ಪಾರ್ಟಿ ಮಾಡಿ ಹೊರಬಿದ್ದ ಜಾನ್ಸನ್
Team Udayavani, Jul 8, 2022, 7:40 AM IST
ಅಧಿಕಾರಕ್ಕೇರಿದ ದಿನದಿಂದಲೂ ಒಂದಲ್ಲ ಒಂದು ವಿವಾದಕ್ಕೆ ತುತ್ತಾಗಿದ್ದ ಬೋರಿಸ್ ಜಾನ್ಸನ್ ಕಡೆಗೂ ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ತಮ್ಮದೇ ಪಕ್ಷದ ಡೇವಿಡ್ ಕ್ಯಾಮರೋನ್ ಆಡಳಿತದ ವಿರುದ್ಧ ಬ್ರೆಕ್ಸಿಟ್ ಆಂದೋಲನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೋರಿಸ್ ಜಾನ್ಸನ್, ಅನಂತರದ ಥೇರೆಸಾ ಮೇ ಆಡಳಿತದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿದ್ದರು. ಮೇ ಅಧಿಕಾರದಿಂದ ಇಳಿದ ಅನಂತರ ಇವರೇ ಪ್ರಧಾನಿಯಾಗಿದ್ದರು. ಹಾಗಾದರೆ ಇವರ ಪ್ರಧಾನಿ ಹುದ್ದೆಗೆ ಕುತ್ತಾದ ಅಂಶಗಳು ಯಾವುವು ಎಂಬ ಬಗ್ಗೆ ಸಮಗ್ರ ನೋಟ ಇಲ್ಲಿದೆ…
ಯಾರಿವರು ಬೋರಿಸ್ ಜಾನ್ಸನ್? :
ಅಮೆರಿಕದಲ್ಲಿ ಜನಿಸಿ, ಇಂಗ್ಲೆಂಡ್‌ಗೆ ವಲಸೆ ಬಂದ ಬೋರಿಸ್ ಜಾನ್ಸನ್, ಹುಟ್ಟಿದ್ದು 1964ರ ಜೂ.19ರಂದು. ಆರಂಭದಲ್ಲಿ ಪತ್ರಕರ್ತನಾಗಿದ್ದ ಜಾನ್ಸನ್, ಬಳಿಕ ಕನ್ಸರ್ವೇಟೀವ್ ಪಕ್ಷ ಸೇರಿದ್ದರು. 2008ರಿಂದ 2016ರ ವರೆಗೆ ಲಂಡನ್ ನಗರದ ಮೇಯರ್ ಆಗಿ, ಥೆರೆಸಾ ಮೇ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. 1997ರಲ್ಲಿ ಕನ್ಸರ್ವೇಟೀವ್ ಪಕ್ಷದಿಂದ ಕ್ಲೀವ್x ಸೌತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ ಬಿಬಿಸಿ ಸೇರಿದಂತೆ ಬ್ರಿಟನ್‌ನ ಪ್ರಮುಖ ಟೀವಿ ಶೋಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದರು. ವಾಕ್‌ಚಾತುರ್ಯದಿಂದ ಅವರು ಬಹುಬೇಗ ಪ್ರಸಿದ್ಧಿಯಾಗಿದ್ದರು. 2001ರಲ್ಲಿ ಮತ್ತೆ ಹೆನ್ಲಿ ಆನ್ ಥಾಮಸ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಲೇ ಜನಪ್ರಿಯ ರಾಜಕಾರಣಿಯಾದರು.
