ಎರಡು ದಶಕಗಳ ಹೋರಾಟ ಸಂಪೂರ್ಣ ವ್ಯರ್ಥ
Team Udayavani, Aug 18, 2021, 6:50 AM IST
2001ರಲ್ಲಿ, ಅಫ್ಘಾನ್ ಮಡಿಲಲ್ಲಿ ತನ್ನ ಕಬಂಧಬಾಹುಗಳನ್ನು ಚಾಚಿದ ಅಮೆರಿಕ, ತನ್ನ ಆಣತಿಯಂತೆ ನಡೆದುಕೊಳ್ಳುವ ಸರಕಾರ ವೊಂದನ್ನು ರಚಿಸಿತ್ತು. ಮೊದಲು ಹಮೀದ್ ಕರ್ಜಾಯಿ, ಅನಂತರದಲ್ಲಿ ತೀರಾ ಇತ್ತೀಚಿನವರೆಗೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ, ಆ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಮೇಲ್ನೋಟಕ್ಕೆ ಅಲ್ಲೊಂದು ಪ್ರಜಾಸತ್ತಾತ್ಮಕ ಸರಕಾರವಿದೆ ಎಂದೆನಿಸಿತ್ತಾದರೂ ಭ್ರಷ್ಟಾಚಾರ ಗೊತ್ತಿಲ್ಲದಂತೆ ಮೊಳಕೆ ಯೊಡೆದಿತ್ತು! ಘನಿ ಆಡಳಿತದಲ್ಲಿ ರಕ್ಷಣ ಇಲಾಖೆಯ ಬಜೆಟ್ ಪೂರ್ತಿ ನೋಡಿಕೊಳ್ಳುತ್ತಿದ್ದ ಘನಿ ಆಪ್ತ ಮೊಹಿಬ್, ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದರು!
ಅಫ್ಘಾನ್ ಶರಣಾಗಿದ್ದು ಹೇಗೆ? :
ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಮಿಲಿಟರಿಯ ಉಪಸ್ಥಿತಿ ಒಂದೆರಡು ವರ್ಷಗಳಿಂದ ಅಲ್ಲ, ಸರಿಸುಮಾರು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಇದೆ. ಅಮೆರಿಕದ ಸರಕಾರ ವರ್ಷವೂ ಕೋಟ್ಯಂತರ ಡಾಲರ್ ಖರ್ಚು ಮಾಡಿ ಅಫ್ಘಾನಿಸ್ಥಾನದ ಮಿಲಿಟರಿಗೆ ತರಬೇತಿ, ಶಸ್ತ್ರಾಸ್ತ್ರಗಳು, ಗೂಢಚರ ನೆರವು- ಎಲ್ಲವನ್ನೂ ಒದಗಿಸುತ್ತ ಬಂದಿತ್ತು. ಆದರೂ ಅಫ್ಘಾನ್ ಮಿಲಿಟರಿ ತಾಲಿಬಾನಿಗಳ ಬರ್ಬರ ಅಟ್ಟಹಾಸದ ಎದುರು ಅಷ್ಟು ಬೇಗನೆ ಸೋತು ಕೈಚೆಲ್ಲಿದ್ದು ಹೇಗೆ? ತಾಲಿಬಾನಿಗಳು ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತ ಮಿಂಚಿನ ವೇಗದಲ್ಲಿ ಮುಂದೊತ್ತಿ ಬರುವಾಗ ಅಫ್ಘಾನಿ ಯೋಧರು ಎಲ್ಲೂ ದೊಡ್ಡ ಮಟ್ಟದ ಪ್ರತಿರೋಧವನ್ನೇ ತೋರಿದ್ದಿಲ್ಲ. ಹೀಗೇಕಾಯಿತು?
