ಮೆಕ್ನು ಚಂಡಮಾರುತ: ಯೆಮನ್‌ನಲ್ಲಿ ಭಾರತೀಯರ ಸಹಿತ 40 ಮಂದಿ ನಾಪತ್ತೆ?
Team Udayavani, May 26, 2018, 11:19 AM IST
ಸಲಾಲಾ (ಒಮಾನ್): ಅರಬಿ ಸಮುದ್ರದಲ್ಲಿ ಉಂಟಾಗಿರುವ “ಮೆಕ್ನು’ ಚಂಡಮಾರುತ ಒಮಾನ್‌ನತ್ತ ತಿರುಗಿದ್ದು, ಯೆಮನ್ ಗಡಿಯಲ್ಲಿರುವ ಸಲಾಲಾ ನಗರಕ್ಕೆ ಅಪ್ಪಳಿಸಲಿದೆ. ಇದೇ ವೇಳೆ ಯೆಮನ್‌ನ ದ್ವೀಪ ಸೊಕೊರ್ಟಾದಲ್ಲಿ ಭಾರತೀಯ ನಿವಾಸಿಗಳೂ ಸಹಿತ 40 ಮಂದಿ ನಾಪತ್ತೆಯಾಗಿದ್ದಾರೆಂದು ಯೆಮನ್ ಆಡಳಿತ ಹೇಳಿದೆ.
ಈ ಹಿನ್ನೆಲೆಯಲ್ಲಿ ನಗರದ ತಗ್ಗು ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಇದರಲ್ಲಿ 80 ಸಾವಿರ ಭಾರತೀಯರೂ ಸೇರಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಗಂಟೆಗೆ 157 ಕಿ.ಮೀ. ವೇಗದಲ್ಲಿ ಮೆಕ್ನು ಚಂಡಮಾರುತ ಅಪ್ಪಳಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಕಾರಣ ನಗರದ ನಿವಾಸಿಗಳನ್ನು ಶಾಲೆಗಳಿಗೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾಗಿ ಸಲಾಲಾದ ಭಾರತೀಯ ರಾಯಭಾರಿ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಇದರೊಂದಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಮನವಿ ಮಾಡಲಾಗಿದ್ದು, ಇದಕ್ಕಾಗಿ ಉಚಿತ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಶುಕ್ರವಾರ ರಾತ್ರಿ 11ರ ಹೊತ್ತಿಗೆ ಚಂಡಮಾರುತ ಒಮಾನ್ ಕರಾವಳಿಗೆ ಅಪ್ಪಳಿಸುವುದಾಗಿ ಒಮಾನ್ ಹವಾಮಾನ ಇಲಾಖೆ ಟ್ವೀಟ್ ಮಾಡಿ ಎಚ್ಚರಿಕೆ ನೀಡಿತ್ತು. ಅಲ್ಲದೇ 12 ಅಡಿ ಎತ್ತರದಷ್ಟು ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸಲಿದೆ ಎಂದು ಹೇಳಿತ್ತು.
