ವೀರಶೈವ ಮಹಾಸಭಾ ವೃದ್ಧಾಶ್ರಮ, ಖಂಡ್ರೆ ವಾರ್ಡನ್
Team Udayavani, Oct 17, 2017, 9:43 AM IST
ಬೀದರ (ಬಸವಕಲ್ಯಾಣ): “ಲಿಂಗಾಯತ ಧರ್ಮ ಮಾನ್ಯತೆ ವಿಷಯದಲ್ಲಿ ತೊಡಕಾಗಿರುವ ಅಖೀಲ ಭಾರತ ವೀರಶೈವ
ಮಹಾಸಭೆ ಒಂದು ವೃದ್ಧಾಶ್ರಮ ಇದ್ದಂತೆ. ಇದಕ್ಕೆ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿರುವ ಸಚಿವ ಈಶ್ವರ ಖಂಡ್ರೆ ವಾರ್ಡನ್ ಆಗಿದ್ದಾರೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಶ್ರೀ ಮಾತೆ ಮಹಾದೇವಿ ವ್ಯಂಗ್ಯವಾಡಿದ್ದಾರೆ.
ಬಸವಕಲ್ಯಾಣದಲ್ಲಿ ಸೋಮವಾರ ಲಿಂಗಾಯತ ಮಹಾರ್ಯಾಲಿ ನಿಮಿತ್ತ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಮಹಾಸಭಾ ಇಡೀ ಸಮಾಜದ ಪ್ರತಿನಿಧಿ ಅಲ್ಲ. ಸಂಸ್ಥೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ರಾಜ್ಯಾಧ್ಯಕ್ಷ ತಿಪ್ಪಣ್ಣ ಅವರಿಗೆ ಈಗ ವಯಸ್ಸಾಗಿದ್ದು, ಧರ್ಮದ ಜ್ಞಾನ ಇಲ್ಲವಾಗಿದೆ. ಅವರೆಲ್ಲರಿಗೆ ಈಶ್ವರ ಖಂಡ್ರೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿನಾಕಾರಣ ಲಿಂಗಾಯತ ಚಳವಳಿಗೆ ತೊಡಕು ಉಂಟು ಮಾಡುತ್ತಿದ್ದಾರೆ. ಬಸವಣ್ಣ ಅವರಿಗೆ ತಿಳಿವಳಿಕೆ ಕೊಡಲಿ’ ಎಂದರು.
“ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂಬುದು ಮಹಾಸಭಾದವರ ಒತ್ತಾಯ. ಇನ್ನೂ ನೂರು ವರ್ಷ ಹೋರಾಟ ಮಾಡಿದರೂ ಇದಕ್ಕೆ ಮಾನ್ಯತೆ ಸಿಗುವುದಿಲ್ಲ. ವೀರಶೈವ ಎಂದರೆ ಹಿಂದೂ ಧರ್ಮದ ಅಂಗವಾದ ಒಂದು ಶೈವ ಆಗುತ್ತದೆಯೇ ಹೊರತು ಸ್ವತಂತ್ರ ಧರ್ಮ ಆಗುವುದಿಲ್ಲ. ಶರಣ ಪರಂಪರೆಯ ಮಠದಲ್ಲಿ ಬೆಳೆದಿರುವ ಶಾಮನೂರು ಮತ್ತು ಖಂಡ್ರೆ ಅವರು ಅಧಿಕಾರಕ್ಕಾಗಿ ವೀರಶೈವ ಪದ ಇಟ್ಟುಕೊಂಡು ಇಡೀ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು.