ಬಲಿಷ್ಠ, ಸ್ವತಂತ್ರ ಮಿಲಿಟರಿ ಶಕ್ತಿಯಾಗಿ ಅಫ್ಘಾನ್ ಯೋಧರನ್ನು ಬೆಳೆಸುವ ಅಮೆರಿಕದ ಪ್ರಯತ್ನವು ನೀರಿನಲ್ಲಿ ಮಾಡಿದ ಹೋಮದಂತೆ ವಿಫಲವಾಗಿರುವುದು ತಾಲಿಬಾನಿಗಳ ಕ್ಷಿಪ್ರ ಮುನ್ನಡೆಯಿಂದ ಸ್ಪಷ್ಟವಾಗಿದೆ. ಅಫ್ಘಾನ್ ಮಿಲಿಟರಿಯ ಸೋಲಿಗೆ ಅಧ್ಯಕ್ಷ ಘನಿಯ ಸಹಿತ ಅಲ್ಲಿನ ನಾಯಕರು ಎಲ್ಲ ವನ್ನೂ ತ್ಯಜಿಸಿ ಮನಸ್ಸು ಬಂದಲ್ಲಿಗೆ ಓಡಿ ಹೋದುದೂ ಒಂದು ಕಾರಣವಾಗಿದೆ.
ತಾಲಿಬಾನಿಗಳ ಮಿಂಚಿನ ಆಕ್ರಮಣದ ಎದುರು ಜನರು, ಪ್ರಾಂತೀಯ ಸರಕಾರಗಳು, ಮಿಲಿಟರಿ ತುಕಡಿಗಳು ಸಾಮೂಹಿಕವಾಗಿ ಶರಣಾಗಿದ್ದಾರೆ. ಅನೇಕ ಮಿಲಿಟರಿ ಹೆಲಿ ಕಾಪ್ಟರ್‌ಗಳು, ಅಮೆರಿಕವೇ ಸರಬರಾಜು ಮಾಡಿದ್ದ ಅಪಾರ ಶಸ್ತ್ರಾಸ್ತ್ರಗಳು, ಹಣ ಎಲ್ಲವೂ ತಾಲಿಬಾನಿಗಳ ಕೈವಶವಾಗಿವೆ. ಅಮೆರಿಕವು ಹೆಚ್ಚು ಕಡಿಮೆ ಎರಡು ದಶಕಗಳ ಅವಧಿಯಲ್ಲಿ 83 ಶತಕೋಟಿ ಡಾಲರ್ ಹಣವನ್ನು ಅಫ್ಘಾನಿ ಸ್ಥಾನಕ್ಕಾಗಿ ಖರ್ಚು ಮಾಡಿತ್ತು. ಇದೆಲ್ಲವೂ ಈಗ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ವಿಫಲವಾದ ಸ್ವತಂತ್ರ, ಸುದೃಢ ಅಫ್ಘಾನ್ ಮಿಲಿಟರಿ ನಿರ್ಮಾಣ: ಅಫ್ಘಾನಿ ಮಿಲಿಟರಿಯನ್ನು ಒಂದು ಸ್ವತಂತ್ರ ಶಕ್ತಿಯಾಗಿ ಬೆಳೆಸಿ ನಿಧಾನವಾಗಿ ಅಫ್ಘಾನಿಸ್ಥಾನದಿಂದ ಹಿಂದೆಗೆ ಯುವುದು ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ಅಫ್ಘಾನ್ ನೀತಿಯಾಗಿತ್ತು. ಇದರಿಂದಾಗಿ ಅಮೆರಿಕದ ಮಿಲಿಟರಿಯ ಛಾಯೆಯಾಗಿ ಅಫ್ಘಾನ್ ಮಿಲಿಟರಿಯನ್ನು ರೂಪಿಸಲಾಯಿತು. ಅಫ್ಘಾನ್ ಮಿಲಿಟರಿಯು ಅಮೆರಿಕ ಆರಂಭಿಸಿದ್ದ ಹೋರಾಟವನ್ನು ಮುಂದು ವರಿಸಲಿದೆ ಎನ್ನುವ ನಂಬಿಕೆಯನ್ನು ಹೊಂದಲಾಗಿತ್ತು.