ಸಲಾಲ ಸುಮಾರು 3.5 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ಈ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಈ ಮಟ್ಟದ ಚಂಡಮಾರುತ ಅಪ್ಪಳಿಸುತ್ತಿದೆ. ಇಲ್ಲಿನ ಜನತೆ ಇಂತಹ ಸನ್ನಿವೇಶವನ್ನು ಈ ಮೊದಲು ಎದುರಿಸಿಲ್ಲದ ಕಾರಣ ತೀರಾ ಆತಂಕದಲ್ಲಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ವೈದ್ಯಕೀಯ ಸಿಬಂದಿ ಸಿದ್ಧ
ಇದೇ ವೇಳೆ ನಗರದ ಅತೀ ದೊಡ್ಡ ಆಸ್ಪತ್ರೆಯಾದ ಸುಲ್ತಾನ್ ಖಾಬೂಸ್‌ನ ಸಿಬಂದಿ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ವೈದ್ಯಕೀಯ ನೆರವುಗಳೊಂದಿಗೆ ಸಿದ್ಧವಾ ಗಿದ್ದಾರೆ ಎಂದು ಆಸ್ಪತ್ರೆಯ ಭಾರತೀಯ ವೈದ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಇತರ ಆಸ್ಪತ್ರೆಗಳೂ ಸಿದ್ಧವಾಗಿದ್ದು, ಪೊಲೀಸ್‌ಮತ್ತು ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿ ಯಲ್ಲಿಡಲಾಗಿದೆ. ಇದೇ ವೇಳೆ ಒಮಾನ್ ಆಡಳಿತ ಶಾಲಾ-ಕಾಲೇಜುಗಳಿಗೆ ಮುಂದಿನ ಕೆಲ ದಿನಗಳ ಮಟ್ಟಿಗೆ ರಜೆ ಘೋಷಿಸಿದೆ. ಕರಾವಳಿ ತೀರದ ರಸ್ತೆಗಳನ್ನು ಮುಚ್ಚಲಾಗಿದ್ದು, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಪಡೆಗಳ ಗಸ್ತು ನಿಯೋಜಿಸಲಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.
40 ಮಂದಿ ಭಾರತೀಯರು, ಸೂಡಾನಿಗಳು ನಾಪತ್ತೆ
ಒಮಾನ್‌ಗೆ ತಾಗಿಕೊಂಡಂತಿರುವ ಯೆಮನ್ ಪೂರ್ವಭಾಗದಲ್ಲಿ ಚಂಡಮಾರುತ ವ್ಯಾಪಕ ಹಾನಿ ಸೃಷ್ಟಿಸಿದೆ. ಈ ಸಂದರ್ಭ ಭಾರತೀಯರು, ಸೂಡಾನಿಗಳು ಸೇರಿದಂತೆ 40 ಮಂದಿ ಸರ್ಕೊಟಾ ದ್ವೀಪದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಸರ್ಕೊಟಾದ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದು, ಪ್ರಾಣಿಗಳು, ಜನರು ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಸೌದಿಯ ರಕ್ಷಣಾ ತಂಡಗಳು ಧಾವಿಸಿವೆ.
ಸಹಾಯವಾಣಿ:
ತುರ್ತು ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ಸಲಲಾದ ಲ್ಲಿರುವ ಭಾರತೀಯ ಪ್ರಜೆಗಳು ಮನ್‌ಪ್ರೀತ್ ಸಿಂಗ್ (ಮೊಬೈಲ್-99498939) ಅವರನ್ನು ಸಂಪರ್ಕಿಸಬಹುದು ಎಂದು ಒಮಾನ್‌ನ ಭಾರತೀಯ ದೂತವಾಸ ಟ್ವೀಟ್ ಮಾಡಿ ತಿಳಿಸಿದೆ.
ತುರ್ತು ಸಂಪರ್ಕಕ್ಕೆ 24 ಗಂಟೆಗಳ ಹೆಲ್ಪ್ ಲೈನ್ ಕೂಡ ತೆರೆಯಲಾಗಿದೆ. ಹೆಲ್ಪ್ಲೈನ್ ಸಂಖ್ಯೆ-0096824695981, ಟೋಲ್ ಫ್ರಿ ಸಂಖ್ಯೆ-80071234.
