BJP ಶಾಸಕ ಸೋಮಶೇಖರ್ ನಡೆ ಯಾವ ಕಡೆ? 27ಕ್ಕೆ ನಿರ್ಧಾರ ಸಂಭವ
ಅಂದು ರಾಜ್ಯಸಭೆ ಚುನಾವಣೆ; ಯಾರ ಪರ ನಿಲ್ಲುತ್ತಾರೆ ಎಂಬ ಕುತೂಹಲ
Team Udayavani, Feb 19, 2024, 7:40 AM IST
ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ನಡೆ ಯಾವ ಕಡೆಗೆ? ಪಕ್ಷ ನಿಷ್ಠೆಯೋ ಅಥವಾ ವ್ಯಕ್ತಿ ನಿಷ್ಠೆಯೋ?ರಾಜ್ಯಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಈಗ ನಾಯಕರನ್ನು ಕಾಡುತ್ತಿರುವ ಪ್ರಶ್ನೆ ಇದು. ಸ್ವತಃ ಸೋಮಶೇಖರ್ ಅವರ ಇತ್ತೀಚಿನ ನಡೆಯೇ ಈ ಅನುಮಾನಕ್ಕೆ ಕಾರಣ.
ಒಂದೆಡೆ ಬಿಜೆಪಿ ನಾಯಕರೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ಇನ್ನೊಂದೆಡೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ “ಕೈ’ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಬಹಿರಂಗವಾಗಿಯೇ ಭಾಗವಹಿಸುತ್ತಾರೆ.
ಇದೆಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಭಾನುವಾರ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೋಮಶೇಖರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರನೂ ಆದ ಸಂಸದ ಡಿ.ಕೆ. ಸುರೇಶ್ ಅವರನ್ನು ಹಾಡಿ ಹೊಗಳಿದ್ದಾರೆ. “ಡಿಸಿಎಂ ನನ್ನ ಮತ್ತು ಜನರ ಮನವಿಗಳಿಗೆ ಸ್ಪಂದಿಸಿದ್ದಾರೆ. ಸಂಸದ ಡಿ.ಕೆ. ಸುರೇಶ್ ಕೂಡ ಆನೇಕಲ್ ಸುತ್ತಮುತ್ತ ಉತ್ತಮ ಕೆಲಸ ಮಾಡಿದ್ದು, 110 ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾ ಸಿದ್ದಾರೆ. ಅಷ್ಟೇ ಅಲ್ಲ, ನಂತರ ಡಿ.ಕೆ. ಶಿವಕುಮಾರ್ ಜತೆ ಮಂಗಳೂರಿಗೆ ಹಾರಿದ ಸೋಮಶೇಖರ್, ಅಲ್ಲಿ ಏರ್ಪಡಿಸಿದ್ದ ಕರ್ನಾಟಕ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲೂ ಡಿಸಿಎಂ ಜತೆ ಭಾಗವಹಿಸಿದ್ದಾರೆ.
“ಭಿನ್ನ ನಡೆ’ ಇದೇ ಮೊದಲಲ್ಲ
ಮಾಜಿ ಸಚಿವರ ಈ “ಭಿನ್ನ ನಡೆ’ ಇದೇ ಮೊದಲಲ್ಲ. ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಜೆಟ್ ಮಂಡನೆ ವೇಳೆ ಪ್ರತಿಪಕ್ಷಗಳು ಬಹಿಷ್ಕರಿಸಿ ಹೊರನಡೆದು ಪ್ರತಿಭಟನೆಗಿಳಿದರು. ಸೋಮಶೇಖರ್ ಕೂಡ ಅವರೊಂದಿಗೆ ಹೊರನಡೆದರು. ಆದರೆ ಬಿಜೆಪಿ-ಜೆಡಿಎಸ್ ಪ್ರತಿಭಟನೆಯೊಂದಿಗೆ ಗುರುತಿಸಿಕೊಳ್ಳಲಿಲ್ಲ. ಇದಕ್ಕೂ ಹಿಂದೆ ಅಂದರೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಹಮ್ಮಿಕೊಂಡಿದ್ದ ಔತಣಕೂಟಕ್ಕೇ ತೆರಳಿ ಹುಬ್ಬೇರಿಸುವಂತೆ ಮಾಡಿದ್ದರು. ಆಗ ಅವರು, “ಊಟಕ್ಕೆ ಕರೆದಿದ್ದರು, ಹೋಗಿದ್ದೆ ಅಷ್ಟೇ. ಸಭೆಗೆ ಹೋಗಿರಲಿಲ್ಲ’ ಅಂತ ಸಮಜಾಯಿಷಿ ನೀಡಿದ್ದರು.