ಆದರೆ ಅಫ್ಘಾನಿಸ್ಥಾನದಿಂದ ಸೇನೆಯನ್ನು ಈ ವರ್ಷದ ಸೆ. 11ರೊಳಗೆ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಅಧ್ಯಕ್ಷ ಜೋ ಬೈಡೆನ್ ಘೋಷಿಸುವುದಕ್ಕೆ ವಾರ, ತಿಂಗಳುಗಳ ಹಿಂದೆಯೇ ಅಲ್ಲಿನ ಮಿಲಿಟರಿಯ ಶಕ್ತಿ, ಸಂಕಲ್ಪಗಳು ಕರಗಲಾರಂಭಿಸಿದ್ದವು. ಅಲ್ಲಿನ ಗ್ರಾಮೀಣ ಭಾಗ ಗಳಲ್ಲಿ ಒಂದೊಂದೇ ಭದ್ರತಾ ನೆಲೆಗಳು, ಪೊಲೀಸ್ ಠಾಣೆಗಳು, ಪ್ರಮುಖ ರಸ್ತೆ ಇತ್ಯಾದಿ ಆಯಕಟ್ಟಿನ ನೆಲೆಗಳನ್ನು ತಾಲಿ ಬಾನಿಗಳು ವಶಮಾಡಿಕೊಳ್ಳುತ್ತ ಬಂದರು. ಭ್ರಷ್ಟಾಚಾರ, ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಮಿಲಿಟರಿ, ಪೊಲೀಸರಿಗೆ ಆಹಾರ, ಶಸ್ತ್ರಾಸ್ತ್ರಗಳ ಬೆಂಬಲ ಶೂನ್ಯ ವಾಗಿತ್ತು. ಇದರಿಂದ ಕಂಗೆಟ್ಟಿದ್ದ ಯೋಧರು ಇದ್ದ ಶಸ್ತ್ರಾಸ್ತ್ರಗಳನ್ನು ತಾಲಿಬಾನಿಗಳ ಕೈಗಿತ್ತು ಶರಣಾದರು. ಒಂದೊಂದೇ ಗ್ರಾಮ, ಹೆದ್ದಾರಿಗಳು, ಜಿಲ್ಲೆಗಳನ್ನು ತಾಲಿಬಾನಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತ ಬಂದರು.
ಭ್ರಷ್ಟಾಚಾರ, ಸಂಕಲ್ಪ ಶಕ್ತಿಯ ಕೊರತೆ, “ಮೀರ್ ಸಾದಿಕ್‌ತನ’: ಇವೆಲ್ಲಕ್ಕೂ ಬಲವಾದ ಕಾರಣ ಎಂದರೆ ಆಘ್ಗನ್ ಮಿಲಿಟರಿಯ ಆಂತರಿಕ ದೌರ್ಬಲ್ಯಗಳು, ಕ್ಯಾನ್ಸರ್‌ನಂತೆ ಕಾಡುತ್ತಿದ್ದ ಭ್ರಷ್ಟಾಚಾರ, ಅಧಿಕಾರಿಗಳು, ನಾಯಕರ ನಿರ್ಲಕ್ಷ್ಯ. ದಾಖಲೆ ಪತ್ರಗಳ ಪ್ರಕಾರ ಆಘ್ಘನ್ ಸೇನೆಯಲ್ಲಿ 3 ಲಕ್ಷ ಯೋಧರಿದ್ದಾರೆ. ಆದರೆ ಈಚೆಗಿನ ಅಂಕಿಅಂಶಗಳ ಪ್ರಕಾರ ಇದರ ಆರನೇ ಒಂದಂಶ ಯೋಧರು ಕೂಡ ಇರಲಿಲ್ಲ. ಆಫ^ನ್ ಸೇನೆಯನ್ನು ಅತ್ಯಾಧುನಿಕ ಪಾಶ್ಚಾತ್ಯ ಮಾದರಿಯಲ್ಲಿ ಕಟ್ಟುವ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳ ಹಠ ಇದಕ್ಕೆ ಒಂದು ಕಾರಣ. ಈ ಅತ್ಯಾಧುನಿಕ ಮಾದರಿಯ ಮಿಲಿಟರಿ ಅಮೆರಿಕ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳ ನೆರವು ಇಲ್ಲದೆ ಸಾಧ್ಯವಾಗುವಂಥದಲ್ಲ ಎಂಬ ಸತ್ಯ ಈ ದೇಶಗಳಿಗೆ ಕೊನೆಗೂ ಹೊಳೆಯಲೇ ಇಲ್ಲ.
