ಉ.ಕೊರಿಯಾ ನಿರ್ನಾಮ: ಟ್ರಂಪ್
Team Udayavani, Sep 20, 2017, 8:48 AM IST
ವಿಶ್ವಸಂಸ್ಥೆ: ಅಮೆರಿಕ ಮನಸ್ಸು ಮಾಡಿದರೆ ಉತ್ತರ ಕೊರಿಯಾವನ್ನು ಸಂಪೂರ್ಣವಾಗಿ ನಾಶ ಮಾಡುವುದು ಕಷ್ಟದ ಕೆಲಸವೇನಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
150 ದೇಶಗಳ ಪ್ರತಿನಿಧಿಗಳು ಭಾಗವಹಿಸಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕೊರಿಯಾ ಇಡೀ ಜಗತ್ತಿಗೆ ಮಾರಕವಾಗಿರುವ ಬಗ್ಗೆ ಪ್ರಸ್ತಾಪಿಸಿದರು. ಅಮೆರಿಕ ಮನಸ್ಸು ಮಾಡಿದರೆ, ಉತ್ತರ ಕೊರಿಯಾದ ನಾಶ ಕಷ್ಟವೇನಲ್ಲ, ಅದನ್ನು ಸಂಪೂರ್ಣವಾಗಿ ನಾಶ ಮಾಡಬಹುದು. ಈ ಕೂಡಲೇ ಆ ದೇಶ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು ಎಂದು ಖಡಕ್ಕಾಗಿ ಸೂಚಿಸಿದರು. ಉತ್ತರ ಕೊರಿಯಾದ ಅಧ್ಯಕ್ಷನನ್ನು ನಾನು ಸರ್ವಾಧಿಕಾರಿ ಎಂದು ಕರೆಯುವುದಿಲ್ಲ. ಇದಕ್ಕೆ ಬದಲಾಗಿ ಆತನನ್ನು ಸುಸೈಡ್ ಮಿಷನ್‌ನ ರಾಕೆಟ್ ಮ್ಯಾನ್ ಎಂದೇ ಕರೆಯಬಹುದು. ಏಕೆಂದರೆ, ಆತ ತನ್ನದೇ ಮಿಷನ್ ಮೂಲಕ ತನ್ನ ದೇಶವನ್ನೇ ಸಂಪೂರ್ಣವಾಗಿ ನಾಶ ಮಾಡಲು ಹೊರಟಿರುವ ಸೂಸೈಡ್ ಬಾಂಬರ್ ಎಂದಿದ್ದಾರೆ. ವಿಶೇಷವೆಂದರೆ, ವಿಶ್ವಸಂಸ್ಥೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೊದಲ ಭಾಷಣ ಇದು.
ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆ ವೇಳೆ ವಿಶ್ವಸಂಸ್ಥೆಯ ವಿರುದ್ಧ ಸಿಟ್ಟಿಗೆದ್ದಿದ್ದರು. ಇದರ ಕಾರ್ಯವಿಧಾನಗಳನ್ನು ಟೀಕಿಸಿದ್ದರು. ಹೀಗಾಗಿ ಅವರ ಭಾಷಣ ಹೇಗಿರುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಇನ್ನು ಭಾಷಣದಲ್ಲಿ ಕ್ಯೂಬಾವನ್ನು ಟೀಕಿಸಿದ್ದಲ್ಲದೆ ಎಲ್ಲ ದೇಶಗಳು ತಮ್ಮ ದೇಶವೇ ಫಸ್ಟ್ ಎಂಬ ನಿಯಮ ಪಾಲಿಸಬೇಕು ಎಂಬ ಸಲಹೆಯನ್ನೂ ನೀಡಿದರು. ನನಗೆ ಅಮೆರಿಕ ಫಸ್ಟ್. ಹಾಗೆಯೇ ಇಲ್ಲಿರುವ 150 ದೇಶಗಳೂ ತಮ್ಮ ದೇಶಗಳೇ ಫಸ್ಟ್ ಎಂದು ಭಾವಿಸಬೇಕು ಎಂದು ಹೇಳಿದರು.