ಬ್ರೆಕ್ಸಿಟ್‌ನಲ್ಲಿ ಪಾತ್ರ :
ಲಂಡನ್ ಮೇಯರ್ ಗಿರಿ ಬಿಟ್ಟ ಮೇಲೆ ಬ್ರಿಟನ್ ಸಂಸತ್ ಪ್ರವೇಶಿಸಿದ ಬೋರಿಸ್ ಜಾನ್ಸನ್, ಬ್ರೆಕ್ಸಿಟ್ ವೇಳೆ ಪ್ರಧಾನವಾಗಿ ಗುರುತಿಸಿಕೊಂಡರು. ಐರೋಪ್ಯ ಒಕ್ಕೂಟದಿಂದ ಇಂಗ್ಲೆಂಡ್ ಹೊರಹೋಗಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ನಡೆದ ಜನಮತದಲ್ಲಿ ಭಾಗಿಯಾದ ಇವರು, ತಮ್ಮದೇ ಪಕ್ಷದ ಪ್ರಧಾನಿ ಡೇವಿಡ್ ಕ್ಯಾಮರೂನ್ ವಿರುದ್ಧವೇ ನಿಂತರು. ಅಂದರೆ ಕ್ಯಾಮರೂನ್ ಐರೋಪ್ಯ ಒಕ್ಕೂಟದಲ್ಲಿ ಇರಬೇಕು ಎಂದು ಪ್ರತಿಪಾದಿಸಿದರೆ, ಇವರು ಹೊರಹೋಗಬೇಕು ಎಂದು ಆಂದೋಲನವನ್ನೇ ನಡೆಸಿದರು. ಅಲ್ಲದೆ ಬ್ರೆಕ್ಸಿಟ್ ಆಂದೋಲನದಲ್ಲಿ ಕ್ಯಾಮರೂನ್ ವಿರುದ್ಧ ಗೆದ್ದರು. ಆಗಲೇ ಕನ್ಸರ್ವೇಟೀವ್ ಪಕ್ಷದ ನಾಯಕತ್ವಕ್ಕಾಗಿ ಹೋರಾಟ ನಡೆಸಿದರೂ, ಅದು ಇವರ ಬದಲಿಗೆ ಥೆರೆಸಾ ಮೇ ಅವರ ಪಾಲಾಯಿತು. ಇಂಗ್ಲೆಂಡ್ ಏನೋ ಬ್ರೆಕ್ಸಿಟ್‌ನಿಂದ ಹೊರ ಬಂದಾಯಿತು. ಆದರೆ ಇದಕ್ಕೆ ಬೇಕಾದ ನಿಯಮಗಳನ್ನು ರೂಪಿಸಬೇಕಾಗಿತ್ತು. ಆದರೆ ಥೆರೆಸಾ ಮೇ ಅವರಿಗೆ ಇದು ಸಾಧ್ಯವಾಗಲೇ ಇಲ್ಲ. ಸಂಸತ್‌ನಲ್ಲಿ ಎರಡು ಬಾರಿ ಸೋತರು. ಕಡೆಗೆ ಒಂದು ನಿಯಮವೊಂದನ್ನು ರೂಪಿಸಿ, ಇದಕ್ಕೆ ಒಪ್ಪಿಗೆ ಕೊಟ್ಟರೆ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯುವುದಾಗಿ ಘೋಷಿಸಿದರು. ಆಗ ಬೋರಿಸ್ ಜಾನ್ಸನ್, ಈ ನಿಯಮದ ಜಾರಿಗೆ ಶ್ರಮಿಸಿದರು. ಈ ಪ್ರಯತ್ನವೂ ಸೋತಿತಾದರೂ, ಥೆರೆಸಾ ಮೇ ಅಧಿಕಾರದಿಂದ ಕೆಳಗಿಳಿದರು.