ಅಮೆರಿಕದ ಸೇನಾ ವಾಪಸಾತಿ ಘೋಷಣೆಯಾಗುತ್ತಿ ದ್ದಂತೆ ತಾಲಿಬಾನಿಗಳ ಆಕ್ರಮಣದ ವೇಗ ಹೆಚ್ಚಿತು. ಇದರೊಂದಿಗೆ ಅಶ್ರಫ್ ಘನಿಯ ಸರಕಾರಕ್ಕಾಗಿ ಹೋರಾಡಿ ಸಾಯು ವುದಕ್ಕಿಂತ ಶರಣಾಗಿ ಜೀವ ಉಳಿಸಿಕೊಳ್ಳುವುದು ಮೇಲು ಎಂಬ ನಂಬಿಕೆ ಆಫ್ಘಾನಿ ಯೋಧರಲ್ಲಿ ಬಲವಾ ಯಿತು. ಇದರ ನಡುವೆ ಯೋಧರು 34 ಪ್ರಾತೀಯ ರಾಜಧಾನಿಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಪಟ್ಟರು. ಆದರೆ ತಾಲಿಬಾನಿಗಳ ವೇಗ ಎಷ್ಟಿತ್ತು ಎಂದರೆ, ಒಂದೇ ವಾರದೊಳಗೆ ಅರ್ಧಕ್ಕಿಂತ ಹೆಚ್ಚು ಪ್ರಾಂತೀಯ ರಾಜಧಾನಿಗಳನ್ನು ಅವರು ವಶ ಪಡಿಸಿಕೊಂಡು ಬಿಟ್ಟಿದ್ದರು. “ಅವರು ನಮ್ಮನ್ನು ಕೊಂದೇ ಬಿಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಂದಹಾರ್ ನಗರ ಉತ್ತರ ಮುಂಚೂಣಿ ನೆಲೆಯ ನಾಯಕರಾಗಿದ್ದ ಅಬ್ದುಲ್ಲಾಹ್ ಸಂದರ್ಶನವೊಂದರಲ್ಲಿ ತನ್ನ ಅಸಹಾಯಕ ಸ್ಥಿತಿಯನ್ನು ವ್ಯಕ್ತಪಡಿಸಿದ್ದರು. 2001ರಿಂದೀಚೆಗೆ ಹೋರಾಟದಲ್ಲಿ 60 ಸಾವಿರ ಸೈನಿಕರು ಸತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅಬ್ದುಲ್ಲಾಹ್ ಹೇಳುವ ಪ್ರಕಾರ, ಅಫ್ಘಾನಿಸ್ಥಾನವನ್ನು ತಾಲಿಬಾನಿಗಳ ಕೈಗೊಪ್ಪಿಸಲು ಆಫ^ನ್ ಸರಕಾರವೇ ತೆರೆಯ ಮರೆಯಲ್ಲಿ ಆಟ ಆಡಿದೆ.
ಅಬ್ದುಲ್ ಬರಾದಾರ್ ಅಧ್ಯಕ್ಷ? : ಒಂದು ಕಾಲದಲ್ಲಿ ಅಫ್ಘಾನಿಸ್ಥಾನದ ಉಳಿವಿಗಾಗಿ ಹೋರಾಡಿದ್ದ ಈತ, ಅನಂತರದಲ್ಲಿ ಅಲ್ಲಿನ ಸರಕಾರಗಳಿಗೇ ಸಿಂಹಸ್ವಪ್ನವಾಗಿ ಬದಲಾಗಿದ್ದ!
ಇದು ತಾಲಿಬಾನ್‌ನ ರಾಜಕೀಯ ವಿಭಾಗದ ಮುಖ್ಯಸ್ಥ ಅಬ್ದುಲ್ ಬರಾದಾರ್‌ನ ಒಂದು ವಾಕ್ಯದ ವ್ಯಾಖ್ಯಾನ. ಮೂರು ವರ್ಷಗಳ ಹಿಂದಷ್ಟೇ ಪಾಕಿಸ್ಥಾನದ ಜೈಲಿನಿಂದ ಬಿಡುಗಡೆಯಾಗಿರುವ ಈತ, 8 ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸಿದ್ದಾನೆ. ಎಲ್ಲವೂ ಅಂದುಕೊಂಡಂತಾದರೆ ಅಫ್ಘಾನಿಸ್ಥಾನದ ಮುಂದಿನ ಅಧ್ಯಕ್ಷ ಈತನೇ! ಸದ್ಯ ತಾಲಿಬಾನ್ ವಲಯದಲ್ಲಿ ಓಡಾಡುತ್ತಿರುವ ಏಕೈಕ ಹೆಸರು ಇವನದ್ದೇ. ತಾಲಿಬಾನ್‌ನ ಪರಮೋಚ್ಚ ನಾಯಕ ಹೈಬತುಲ್ಹಾ ಅಖುಂಡ್ಜಾಡಾ. ಆದರೆ ತಾಲಿಬಾನಿಗರಲ್ಲಿ ಹೆಚ್ಚು ಪರಿಚಿತವಿರುವ ಮುಖ ಬರಾದಾರ್‌ನದ್ದೇ.