ಇನ್ನು ಅದೇ ಬೆಳಗಾವಿ ಅಧಿವೇಶನದಲ್ಲಿ ಎರಡು ಸಂದರ್ಭಗಳಲ್ಲಿ ಪ್ರತಿಪಕ್ಷ ಕಲಾಪಗಳನ್ನು ಬಹಿಷ್ಕರಿಸಿತ್ತು. ಆದರೆ, ಸೋಮಶೇಖರ್ ಮಾತ್ರ ಬಿಜೆಪಿ ನಾಯಕರನ್ನು ಹಿಂಬಾಲಿಸದೆ, ಆಡಳಿತ ಪಕ್ಷದ ನುಡಿಗಳಿಗೆ “ಕಿವಿ’ ಆಗಿದ್ದರು. ಮತ್ತೂಂದು ಪ್ರಸಂಗದಲ್ಲಿ ಬಾವಿಗಿಳಿದು ಧರಣಿ ನಡೆಸಲು ಪ್ರತಿಪಕ್ಷಗಳು ಮುಂದಾದಾಗಲೂ ತಮ್ಮ ಆಸನ ಬಿಟ್ಟು ಕದಲದ ಮಾಜಿ ಸಚಿವರು, ಭಿನ್ನವಾಗಿ ಗುರುತಿಸಿಕೊಂಡಿದ್ದರು.
ಪಕ್ಷ ನಿಷ್ಠೆಯೋ, ವ್ಯಕ್ತಿ ನಿಷ್ಠೆಯೋ?
ಈ ಬೆಳವಣಿಗೆಗಳ ನಡುವೆ, ಇದೇ 27ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಆ ವೇಳೆ ಶಾಸಕರು ತಾವು ಚಲಾಯಿಸುತ್ತಿರುವ ಮತವನ್ನು ಪ್ರದರ್ಶನ ಮಾಡಬೇಕಾಗುತ್ತದೆ. ಹಾಗಿದ್ದರೆ, ಸೋಮಶೇಖರ್ ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ? ಪಕ್ಷ ನಿಷ್ಠೆ ಮೆರೆಯುತ್ತಾರಾ ಅಥವಾ ವ್ಯಕ್ತಿ ನಿಷ್ಠೆಗೆ ನಿಲ್ಲುತ್ತಾರಾ? ಇದಾವುದೂ ಬೇಡ ಅಂತ ಅಡ್ಡ ಮತದಾನ ಮಾಡಿ ಕುತೂಹಲ ಮುಂದುವರಿಯುವಂತೆ ಮಾಡುತ್ತಾರಾ ಕಾದುನೋಡಬೇಕಿದೆ.
ಮಂಗಳೂರಿನಲ್ಲೂ ಡಿಕೆಶಿ ಜತೆಗೆ ಸೋಮಶೇಖರ್
ಮಂಗಳೂರು: ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮಂಗಳೂರಿನಲ್ಲೂ ರವಿವಾರ ಕಾಣಿಸಿ ಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೇ ಆಗಮಿಸಿದ್ದರು ಎಂದು ತಿಳಿದುಬಂದಿದೆ.
ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಅಚರಣೆ ವೇಳೆ ಕಾಣಿಸಿಕೊಂಡ ಶಾಸಕ ಸೋಮಶೇಖರ್ ಶತಮಾನೋತ್ಸವ ಕಟ್ಟಡ ಉದ್ಘಾಟನೆ ವೇಳೆ ಡಿಕೆಶಿ ಜತೆಗಿದ್ದರು. ಬಳಿಕ ನಡೆದ ಸಭಾಕಾರ್ಯಕ್ರಮದ ಸಂದರ್ಭ ಸಭೆಯಲ್ಲಿ ಕುಳಿತಿದ್ದರು. ಸೋಮಶೇಖರ್ ಬಂದಿರುವುದನ್ನು ಡಿಕೆಶಿ ಅವರೂ ಉಲ್ಲೇಖಿಸಿದರು.
ಕೆಲವು ತಿಂಗಳಿನಿಂದಲೇ ಸೋಮಶೇಖರ್ ಬಿಜೆಪಿ ಜತೆ ವಿರಸ ಹೊಂದುತ್ತಿದ್ದು, ಕಾಂಗ್ರೆಸ್ ಹಾಗೂ ಡಿಕೆಶಿ ಜತೆ ಒಲವು ತೋರುತ್ತಿದ್ದು, ಈಚೆಗಷ್ಟೇ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನೂ ಸ್ವಾಗತಿಸಿದ್ದರು. ಮಂಗಳೂರಿಗೆ ಡಿಕೆಶಿ ಅವರೊಂದಿಗೆ ವಿಮಾನದಲ್ಲಿ ಆಗಮಿಸಿದ್ದ ಅವರು ಬಳಿಕ ಕಾರಿನಲ್ಲೂ ಜತೆಯಾಗಿ ತೆರಳಿದರೆಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.