ಜು. 5 ನಿರ್ಣಾಯಕ ದಿನ :
ಕಳೆದ ತಿಂಗಳಷ್ಟೇ ಪಾರ್ಟಿಗೇಟ್ ಹಗರಣದ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ವಿರುದ್ಧ ವಿಶ್ವಾಸಮತ ಮಂಡಿಸಲಾಗಿ ತ್ತಾದರೂ, ಅದು ಸದನದಲ್ಲಿ ಸೋಲು ಕಂಡಿತ್ತು. ಹೀಗಾಗಿ ಮುಂದಿನ ಒಂದು ವರ್ಷದವರೆಗೆ ಅವರು ಹುದ್ದೆ ಯನ್ನು ಗಟ್ಟಿ ಮಾಡಿಕೊಂಡಿದ್ದರು. ಆದರೆ ಸಿಮೋನ್ ಮೆಕ್‌ಡೋನಾಲ್ಡ್ ಪತ್ರದ ಅನಂ ತರ ಬೋರಿಸ್ ವಿರುದ್ಧ ಪಕ್ಷದಲ್ಲಿಯೇ ಆಕ್ರೋಶ ವ್ಯಕ್ತವಾಯಿತು. ಹೀಗಾಗಿ ಜು. 5ರಂದು ಮೊದಲಿಗೆ ಆರೋಗ್ಯ ಸಚಿವರಾಗಿದ್ದ ಸಾಜಿದ್ ಜಾವೆದ್ ಮತ್ತು ಹಣಕಾಸು ಸಚಿವ ರಿಷಿ ಸುನಕ್ ಅವರು ದಿಢೀರ್ ಆಗಿ ರಾಜೀನಾಮೆ ಸಲ್ಲಿಸಿದರು. ರಾಜೀ ನಾಮೆಪತ್ರದಲ್ಲಿ ಇವರಿಬ್ಬರೂ, ಬೋರಿಸ್ ಜಾನ್ಸನ್ ಅವರಲ್ಲಿ ವಿಶ್ವಾಸ ಕಳೆದು ಕೊಂಡಿರುವ ಬಗ್ಗೆ ಪ್ರಸ್ತಾವಿಸಿದ್ದಾರೆ. ಅಲ್ಲದೆ, ನಾಯಕತ್ವ ಬದಲಾವಣೆ ಕುರಿತಂತೆಯೂ ಆಗ್ರಹಿಸಿದ್ದಾರೆ.
ಪ್ರಧಾನಿ ಹುದ್ದೆಗಾಗಿ ಆಂತರಿಕ ಚುನಾವಣೆ :
ಮೇ ಅವರ ರಾಜೀನಾಮೆ ಬಳಿಕ ಕನ್ಸರ್ವೇ ಟೀವ್ ಪಕ್ಷದ ಒಳಗೆ ಪ್ರಧಾನಿ ಹುದ್ದೆಗಾಗಿ ಚುನಾವಣೆ ನಡೆಯಿತು. ಮೊದಲಿಗೆ 10 ಮಂದಿ ಇದ್ದರು. ಅಂತಿಮ ಹಂತಕ್ಕೆ ನಾಲ್ವರು ಬಂದರು. ಅಂದರೆ ಬೋರಿಸ್ ಜಾನ್ಸನ್, ಜೆರೆಮಿ ಹಂಟ್, ಮೈಕೇಲ್ ಗೋವ್ ಮತ್ತು ಸಾಜಿದ್ ಜಾವೇದ್. ಇವರಲ್ಲಿ ಮೈಕೆಲ್ ಗೋವ್ ಮತ್ತು ಸಾಜೀದ್ ಜಾವೇದ್ ಹೊರಗುಳಿದರು. ಜಾನ್ಸನ್ ಮತ್ತು ಜೆರೆಮಿ ಹಂಟ್ ಮಧ್ಯೆ ಪೈಪೋಟಿ ಜೋರಾಗಿ ಕಡೆಗೆ ಜಾನ್ಸನ್ ಗೆದ್ದರು. ಆಗಲೂ ಐರೋಪ್ಯ ಒಕ್ಕೂಟ ದಿಂದ ಹೊರಹೋಗುವ ವಿಚಾರವನ್ನೇ ಮುಂದಿಟ್ಟುಕೊಂಡು ಜಾನ್ಸನ್ ಈ ಆಂತರಿಕ ಚುನಾವಣೆಯಲ್ಲಿ ಗೆದ್ದರು.
