ಅನಂತ್ ಕುಮಾರ್ ಪಂಚಭೂತಗಳಲ್ಲಿ ಲೀನ;ಪತ್ನಿ , ಪುತ್ರಿಯರ ಕಣ್ಣೀರು
Team Udayavani, Nov 13, 2018, 9:30 AM IST
ಬೆಂಗಳೂರು: ಸೋಮವಾರ ವಿಧಿವಶರಾದ ಬಿಜೆಪಿಯ ದಿಗ್ಗಜ ನಾಯಕ,ಕೇಂದ್ರ ಸಚಿವ ಎಚ್.ಎನ್.ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಗಣ್ಯಾತೀಗಣ್ಯರ ಸಮಕ್ಷಮ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.ಈ ವೇಳೆ ಪತ್ನಿ ತೇಜಸ್ವಿನಿ ಮತ್ತು ಪುತ್ರಿಯರಿಬ್ಬರು ತೀವ್ರ ಕಂಬನಿ ಮಿಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಅನಂತಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.ಈ ವೇಳೆ ಕೇಂದ್ರ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹಾಜರಿದ್ದರು.
ಬೆಳಗ್ಗೆ ಅನಂತ್ ಕುಮಾರ್ ಅವರ ನಿವಾಸದಿಂದ ಸೇನಾ ವಾಹನದಲ್ಲಿ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ಬಿಜೆಪಿ ಕಚೇರಿಗೆ ತರಲಾಯಿತು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.ನೂರಾರು ಬಿಜೆಪಿ ನಾಯಕರು ಮತ್ತು ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.
ಬೆ. 10ರಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರದ ಹಲವು ಸಚಿವರು ಸೇರಿ ಗಣ್ಯಾತೀಗಣ್ಯರು , ಸಾವಿರಾರು ಮಂದಿ ಅಭಿಮಾನಿಗಳು ಅಂತಿಮ ನಮನ ಸಲ್ಲಿಸದರು.
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು. ಸ್ಮಾರ್ಥ ಬ್ರಾಹ್ಮಣ ವಿಧಿಗಳಂತೆ ಅಂತಿಮ ಸಂಸ್ಕಾರ ನಡೆಯಿತು. ಶ್ರೀಗಂಧ, ಹಸುವಿನ ತುಪ್ಪ ಮೊದಲಾದ ದ್ರವ್ಯಗಳಿಂದ ಶರೀರವನ್ನು ದಹನ ಮಾಡಲಾಯಿತು. ಪುರೋಹಿತರು ಈಗಾಗಲೇ ಮಂತ್ರಘೋಷಗಳೊಂದಿಗೆ ಅಂತಿಮ ವಿಧಿ ಗಳನ್ನು ನಡೆಸಿದರು.
ಮಲಗಿದ್ದ ಶಿಷ್ಯನ ಕಂಡು ಕಂಬನಿ ಮಿಡಿದ ಅಡ್ವಾಣಿ
ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಶಿಷ್ಯ ಅನಂತ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅನಂತ್ ಕುಮಾರ್ ಅವರ ಪಾರ್ಥೀವ ಶರೀರ ಕಂಡು ಕಂಬನಿ ಮಿಡಿದರು. ಅನಂತ್ ಕುಮಾರ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕೇಂದ್ರ ಸಚಿವರಾದ ರಾಜ್‌ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ , ಡಿ.ವಿ.ಸದಾನಂದ ಗೌಡ ಸೇರಿ 20 ಕ್ಕೂ ಹೆಚ್ಚು ಮಂದಿ ಅಂತಿಮ ಕ್ರಿಯೆಯಲ್ಲಿ ಹಾಜರಾಗಿ ಗೌರವ ಸಮರ್ಪಣೆ ಮಾಡಿದರು.
ರಾಜ್ಯ ಸರ್ಕಾರದ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆ ವೇಳೆ ಸಾವಿರಾರು ಮಂದಿ ಅಭಿಮಾನಿಗಳು,ಬಿಜೆಪಿ ಕಾರ್ಯಕರ್ತರು , ಮುಖಂಡರು ಅಮರ್ ರಹೇ ಅನಂತ್ ಕುಮಾರ್..ಅಮರ್ ರಹೇ ಅನಂತ್ ಕುಮಾರ್ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಸಾರ್ವಜನಿಕರಿಗೆ ಅಂತಿಮ ವಿಧಿಗಳನ್ನು ವೀಕ್ಷಿಸುವ ಸಲುವಾಗಿ ಮೈದಾನದ ಹೊರಗೆ ಬೃಹತ್ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ರುದ್ರಭೂಮಿಯತ್ತ ಲಕ್ಷಾಂತರ ಜನರು ಹರಿದು ಬಂದಿದ್ದರು. ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.