ಹಾಗಂತ ಬರಾದಾರ್ ಸೌಮ್ಯವಾದಿಯೇನಲ್ಲ. ತಾಲಿಬಾನ್‌ನ ಸ್ಥಾಪಕನಲ್ಲೊಬ್ಬ. 1968ರಲ್ಲಿ ಅಫ್ಘಾನಿಸ್ಥಾನದ ಅರುಜಾ^ನ್ ಪ್ರಾಂತ್ಯದಲ್ಲಿ ಜನ್ಮತಾಳಿದ ಈತ, 1980ರ ಕಾಲದಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಹೋರಾಟ ನಡೆಸಿದ್ದ. ಇದಕ್ಕಾಗಿ ಆಫ^ನ್‌ನ ಮುಜಾಹೀದ್ದೀನ್‌ಗೆ ಸೇರ್ಪಡೆಯಾಗಿದ್ದ. 1989ರಲ್ಲಿ ಸೋವಿಯತ್ ಒಕ್ಕೂಟ ದೇಶ ಬಿಟ್ಟು ಹೊರಡುತ್ತಿದ್ದಂತೆ, ಕಂದಹಾರ್‌ನಲ್ಲಿ ತನ್ನ ಅಳಿಯ ಮೊಹಮ್ಮದ್ ಒಬರ್ ಜತೆಗೆ ಮದರಸಾವೊಂದನ್ನು ಕಟ್ಟಿದ್ದ. ಅನಂತರದಲ್ಲಿ ದೇಶದಲ್ಲಿ ಧರ್ಮದ ಶುದ್ಧತೆಗಾಗಿ ತಾಲಿಬಾನ್ ಸಂಘಟನೆಯನ್ನೂ ಇವರೀರ್ವರೇ ಕಟ್ಟಿದರು.
ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತವಿದ್ದಾಗ ಬರಾದಾರ್, ಮಿಲಿಟರಿ ಮತ್ತು ಆಡಳಿತಾತ್ಮಕ ಜವಾಬ್ದಾರಿ ಹೊತ್ತಿದ್ದ. ಹಾಗೆಯೇ ಉಪ ರಕ್ಷಣ ಸಚಿವ ಕೂಡ ಆಗಿದ್ದ. ಆದರೆ 2002ರ ವೇಳೆಗೆ ಅಮೆರಿಕ ಮತ್ತು ಇಂಗ್ಲೆಂಡ್ ಪಡೆಗಳು ತಾಲಿಬಾನ್ ಉಗ್ರರನ್ನು ಓಡಿಸಿ ಮತ್ತೆ ಪ್ರಜಾಸತ್ತಾತ್ಮಕ ಸರಕಾರ ತಂದ ಮೇಲೆ ಈತ ದೇಶದಿಂದ ಓಡಿಹೋಗಿದ್ದ. ಬಳಿಕ 2010ರಲ್ಲಿ ಪಾಕ್‌ನ ಕರಾಚಿಯಲ್ಲಿ ಅಮೆರಿಕ ಕಣ್ಣಿಗೆ ಬಿದ್ದಿದ್ದ. ಬಳಿಕ ಬಂಧಿಸಲಾಗಿತ್ತು.