ಪಕ್ಷದ ನಾಯಕರ ವಿರುದ್ಧದ ಲೈಂಗಿಕ ಕಿರುಕುಳ ಹಗರಣ :
ಪಿಂಚೆರ್ ಅಷ್ಟೇ ಅಲ್ಲ, ಕನ್ಸರ್ವೇಟೀವ್ ಪಕ್ಷದ ಇಬ್ಬರು ಸಂಸದರೂ ಲೈಂಗಿಕ ಕಿರುಕುಳ ಹಗರಣದಲ್ಲಿ ಭಾಗಿಯಾಗಿ ದ್ದರು. ಇದರ ಸಲುವಾಗಿ ಇಂಗ್ಲೆಂಡ್‌ನಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕನ್ಸರ್ವೇಟೀವ್ ಪಕ್ಷ ಸೋತಿತ್ತು. ಹಾಗೆಯೇ ಓವನ್ ಪೀಟರ್ಶನ್ ಎಂಬವರು ಕಂಪೆನಿಗಳ ಪರವಾಗಿ ಲಾಬಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದು, ಇದು ಸಾಬೀತಾಗಿತ್ತು. ಜತೆಗೆ ಕನ್ಸರ್ವೇಟೀವ್ ಪಕ್ಷಕ್ಕೆ ಬಂದ ದೇಣಿಗೆಗಳ ವಿವರಗಳನ್ನು ಸಲ್ಲಿಕೆ ಮಾಡಿಲ್ಲ ಎಂಬ ಕುರಿತಂತೆಯೂ ಆರೋಪ ಕೇಳಿಬಂದಿತ್ತು.
ಬರೀ ಹಗರಣದ್ದೇ ಸುದ್ದಿ… :
ಬೋರಿಸ್ ಜಾನ್ಸನ್ ಅವರು 2019ರಲ್ಲಿ ಬ್ರಿಟನ್ ಪ್ರಧಾನಿಯಾದರು. ಆರಂಭದಿಂದಲೂ ಇವರು ವಿವಾದಗಳಿಂದಲೇ ಹೆಸರುವಾಸಿ. ವಿಚಿತ್ರವೆಂದರೆ, ಅಧಿಕಾರವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಜಗತ್ತಿನಾದ್ಯಂತ ಕೊರೊನಾ ಕಾಟ ಶುರುವಾಯಿತು. ಮೊದಲ ಅಲೆಯಲ್ಲೇ ಕೊರೊನಾಗೆ ತುತ್ತಾಗಿ, ತೀರಾ ಗಂಭೀರ ಪರಿಸ್ಥಿತಿ ಎದುರಾಗಿತ್ತು. ಅದೃಷ್ಟವಶಾತ್ ಅವರು ಬಚಾವ್ ಆದರು. ಆದರೆ 2021ರ ನವೆಂಬರ್‌ನಿಂದ ಈಚೆಗಂತೂ ಬರೀ ವಿವಾದಗಳೇ ಜಾನ್ಸನ್ ಸುತ್ತ ತಿರುಗಾಡಿದವು. ಇದರಲ್ಲಿ ಪಾರ್ಟಿ ಗೇಟ್ ಕೂಡ ಒಂದು. ಕೊರೊನಾ ಸಂಬಂಧ ಕಠಿನ ನಿಯಮಗಳು ಜಾರಿಯಲ್ಲಿದ್ದರೂ, ಜಾನ್ಸನ್ ಮತ್ತು ಅವರ ಸಂಪುಟದ ಕೆಲವು ಸಚಿವರು, ಅಧಿಕಾರಿಗಳು ಪಾರ್ಟಿ ನಡೆಸಿದ್ದರು. ಇದು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಸಂಬಂಧ ಜಾನ್ಸನ್ ತಪ್ಪಿತಸ್ಥ ಎಂದು ಸಾಬೀತಾಗಿ, ಸಾರ್ವಜನಿಕವಾಗಿ ಕ್ಷಮೆ ಕೇಳಿದರು. ಅಲ್ಲದೆ, ಈ ಸಂಬಂಧ ಪದೇ ಪದೆ ಸುಳ್ಳು ಹೇಳಿ ಸಿಲುಕಿ ಹಾಕಿಕೊಂಡರು.
