ಮೋದಿ ಸ್ಫೂರ್ತಿಯ ಚಿಲುಮೆ
Team Udayavani, Jan 24, 2018, 6:50 AM IST
ದಾವೋಸ್ (ಸ್ವಿಜರ್ಲೆಂಡ್): “ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಮಾತನಾಡಿಸಿ, ಆರ್ಥಿಕತೆ ಕುರಿತಾಗಿ ಹೊಸ ಐಡಿಯಾಗಳನ್ನು ಪಡೆದುಕೊಂಡರು. ಪ್ರತಿಯೊಬ್ಬರ ಹೆಸರನ್ನು ಹೇಳಿ, ಅವರು ಕೇಳಿದ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸಿದರು. ಅವರು ಎಲ್ಲರಿಗೂ ಸ್ಫೂರ್ತಿ.’
ಇದು ಮಂಗಳವಾರ ದಾವೋಸ್‌ನಲ್ಲಿ ಪ್ರಧಾನಿ ಮೋದಿ ಜತೆಗಿನ ಚರ್ಚೆಯ ಬಳಿಕ ಪ್ರಮುಖ ಕಂಪನಿಗಳ ಸಿಇಒಗಳು ಆಡಿದ ಮೆಚ್ಚುಗೆಯ ಮಾತುಗಳು. ಭಾರತಕ್ಕೆ ಹೆಚ್ಚಿನ ರೀತಿಯಲ್ಲಿ ವಿದೇಶಿ ಬಂಡವಾಳ ಆಕರ್ಷಿಸಿ, ಕೈಗಾರಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ಪ್ರಮುಖ ಕಂಪನಿಗಳ ಸಿಇಒ ಮತ್ತು ಇತರರ ಜತೆ ಮಾತುಕತೆ- ಸಂವಾದ ನಡೆಸಿದರು.
ಬಳಿಕ ಈ ಕುರಿತು ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚರ್ “ಎನ್‌ಡಿಟಿವಿ’ ಜತೆಗೆ ಮಾತನಾಡಿ, ಪ್ರಧಾನಿ ಮೋದಿಯವರೇ ಖುದ್ದು ಆಸಕ್ತಿಯಿಂದ ಭಾರತದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಜತೆಗೆ ನಮ್ಮ ಕಡೆಯಿಂದಲೂ ಹೊಸ ವಿಚಾರಗಳನ್ನು ಅರಿತುಕೊಂಡು, ಇನ್ನೂ ಏನೇನು ಸುಧಾರಣೆ ಗಳನ್ನು ತರಬಹುದು ಎಂಬ ಬಗ್ಗೆ ಅಭಿಪ್ರಾಯ ಕೇಳಿದರು. ಯಾವ ಪ್ರಶ್ನೆಗಳನ್ನು ಕೇಳಿದರೂ, ಅದಕ್ಕೆ ಅವರ ಬಳಿ ಉತ್ತರವಿತ್ತು ಎಂದಿದ್ದಾರೆ.
ಪ್ರಧಾನಿ ಮೋದಿ ಜತೆ ಸಿಇಒಗಳೂ ಉತ್ಸಾಹದಿಂದಲೇ ಮಾತುಕತೆಯಲ್ಲಿ ಪಾಲ್ಗೊಂಡರು. “ಭಾರತದಲ್ಲಿ ಉದ್ಯಮ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಸುಧಾರಣೆ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ, ಮೋದಿ ನೇತೃತ್ವದ ಸರ್ಕಾರ 42 ತಿಂಗಳಲ್ಲಿ ಕೈಗೊಂಡ ಕ್ರಮಗಳು ಉದ್ಯಮಪತಿಗಳಿಗೆ ಸಂತೋಷ ತಂದಿದೆ’ ಎಂದು ಹಿಸ್ ಮಾರ್ಕಿಟ್‌ನ (HIS Markit)ಉಪಾಧ್ಯಕ್ಷ ಡ್ಯಾನಿಯಲ್ ಯರ್ಗಿನ್ ಹೇಳಿದ್ದಾರೆ. ಹಾಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿಶ್ವ ಭಾರತವನ್ನು ನೋಡುವ ರೀತಿಯೇ ಬದಲಾಗಿದೆ. ಯಾವುದೇ ರೀತಿಯಲ್ಲಿ ಸರ್ಕಾರದ ಜತೆಗೆ ಹೋರಾಟ ಮಾಡಬೇಕಾದ ಅಗತ್ಯವೇ ಕಾಣುತ್ತಿಲ್ಲ. ಹೀಗಾಗಿ ಭಾರತದಲ್ಲಿ ಹೂಡಿಕೆಯ ವಾತಾವರಣ ಉತ್ತಮವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ವಹಿವಾಟು ಸುಲಭ: ವಿಶ್ವದ ಪ್ರಮುಖ ಕಂಪನಿಗಳ ಸಿಇಒಗಳ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ, ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಉದ್ಯಮ ನಡೆಸಲು ಅವಕಾಶ ಉತ್ತಮವಾಗಿದೆ ಎಂದಿದ್ದಾರೆ. ವಿಶ್ವ ಆರ್ಥಿಕ ಶೃಂಗ (ಡಬ್ಲೂéಇಎಫ್)ದ ಸಂದರ್ಭದಲ್ಲಿಯೇ ವಿಶ್ವದ 40 ಸಿಇಒಗಳ ಜತೆಗೆ ನಡೆದ ಔತಣಕೂಟದಲ್ಲಿ ಪ್ರಧಾನಿ ಮಾತನಾಡಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೈಗೊಳ್ಳಲಾಗಿರುವ ಆರ್ಥಿಕ ಸುಧಾರಣೆಗಳನ್ನು ಸಿಇಒಗಳ ಸಭೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸ್ವಿಸ್ ಅಧ್ಯಕ್ಷರ ಭೇಟಿ: ಪ್ರಧಾನಿ ಮೋದಿ ಸ್ವಿಜರ್ಲೆಂಡ್ ಅಧ್ಯಕ್ಷ ಆ್ಯಲಿಯನ್ ಬರ್ಸೆಟ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೊಳಿಸುವ ಬಗ್ಗೆ ಉಭಯ ನಾಯಕರು ಮಾತನಾಡಿದರು.
ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ
ದಾವೋಸ್‌ನಲ್ಲಿ ಪ್ರಧಾನಿ ಮೋದಿ ಭಾಷಣದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ವಾಕ್ಸಮರದಲ್ಲಿ ತೊಡಗಿವೆ. ಮೋದಿ ಭಾಷಣದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ಭಾರತದಲ್ಲಿರುವ ಶೇ.73ರಷ್ಟು ಮಂದಿಯ ಸಂಪತ್ತು ಕೇವಲ ಶೇ.1ರಷ್ಟು ಮಂದಿಯ ಬಳಿ ಇದೆ ಎಂಬ ವಿಚಾರವನ್ನು ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಬೇಕಾಗಿತ್ತು’ ಎಂದು ಲೇವಡಿ ಮಾಡಿದ್ದಾರೆ. “ಸನ್ಮಾನ್ಯ ಪ್ರಧಾನ ಮಂತ್ರಿಯವರೇ, ದೇಶದ ಶೇ.73ರಷ್ಟು ಮಂದಿಯ ಸಂಪತ್ತು ಶೇ.1ರಷ್ಟು ಮಂದಿ ಕೈಯ್ಯಲ್ಲಿ ಏಕೆ ಇದೆ ಎಂಬ ಬಗ್ಗೆ ಸ್ವಿಜರ್ಲೆಂಡ್ ಜನರಿಗೆ ತಿಳಿಸಿ. ನಿಮ್ಮ ಅವಗಾಹನೆಗಾಗಿ ಅದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನೂ ಟ್ಯಾಗ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ರಾಹುಲ್ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, “ದೇಶದ ಜನರನ್ನು ಶಾಶ್ವತವಾಗಿ ಬಡತನಕ್ಕೆ ನೂಕಿದ ಹೆಗ್ಗಳಿಕೆ ಕಾಂಗ್ರೆಸ್‌ನದ್ದು. ಜನರಲ್ಲಿ ಸಂಪತ್ತು ಸರಿಯಾಗಿ ಹಂಚಿಕೆಯಾಗದೇ ಇರುವುದರಲ್ಲಿ ನಿಮ್ಮ ಕುಟುಂಬದ ಕೊಡುಗೆಯೇ ಹೆಚ್ಚಾಗಿದೆ. ನೆಹರೂ ಕಾಂಗ್ರೆಸ್ ಜಾರಿ ಮಾಡಿದ ಆಡಳಿತದಿಂದಲೇ ಹೀಗಾಗಿದೆ. ಮೂರೂವರೆ ವರ್ಷಗಳ ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶ ನೀಡುವ ಪ್ರಯತ್ನ ನಡೆದಿದೆ’ ಎಂದು ಹೇಳಿದೆ.
ಅಭಿವೃದ್ಧಿಯ ಐಡಿಯಾ ಹಂಚಿಕೊಳ್ಳಿ
ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ತಮ್ಮ ಐಡಿಯಾಗಳನ್ನು ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಗಳ ಜತೆ ಹಂಚಿಕೊಳ್ಳಬೇಕು. ವಿಶೇಷವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಆರ್‌ಬಿಐನ ನಿವೃತ್ತ ಗವರ್ನರ್ ಡಾ.ರಘುರಾಮ್ ರಾಜನ್ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಅವರು ಅಭಿವೃದ್ಧಿ ಪಡಿಸಿದ ಉತ್ಪನ್ನಗಳಿಗೆ ಇತರ ಅರ್ಥ ವ್ಯವಸ್ಥೆಯಲ್ಲಿಯೇ ಮಾರುಕಟ್ಟೆ ಕಂಡುಕೊಳ್ಳಬೇಕಾಗಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಯೇ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ರಾಜನ್ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಇತರೆಡೆಗೆ ಹೊಂದಿರುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.