ಮತ್ತೆ ಚೀನ ಕೋವಿಡ್ ಕಳ್ಳಾಟ
ತಜ್ಞರ ವುಹಾನ್ ಭೇಟಿಗೆ ಅಡ್ಡಿ; ಡಬ್ಲ್ಯುಎಚ್‌ಒಗೆ ಮುಖಭಂಗ
Team Udayavani, Jan 7, 2021, 1:31 AM IST
ದಿಲ್ಲಿಯ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಅಣಕು ವಿತರಣೆ ಪ್ರಕ್ರಿಯೆ ಬುಧವಾರ ನಡೆಯಿತು.
ಜಿನೇವಾ: ಇಡೀ ಜಗತ್ತಿಗೆ ಸೋಂಕು ಬಿತ್ತಿದ್ದ “ಕೊರೊನಾ ಜನ್ಮಭೂಮಿ’ ವುಹಾನ್‌ಗೆ ಭೇಟಿ ನೀಡಲು ಚೀನ ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ತಂಡಕ್ಕೇ ಅಡ್ಡಗಾಲು ಹಾಕಿದೆ! ಅಮೆರಿಕವನ್ನು ಎದುರು ಹಾಕಿಕೊಂಡು, ಸಾಂಕ್ರಾಮಿಕ ಪರ್ವದುದ್ದಕ್ಕೂ ಚೀನವನ್ನು ಸಮರ್ಥಿಸಿಕೊಂಡೇ ಬಂದಿದ್ದ ಡಬ್ಲ್ಯುಎಚ್‌ಒಗೆ ಇದರಿಂದ ಭಾರೀ ಮುಖಭಂಗವಾಗಿದೆ.
ಕೊರೊನಾದ ಅಂಕಿ-ಅಂಶ ಮುಚ್ಚಿಟ್ಟು, ಜಾಗತಿಕ ಸಂಶೋಧನ ತಂಡಗಳ ಭೇಟಿಗೆ ನಿರ್ಬಂಧ ವಿಧಿಸುತ್ತಲೇ ಬಂದಿದ್ದ ಚೀನ, ಡಬ್ಲ್ಯುಎಚ್‌ಒ ವಿಚಾರದಲ್ಲೂ ದಾಷ್ಟ ಮುಂದುವರಿಸಿದೆ. ಕೊರೊನಾ ಜಾಡು ಪತ್ತೆಹಚ್ಚುವ ಸಲುವಾಗಿ ಡಬ್ಲ್ಯುಎಚ್‌ಒ ತಜ್ಞರ ತಂಡ ವುಹಾನ್‌ಗೆ ಭೇಟಿ ನೀಡಲು ಚೀನಕ್ಕೆ ತೆರಳಬೇಕಿತ್ತು.
ಚೀನ “ರೆಡ್’ ಸಿಗ್ನಲ್!: “ಚೀನ ನಿಲುವು ನಮಗೆ ನಿರಾಶೆ ಮೂಡಿಸಿದೆ. ನಮ್ಮ ತಂಡ ವುಹಾನ್‌ಗೆ ಭೇಟಿ ನೀಡಿ, ಅಧ್ಯಯನ ನಡೆಸಲು ಇದುವರೆಗೂ ಚೀನದಿಂದ ಅನುಮತಿ ಸಿಕ್ಕಿಲ್ಲ. ಈಗಾಗಲೇ ವಿಶ್ವದ ಹಲವು ದೇಶಗಳಿಂದ ನಮ್ಮ 10 ತಜ್ಞರು ಚೀನದತ್ತ ಪ್ರಯಾಣ ಆರಂಭಿಸಿದ್ದಾರೆ. ಆದರೆ, ಬೀಜಿಂಗ್ ಒಂದಲ್ಲಾ ಒಂದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ’ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸೂಸ್ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
“ತಜ್ಞರ ತಂಡಕ್ಕೆ ವೀಸಾ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿವೆ. ಕಳೆದ 24 ಗಂಟೆಗಳಿಂದ ಬೀಜಿಂಗ್‌ನ ಉನ್ನತಾಧಿಕಾರಿಗಳನ್ನು ಸಂಪರ್ಕಿಸುತ್ತಲೇ ಇದ್ದೇವೆ. ಆದರೆ, ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ಸೂಚಿಸಿದ್ದಾರೆ.
ಚೀನ ಸಬೂಬು: “ತಜ್ಞರ ಭೇಟಿ ವಿಚಾರದಲ್ಲಿ ಏನೋ ತಪ್ಪು ತಿಳಿವಳಿಕೆ ಘಟಿಸಿದೆ. ಆದಷ್ಟು ಬೇಗ ಈ ಬಗ್ಗೆ ವಿವರ ಪಡೆದು, ಡಬ್ಲ್ಯುಎಚ್‌ಒ ಜತೆ ಚರ್ಚಿಸುತ್ತೇವೆ. ತಜ್ಞರ ಭೇಟಿಗೆ ಸೂಕ್ತ ಸಮಯ ನೀಡುತ್ತೇವೆ. ಪ್ರಸ್ತುತ ದೇಶದ ತಜ್ಞರೆಲ್ಲ ಕೊರೊನಾ ಮರುಅಲೆ ನಿರ್ವಹಿಸುವಲ್ಲಿ ಬ್ಯುಸಿಯಾಗಿದ್ದಾರೆ’ ಎಂದು ಚೀನ ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.