ಲಿಂಗಾಯತ ಕೋಟಾದಲ್ಲಿ ಟಿಕೆಟ್: ಮಹಾಸಭಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರ ಶಾಲಾ ಪ್ರಮಾಣ ಪತ್ರದಲ್ಲಿ ಇರುವುದು ಲಿಂಗಾಯತ ಹೊರತು ವೀರಶೈವ ಅಲ್ಲ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಮಾತ್ರ ಲಿಂಗಾಯತ ಕೋಟಾದಲ್ಲಿ ಟಿಕೆಟ್ ಕೇಳುತ್ತಾರೆ. ಧರ್ಮದ ಮಾನ್ಯತೆ ವಿಷಯ ಬಂದಾಗ ಸ್ವಾರ್ಥ ಪ್ರದರ್ಶಿಸುತ್ತಿದ್ದಾರೆ. ಲಿಂಗಾಯತ ಮಹಾರ್ಯಾಲಿ ಯಾವುದೇ ರಾಜಕೀಯ ಚಳವಳಿ ಅಲ್ಲ, ಇದು ಧರ್ಮದ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂದು ಹೇಳಿದರು. ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿ ನಂತರ ವೀರಶೈವ ಧರ್ಮ ಸ್ವೀಕರಿಸಿದರು ಎಂಬ ಪಂಚಾಚಾರ್ಯರ ಹೇಳಿಕೆ ಶುದ್ಧ ಸುಳ್ಳು. ಈ ಬಗ್ಗೆ ಯಾವುದೇ ದಾಖಲೆಗಳಲ್ಲಿ ಉಲ್ಲೇಖ ಇಲ್ಲ. ವೈದಿಕ ಧರ್ಮದಲ್ಲಿನ ಭಿನ್ನಾಭಿಪ್ರಾಯ, ಅಸ್ಪ್ರಶ್ಯತೆಯನ್ನು ಕಂಡು ಬೇಸತ್ತು ಹೊಸ ಲಿಂಗಾಯತ ಧರ್ಮ ಸ್ಥಾಪಿಸಿದರು. ಇದನ್ನು
ತಾವು ಸಿದ್ಧಪಡಿಸಲು ಸಿದ್ಧ. ಬೇಕಾದರೆ ಚಿದಾನಂದ ಮೂರ್ತಿ ಸೇರಿ ಯಾವುದೇ ವಿದ್ವಾಂಸರೊಂದಿಗೆ ವೇದಿಕೆ ರಚಿಸಲಿ ಎಂದು ಸವಾಲು ಹಾಕಿದರು.
ರ್ಯಾಲಿಗೆ ವಿರೋಧ
ಬೀದರ (ಬಸವಕಲ್ಯಾಣ): ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿನ ಮಹಾರ್ಯಾಲಿಗೆ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಮಹಾರ್ಯಾಲಿ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಕಪ್ಪು ಪಟ್ಟಿ ಧರಿಸಿದ ಪಂಚ ಕಮಿಟಿ ಸದಸ್ಯರ ಗುಂಪು, ಮಾತೆ ಮಹಾದೇವಿ ವಿರುದ್ಧ ಕೀಳು ಮಟ್ಟದ ಶಬ್ದ ಬಳಸಿ ನಿಂದಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು. ರ್ಯಾಲಿ ವೇಳೆ ಬಸವೇಶ್ವರ ವೃತ್ತದ ಪುತ್ಥಳಿಗೆ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಕಿದ್ದ ಪುಷ್ಪ ಮಾಲೆ ತೆಗೆದು ಹಾಕಿದ ಘಟನೆ ನಡೆಯಿತಲ್ಲದೆ, ಇದನ್ನು ಸಮಾವೇಶದಲ್ಲಿ ತೀವ್ರವಾಗಿ ಖಂಡಿಸಲಾಯಿತು. ಬಸವ ಕೇಂದ್ರದ ಪ್ರಮುಖರು ವೇದಿಕೆಯತ್ತ ತೆರಳಿ ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
“ಬುದ್ಧಿ ಭ್ರಮಣೆಯಾಗಿದೆ’
ಅಮೀನಗಡ: “ಹಾನಗಲ್ ಕುಮಾರ ಶ್ರೀಗಳ ಪಾದದ ಧೂಳಿಗೂ ಸಮನಿಲ್ಲದ ಮಾತೆ ಮಹಾದೇವಿಯ ಬುದ್ಧಿ ನೆಟ್ಟಗಿಲ್ಲ. ಅವರು ತುತ್ಛವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ’ ಎಂದು ಅಮೀನಗಡ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಹಾಗೂ ಕಮತಗಿ ಹೊಳೆಹುಚ್ಚೇಶ್ವರ ಸ್ವಾಮೀಜಿ ಜಂಟಿಯಾಗಿ ಖಂಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯರಿಗೆ ಅಸಹ್ಯ ಪಡಬೇಡ ಎಂದು ಬಸವಣ್ಣನವರ ಮಾತನ್ನು ಪಾಲಿಸದ ಮಾತೆ ಮಹಾದೇವಿ ಅನ್ಯರನ್ನು ದೂಷಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹಾನಗಲ್ ಕುಮಾರ ಸ್ವಾಮಿಗಳು ಅಖೀಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು. ಅಂದಿನ ಎಲ್ಲ ಸ್ವಾಮೀಜಿಗಳಿಗೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿದ ಪೂಜ್ಯರ ಕುರಿತು ಸ್ವಯಂ ಘೋಷಿತ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಹಗುರವಾಗಿ ಮಾತನಾಡಿರುವುದು
ಸರಿಯಲ್ಲವೆಂದರು.