ಪರಿಸ್ಥಿತಿ ಭಯಾನಕವಾಗಿದೆ: ಕೇರಳ ನಿವಾಸಿ
ಭಾರೀ ಗಾಳಿಯೊಂದಿಗೆ ರಭಸವಾಗಿ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳು ಹೊಳೆಯಂತಾಗಿದೆ. ರಸ್ತೆ ಬದಿ ನಿಲ್ಲಿಸಿರುವ ವಾಹನಗಳೆಲ್ಲ ಮುಳುಗಡೆಯಾಗಿ ನೀರು ಮೊದಲ ಅಂತಸ್ತಿನತ್ತ ಏರುತ್ತಿದೆ. ಮುಂದಿನ ಒಂದೆರಡು ಗಂಟೆಗಳಲ್ಲಿ ಏನಾಗುತ್ತದೆಯೋ ದೇವರೇ ಬಲ್ಲ. ಇಲ್ಲಿಯಂತೂ ಎಲ್ಲವನ್ನೂ ಗೌಪ್ಯವಾಗಿಡಲಾಗುತ್ತಿದೆ ಎಂದು ಕೇರಳ ನಿವಾಸಿ ಗಣೇಶನ್ ಅವರು “ಉದಯವಾಣಿ’ಗೆ ವಾಟ್ಸ್‌ಆ್ಯಪ್ ಮೂಲಕ ಶುಕ್ರವಾರ ಮಧ್ಯರಾತ್ರಿ ತಿಳಿಸಿದ್ದಾರೆ.
ಇನ್ನೂ ಚಂಡಮಾರುತ ಕರಾವಳಿಗೆ ಅಪ್ಪಳಿಸಿಲ್ಲ. ಆದರೂ ಇಲ್ಲಿ ವಿದ್ಯುತ್, ಫೋನ್, ಟಿವಿ ಕೇಬಲ್ ಸಂಪರ್ಕ, ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಹೊರಗಡೆ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ ಎಂದು ಗಣೇಶನ್ ಅವರು ವಿವರಿಸಿದ್ದಾರೆ.
ಮಾಹಿತಿ ಹಂಚಲೂ ನಿಷೇಧ
ಇಲ್ಲಿನ ಪರಿಸ್ಥಿತಿಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚುವುದಕ್ಕೂ ನಿಷೇಧ ಹೇರಲಾಗಿದೆ. ಯಾವುದೇ ಕಾರಣಕ್ಕೂ ಚಿತ್ರಗಳನ್ನು ಕಳುಹಿಸದಂತೆ ಎಚ್ಚರಿಕೆ ನೀಡಲಾಗಿದೆ. ನಾನು ಪ್ರಸ್ತುತ ಸಲಾಲ ಪರಿಸರದಲ್ಲಿಯೇ ಇದ್ದು ಮಳೆ ನಿಂತಿಲ್ಲ ಎಂದು ತಿಳಿಸಿದ್ದಾರೆ.
ಗೋಡೆಗೆ ಅಪ್ಪಳಿಸಿ ಬಾಲಕಿ ಸಾವು
ಭಾರೀ ಗಾಳಿಯಿಂದಾಗಿ ಆಟವಾಡುತ್ತಿದ್ದ 12ರ ಹರೆಯದ ಬಾಲಕಿಯೊಬ್ಬಳು ಗೋಡೆಗೆ ಅಪ್ಪಳಿಸಲ್ಪಟ್ಟು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ ಎಂದು ಒಮಾನ್ ರಾಯಲ್ ಪೊಲೀಸರು ತಿಳಿಸಿದ್ದಾರೆ.
ನೆರವಿಗೆ ಎರಡು ನೌಕೆ: 3 ಕೆಟಗರಿಯ ಚಂಡಮಾರುತದಿಂದ ಭಾರೀ ನಾಶ-ನಷ್ಟವಾಗುವ ಸಾಧ್ಯತೆ ಇದ್ದುದರಿಂದ ಭಾರತವು ಶುಕ್ರವಾರವೇ ಐಎನ್‌ಎಸ್ ದೀಪಕ್ ಮತ್ತು ಐಎನ್‌ಎಸ್ ಕೊಚ್ಚಿ ನೌಕೆಯನ್ನು ಒಮಾನ್‌ಗೆ ಕಳುಹಿಸಿದೆ. ನೌಕೆಯಲ್ಲಿ ರಕ್ಷಣಾ ಸಾಮಗ್ರಿ, ಹೆಲಿಕಾಪ್ಟರ್ ಮತ್ತು ತುರ್ತು ಸೇವೆಗೆ ಬೇಕಾದ ಪರಿಕರಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.