ಪಾಕ್‌ಗೆ ಟ್ರಂಪ್ ತಪರಾಕಿ; ಉಗ್ರರಿಗೆ ರಕ್ಷಣೆ ವಿರುದ್ಧ ಗುಡುಗು
Team Udayavani, Jan 2, 2018, 7:00 AM IST
ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಅತ್ಯಂತ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಪಾಕಿಸ್ಥಾನ ಕಳೆದ 15 ವರ್ಷಗಳಲ್ಲಿ ಅಮೆರಿಕದಿಂದ 2.14 ಲಕ್ಷ ಕೋಟಿ ರೂ. ಅನುದಾನ ಪಡೆದಿದೆ. ಆದರೆ ಇದಕ್ಕೆ ಪ್ರತಿಯಾಗಿ ಪಾಕ್ ಹೇಳಿರುವುದು ಸುಳ್ಳು ಹಾಗೂ ಮೋಸ ಎಂದು ಟ್ರಂಪ್ ವಾಗ್ಧಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಅಫ್ಘಾನಿಸ್ಥಾನದಲ್ಲಿ ನಾವು ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಅದೇ ಉಗ್ರರಿಗೆ ಪಾಕಿಸ್ಥಾನ ನೆರವು ನೀಡುತ್ತಿದೆ ಎಂದು ಟ್ರಂಪ್ ಟ್ವಿಟರ್ ಮೂಲಕ ಕಿಡಿಕಾರಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಪಾಕಿಸ್ಥಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಂಡಿದ್ದರೂ ಟ್ರಂಪ್ ಅವರ ಈಗಿನ ಮಾತುಗಳು ಅತ್ಯಂತ ತೀಕ್ಷ್ಣವಾಗಿವೆ. ಹೊಸ ವರ್ಷಾರಂಭದಲ್ಲೇ ಟ್ರಂಪ್ ಪಾಕಿಸ್ಥಾನವನ್ನು ಟೀಕಿಸಿದ್ದು ಮಹತ್ವದ್ದಾಗಿದೆ. ಇನ್ನೊಂದೆಡೆ ಪಾಕ್‌ಗೆ ನೀಡಬೇಕಿದ್ದ 225 ಮಿಲಿಯನ್ ಡಾಲರ್ ನೆರವನ್ನು ತಡೆಹಿಡಿಯಲು ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ಇತ್ತೀಚೆಗಷ್ಟೆ ಹೇಳಲಾಗಿತ್ತು. ಈಗ ಟ್ವೀಟ್ ಮೂಲಕ ಟ್ರಂಪ್ ಅವರು ಪಾಕ್ ವಿರುದ್ಧ ವಾಗ್ಧಾಳಿ ನಡೆಸಿರುವುದನ್ನು ನೋಡಿದರೆ ಆ ದೇಶಕ್ಕೆ ನೀಡುತ್ತಿದ್ದ ನೆರವು ಸ್ಥಗಿತಗೊಳ್ಳುವುದು ಬಹುತೇಕ
ಖಚಿತವಾಗಿದೆ.
ಮುಂಬಯಿ ದಾಳಿಯ ಸಂಚುಕೋರ ಹಫೀಜ್ ಸಯೀದ್‌ನನ್ನು ಕಳೆದ ನವೆಂಬರ್‌ನಲ್ಲಿ ಪಾಕ್ ಬಿಡುಗಡೆ ಮಾಡಿದಾಗಲೂ ಅಮೆರಿಕ ಪಾಕ್ ನಡೆಯನ್ನು ಟೀಕಿಸಿತ್ತು. ಅಲ್ಲದೆ ತತ್‌ಕ್ಷಣವೇ ಆತನನ್ನು ಪುನಃ ಬಂಧಿಸಬೇಕು ಎಂದೂ ಟ್ರಂಪ್ ಆಡಳಿತ ಸೂಚಿಸಿತ್ತು. ಅಷ್ಟೇ ಅಲ್ಲ, ಆಗಸ್ಟ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ನೀತಿ ಬಿಡುಗಡೆ ವೇಳೆಯೂ ಪಾಕ್ ನೀತಿಯನ್ನು ವಿರೋಧಿಸಿದ್ದ ಟ್ರಂಪ್, ಉಗ್ರರಿಗೆ ಸುರಕ್ಷಿತ ಅಡಗುದಾಣಗಳನ್ನು ಪಾಕ್ ಒದಗಿಸುವ ಬಗ್ಗೆ ನಾವು ಇನ್ನೂ ಮೌನವಹಿಸಲಾಗದು. ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಶಾಂತಿ ನೆಲೆಸುವ ಪ್ರಯತ್ನಕ್ಕೆ ಪಾಕ್ ಕೈಜೋಡಿಸಿದರೆ ಹೆಚ್ಚು ಲಾಭವಿದೆ ಎಂದು ಹೇಳಿದ್ದರು. ಇನ್ನೂ ಹಲವು ಸನ್ನಿವೇಶಗಳಲ್ಲಿಯೂ ಪಾಕ್ ವಿರುದ್ಧ ಅಮೆರಿಕ ವಾಗ್ಧಾಳಿ ನಡೆಸಿತ್ತು. ಆದರೆ ಅಪಹರಣಕ್ಕೀಡಾದ ಅಮೆರಿಕದ ದಂಪತಿಯನ್ನು ಸುರಕ್ಷಿತವಾಗಿ ಪಾಕಿಸ್ಥಾನ ಸರ್ಕಾರ ಬಿಡುಗಡೆ ಮಾಡಿದ್ದಕ್ಕೆ ಕೆಲವು ತಿಂಗಳ ಹಿಂದೆ ಟ್ರಂಪ್ ಮೆಚ್ಚುಗೆ ಸೂಚಿಸಿದ್ದರು.
