ಶಾಸಕರು-ಮಂತ್ರಿಗಳು; ಇನ್ನೊಂದೆಡೆ ಯಡಿಯೂರಪ್ಪ, ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ ಹೀಗೆ ಹಲವು ಹಿರಿಯ ನಾಯಕರ ದಂಡಿರುವ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಜವಾಬ್ದಾರಿ ನಾನು ಹೇಗೆ ನಿರ್ವಹಿಸುವುದು ಎನ್ನುವ ಅಂಜಿಕೆಯೂ ಇತ್ತು. ಆದರೆ, ವರಿಷ್ಠರ ಮಾರ್ಗದರ್ಶನ ಹಾಗೂ ಉಳಿದವರೆಲ್ಲರ ಸಹಕಾರದಿಂದ ರಾಜ್ಯಾಧ್ಯಕ್ಷನ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಲು ನನಗೆ ಸಾಧ್ಯವಾಗಿದೆ.

ಹಾಗಾದರೆ, ಪಕ್ಷ ಬಲವರ್ಧನೆಯಲ್ಲಿ ನಿಮ್ಮ ಪಾತ್ರವೇನು?
– ಪಕ್ಷದೊಳಗಿನ ಸಂಘಟನಾತ್ಮಕ ನಡೆಯಿಂದಾಗಿ ಬೂತ್‌ ಸಮಿತಿ, ಶಕ್ತಿ ಕೇಂದ್ರ ಸಮಿತಿ, ಮಹಾಶಕ್ತಿ ಕೇಂದ್ರಗಳ ಸಮಿತಿಗಳ ರಚನೆಯಾಗಿವೆ. ಮತದಾರರ ಪಟ್ಟಿ ಆಧರಿಸಿ ಪೇಜ್‌ ಪ್ರಮುಖರನ್ನು ಮಾಡಿದ್ದೇವೆ. ಬೂತ್‌ ಸಮಿತಿಯಿಂದ ಹಿಡಿದು ರಾಜ್ಯ ಸಮಿತಿವರೆಗೆ ಯಾವುದೇ ಗೊಂದಲಗಳಾಗದಂತೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. 9 ಜಿಲ್ಲಾ ಕಾರ್ಯಾಲಯಗಳಿಗೆ ಶಿಲಾನ್ಯಾಸ ಮಾಡಲಾಗಿದ್ದು, ಇನ್ನು 9 ಜಿಲ್ಲಾ ಕಾರ್ಯಾಲಯಗಳಿಗೆ ಶೀಘ್ರ ಶಿಲಾನ್ಯಾಸ ಮಾಡಲಾಗುವುದು.

ಮುಂದಿನ ಒಂದು ವರ್ಷ ದೊಳಗೆ ಸಂಘಟನಾತ್ಮಕವಾಗಿರುವ ನಮ್ಮ ಎಲ್ಲ ಜಿಲ್ಲೆಯಲ್ಲಿಯೂ ಕಾರ್ಯಾಲಯಗಳನ್ನು ಸ್ಥಾಪಿಸಲಾಗುವುದು. ಶಾಸಕರು- ಸಚಿವರು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ಎಲ್ಲ ಸಚಿವರು ಪಕ್ಷದ ಕಾರ್ಯಾಗಾರಗಳಿಗೆ ಬಂದು ಸಂವಾದ ಮಾಡುವುದಕ್ಕೆ ಕ್ರಮ ವಹಿಸಲಾಗಿದೆ.

