Western Ghat: ಆರು ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 400 ಕೋಟಿ ರೂ. ಯೋಜನೆ
ಕಂದಾಯ ಇಲಾಖೆ ರೂಪಿಸಿದ "ಮಾಸ್ಟರ್ ಪ್ಲ್ರಾನ್'ಗೆ ಒಪ್ಪಿಗೆ, ಮೊದಲ ಹಂತದಲ್ಲಿ 150 ಕೋಟಿ ರೂ. ಬಿಡುಗಡೆಗೆ ಅಸ್ತು
Team Udayavani, Jan 15, 2025, 7:40 AM IST
ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳನ್ನು ಕೆಲವು ವರ್ಷಗಳಿಂದ ಕಾಡುತ್ತಿರುವ ಭೂ ಕುಸಿತ ಸಮಸ್ಯೆ ತಡೆಯುವುದಕ್ಕೆ ಕಂದಾಯ ಇಲಾಖೆ 2.5 ವರ್ಷಗಳ “ಮಾಸ್ಟರ್ ಪ್ಲ್ರಾನ್’ ಸಿದ್ಧಪಡಿಸಿದ್ದು, ಒಟ್ಟು 400 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪರಿಹಾರ ರೂಪಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 150 ಕೋಟಿ ರೂ. ಬಿಡುಗಡೆ ಮಾಡುವುದಕ್ಕೆ ಸರಕಾರ ಹಸುರು ನಿಶಾನೆ ತೋರಿದೆ.
ಕೆಲವು ವರ್ಷಗಳಿಂದ ಪಶ್ಚಿಮಘಟ್ಟ ವ್ಯಾಪ್ತಿಯ ದಕ್ಷಿಣಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಪ್ರಕರಣಗಳು ಜನರಲ್ಲಿ ತೀವ್ರ ಆತಂಕ ಉಂಟು ಮಾಡಿವೆ. ಕಳೆದ ವರ್ಷ ನಡೆದ ಶಿರೂರು ಗುಡ್ಡ ಕುಸಿತ ಪ್ರಕರಣವಂತೂ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳ ದುಷ್ಪರಿಣಾಮಕ್ಕೆ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಭೂ ಕುಸಿತ ತಡೆಯುವುದಕ್ಕಾಗಿ ಶಾಶ್ವತ ಪರಿಹಾರ ಕ್ರಮಗಳನ್ನು ಹುಡುಕುವುದಕ್ಕೆ ಮುಂದಾಗಿದ್ದು, ಎಸ್‌ಡಿಎಂಎಫ್ (ಸ್ಟೇಟ್ ಡಿಸಾಸ್ಟರ್ ಮಿಟಿಗೇಶನ್ ಫಂಡ್) ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಯೋಜನೆ ರೂಪಿಸಿದೆ.
ಪರಿಹಾರ ಕ್ರಮಗಳು ಅತ್ಯಂತ ವೈಜ್ಞಾನಿಕವಾಗಿರಬೇಕೆಂಬ ಉದ್ದೇಶದಿಂದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ನೆರವಿನೊಂದಿಗೆ ಈ 7 ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಬಹುದಾದ ಸಂಭಾವ್ಯ ಪ್ರದೇಶಗಳನ್ನು ಗುರುತಿಸಲಾಗಿದೆ. ಇಲ್ಲಿ ಯಾವ ರೀತಿ ಪರಿಹಾರ ಕಾರ್ಯ ನಡೆಸಬೇಕೆಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾವೇ ರಾಜ್ಯ ಸರಕಾರಕ್ಕೆ ಸಲಹೆ ನೀಡಿತ್ತು. ಇದರ ಆಧಾರದ ಮೇಲೆ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಚರ್ಚೆ ನಡೆಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎರಡೂವರೆ ವರ್ಷದ ಮಾಸ್ಟರ್ ಪ್ಲ್ರಾನ್ ರೂಪಿಸಿದ್ದು, ಒಟ್ಟು 400 ಕೋಟಿ ರೂ. ನಿಗದಿ ಮಾಡಲಾಗಿದೆ.
ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಕ್ರಿಯಾಯೋಜನೆ ರೂಪಿಸಲು ಕಂದಾಯ ಇಲಾಖೆ ಸೂಚಿಸಿತ್ತು. ಈಗ ಎಲ್ಲ ಜಿಲ್ಲೆಗಳಿಂದ ವರದಿ ಲಭ್ಯವಾಗಿದ್ದು, ಮೊದಲ ಹಂತದಲ್ಲಿ 150 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ 37 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಯ ಸಮ್ಮತಿ ದೊರಕಲಿದೆ.
ಭೂಕುಸಿತದ ರಕ್ಷಣೆ ಹೇಗೆ?
ಶಾಶ್ವತ ಪರಿಹಾರವೆಂದರೆ ಮತ್ತೆ ಗುಡ್ಡ ಅಗೆಯುವುದು ಅಥವಾ ನಿರ್ಮಾಣ ಕಾರ್ಯವಲ್ಲ. ಭೂ ಕುಸಿತದ ಭೀತಿ ಇರುವ ಕಡೆಗಳಲ್ಲಿ ಆರ್‌ಸಿಸಿ ಕೇಸ್ ಹಾಕಲಾಗುತ್ತದೆ. ಇಲ್ಲವಾದರೆ ಹುಲ್ಲು, ಗಿಡ, ಬೇರು ಗಟ್ಟಿ ಇರುವ ತಳಿಯ ಸಸ್ಯಗಳನ್ನು ಆ ಪ್ರದೇಶದಲ್ಲಿ ಬೆಳೆಸಿ ಮಣ್ಣಿಗೆ ನೈಸರ್ಗಿಕ ರಕ್ಷಣ ಕವಚ ನಿರ್ಮಿಸಲಾಗುತ್ತದೆ. ರಸ್ತೆ ಕಾಮಗಾರಿಯಿಂದ ಗುಡ್ಡ ಕೊರೆದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಇಳಿಜಾರು ತಗ್ಗಿಸಲಾಗುತ್ತದೆ.