ಸಾಕ್ಷ್ಯ ನಾಶ?: “ಜಾಗತಿಕ ತಜ್ಞರ ತಂಡದ ಚೀನ ಭೇಟಿಗೆ ಅನುವು ಮಾಡಿಕೊಡಲು ನಾವು ಅಗತ್ಯ ಕಾರ್ಯವಿಧಾನ ಕೈಗೊಳ್ಳಬೇಕಿದೆ. ಇದಕ್ಕಾಗಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದೆ’ ಎಂದು ಚುನ್ಯಿಂಗ್ ಹೇಳಿರುವುದು, ಚೀನ ಸಾಕ್ಷ್ಯಗಳ ಸಮಾಧಿಗಿಳಿಯಿತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
18 ಸಾವಿರ ಕೇಸ್!: ಭಾರತದಲ್ಲಿ ಕೊರೊನಾ ಇಳಿಮುಖವಾಗಿ ಸಾಗುತ್ತಿದ್ದು, ಬುಧವಾರ 18,088 ಪ್ರಕರಣಗಳು ಪತ್ತೆಯಾಗಿವೆ. 264 ಮಂದಿ ಜೀವತೆತ್ತಿದ್ದಾರೆ. ಮರಣ ಪ್ರಮಾಣವೂ ಶೇ.1.45ಕ್ಕೆ ಇಳಿದಿದೆ. ಏತನ್ಮಧ್ಯೆ, ಯುಕೆಯಿಂದ ಭಾರತಕ್ಕೆ ಮರಳಿದ್ದ 13 ಮಂದಿಗೆ ಬುಧವಾರ ರೂಪಾಂತರಿ ಕೊರೊನಾ ದೃಢಪಟ್ಟಿದ್ದು, ಹೊಸ ತಳಿಯ ಒಟ್ಟು ಸೋಂಕಿತರ ಸಂಖ್ಯೆ 71ಕ್ಕೆ ಏರಿದೆ.
ಪಂಜಾಬ್‌ನಲ್ಲಿ ಶಾಲೆ ಓಪನ್: 5ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರದಿಂದ ಶಾಲೆ ತೆರೆಯಲು ಪಂಜಾಬ್ ಸರಕಾರ ನಿರ್ಧರಿಸಿದೆ.
ಮಾಡೆರ್ನಾ ನಾಶಕ್ಕೆ ಟ್ವಿಸ್ಟ್: ಅಮೆರಿಕದ ಫಾರ್ಮಾಸಿಸ್ಟ್, ಮಾಡೆರ್ನಾ ಲಸಿಕೆಯ 500 ಡೋಸ್‌ಗಳನ್ನು ನಾಶಗೊಳಿಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಬಂಧಿತರಾಗಿರುವ ಫಾರ್ಮಾ ತಜ್ಞ ಸ್ಟೀವನ್ ಬ್ರ್ಯಾಂಡೆನ್‌ಬರ್ಗ್, “ಮಾಡೆರ್ನಾದ ಆ ಡೋಸ್‌ಗಳು ಅಸುರಕ್ಷಿತ ಎಂದು ಭಾವಿಸಿದ್ದೆ. ಅವು ಮನುಷ್ಯನ ಡಿಎನ್‌ಎಯನ್ನು ಬದಲಿಸಬಹುದು ಎಂದು ನಂಬಿದ್ದೆ’ ಎಂದು ಕೋರ್ಟಿನ ಮುಂದೆ ಹೇಳಿದ್ದಾನೆ.
ತಮಿಳುನಾಡಿಗೆ ಹಿನ್ನಡೆ
ಶೇ.100 ಪ್ರೇಕ್ಷಕರ ಉಪಸ್ಥಿತಿಯಲ್ಲಿ ಸಿನೆಮಾ ಪ್ರದರ್ಶನಕ್ಕೆ ಮುಂದಾಗಿದ್ದ ತಮಿಳುನಾಡಿನ ಎಐಎಡಿಎಂಕೆ ಸರಕಾರದ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವಾಲಯ ಚಾಟಿ ಬೀಸಿದೆ. ಟಾಕೀಸುಗಳಲ್ಲಿ ಶೇ.50ರ ಉಪಸ್ಥಿತಿಯಲ್ಲಷ್ಟೇ ಸಿನೆಮಾ ಪ್ರದರ್ಶಿಸಬೇಕು. ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ದುರ್ಬಲಗೊಳಿಸಬಾರದು ಎಂದು ತೀಕ್ಷ್ಣವಾಗಿ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.