ರಾಜ್ಯಾಧ್ಯಕ್ಷರಾಗಿ ಈ ಅವಧಿ ನಿಮ್ಮ ಪಾಲಿಗೆ ಸವಾಲು- ಸಮಸ್ಯೆಗಳ ವರ್ಷವಾಗಿತ್ತು ಎಂದು ಅನ್ನಿಸುವುದಿಲ್ಲವೇ?
– ಖಂಡಿತವಾಗಿಯೂ. ಅಧ್ಯಕ್ಷನಾದ ಕೂಡಲೇ ಮಂತ್ರಿಮಂಡಲದ ರಚನೆಯನ್ನು ಯಾವುದೇ ಗೊಂದಲಗಳಿಲ್ಲದೆ ಬಗೆಹರಿಸಬೇಕಿತ್ತು. ಆಗ, ಪಕ್ಷದ ವರಿಷ್ಠರು “ನೀವು ಹೇಗೆ ಈ ಎಲ್ಲ ಗೊಂದಲ ಬಗೆ ಹರಿಸುವಿರಿ’ ಎಂದು ಕೇಳಿದ್ದರು. ಆದರೆ, ಯಡಿಯೂರಪ್ಪನವರ ಮಾರ್ಗದರ್ಶನದಿಂದ ಎಲ್ಲವನ್ನೂ ಪರಿಹರಿಸಲು ಸಾಧ್ಯವಾಗಿತ್ತು. ಅತ್ತ ನಮ್ಮ ಸರಕಾರಕ್ಕೂ ಸಮಸ್ಯೆ-ಸವಾಲು ಎದುರಾಗಿತ್ತು. ಯಡಿಯೂರಪ್ಪನವರಿಗೂ ಮುಖ್ಯಮಂತ್ರಿಯಾದ ತಕ್ಷಣ ನೆರೆ ಪರಿಸ್ಥಿತಿ, ಆ ನಂತರದಲ್ಲಿ ಉಪ ಚುನಾವಣೆಗಳು. ಅದಾದ ಕೂಡಲೇ ಬಜೆಟ್‌ ನೀಡುವ ಸಂದರ್ಭ.

ಆನಂತರದಲ್ಲಿ ಕೋವಿಡ್ 19 ಆತಂಕ ಹೀಗೆ ಹತ್ತಾರು ಸಮಸ್ಯೆ-ಸವಾಲುಗಳು ನಿರಂತರ ಎದುರಾಗುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಮ್ಮ ಸರಕಾರ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿರುವುದು ಬಹಳ ಖುಷಿಯ ವಿಚಾರ. ಕೊರೊನಾ ಸಂದರ್ಭ ರಾಜ್ಯದಲ್ಲಿ 1.68 ಕೋಟಿ ಜನರಿಗೆ ಊಟ ಕೊಡುವ ಕೆಲಸವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಮಾಡಿದ್ದಾರೆ. 68 ಲಕ್ಷ ಮಂದಿ ಮನೆ ಬಾಗಿಲಿಗೆ ಆಹಾರ ಕಿಟ್‌ ತಲುಪಿಸಿದ್ದೇವೆ. ಒಂದೂವರೆ ಲಕ್ಷ ಮಂದಿಗೆ ಔಷಧ ನೀಡಿದ್ದೇವೆ.

ಗೊಂದಲವಿಲ್ಲದೆ ಆಡಳಿತ ನಡೆಸಲು ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ನಡುವಿನ ಸಮನ್ವಯತೆ ಬಹಳ ಮುಖ್ಯ. ಹಾಗಾದರೆ, ಯಡಿಯೂರಪ್ಪ ಮತ್ತು ನಿಮ್ಮ ನಡುವಿನ ಕೆಮಿಸ್ಟ್ರಿ ಹೇಗಿದೆ?
– ನಾನು ನಿರಂತರವಾಗಿ ಪಕ್ಷದ ಎಲ್ಲ ಕಾರ್ಯ-ಚಟುವಟಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅವರು ಕೂಡ ಸರಕಾರದ ತೀರ್ಮಾನ- ಯೋಜನೆಗಳ ಬಗ್ಗೆ ನನ್ನ ಗಮನಕ್ಕೆ ತರುತ್ತಿದ್ದಾರೆ. ಆ ಮೂಲಕ, ಸರಕಾರದ ಯೋಜನೆ-ಯೋಚನೆಗಳನ್ನು ರಾಜ್ಯದ ಜನರಿಗೆ ತಲುಪಿಸುವುದಕ್ಕೆ ನಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದು, ಆ ಕೆಲಸವನ್ನು ಅವರೆಲ್ಲರೂ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಸರಕಾರದಲ್ಲಿ ಇದ್ದರೂ ಅಥವಾ ಪಕ್ಷದೊಳಗೆ ಇದ್ದರೂ ನಾವಿಬ್ಬರು ನಿತ್ಯ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳುತ್ತೇವೆ.

