ಕಷ್ಟ ಅರಿತ ಅತ್ತೆ-ಮಾವನ ಸಾಧನೆ ಅಪಾರ: ಟಿವಿ ಚರ್ಚೆಯಲ್ಲಿ ರಿಷಿ ಸುನಕ್ ವಿನೀತ ಮಾತು
ಪತ್ನಿಯ ತೆರಿಗೆ ವಿವಾದ ಇತ್ಯರ್ಥ: ಸ್ಪಷ್ಟನೆ
Team Udayavani, Jul 19, 2022, 7:45 AM IST
ಲಂಡನ್: “ನನ್ನ ಮಾವ ಮತ್ತು ಅತ್ತೆ ಯವರ ಸಾಧನೆಯ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಅತ್ತೆ ಕೊಟ್ಟ ಕಿಂಚಿತ್ ಹಣದಲ್ಲಿ ನನ್ನ ಮಾವ ಜಗತ್ತಿನ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸ್ಥಾಪಿಸಿ, ಬೆಳೆಸಿದ್ದಾರೆ. ಬ್ರಿಟನ್‌ನಲ್ಲಿಯೂ ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ…
-ಇದು ಬ್ರಿಟನ್ ಪ್ರಧಾನಿ ಹುದ್ದೆಗಾಗಿ ಸ್ಪರ್ಧೆ ಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಿಷಿ ಸುನಕ್ ಅವರ ವಿನೀತ ಮಾತು.
ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತ ನಾಡಿದ ಅವರು ತಮ್ಮ ಮಾವ ಡಾ| ಎನ್.ಆರ್. ನಾರಾಯಣಮೂರ್ತಿ ಮತ್ತು ಅತ್ತೆ ಡಾ| ಸುಧಾ ಮೂರ್ತಿ ಬಗ್ಗೆ ಮೆಚ್ಚುಗೆಯ ಮಾತು ಆಡಿದ್ದಾರೆ.
ಮಾವ ಡಾ| ನಾರಾಯಣಮೂರ್ತಿಯವರು ಕಷ್ಟಗಳನ್ನು ಅರಿತು ಬೆಳೆದವರು. ಜಗತ್ತಿನ ಅತೀ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ನಿಜಕ್ಕೂ ಬಲು ದೊಡ್ಡ ಸಾಧನೆ ಎಂದು ರಿಷಿ ಕೊಂಡಾಡಿದ್ದಾರೆ.
ತೆರಿಗೆ ಪಾವತಿ ಮಾಡುತ್ತಾಳೆ
ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪಾವತಿ ವಿಚಾರದ ಬಗ್ಗೆ ಉಂಟಾಗಿದ್ದ ವಿವಾದದ ಬಗೆಗಿನ ಪ್ರಶ್ನೆಗೂ ಚರ್ಚೆಯ ಸಂದರ್ಭ ರಿಷಿ ಸುನಕ್ ಉತ್ತರಿಸಿದರು. ನಾನು ಬ್ರಿಟಿಷ್ ನಾಗರಿಕನಾಗಿ ಸರಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದೇನೆ. ನನ್ನ ಪತ್ನಿ ಭಾರತಕ್ಕೆ ಸೇರಿದವಳಾದ್ದರಿಂದ ಆಕೆಯ ಬಗ್ಗೆ ಬೇರೆ ರೀತಿಯ ಚಿತ್ರಣ ಇದೆ. ಆದರೆ ಆಕೆ ಇನ್ಫೋಸಿಸ್‌ನಿಂದ ಪಡೆಯುತ್ತಿರುವ ಆದಾಯಕ್ಕೆ ಭಾರತ ಮಾತ್ರವಲ್ಲದೆ ಬ್ರಿಟನ್‌ನಲ್ಲಿಯೂ ತೆರಿಗೆ ಪಾವತಿಸುತ್ತಾಳೆ. ಜತೆಗೆ ವಿವಾದದ ಬಗ್ಗೆ ಸೂಕ್ತ ಸ್ಪಷ್ಟನೆಯನ್ನೂ ನೀಡಿದ್ದಾಳೆ ಎಂದು ಟೀಕಾಕಾರರಿಗೆ ಸುನಕ್ ತಿರುಗೇಟು ನೀಡಿದ್ದಾರೆ.
ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದ ತಾನು ಅದನ್ನು ಆ ದೇಶದ ಸರಕಾರಕ್ಕೆ ವಾಪಸ್ ಮಾಡಿದ್ದೇನೆ. ಹಾಗೆಯೇ ಅಕ್ಷತಾಮೂರ್ತಿ ತಾನು ಹೊಂದಿದ್ದ ಬ್ರಿಟನ್‌ನ ನಿವಾಸಿಯೇತರ ಸ್ಥಾನಮಾನವನ್ನು ಬ್ರಿಟಿಶ್ ಸರಕಾರಕ್ಕೆ ಹಿಂದಿರುಗಿಸಿದ್ದಾಳೆ ಎಂದರು.
ರಿಷಿಗೇ ಜಯ : ಸಮೀಕ್ಷೆ
ರವಿವಾರ ನಡೆದ ಟಿವಿ ಚರ್ಚೆಯ ಬಳಿಕ ಪ್ರಧಾನಿಯಾಗಲು ತಕ್ಕ ವ್ಯಕ್ತಿ ಯಾರು ಎಂಬ ಬಗ್ಗೆ ಕ್ಷಿಪ್ರ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ರಿಷಿ ಅವರಿಗೇ ಹೆಚ್ಚು ಮತಗಳು ಪ್ರಾಪ್ತವಾಗಿವೆ. ಚರ್ಚೆಯಲ್ಲಿ 1,001 ಮಂದಿ ಭಾಗವಹಿಸಿದ್ದರು. ಉಳಿದ ಅಭ್ಯರ್ಥಿಗಳಿಗೆ ಹೋಲಿಸಿದರೆ ಹೆಚ್ಚು ಮಂದಿ (ಶೇ. 24 ಮಂದಿ) ರಿಷಿ ಅವರೇ ಪ್ರಧಾನಿ ಹುದ್ದೆಗೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.