ತೀರಾ ಇಳಿಜಾರಾಗಿ ಗುಡ್ಡ ಕೊರೆದಿರುವುದರಿಂದಲೇ ಕುಸಿತ ಹೆಚ್ಚುತ್ತಿದೆ. ಜತೆಗೆ ನೀರಿನ ಹರಿವು ಕಾಮಗಾರಿಗಳಿಂದ ಅಡ್ಡಗಟ್ಟಲ್ಪಟ್ಟಿದ್ದರೆ ಅವುಗಳನ್ನು ತೆರವು ಮಾಡಲಾಗುತ್ತದೆ. ಈ 6 ಜಿಲ್ಲೆಗಳಲ್ಲಿ ಇಂಥ ಸಾವಿರಾರು ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನು ಮುಂದೆ ಯಾವುದೇ ಬೃಹತ್ ಕಾಮಗಾರಿ ಪ್ರಾರಂಭಿಸುವಾಗಲೇ ಭೂಕುಸಿತ ಪರಿಹಾರದ ಬಗ್ಗೆ ಪೂರ್ವಭಾವಿ ಉಪಕ್ರಮವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ನಿಯಮ ವಿಧಿಸುವುದಕ್ಕೂ ಕಂದಾಯ ಇಲಾಖೆ ಚಿಂತಿಸಿದೆ.
ಗಡ್ಕರಿಗೆ ಶೀಘ್ರ ಪತ್ರ
ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗಳಿಂದಲೇ ಭೂಕುಸಿತ ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಕಂದಾಯ ಇಲಾಖೆ ಕಳುಹಿಸಿದೆ. ಇದರ ಆಧಾರದ ಮೇಲೆ ಪರಿಹಾರ ಕಾಮಗಾರಿಯಲ್ಲಿ ಕೈಜೋಡಿಸಿ ಎಂಬ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಎನ್‌ಎಚ್‌ಎ ಈ ಬಗ್ಗೆ ಗಮನ ಹರಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುವುದಕ್ಕೆ ರಾಜ್ಯ ಸರಕಾರ ಮುಂದಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತ ಹೆಚ್ಚುತ್ತಿರುವುದು ಆತಂಕಕಾರಿ. ಇದನ್ನು ತಡೆಯುವುದಕ್ಕೆ ಯೋಜನೆ ರೂಪಿಸುವುದು ಸರಕಾರದ ಕರ್ತವ್ಯ. ರಾಜ್ಯ ಸರಕಾರದ ಸಂಚಿತ ನಿಧಿಗಳಿಂದಲೇ ಹಣ ಹೊಂದಿಸುತ್ತೇವೆ. ಸಾಧ್ಯವಾಗದೆ ಇದ್ದರೆ ವಿಶ್ವಬ್ಯಾಂಕ್ ಸಹಯೋಗ ಪಡೆಯುತ್ತೇವೆ. ಈ ಕಾಮಗಾರಿಗಳು ನೆಪ ಮಾತ್ರಕ್ಕಲ್ಲ, ವಾಸ್ತವವಾಗಿ ಸಮಸ್ಯೆ ನಿವಾರಣೆ ಮಾಡುತ್ತದೆ ಎಂಬ ವಿಶ್ವಾಸವಿದೆ. -ಕೃಷ್ಣಬೈರೇಗೌಡ, ಕಂದಾಯ ಸಚಿವ
ಭೂಕುಸಿತದ ರಕ್ಷಣೆ ಹೇಗೆ?
– ದ. ಕನ್ನಡ, ಉಡುಪಿ, ಉ. ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಭೂಕುಸಿತ ಸಮಸ್ಯೆ
– ಭೂ ಕುಸಿತದ ಭೀತಿ ಇರುವ ಕಡೆಗಳಲ್ಲಿ ಆರ್‌ಸಿಸಿ ಕೇಸ್ ರಚನೆ ಅಥವಾ ಗಟ್ಟಿ ಬೇರಿನ ಮರಗಿಡ ಬೆಳೆಸಲು ಯೋಜನೆ
– ರಸ್ತೆ ಕಾಮಗಾರಿಯಿಂದ ಗುಡ್ಡ ಕೊರೆದ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಇಳಿಜಾರು ತಗ್ಗಿಸುವುದು
– ನೀರಿನ ಹರಿವು ಕಾಮಗಾರಿಗಳಿಂದ ಅಡ್ಡಗಟ್ಟಲ್ಪಟ್ಟಿದ್ದರೆ ಅವುಗಳನ್ನು ತೆರವುಗೊಳಿಸುವುದು
– ಬೃಹತ್ ಕಾಮಗಾರಿ ಪ್ರಾರಂಭಿಸುವಾಗಲೇ ಭೂಕುಸಿತ ಪರಿಹಾರ ಉಪಕ್ರಮ ಕಡ್ಡಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ
Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
BBK11: ಇಂದು ರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!
Mangaluru: ವ್ಯಾಪಾರ ವಲಯ ಸಿದ್ಧವಾದರೂ ವ್ಯಾಪಾರಿಗಳಿಲ್ಲ!
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Network Problem: 5 ಟವರಿದ್ದರೂ ನಾಟ್ ರೀಚೆಬಲ್!
State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.