ಬಿಎಸ್‌ವೈ ವಿರುದ್ಧ ಅನರ್ಹರು ಗರಂ
Team Udayavani, Sep 22, 2019, 3:05 AM IST
ಬೆಂಗಳೂರು: 15 ಕ್ಷೇತ್ರಕ್ಕೆ ದಿಢೀರ್ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಅನರ್ಹ ಶಾಸಕರು ಆತಂಕಗೊಂಡಿದ್ದಾರೆ. ಮುಂದೇನು ಎಂದು ತಿಳಿಯದೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಅನರ್ಹ ಶಾಸಕರು ಅರಣ್ಯ ಇಲಾಖೆ ಸರ್ಕಾರಿ ಅತಿಥಿ ಗೃಹದಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಈ ವೇಳೆ ತಮ್ಮ ಮುಂದಿನ ದಾರಿ ಬಗ್ಗೆ ಸ್ಪಷ್ಟಪಡಿಸುವಂತೆ ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.
ನಿರೀಕ್ಷೆಗಿಂತಲೂ ಮೊದಲೇ ಚುನಾವಣೆ ಘೋಷಣೆಯಾಗಿದ್ದರಿಂದ ಅನರ್ಹರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ತಮ್ಮ ಅಧಿಕೃತ ಕಾರ್ಯಕ್ರಮ ಬದಿಗೊತ್ತಿ, ಅನರ್ಹರ ಮುಂದಿನ ರಾಜಕೀಯ ಭವಿಷ್ಯ ಹಾಗೂ ಕಾನೂನು ಹೋರಾಟದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ವೇಳೆ ಕಾನೂನು ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಗೆಸ್ಟ್ ಹೌಸ್‌ಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಅನರ್ಹ ಶಾಸಕರಿಗೆ ಯಡಿಯೂ ರಪ್ಪ ಎಲ್ಲ ರೀತಿಯ ಕಾನೂನು ನೆರವು ನೀಡಲು ಜೊತೆಯಲ್ಲಿ ರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಅನರ್ಹ ಶಾಸಕರಾದ ಎಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಸಭೆಗೆ ಗೈರಾಗಿದ್ದರು ಎಂದು ತಿಳಿದು ಬಂದಿದೆ.
ಸಂತೋಷ್ ಮೇಲೆ ಆಕ್ರೋಶ: ಅನರ್ಹ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಸಭೆಗೆ ಬರುವ ಮೊದಲು ಅವರ ಆಪ್ತ ಸಹಾಯಕ ಸಂತೋಷ್ ಮೇಲೆ ವಾಗ್ಧಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಆರ್.ಪೇಟೆ ನಾರಾಯಣಗೌಡ, ಆರ್.ಶಂಕರ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮನ್ನು ನಂಬಿಕೊಂಡು ನಮ್ಮ ಜೀವನ ಹಾಳಾಯಿತು ಎಂದು ವಾಗ್ಧಾಳಿ ನಡೆಸಿದರು ಎಂದು ತಿಳಿದು ಬಂದಿದೆ.
ನಾವೇ ಅಭ್ಯರ್ಥಿಗಳಾಗುತ್ತೇವೆ: ಸಭೆ ನಂತರ ಮಾತನಾಡಿದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್, ಸೋಮವಾರ ಸುಪ್ರೀಂ ಕೊರ್ಟ್‌ನಲ್ಲಿ ಅನರ್ಹ ಪ್ರಕರಣ ವಿಚಾರಣೆಗೆ ಬರಲಿದೆ. ಈ ಸಂಬಂಧ ವಕೀಲರೊಂದಿಗೆ ಭಾನುವಾರ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದೇವೆ. ನಮ್ಮ ಅನರ್ಹತೆ ಪ್ರಕರಣ ಇತ್ಯರ್ಥವಾಗುವವರೆಗೂ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ, ಈಗ ಆಯೋಗ ಚುನಾವಣೆ ಘೋಷಣೆ ಮಾಡಿದೆ.
ಇದರಿಂದ ನಮಗೇನು ಆತಂಕ ಇಲ್ಲ. ಸೋಮವಾರ ನಮ್ಮ ಪ್ರಕರಣಕ್ಕೆ ತಡೆಯಾಜ್ಞೆ ದೊರೆಯುವ ಸಾಧ್ಯತೆ ಇದೆ. ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದವರು ಯಾರೂ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗುವ ಮೊದಲೇ ಅನರ್ಹತೆ ಪ್ರಕರಣಕ್ಕೆ ತಡೆಯಾಜ್ಞೆ ಸಿಗುವ ಭರವಸೆ ಇದೆ. ಹೀಗಾಗಿ ಈ ಚುನಾವಣೆಯಲ್ಲಿ ನಾವೇ ಅಭ್ಯರ್ಥಿಗಳಾಗುತ್ತೇವೆ. ಬಿಜೆಪಿಯಿಂದಲೇ ಅಭ್ಯರ್ಥಿಗಳಾಗುತ್ತೇವೆ ಎಂದೇನಿಲ್ಲ. ಆದರೆ, ನಾವೇ ಅಭ್ಯರ್ಥಿಗಳಾಗುತ್ತೇವೆ ಎಂದು ಹೇಳಿದರು.
ನನ್ನ ಕ್ಷೇತ್ರಕ್ಕೆ ಏಕೆ ಚುನಾವಣೆ ಘೋಷಣೆ ಮಾಡಿಲ್ಲ ಎಂದು ಗೊತ್ತಿಲ್ಲ. ನಾವೆಲ್ಲರೂ ಸೇರಿಯೇ ನಮ್ಮ ಪ್ರಕರಣ ಇತ್ಯರ್ಥವಾಗುವವರೆಗೂ ಚುನಾವಣೆ ನಡೆಸದಂತೆ ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ, ಎರಡು ಕ್ಷೇತ್ರ ಬಿಟ್ಟಿರುವುದು ಏಕೆ ಎಂದು ಗೊತ್ತಿಲ್ಲ.
-ಪ್ರತಾಪ್‌ಗೌಡ ಪಾಟೀಲ್, ಅನರ್ಹ ಶಾಸಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.