ಮುಳುವಾದ ಕ್ರಿಸ್ ಪಿಂಚೆರ್ ಹಗರಣ? :
2019ರ ವೇಳೆಯಲ್ಲಿ ಬೋರಿಸ್ ಜಾನ್ಸನ್ ಸಂಪುಟ ದಲ್ಲಿ ಸಹಾಯಕ ವಿದೇಶಾಂಗ ಸಚಿವರಾಗಿದ್ದ ಕ್ರಿಸ್ ಪಿಂಚೆರ್, ಲೈಂಗಿಕ ಕಿರುಕುಳ ಆರೋಪ ಎದುರಿ ಸುತ್ತಿದ್ದಾರೆ. ಕ್ಲಬ್‌ವೊಂದರಲ್ಲಿ ಇಬ್ಬರು ಪುರುಷರ ಬಳಿ ಅಸಹಜವಾಗಿ ವರ್ತಿಸಿದ್ದರು ಮತ್ತು ಸಂಸದರಾಗಿದ್ದ ಸಿಮೋನ್ ಮೆಕ್‌ಡೋನಾಲ್ಡ್ ಎಂಬವರ ಜತೆಯೂ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿ, ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಸಿಮೋನ್ ಮೆಕ್‌ಡೋನಾಲ್ಡ್ ಅವರು ಹೌಸ್ ಆಫ್ ಕಾಮನ್ಸ್‌ಗೆ ಪತ್ರವೊಂದನ್ನು ಬರೆದು, ಇದುವರೆಗೂ ಕ್ರಿಸ್ ಪಿಂಚೆರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾ ಗಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೇಳಿರುವುದೆಲ್ಲಾ ಸುಳ್ಳು ಎಂದು ಉಲ್ಲೇಖೀಸಿದ್ದಾರೆ. ಈ ಘಟನೆಯಾದ ಮೇಲೆ ಬೋರಿಸ್ ಜಾನ್ಸನ್ ವಿರುದ್ಧ ಸ್ವಪಕ್ಷೀಯರಲ್ಲೇ ಆಕ್ರೋಶ ತೀವ್ರವಾಗಿದೆ.
ಹೊಸ ನಾಯಕನ ಆಯ್ಕೆ ಹೇಗೆ? :
ಬ್ರಿಟನ್‌ನ ಕನ್ಸರ್ವೇಟೀವ್ ಪಕ್ಷದ ನಾಯಕನೇ ಸ್ವಾಭಾವಿಕವಾಗಿ ಪ್ರಧಾನಿಯಾಗುತ್ತಾರೆ. ಈಗ ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನ ಮತ್ತು ಕನ್ಸರ್ವೇಟೀವ್ ಪಕ್ಷದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಹೊಸ ನಾಯಕನ ಆಯ್ಕೆಯ ಪ್ರಕ್ರಿಯೆ ಆರಂಭವಾಗುತ್ತವೆ. ಇದಕ್ಕಾಗಿ 1922 ಕಮಿಟಿ ಕೆಲಸ ಮಾಡಲಿದೆ. ಹಾಗಾದರೆ ಈ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬ ಕುರಿತ ಮಾಹಿತಿ ಇಲ್ಲಿದೆ…
- ಕನ್ಸರ್ವೇಟೀವ್ ಪಕ್ಷದ ನಾಯಕನ ಗಾದಿಗೆ ಸ್ಪರ್ಧೆ ಮಾಡುವಂಥವರಿಗೆ ಕನಿಷ್ಠ 8 ಮಂದಿ ಸಂಸದರ ಬೆಂಬಲ ಬೇಕು.
- ಗಾದಿಗೆ ಸ್ಪರ್ಧೆ ಮಾಡಿದವರಿಗೆ ಕನ್ಸರ್ವೇಟೀವ್ ಸಂಸದರು ಮತ ಹಾಕುತ್ತಾರೆ. ಇದು ಕಡೆಯದಾಗಿ ಇಬ್ಬರು ಉಳಿಯುವವರೆಗೆ ವಿವಿಧ ಹಂತಗಳಲ್ಲಿ ಮತದಾನವಾಗುತ್ತದೆ.
- ಮೊದಲ ಸುತ್ತಿನಲ್ಲಿ 18ಕ್ಕಿಂತ ಕಡಿಮೆ ಮತ ಪಡೆದವರು ಹೊರಬೀಳುತ್ತಾರೆ. 18ಕ್ಕಿಂತ ಹೆಚ್ಚು ಮತ ಪಡೆದವರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ.