ಲಿಂಗಾಯತರ ಶಕ್ತಿ ಪ್ರದರ್ಶನ
ಬೀದರ (ಬಸವಕಲ್ಯಾಣ): ಲಿಂಗಾಯತರು ಸೋಮವಾರ ಬಸವಕಲ್ಯಾಣದಲ್ಲಿ ಮಹಾರ್ಯಾಲಿ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ, ಧಾರವಾಡದ ಮಾತೆ ಗಂಗಾದೇವಿ ಮತ್ತು ಶಾಸಕ ಮಲ್ಲಿಕಾರ್ಜುನ ಖೂಬಾ ನೇತೃತ್ವದಲ್ಲಿ ರ್ಯಾಲಿ ನಡೆಸಲಾಯಿತು. ಜಿಲ್ಲೆ ಮಾತ್ರವಲ್ಲ ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿ ಮಹಾರಾಷ್ಟ್ರ,
ತೆಲಂಗಾಣದ ಸಾವಿರಾರು ಬಸವ ಅನುಯಾಯಿ ಗಳು ಸೇರಿದ್ದರು. ಸಚಿವರಾದ ಎಂ.ಬಿ. ಪಾಟೀಲ ಮತ್ತು ವಿನಯ ಕುಲಕರ್ಣಿ ಅನುಪಸ್ಥಿತಿಯಲ್ಲಿ ನಡೆದ ಈ ಮಹಾರ್ಯಾಲಿಯಲ್ಲಿ ಕೌಠಾದ ಶ್ರೀ ಸಿದ್ಧರಾಮ ಶರಣರು ಬೆಲ್ದಾಳ, ಬೆಂಗಳೂರಿನ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಲ್ಯಾಣದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ನಗರಸಭೆ ಅಧ್ಯಕ್ಷ ಅಝರ್ ಅಲಿ, ಸಮನ್ವಯ ಸಮಿತಿಯ ಬಸವ ರಾಜ ಬುಳ್ಳಾ, ಬಾಬು ವಾಲಿ, ಆನಂದ ದೇವಪ್ಪ, ಶ್ರೀಕಾಂತ ಸ್ವಾಮಿ, ಮುಖಂಡರಾದ ಬಾಬು ಹೊನ್ನಾನಾಯಕ, ಶಿವರಾಜ ನರಶೆಟ್ಟಿ, ಅವಿನಾಶ ಭೋಸಿಕರ್ ಮತ್ತಿತರರು ಭಾಗವಹಿಸಿದ್ದರು.
ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹಮ್ಮಿಕೊಂಡಿದ್ದ ಮಹಾರ್ಯಾಲಿಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವುದು ರಾಜಕೀಯ ಪ್ರೇರಿತವಾಗಿದೆ. ಏನೂ ಇಲ್ಲದ ಬಸವಣ್ಣನ ಕರ್ಮಭೂಮಿಯಲ್ಲಿ ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳದವರು ಹೊಟ್ಟೆ ಕಿಚ್ಚಿನಿಂದ ಈ ಕೃತ್ಯ ಮಾಡಿದ್ದಾರೆ. ಕಲ್ಯಾಣ ಪರ್ವದ ಆರಂಭದ ವರ್ಷಗಳಲ್ಲೂ ನಮಗೆ ಚಿತ್ರಹಿಂಸೆ ಕೊಡಲಾಗಿತ್ತು. ಈಗ ಕೆಲವು ಬೆರಳಣಿಕೆಯಷ್ಟು ಜನರು ಕಪ್ಪು ಪಟ್ಟಿ ಧರಿಸಿ ಮಹಾರ್ಯಾಲಿಗೆ ಆಕ್ಷೇಪ ಎತ್ತಿದ್ದಾರೆ.
● ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ
ಬೀದರ್‌ನ ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾರ್ಯಾಲಿ ನಿಮಿತ್ತ ನಡೆದ ಸಮಾವೇಶದಲ್ಲಿ ಕೂಡಲಸಂಗಮದ ಮಾತೆ ಮಹಾದೇವಿ ಮಾತನಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.