ಎಚ್ಡಿಕೆ ಕಣ್ಣೀರು ಹಾಕೋದೇಕೆ ಅರ್ಥವಾಗ್ತಿಲ್ಲ: ಕೆಸಿಎನ್
Team Udayavani, Nov 30, 2019, 3:04 AM IST
ಕೆ.ಆರ್.ಪೇಟೆ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಣ್ಣೀರು ಹಾಕೋದು ಏಕೆ ಅನ್ನೋದೇ ಅರ್ಥವಾಗುವುದಿಲ್ಲ. ಅಳುವಂಥದ್ದು ಅವರಿಗೆ ಏನಾಗಿದೆ? ಲೋಕಸಭಾ ಚುನಾವಣೆಯಲ್ಲಿ ಮಗ ಸೋತ ಅನ್ನೋದು ಬಿಟ್ಟರೆ ಅವರಿಗೆ ಇನ್ನಾವ ಚಿಂತೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪ್ರಶ್ನಿಸಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, “ಆ ಪಕ್ಷದಲ್ಲಿ ಶಾಸಕನಾಗಿದ್ದವನು ನಾನು.
ನನಗೆ ಎಷ್ಟೆಲ್ಲಾ ನೋವು ಕೊಟ್ಟರೂ ನಾನೇ ಕಣ್ಣೀರು ಹಾಕಿಲ್ಲ. ಇವರು ಕಣ್ಣೀರಿಡುವುದರಲ್ಲಿ ಅರ್ಥವೇ ಇಲ್ಲ’ ಎಂದು ಜರಿದರು. ಟವಲ್ ಇಟ್ಕೊಂಡು ಅಳಬೇಡಿ ಎಂದು ಸಲಹೆ ನೀಡಿದರು. “ನಾನು ಯಾರಿಗೂ, ಯಾವ ಪತ್ರವನ್ನೂ ಬರೆದಿಲ್ಲ. ಇದು ಸತ್ಯ. ಕುಮಾರಸ್ವಾಮಿ ಓದಿದ ಲೆಟರ್‌ನಲ್ಲಿ ನನ್ನ ಹೆಸರಿದ್ದರೆ ಚಾಲೆಂಜ್ ಮಾಡ್ತೀನಿ. ಇದೆಲ್ಲವೂ ಸುಳ್ಳು, ಕಟ್ಟು ಕಥೆ’ ಎಂದು ಕಿಡಿ ಕಾರಿದರು.
ದೇವೇಗೌಡರು ರಾಜ್ಯದಿಂದ ಹೋಗಿ ಪ್ರಧಾನಿ ಯಾದರು. ತಂದೆಯ ಸ್ಥಾನದಲ್ಲಿಟ್ಟು ದೇವೇಗೌಡರನ್ನು ನೋಡುತ್ತಿದ್ದೆ. ಹಬ್ಬದ ವೇಳೆ ದೇವೇಗೌಡರ ಪಾದಪೂಜೆ ಮಾಡುತ್ತಿದ್ದೆ. ನೀವೇ ನನ್ನ ತಂದೆ, ತಾಯಿ, ಅಣ್ಣ ಅಂತ ಹೇಳಿರೋದು ಸತ್ಯ. ಇಷ್ಟಕ್ಕೆ ನನ್ನ ಕುತ್ತಿಗೆ ಹಿಸುಕೋಕೆ ಶುರು ಮಾಡಿದರು. ಅದನ್ನು ಸಹಿಸಿಕೊಳ್ಳಲಾಗದೆ ಅಲ್ಲಿಂದ ಹೊರ ಬಂದೆ.
ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ನಮ್ಮ ತಾಲೂಕನ್ನು ಚೆನ್ನಾಗಿ ನೋಡಿಕೊಂಡಿದ್ದರೆ ನಾನೇಕೆ ರಾಜೀನಾಮೆ ನೀಡುವ ನಿರ್ಧಾರ ಮಾಡುತ್ತಿದ್ದೆ? ಈ ತಾಲೂಕನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸಿ ಜನರನ್ನು ಕಾಪಾಡಿದ್ದರೆ ಅವರನ್ನು ದೇವರಂತೆ ಪೂಜಿಸುತ್ತಿದ್ದೆ. ಹಾಸನ, ಚನ್ನರಾಯಪಟ್ಟಣವನ್ನು ಒಮ್ಮೆ ಹೋಗಿ ನೋಡಿ. ಹೇಗಿದೆ ಅಂತ ಗೊತ್ತಾಗುತ್ತೆ ಎಂದು ಆಕ್ರೋಶ ಹೊರಹಾಕಿದರು.
ಸವಾಲು ಸ್ವೀಕಾರ
ಕೆ.ಆರ್.ಪೇಟೆ: ಅನರ್ಹ ಶಾಸಕರ ಡೀಲ್, ಆಡಿಯೋ-ವಿಡಿಯೋ, ಪೆನ್ ಡ್ರೆçವ್ ಪ್ರದರ್ಶನ, ಆಣೆ-ಪ್ರಮಾಣಕ್ಕೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಸವಾಲು ಸ್ವೀಕರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡರು, ಆಣೆ-ಪ್ರಮಾಣಕ್ಕೆ ಆಹ್ವಾನ ಕೊಟ್ಟಿರುವ ಶಿವರಾಮೇಗೌಡರು ಮೊದಲು ಧರ್ಮಸ್ಥಳದಲ್ಲಿ ಹೋಗಿ ಕೂರಲಿ. ಆಮೇಲೆ ನಾನು ಹೋಗ್ತಿನಿ. ನಾನು ಹಣಕ್ಕೆ ಡೀಲ್ ಆಗಿರುವುದಕ್ಕೆ ಅವರ ಬಳಿ ಸಾಕ್ಷ್ಯ ಇದ್ದರೆ ಬೇಗ ಜನಗಳಿಗೆ ತೋರಿಸಿ ಬಿಡಲಿ. ಅವರ ಆರೋಪ ನನಗೆ ಆಶೀರ್ವಾದ. ಅವರ ಹೇಳಿಕೆ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.