ವಿಶ್ವಕ್ಕೆ ನಾವು ಸತ್ಯ ತಿಳಿಸುತ್ತೇವೆ: ಪಾಕ್
ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್‌ಗೆ ನಾವು ಶೀಘ್ರದಲ್ಲೇ ಪ್ರತಿಕ್ರಿಯಿಸುತ್ತೇವೆ. ವಿಶ್ವಕ್ಕೆ ನಾವು ಸತ್ಯವನ್ನು ತಿಳಿಸುತ್ತೇವೆ. ಅಷ್ಟೇ ಅಲ್ಲ ವಾಸ್ತವವೇನು ಮತ್ತು ಕಟ್ಟುಕಥೆ ಯಾವುದು ಎಂದೂ ವಿವರಿಸುತ್ತೇವೆ ಎಂದು ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಟ್ರಂಪ್ ವಾಗ್ಧಾಳಿ ನಡೆಸುತ್ತಿದ್ದಂತೆಯೇ ಪ್ರಧಾನಿ ಶಾಹಿದ್ ಅಬ್ಟಾಸಿ ಜತೆಗೆ ಅಸಿಫ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇದು ಮೋದಿ ರಾಜತಾಂತ್ರಿಕ ಯಶಸ್ಸು
ಪಾಕ್ ವಿರುದ್ಧ ಟ್ರಂಪ್ ವಾಗ್ಧಾಳಿ ನಡೆಸಿರುವುದನ್ನು ಪ್ರಧಾನಿ ಮೋದಿಯ ಯಶಸ್ವಿ ರಾಜತಾಂತ್ರಿಕತೆಯ ದ್ಯೋತಕ ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಟ್ವೀಟ್ ಮಾಡಿದ್ದಾರೆ. ಟೆರರಿಸ್ಥಾನದ ಸುಳ್ಳು ಬಹಿರಂಗ ಪಡಿಸಿದ್ದಕ್ಕೆ ಅಮೆರಿಕಕ್ಕೆ ಧನ್ಯವಾದಗಳು. ರಾಹುಲ್ ಗಾಂಧಿಯವರೇ, ಮೋದಿಯವರ ರಾಜತಾಂತ್ರಿಕತೆಯ ಯಶಸ್ಸು ಇಲ್ಲಿದೆ. ಪಾಕ್‌ನ ನಾಟಕ ನಿಮಗೆ ಯಾವಾಗ ಕಾಣಿಸುತ್ತದೆ? ಪಾಕ್‌ನವರನ್ನು ತಬ್ಬಿ ಸಂತೈಸುವಂತೆ ಐಯ್ಯರ್‌ರನ್ನು ನೀವು ಕಳುಹಿಸುತ್ತೀರಾ? ಎಂದು ನರಸಿಂಹ ರಾವ್ ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ನಿಲ್ಲಿಸಿ; ಅಲ್ಲಿ ತನಕ ಕ್ರಿಕೆಟ್ ಇಲ್ಲ
ಭಾರತದ ವಿರುದ್ಧ ಪಾಕಿಸ್ಥಾನ ಭಯೋತ್ಪಾದನೆಗೆ ಪ್ರಚೋದನೆ ನೀಡುವುದು ಮತ್ತು ಗಡಿಯಾಚೆಗಿಂದ ಗುಂಡಿನ ದಾಳಿ ನಡೆಸುವುದನ್ನು ನಿಲ್ಲಿಸುವವರೆಗೂ ಪಾಕ್ ಜತೆ ಕ್ರಿಕೆಟ್ ಪಂದ್ಯ ನಡೆಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸಂಸದೀಯ ಸಲಹಾ ಸಮಿತಿಯ ಸಭೆಯಲ್ಲಿ ಸುಷ್ಮಾ ಈ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ಹಾಗೂ ಕ್ರಿಕೆಟ್ ಪಂದ್ಯ ಒಟ್ಟೊಟ್ಟಿಗೆ ನಡೆಯದು. ಅಲ್ಲದೆ ಮೂರನೇ ರಾಷ್ಟ್ರದಲ್ಲಿ ನಡೆಯುವ ಪಂದ್ಯಕ್ಕೂ ಇದು ಅನ್ವಯಿಸುತ್ತದೆ ಎಂದು ಸುಷ್ಮಾ ಹೇಳಿದ್ದಾರೆ.
ಪರಮಾಣು ಘಟಕಗಳ ಬಗ್ಗೆ ಭಾರತ ಮತ್ತು ಪಾಕಿಸ್ಥಾನ ಪರಸ್ಪರ ವಿವರಗಳನ್ನು ಹಂಚಿಕೊಂಡಿವೆೆ. ಮೂರು ದಶಕಗಳ ಒಪ್ಪಂದದ ಪ್ರಕಾರ ಈ ಮಾಹಿತಿ ವಿನಿಮಯ ನಡೆದಿದ್ದು, ಒಂದೇ ಸಮಯದಲ್ಲಿ ಉಭಯ ದೇಶಗಳ ಮಾಹಿತಿ ಹಸ್ತಾಂತರ ಸೋಮವಾರ ನಡೆದಿದೆ. ಪರಮಾಣು ಘಟಕಗಳ ಮೇಲೆ ದಾಳಿ ನಡೆಸುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ 1988ರಲ್ಲಿ ಭಾರತ ಮತ್ತು ಪಾಕ್ ಒಪ್ಪಂದ ಮಾಡಿಕೊಂಡಿತ್ತು. ಇದರಂತೆ ಪ್ರತಿ ವರ್ಷ ಜನವರಿ ಒಂದರಂದು ಉಭಯ ದೇಶಗಳು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.