ಅಮೆರಿಕದಲ್ಲಿ ಒಬಾಮ ಆಡಳಿತ ಬಂದ ಮೇಲೆ, ಅಫ್ಘಾನ್ ಯುದ್ಧಕ್ಕೆ ಅಂತ್ಯವಾಡಲು ಮುಂದಾಗಿದ್ದರು. ಇದಕ್ಕಾಗಿಯೇ ಕತಾರ್‌ನ ದೋಹಾದಲ್ಲಿ ಶಾಂತಿ ಮಾತುಕತೆಯನ್ನೂ ಏರ್ಪಡಿಸಿದ್ದರು. ಹೀಗಾಗಿ ಮೂರು ವರ್ಷಗಳ ಹಿಂದಷ್ಟೇ ಶಾಂತಿ ಮಾತುಕತೆಗಾಗಿ ಅಮೆರಿಕದ ಮನವಿ ಮೇರೆಗೆ ಜೈಲಿನಿಂದ ಬರಾದಾರ್‌ನನ್ನು ಬಿಡುಗಡೆ ಮಾಡಲಾಗಿತ್ತು. ದೋಹಾದಲ್ಲಿಯೇ ಇದ್ದ ಈತ, ಅಮೆರಿಕ ಪ್ರತಿನಿಧಿಗಳು ಮತ್ತು ಅಫ^ನ್ ಪ್ರತಿನಿಧಿಗಳ ಜತೆಗಿನ ಮಾತುಕತೆಯ ಜವಾಬ್ದಾರಿಯನ್ನೂ ಹೊತ್ತಿದ್ದ. ಹೀಗಾಗಿಯೇ ಅಫ್ಘಾನ್‌ನ ಮುಂದಿನ ಅಧ್ಯಕ್ಷ ಕೂಡ ಈತನೇ ಆಗಲಿದ್ದಾನೆ ಎಂದೇ ಹೇಳಲಾಗುತ್ತಿದೆ.
ಅಪಾರ ಪ್ರಮಾಣದ ವೆಚ್ಚ :
ಅಫ್ಘಾನಿಸ್ಥಾನದಲ್ಲಿ ಅಮೆರಿಕ ಕೈಗೊಂಡ ಯುದ್ಧ ಅತ್ಯಂತ ದೀರ್ಘ ವಾದದ್ದು. 2001ರಿಂದ ಇಲ್ಲಿಯವರೆಗೆ ಅಮೆರಿಕವೇ 2 ಟ್ರಿಲಿಯನ್ ಡಾಲರ್‌ನಷ್ಟು ವೆಚ್ಚ ಮಾಡಿದೆ. ಈ ಪೈಕಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ರಕ್ಷಣ ಸಚಿವಾಲಯದ ಸಾಗರೋತ್ತರ ನಿರ್ವಹಣೆಗೆ ಬಳಕೆ ಮಾಡಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ವಿರುದ್ಧ ಸಮರಕ್ಕೆ ಅಮೆರಿಕ ಸರಕಾರ ಸಾಲ ಪಡೆದುಕೊಂಡಿದೆ. ಅದಕ್ಕೆ ಪಾವತಿ ಮಾಡುವ ಬಡ್ಡಿಯ ಮೊತ್ತವೇ 530 ಬಿಲಿಯ ಅಮೆರಿಕನ್ ಡಾಲರ್. ಅಫ್ಘಾನಿಸ್ಥಾನದ ಅರ್ಥ ವ್ಯವಸ್ಥೆಗೆ ಹೋಲಿಕೆ ಮಾಡಿದರೆ ಈ ಮೊತ್ತ ಊಹಿಸಲೂ ಅಸಾಧ್ಯವಾದದ್ದು.
ಅಫ್ಘಾನಿಸ್ಥಾನ: ಎಡವಿದ್ದೆಲ್ಲಿ? :
1.ಗುಪ್ತಚರ ವೈಫಲ್ಯ
ತಾಲಿಬಾನಿಗಳು ರಾಜಧಾನಿ ಕಾಬೂಲ್ ಸಹಿತ ಇಡೀ ಅಫ್ಘಾನಿಸ್ಥಾನವನ್ನು ಅಷ್ಟು ಕ್ಷಿಪ್ರವಾಗಿ ವಶಪಡಿಸಿಕೊಳ್ಳು ವುದಕ್ಕೆ ಪರಿಸ್ಥಿತಿಯನ್ನು ವಿಶ್ಲೇಷಿಸುವಲ್ಲಿ ಅಮೆರಿಕದ ಬೇಹು ವೈಫಲ್ಯ ಪ್ರಧಾನ ಕಾರಣ ಎನ್ನುತ್ತಾರೆ ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸಿ ಸಂಸ್ಥೆಯ ಸ್ಥಾಪಕ ಬಿಲ್ ರೊಗಿಯೊ. ಇದು ಅತ್ಯುನ್ನತ ಗೂಢಚರ ವೈಫಲ್ಯ ಎಂಬುದು ಅವರ ಖಚಿತ ನಿಲುವು.
