ಮಹದಾಯಿ ಸಮಸ್ಯೆ ಬಗೆಹರಿಸೋ ಪರಿಸ್ಥಿತಿಯಲ್ಲಿ ನಾವು ಇಲ್ಲ! BSY
Team Udayavani, Dec 26, 2017, 5:58 PM IST
ಬೆಂಗಳೂರು:ಮಹದಾಯಿ ವಿವಾದವನ್ನು ಪರಿಹರಿಸಲು ಸಿಎಂ ಸಿದ್ದರಾಮಯ್ಯ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದು, ಸದ್ಯ ಮಹದಾಯಿ ಸಮಸ್ಯೆ ಬಗೆಹರಿಸೋ ಪರಿಸ್ಥಿತಿಯಲ್ಲಿ ಇಲ್ಲ ಎಂದು ಕೈಚೆಲ್ಲಿದ್ದಾರೆ!
ಮಂಗಳವಾರ ಸಂಜೆ ಬಿಜೆಪಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರನ್ನು ಭೇಟಿಯಾಗಿ ಸಂಧಾನ ನಡೆಸಿ ವಿಫಲವಾದ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹದಾಯಿ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳುತ್ತಿದ್ದಾರೆ. ಆದರೂ ನಾವು ಮಹದಾಯಿ ವಿಚಾರದಲ್ಲಿ ಗೋವಾ ಸಿಎಂಗೆ ಮನವಿ ಮಾಡಿದ್ದೇವು. ಅದರಂತೆ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಬಿಡಲು ಗೋವಾ ಸಿದ್ಧ ಎಂದು ತಿಳಿಸಿತ್ತು.
ಗೋವಾ ಮುಖ್ಯಮಂತ್ರಿ ಪರ್ರೀಕರ್ ಅವರು ಲಿಖಿತ ಪತ್ರ ನೀಡಿದ್ದಾರೆ. ಆದರೆ ಅದನ್ನು ಸಿಎಂ ಸಿದ್ದರಾಮಯ್ಯ ವಿರೋಧಿಸುವ ಮೂಲಕ ಬೆಂಕಿ ಹಚ್ಚಿದ್ದಾರೆ. ಗೋವಾ ಕಾಂಗ್ರೆಸ್ ನಾಯಕರಿಗೆ ಹೇಳಿ ಮಹದಾಯಿ ಸಮಸ್ಯೆಯನ್ನು ತೀವ್ರಗೊಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹದಾಯಿ ಹೋರಾಟವನ್ನು ಸಿಎಂ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಿಮಗೆ (ಕಾಂಗ್ರೆಸ್) ಕಾಳಜಿ ಇದ್ದರೆ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಮುಂದಾಗಿ. ರಾಜ್ಯ ಸರ್ಕಾರಕ್ಕೆ ರೈತರ ಹಿತ ಬೇಕಾಗಿಲ್ಲ, ರಾಜಕೀಯಕ್ಕಾಗಿ ಈ ರೀತಿ ಮಾಡುತ್ತಿರುವುದಾಗಿ ದೂರಿದರು.
ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಪರ್ರೀಕರ್ ನೀಡಿರುವ ಪತ್ರವನ್ನು ಟ್ರಿಬ್ಯೂನಲ್ ಗೆ ಸಲ್ಲಿಸಲಿ ಎಂದು ಯಡಿಯೂರಪ್ಪ ಹೇಳಿದರು. ನಾವು ಹೋರಾಟಗಾರರ ಮನವೊಲಿಕೆಗೆ ಯತ್ನಿಸಿದ್ದೇವೆ. ಪ್ರತಿಭಟನಾಕಾರರು ಸಿಎಂ ನಿವಾಸದ ಮುಂದೆ ಧರಣಿ ನಡೆಸಲಿ ಎಂದರು.