School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್ ಆಧಾರಿತ ಹಾಜರಾತಿ?
Team Udayavani, Sep 22, 2024, 7:30 AM IST
ಬೆಂಗಳೂರು: ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿ ದಾಖಲಾತಿಗೆ ಆ್ಯಪ್ ಆಧಾರಿತ ವಿಧಾನ ಅಳವಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಸರಕಾರ ಇದಕ್ಕೆ ಸಮ್ಮತಿಸಿದರೆ ಶೀಘ್ರ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವ ಸಂಪ್ರದಾಯ ಹೋಗಿ ಆ್ಯಪ್ ಮೂಲಕ ಮಕ್ಕಳ ಹಾಜರಿ ಗುರುತು ಮಾಡುವ ಪದ್ಧತಿ ಬರಲಿದೆ.
ಸದ್ಯ ಪ್ರತೀ ಜಿಲ್ಲೆಯ ತಲಾ ಒಂದು ಸರಕಾರಿ ಶಾಲೆಯಲ್ಲಿ ಈ ವಿಧಾನ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಯಶಸ್ಸು ಕಂಡಿದೆ. ಆದ್ದರಿಂದ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ಉತ್ಸುಕವಾಗಿದೆ. ಶಾಲೆಗಳಲ್ಲಿ ಆ್ಯಪ್ ಮೂಲಕ ಹಾಜರಿ ಗುರುತು ಮಾಡುವುದರಿಂದ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಳ ಆಗಲಿದೆ. ಶಿಕ್ಷಣದ ಗುಣಮಟ್ಟವೂ ಸುಧಾರಿಸ ಲಿದೆ ಎಂದು ಇಲಾಖೆಯ ಅಧಿಕಾರಿ ಗಳು ಹೇಳಿದ್ದಾರೆ.
ಶಿಕ್ಷಕರಿಗೂ? ಶಿಕ್ಷಕರ ಹಾಜರಾತಿಯನ್ನು ಕೂಡ ಆ್ಯಪ್ ಅಥವಾ ಬಯೋಮೆಟ್ರಿಕ್ ಮೂಲಕ ಸಂಗ್ರಹಿಸಬೇಕು ಮತ್ತು ಅವರಿಗೂ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಬಗ್ಗೆಯೂ ಶಿಕ್ಷಣ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ.
ಪ್ರಸ್ತುತ 1ರಿಂದ 9ನೇ ತರಗತಿಯವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಆದರೆ 10ನೇ ತರಗತಿ ಯಲ್ಲಿ ಶೇ. 75ರಷ್ಟು ಹಾಜರಾತಿ ಇಲ್ಲದಿದ್ದರೆ ಮಕ್ಕಳು ಪರೀಕ್ಷೆಗೆ ಕುಳಿತುಕೊಳ್ಳುವಂತಿಲ್ಲ. 9ನೇ ತರಗತಿಯ ತನಕ ಕಟ್ಟುನಿಟ್ಟಿನ ಹಾಜರಾತಿ ಕ್ರಮಗಳಿಲ್ಲದ ಹಿನ್ನೆಲೆ ಯಲ್ಲಿ ಶಾಲೆಗೆ ಬರಲು ಉದಾಸೀನ ಮಾಡುವ ಮಕ್ಕಳು 10ನೇ ತರಗತಿಯಲ್ಲಿಯೂ ಅದೇ ಧೋರಣೆ ಮುಂದುವರಿಸುತ್ತಾರೆ. ಇದರಿಂದ ಕೊನೆಗೆ ಸಾವಿರಾರು ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುವುದರಿಂದ ವಂಚಿತರಾಗುತ್ತಾರೆ. ಆದ್ದರಿಂದ ಕಿರಿಯ ತರಗತಿಗಳಲ್ಲೇ ಮಕ್ಕಳಲ್ಲಿ ಹಾಜರಾತಿ ಅಗತ್ಯದ ಬಗ್ಗೆ ಅರಿವು ಮತ್ತು ಕಟ್ಟು ನಿಟ್ಟಿನ ಭಾವನೆ ಮೂಡಿಸಲು ಆ್ಯಪ್ ಮೂಲಕ ಹಾಜರಿ ಗುರುತು ಮಾಡುವ ಕ್ರಮ ಉಪಯುಕ್ತವಾಗಲಿದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ನೈಜ ಸಮಯದಲ್ಲಿ ಹಾಜರಾತಿ
ಸದ್ಯ ಜಾರಿಯಲ್ಲಿರುವ ವಿದ್ಯಾರ್ಥಿ ಸಾಧನಾ ನಿಗಾ ವ್ಯವಸ್ಥೆ (ಎಸ್‌ಟಿಟಿಎಸ್)ಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಶಾಲೆಯಲ್ಲಿ ದಾಖಲಾತಿ ಆಗಿರುವ ವಿದ್ಯಾರ್ಥಿಗಳ ಸಂಖ್ಯೆಗೂ ಶಾಲೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೂ ವ್ಯತ್ಯಾಸ ಕಂಡುಬರುತ್ತಿವೆ. ಆ್ಯಪ್ ಆಧಾರಿತ ಹಾಜರಿಯಲ್ಲಿ ನಾವು ನೈಜ ಸಮಯದಲ್ಲಿ ವಿದ್ಯಾರ್ಥಿಗಳ ಹಾಜರಿಯನ್ನು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಆ್ಯಪ್ ಆಧಾರಿತ ಹಾಜರಾತಿ ಪ್ರಯೋಗ ಯಶಸ್ವಿಯಾಗಿದೆ. ಈ ಪದ್ಧತಿಯಲ್ಲಿ ಶತ ಪ್ರತಿಶತ ನಿಖರತೆ ಸಾಧ್ಯ. ಈ ಯೋಜನೆ ಜಾರಿಗೊಳಿಸಲು ಶಿಕ್ಷಣ ಸಚಿವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಸರಕಾರ ಒಪ್ಪಿಕೊಂಡರೆ ಶೀಘ್ರವೇ ರಾಜ್ಯಾದ್ಯಂತ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ.
-ರಿತೇಶ್ ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.