- ಹೋರಾಡುವ ಆತ್ಮವಿಶ್ವಾಸ ನಾಶ
ಹೆಚ್ಚು ಪ್ರತಿರೋಧ ಇಲ್ಲದೆಯೇ ಪ್ರಾಂತ್ಯಗಳ ಮೇಲೆ ಪ್ರಾಂತ್ಯಗಳನ್ನು ಕಳೆದುಕೊಳ್ಳಲು ಅಫ್ಘಾನ್ ಯೋಧರ ಹೋರಾಟದ ಆತ್ಮವಿಶ್ವಾಸ ನಶಿಸಿದುದು ಕಾರಣ ಎನ್ನುತ್ತಾರೆ ಲಂಡನ್‌ನಲ್ಲಿ ಮಿಲಿಟರಿ ತಜ್ಞರಾಗಿರುವ ಜ್ಯಾಕ್ ವೆಟ್‌ಲಿಂಗ್ಸ್. ಅಮೆರಿಕವು ಸೇನಾ ವಾಪಸಾತಿ ಘೋಷಿಸಿದ್ದು, ಅಫ್ಘಾನ್ ನಾಯಕರ ಭ್ರಷ್ಟಾಚಾರ, ಕೆಲವರ ತಾಲಿಬಾನ್ ಪರ ನಿಲುವು ಇದಕ್ಕೆ ನೀರೆರೆದವು ಎನ್ನುತ್ತಾರೆ ಅವರು.
- ಶಕ್ತಿಯುತ ತಾಲಿಬಾನ್
1990ರ ದಶಕಗಳಲ್ಲಿ ಇದ್ದ ಸ್ಥಿತಿಯಲ್ಲಿ ತಾಲಿಬಾನ್ ಈಗಿಲ್ಲ. ಸರ್ವವಿಧದಲ್ಲೂ ಬಲಿಷ್ಠವಾಗಿದೆ. ಅಲ್ಲದೆ ಅಲ್ಲಿ ಇಸ್ಲಾಮಿಕ್ ಎಮಿರೇಟ್ ಸ್ಥಾಪಿಸುವ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ ಅವರು ಹೆಚ್ಚು ಸಂಘಟಿತರಾಗಿದ್ದಾರೆ, ಮಿಲಿಟರಿ, ಮಿಲಿಟರಿಯೇತರ ವಿಧಾನಗಳಲ್ಲಿ ದೃಢಸಂಕಲ್ಪ ಹೊಂದಿದ್ದಾರೆ ಎನ್ನುತ್ತಾರೆ ಅಟ್ಲಾಂಟಿಕ್ ಕೌನ್ಸಿಲ್‌ನಲ್ಲಿ ಸ್ಕೊಕ್ರಾಫ್ಟ್ ಮಧ್ಯ ಪ್ರಾಚ್ಯ ಭದ್ರತಾ ಉಪಕ್ರಮದ ನಿರ್ದೇಶಕ ಕರ್ಸ್ಟನ್ ಫೊಂಟೆರೋಸ್.
- ಅಮೆರಿಕದ ವೈಫಲ್ಯ
ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಅಫ್ಘಾನಿಸ್ಥಾನ ವನ್ನು ಪಾಶ್ಚಾತ್ಯ ಕಣ್ಣುಗಳಿಂದ ಕಂಡು ಅರ್ಥ ಮಾಡಿ ಕೊಂಡವೇ ವಿನಾ ವಾಸ್ತವವನ್ನು ತಿಳಿಯುವ ಗೋಜಿಗೆ ಹೋಗಲಿಲ್ಲ. ಅಫ್ಘಾನಿಸ್ಥಾನ ಅಥವಾ ಅದರಂತಹ ಇನ್ನೂ ಹಲವು ದೇಶಗಳು ಬುಡಕಟ್ಟು ಸಮುದಾಯಗಳ ಸರಕಾರಗಳು ಅಲ್ಲಲ್ಲಿ ಆಳ್ವಿಕೆ ನಡೆಸುವ ಪ್ರಾಂತ್ಯಗಳನ್ನು ಹೊಂದಿವೆ. ಒಂದೇ ಸರಕಾರದ ಆಳ್ವಿಕೆಯಡಿ ಅವುಗಳನ್ನು ತರುವುದು ಸಾಧ್ಯವಾಗದ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.