- ಎರಡನೇ ಸುತ್ತಿನಲ್ಲಿ 36ಕ್ಕಿಂತ ಕಡಿಮೆ ಮತ ಪಡೆದವರು ಹೊರಬೀಳುತ್ತಾರೆ. ಒಂದು ವೇಳೆ ಎಲ್ಲ ಆಕಾಂಕ್ಷಿಗಳು 36ಕ್ಕಿಂತ ಹೆಚ್ಚು ಮತ ಪಡೆದಿದ್ದರೆ, ಇವರಲ್ಲಿ ಅತ್ಯಂತ ಕಡಿಮೆ ಮತ ಪಡೆದವರು ಎಲೆಮಿನೇಟ್ ಆಗುತ್ತಾರೆ.
- ಹಾಗೆಯೇ ಈ ಮತದಾನ ಪ್ರಕ್ರಿಯೆ ಸಾಗುತ್ತಿರುತ್ತದೆ. ಕಡೆಯದಾಗಿ ಕಣದಲ್ಲಿ ಇಬ್ಬರಷ್ಟೇ ಉಳಿಯಬೇಕು. ಬಳಿಕ ಇವರಿಬ್ಬರಿಗೆ ಕನ್ಸರ್ವೇಟೀವ್ ಪಕ್ಷದ ಸದಸ್ಯರೆಲ್ಲರೂ ಅಂಚೆ ಮತದ ಮೂಲಕ ಮತ ಚಲಾವಣೆ ಮಾಡುತ್ತಾರೆ. ಹೆಚ್ಚು ವೋಟ್ ಪಡೆದವರು ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ಜಾನ್ಸನ್ ಬದಲಿಗೆ ಯಾರು? :
ಬ್ರಿಟನ್ ಪಿಎಂ ಹುದ್ದೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಆಯ್ಕೆ ಆಗುವ ಸಾಧ್ಯತೆಯಿದೆ. ಇದಕ್ಕೆ ಮತದಾನ ನಡೆಯಲಿದ್ದು, ಕಣದಲ್ಲಿ ಇಬ್ಬರು ಭಾರತೀಯರಿದ್ದಾರೆ.
- ರಿಷಿ ಸುನಕ್ – ಕೊರೊನಾ ವೇಳೆಯಲ್ಲಿ ಆರ್ಥಿಕತೆಯನ್ನು ಹಿಡಿದಿಟ್ಟ ಸಾಮರ್ಥ್ಯ ಇವರ ಪರವಾಗಿ ಕೆಲಸ ಮಾಡಬಹುದು. ಇವರು ಭಾರತೀಯ ಮೂಲದವರಾಗಿದ್ದು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಅವರ ಪತಿ.
- ಲಿಸ್ ಟ್ರಸ್ – ವಿದೇಶಾಂಗ ಸಚಿವೆ ಯಾಗಿರುವ ಇವರು, ಜಾನ್ಸನ್ ಅವರ ಬೆನ್ನಿಗೆ ನಿಂತಿದ್ದವರು. ಕನ್ಸರ್ವೇಟೀವ್ ಪಕ್ಷದಲ್ಲಿ ಅಂಥ ಹೆಸರೇನಿಲ್ಲ.
- ಸಾಜೀದ್ ಜಾವೆದ್ – ಪಾಕಿಸ್ಥಾನ ಮೂಲದ ಇವರು ಈ ಹಿಂದೆ ಆರೋಗ್ಯ ಸಚಿವರಾಗಿದ್ದವರು. 2019ರಲ್ಲಿಯೂ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿ, ಅಂತಿಮ ಸುತ್ತಿನಲ್ಲಿ ಹೊರಬಿದ್ದಿದ್ದರು.
- ಮೈಕೆಲ್ ಗೋವ್ – ಇವರೂ 2019 ರಲ್ಲಿ ಪ್ರಧಾನಿ ರೇಸ್‌ನಲ್ಲಿ ಇದ್ದರು. ಮೂರನೇ ಸ್ಥಾನಕ್ಕೆ ಹೋಗಿ ಹೊರಗುಳಿದಿದ್ದರು. ಹೆಚ್ಚು ಅವಧಿಗೆ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
- ನದೀಮ್ ಝಾಹವಿ – ಸದ್ಯ ರಿಷಿ ಸುನಕ್ ರಾಜೀನಾಮೆಯಿಂದ ತೆರವಾದ ಹಣಕಾಸು ಸಚಿವ ಸ್ಥಾನಕ್ಕೆ ನೇಮಕವಾಗಿ ದ್ದವರು. ಇರಾಕ್‌ನಲ್ಲಿ ಜನಿಸಿದ್ದ ಇವರು, ಬ್ರಿಟನ್‌ಗೆ ಬಂದು ನೆಲೆಸಿದ್ದವರು.