ಒಂದೆಡೆ ಸಂಸದರ ಜವಾಬ್ದಾರಿ; ಇನ್ನೊಂದೆಡೆ ರಾಜ್ಯಾಧ್ಯಕ್ಷರ ಕೆಲಸದ ಒತ್ತಡ. ಇವೆರಡನ್ನೂ ಹೇಗೆ ನಿಭಾಯಿಸುತ್ತಿದ್ದೀರಿ?
– ಕಳೆದ ಒಂದು ವರ್ಷದಲ್ಲಿ ಇಡೀ ರಾಜ್ಯದಲ್ಲಿ ಏಳು ಬಾರಿ ಪ್ರವಾಸ ಮಾಡಿದ್ದೇನೆ. ಚುನಾವಣೆ ಸಂದರ್ಭದಲ್ಲಿಯೂ ಆಯಾ ಕ್ಷೇತ್ರಗಳಲ್ಲಿ ಸುತ್ತಾಟ ಮಾಡಿದ್ದೆ. ಕೋವಿಡ್ 19 ಸಂದರ್ಭದಲ್ಲಿ ರಾಜ್ಯದಲ್ಲಿ ಎರಡು ಬಾರಿ ಪ್ರವಾಸ ಮಾಡಿರುವ ದೇಶದ ಏಕೈಕ ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್‌ ಎಂಬುದಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಪ್ರಶಂಸಿರುವುದು ನನಗೆ ಬಹಳ ಖುಷಿ ತಂದಿದೆ.

ನನ್ನ ಕೆಲಸ ಕಾರ್ಯಗಳ ಕುರಿತು ಪ್ರತ್ಯೇಕ ವೇಳಾಪಟ್ಟಿ ಮಾಡಿಕೊಂಡಿದ್ದೇನೆ. ಸಂಸದನಾಗಿ ವಾರದಲ್ಲಿ ಎರಡು ದಿನ ನನ್ನ ಕ್ಷೇತ್ರದಲ್ಲೇ ಇದ್ದು, ಇಲ್ಲಿನ ಜವಾಬ್ದಾರಿ ನಿಭಾಯಿಸುತ್ತೇನೆ. ಎರಡು ದಿನ ರಾಜ್ಯ ಪ್ರವಾಸಕ್ಕೆ ಮೀಸಲಿಟ್ಟಿದ್ದು, ಉಳಿದ ಮೂರು ದಿನ ಕೇಂದ್ರ ಕಾರ್ಯಾಲಯದಲ್ಲಿದ್ದು, ಆ ಕುರಿತ ಕೆಲಸ- ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ.

2023ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಏನೆಲ್ಲ ತಯಾರಿ ನಡೆಯುತ್ತಿವೆ?
– ಬೂತ್‌ ಮಟ್ಟದಿಂದ ರಾಜ್ಯಮಟ್ಟದವರೆಗೆ ಪಕ್ಷ ಸಂಘಟನೆ ಬಲಪಡಿಸುವುದಕ್ಕೆ ಎಲ್ಲ ರೀತಿಯ ಪೂರ್ವ ತಯಾರಿ ನಡೆಯುತ್ತಿದೆ. ಜನರ ಮನೆ ಬಾಗಿಲಿಗೆ ನಿರಂತರ ಹೋಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ತಿಳಿಸುವುದಕ್ಕೆ ಕಾರ್ಯ ಕರ್ತರ ತಂಡಗಳನ್ನು ರಚಿಸಲಾಗಿದೆ. ಮುಂದಿನ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಶೇ.80ರಷ್ಟು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ.

ನಮ್ಮ ಬಹುದೊಡ್ಡ ಗುರಿಯಿರುವುದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದು. ಅಷ್ಟೇ ಅಲ್ಲ, ಅದನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಹಾಗೂ ನಮ್ಮ ಪಕ್ಷದ ಎಲ್ಲ ನಾಯಕರು-ಕಾರ್ಯಕರ್ತರಿಗೂ ಇದೆ. ಮುಂದಿನ ವಿಧಾನಸಭೆ ಚುನಾವಣೆಗಾಗಿಯೇ ನಾವೊಂದು ರೂಟ್‌ ಮ್ಯಾಪ್‌ ಹಾಗೂ ಟೈಮ್‌ ಟೇಬಲ್‌ ಮಾಡಿಕೊಂಡು ಸಂಘಟನಾತ್ಮಕ ಶಕ್ತಿಯ ಆಧಾರದಲ್ಲಿ ಗೆಲುವು ಸಾಧಿಸುವುದೇ ನಮ್ಮ ಗುರಿ.

