ಜು. 23ರಂದು ಬೆಂಗಳೂರು ಬಂಟರ ಭವನದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ
ಸಿಎಂ ಸಿದ್ದರಾಮಯ್ಯ, ಸ್ಟಾರ್ ನಟರು ಸೇರಿ ಗಣ್ಯರು ಭಾಗಿ
Team Udayavani, Jul 21, 2023, 7:08 PM IST
ಬೆಂಗಳೂರು: ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಹಿನ್ನಲೆಯಲ್ಲಿ ಬೆಂಗಳೂರಿನ ಬಂಟರ ಸಂಘದ ಭವನದಲ್ಲಿ ಜು. 23ರಂದು ಭಾನುವಾರ ‘ವಿಶ್ವ ಕುಂದಾಪುರ ಕನ್ನಡ ದಿನ’ವನ್ನು ಆಚರಣೆ ಮಾಡಲಾಗುತ್ತಿದೆ.
ವಿಜಯನಗರದ ಅತ್ತಿಗುಪ್ಪೆಯ ಬಂಟರ ಸಂಘದ ಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಕಂಬಳ ಕ್ಷೇತ್ರದ ಧುರೀಣ ಶಾಂತರಾಮ ಶೆಟ್ಟಿ ಬಾರ್ಕೂರು ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗವಹಿಸಲಿದ್ದಾರೆ.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಶಾಸಕ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಬೆಂಗಳೂರು ಬಂಟರ ಸಂಘ ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ ಸೇರಿ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಪ್ರೊ.ಎ.ವಿ.ನಾವಡ ಮತ್ತು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಗೌರವಿಸಲಾಗುತ್ತದೆ.
ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನವಾಗಿದ್ದು, ಈ ಸಲ ಇನ್ನಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಎಂಬ ವೇದಿಕೆಯಡಿ ಸಮಾರಂಭ ಆಯೋಜಿಸಲಾಗಿದೆ. ಕುಂದಾಪ್ರ ಕನ್ನಡ ಹಬ್ಬದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಮಾಹಿತಿ ನೀಡಿದರು.
ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜೊತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿದೆ. ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರ ಕನ್ನಡ ಹಬ್ಬವು ಹೊಂದಿದೆ ಎಂದು ಅವರು ತಿಳಿಸಿದರು.
ಸಾಂಸ್ಕೃತಿಕ ಸಡಗರ
ಕುಂದಾಪ್ರ ಕನ್ನಡ ಹಬ್ಬದಲ್ಲಿ ಭಾಗವತ ರಾಘವೇಂದ್ರ ಜನ್ಸಾಲೆಯವರ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ʼಬೇಡರ ಕಣ್ಣಪ್ಪʼ ಎನ್ನುವ ಯಕ್ಷಗಾನ ಪ್ರಸಂಗ, ಕಲಾಕದಂಬ ಆರ್ಟ್ಸ್ ಅವರಿಂದ ʼವೀರ ಬರ್ಬರಿಕʼ ಯಕ್ಷಗಾನ ಪ್ರಸಂಗ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಬಿಡುವನೇ ಬ್ರಹ್ಮಲಿಂಗʼ ಎನ್ನುವ ನೃತ್ಯ ರೂಪಕ, ಕಿರುತೆರೆ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ಧಿ ಕುಂದಾಪುರ, ಪ್ರೀತಂ ಅವರ ʼಚಿತ್ರಪಟ ರಾಮಾಯಣʼ ಎಂಬ ಕಿರುನಾಟಕ ಪ್ರದರ್ಶನ ಇರಲಿದೆ. ಸಾಸ್ತಾನದ ಖ್ಯಾತ ನಾಟಕ ತಂಡ ಅಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರ ತಿಳಿ ಹಾಸ್ಯ ಪ್ರಹಸನ, ಟೀಂ ಕುಂದಾಪುರಿಯನ್ಸ್ ಅವರ ʼಮಿಂಚುಳ: ಇದ್ ಕತ್ಲಿ-ಬೆಳಗಿನ ಕಥಿʼ ಎಂಬ ವಿಶೇಷ ನಾಟಕ ಪ್ರದರ್ಶನಗೊಳ್ಳಲಿದೆ.
ಉಪನ್ಯಾಸಕಿ ರೇಖಾ ಬಿ. ಬನ್ನಾಡಿ, ಉಪೇಂದ್ರ ಶೆಟ್ಟಿ, ಕವಿ ಎಚ್. ಡುಂಡಿರಾಜ್ ಅವರ ಭಾಷೆಯ ಬಹು ಆಯಾಮದ ಬಗ್ಗೆ ಮಾತು- ನುಡಿಚಾವಡಿ, ಜನಪ್ರಿಯ ಗಾಯಕರನ್ನು ಒಳಗೊಂಡ ಸ್ವರ ಕುಂದಾಪುರ ತಂಡದ ʼಕಾಡುವ ಹಾಡುಗಳ ಕಲರವʼ, ಕುಂದಾಪ್ರ ಕನ್ನಡದ ಖ್ಯಾತ ವಾಗ್ಮಿ ಮನು ಹಂದಾಡಿಯವರ ʼಲಘು ಧಾಟಿಯ ಬಿಗು ಭಾಷಣʼ ಹಾಗೂ ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ನಡೆಯಲಿದೆ.
ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ವಯಸ್ಕರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲಿ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು, ಮಡ್ಲ್ ನೆಯ್ಯುವುದು ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆ ಕಡುಬು, ಗೋಳಿಬಜೆ, ಬನ್ಸ್, ಸುಕ್ಕಿನುಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು, ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ, ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯ-ವೈವಿಧ್ಯಗಳು ಆಕರ್ಷಣೆಯಾಗಲಿವೆ.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರಮೋದಚಂದ್ರ ಭಂಡಾರಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.