- ಜೆರೆಮಿ ಹಂಟ್ – ಕಳೆದ ಬಾರಿಯ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿ, ಜಾನ್ಸನ್ ಎದುರು ಸೋತಿದ್ದವರು. ಇವರೂ ವಿದೇಶಾಂಗ ಸಚಿವರಾಗಿದ್ದವರು.
- ಸ್ಯುಲ್ಲಾ ಬ್ರೇರ್ವಮನ್ – ಇವರೂ ಭಾರತೀಯ ಮೂಲದವರು. ಇವರ ತಂದೆ ಮೂಲತಃ ಗೋವಾದವರು. ಕೀನ್ಯಾದಿಂದ ಬ್ರಿಟನ್‌ಗೆ ವಲಸೆ ಬಂದವರು. ಜಾನ್ಸನ್ ಆಳ್ವಿಕೆಯಲ್ಲಿ ಅಟಾರ್ನಿ ಜನರಲ್ ಆಗಿದ್ದವರು.
- ಪೆನ್ನಿ ಮಾರ್ಡೌಟ್ – ರಕ್ಷಣ ಸಚಿವೆಯಾಗಿದ್ದ ಇವರೂ, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೆ, ರಕ್ಷಣ ಇಲಾಖೆಯ ಮೊದಲ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬೋರಿಸ್ ರಾಜೀನಾಮೆ: ಸ್ವಾಗತ :
ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಬೋರಿಸ್ ಜಾನ್ಸನ್‌ರವರ ನಿರ್ಧಾರವನ್ನು ಅಲ್ಲಿನ ವಿಪಕ್ಷಗಳು ಸ್ವಾಗತಿಸಿವೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಲೇಬರ್ ಪಾರ್ಟಿ, ದೇಶಕ್ಕೆ ಇದೊಂದು ಶುಭ ಸಮಾಚಾರ ಎಂದು ಬಣ್ಣಿಸಿದೆ.
ತಮ್ಮದೇ ತಪ್ಪುಗಳ ಫಲವಾಗಿ ಬೋರಿಸ್ ತಮ್ಮ ಹುದ್ದೆಯನ್ನೇ ಕಳೆದುಕೊಂಡಿದ್ದಾರೆ. ಆದರೆ, ಅವರ ಪದತ್ಯಾಗ ಹಿಂದೆಯೇ ನಡೆಯಬೇಕಿತ್ತು ಎಂದು ಲೇಬರ್ ಪಾರ್ಟಿಯ ನಾಯಕ ಕೆರ್ ತಿಳಿಸಿದ್ದಾರೆ.
ರಷ್ಯಾ ಟೀಕೆ :
ಬೋರಿಸ್‌ರವರ ನಿರ್ಗಮನವನ್ನು ರಷ್ಯಾ ಸ್ವಾಗತಿಸಿದೆ. ಇನ್ನಾದರೂ ಯೋಗ್ಯರು ಬಂದು ಬ್ರಿಟನ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿ ಎಂದಿದೆ. ಆದರೆ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಬೋರಿಸ್ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
“ನಮ್ಮ ದೇಶ ಭೀಕರ ಯುದ್ಧಕ್ಕೆ ತುತ್ತಾಗಿದ್ದಾಗ ನಮ್ಮ ದೇಶಕ್ಕೆ ಭೇಟಿ ಕೊಟ್ಟು ನಮಗೆ ಧೈರ್ಯ ಹೇಳಿದ ವಿಶ್ವ ನಾಯಕರಲ್ಲಿ ಬೋರಿಸ್ ಮೊದಲಿಗರು. ಕಷ್ಟಕಾಲದಲ್ಲಿ ನೀವು ನೀಡಿದ ಸಹಕಾರ ನಿಜಕ್ಕೂ ಸ್ಮರಣಾರ್ಹ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.