2023ರ ಚುನಾವಣೆಯನ್ನೂ ಯಡಿಯೂರಪ್ಪನವರ ನಾಯಕತ್ವದಲ್ಲೇ ಎದುರಿಸುವಿರಾ?
– ನೋಡಿ, ನಮ್ಮಲ್ಲಿರುವುದು ಸಾಮೂಹಿಕ ನಾಯಕತ್ವ. ಯಾವುದೇ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ. ಆದರೆ ನಮಗೀಗ ನಾಯಕರು ಯಡಿಯೂರಪ್ಪನವರು. ನಮ್ಮ ಪಕ್ಷದಲ್ಲಿ ಆ ಸಂದರ್ಭಕ್ಕೆ ಸರಿಯಾಗಿ ನಾಯಕತ್ವವನ್ನು ಪ್ರಕಟಿಸುವ ವ್ಯಕ್ತಿಗಳು ರೂಪುಗೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿಯೂ ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ಮಾಡುತ್ತೇವೆ. ಹೀಗಿರುವಾಗ, ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಪ್ರಶ್ನೆಯೇ ಎದುರಾಗುವುದಿಲ್ಲ.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾದವರ ಪೈಕಿ ಅನೇಕರು ಆನಂತರ ಮುಖ್ಯಮಂತ್ರಿಗಳಾಗಿದ್ದು, ನಳಿನ್‌ ಕುಮಾರ್‌ಗೂ ಮುಂದೆ ಅಂಥ ಅವಕಾಶ ಒಲಿಯಬಹುದೇ?
– ಖಂಡಿತವಾಗಿಯೂ ಇಲ್ಲ. ನಾನು ಆರ್‌ಎಸ್‌ಎಸ್‌ ಸಂಘಟನೆಯಿಂದ ಬಂದವನು. ನನ್ನದು ರಾಜಕಾರಣ ಕ್ಷೇತ್ರವೇ ಆಗಿರಲಿಲ್ಲ. ನನ್ನನ್ನು ರಾಜಕೀಯಕ್ಕೆ ಹೋಗು ಅಂತ ಸಂಘಟಕರು ಹೇಳಿದ್ದರೂ ನಾನು ಒಪ್ಪಿರಲಿಲ್ಲ. 2009ರಲ್ಲಿ ಸಂಸದರಾಗಿ ಸ್ಪರ್ಧಿಸು ಎಂದಾಗಲೂ ಒಪ್ಪಿರಲಿಲ್ಲ. ಕಳೆದ ವರ್ಷ ರಾಜ್ಯಾಧ್ಯಕ್ಷ ಸ್ಥಾನವನ್ನೂ ಬಯಸಿರಲಿಲ್ಲ.

ಇವತ್ತಿನವರೆಗೂ ನಾನು ಯಾವುದೇ ಹುದ್ದೆ ಬಯಸಿ ಅಥವಾ ಅರ್ಜಿ ಹಾಕಿದವನಲ್ಲ. ಆದರೂ ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೇರಿದ್ದೇನೆ. ನಮ್ಮಲ್ಲಿ ಪಕ್ಷದ ಕಾರ್ಯಕರ್ತ ಎನ್ನುವುದೇ ಸರ್ವ ಶ್ರೇಷ್ಠ ಹುದ್ದೆ. ಪಕ್ಷವೇ ನಮ್ಮ ಕರ್ತವ್ಯ ಮತ್ತು ನಿಷ್ಠೆ ಗುರುತಿಸಿ ಎತ್ತರಕ್ಕೆ ಬೆಳೆಸುತ್ತದೆ. ಹೀಗಾಗಿ, ನನಗೂ ಮುಂದೆ ಯಾವ ಹುದ್ದೆಗೆ ಹೋಗಬೇಕೆಂಬ ಬಯಕೆ ಇಲ್ಲ. ಪಕ್ಷದ ಕಾರ್ಯಕರ್ತನಾಗಿಯೇ ಇರಬೇಕೆನ್ನುವುದೇ ನನ್ನ ಆಶಯವಾಗಿದೆ. ಒಂದು ಪಕ್ಷವನ್ನು ಸರ್ವವ್ಯಾಪಿ ಮಾಡಿ ಮನೆ-ಮನಗಳಲ್ಲಿ ಕಮಲ ಅರಳಿಸುವುದೇ ನನ್ನ ಅಪೇಕ್ಷೆ.

ರಾಜ್ಯಸಭೆಗೆ ಆಯ್ಕೆ ಸೇರಿದಂತೆ ಇತ್ತೀಚಿನ ಕೆಲವು ಪಕ್ಷದ ತೀರ್ಮಾನಗಳಿಗೆ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದ್ದು, ಇಂಥ ಅನಿರೀಕ್ಷಿತ ನಿರ್ಧಾರಗಳಿಗೆ ಕಾರಣವೇನು?
– ಒಂದು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ತಮಗೆ ಬೇಕಾದವರು, ಬೇರೆ ಕಡೆಯಿಂದ ಬಂದವರು, ಮೂಲ ನಿವಾಸಿಗಳಿಗೆ ಮಣೆ ಹಾಕುತ್ತಾರೆ ಎನ್ನುವ ನಿರೀಕ್ಷೆಗಳಿರುತ್ತವೆ. ಹೌದು; ಹೊರಗಡೆಯಿಂದ ಬಂದವರನ್ನು ಪಕ್ಷಕ್ಕೆ ಸೇರಿಸಿಕೊಂಡ ಮೇಲೆ ಅವರೆಲ್ಲ ನಮ್ಮವರೇ. ಆದರೆ, ನಮ್ಮ ಕಾರ್ಯಕರ್ತರಲ್ಲಿಯೂ ವಿಶ್ವಾಸ ಮೂಡಿಸುವ ಕೆಲಸಗಳು ಪಕ್ಷದೊಳಗೆ ಆಗಬೇಕು. ಈ ಕಾರಣಕ್ಕೆ ಯಾವುದೇ ಹುದ್ದೆ, ಅಧಿಕಾರದ ನಿರೀಕ್ಷೆಗಳಿಲ್ಲದೆ ಕೇವಲ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ರಾಜ್ಯಸಭೆ, ವಿಧಾನ ಪರಿಷತ್‌ಗೆ ಆಯ್ಕೆ ಮಾಡಿರುವ ಕೆಲಸಗಳಾಗಿವೆ.

ಆ ಮೂಲಕ, ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ನಮಗೂ ಒಂದು ಅವಕಾಶ ದೊರೆಯಬಹುದೆನ್ನುವ ವಿಶ್ವಾಸವನ್ನು ಕಾರ್ಯಕರ್ತರಲ್ಲಿ ಮೂಡಿಸುವ ಪ್ರಯತ್ನಗಳಾಗಿವೆ. ಇದು ಕಾರ್ಯಕರ್ತರಲ್ಲಿಯೂ ತಮ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಆದರೆ, ಕಾಂಗ್ರೆಸ್‌ನಂಥ ಒಂದು ರಾಷ್ಟ್ರೀಯ ಪಕ್ಷಕ್ಕೆ ಸೂಕ್ತ ಅಧ್ಯಕ್ಷನ ಆಯ್ಕೆಗೆ ದುಃಸ್ಥಿತಿ ಬಂದಿದೆ. ಏಕೆಂದರೆ ಅದೊಂದು ವೃದ್ಧಾಶ್ರಮ. ಯುವಕರಿಗೆ ಕಾಂಗ್ರೆಸ್‌ನಲ್ಲಿ ಆದ್ಯತೆಯಿಲ್ಲ. ಹೀಗಾಗಿ, ಆ ಪಕ್ಷದಲ್ಲಿ ಅಧ್ಯಕ್ಷರ ಆಯ್ಕೆ ಗೊಂದಲ ಮುಂದುವರಿಯುತ್ತಿದೆ.

ಸಂದರ್ಶನ: ಸುರೇಶ್‌ ಪುದುವೆಟ್ಟು

ಟಾಪ್ ನ್ಯೂಸ್

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

Exam

PG NEET-2024: ನೋಂದಣಿ ವಿಸ್ತರಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.