ಇಮ್ರಾನ್ ಇನ್‌ಸ್ವಿಗ್: ಕ್ರಿಕೆಟ್ ಕಣ್ಣಲ್ಲಿ ಇಮ್ರಾನ್ ರಾಜಕೀಯ
Team Udayavani, Apr 4, 2022, 7:00 AM IST
ಕ್ರಿಕೆಟೇ ಬೇರೆ, ರಾಜಕೀಯದ ಚದುರಂಗದಾಟವೇ ಬೇರೆ. 1992ರಲ್ಲಿ ವೇಗದ ಬೆಂಕಿಚೆಂಡುಗಳನ್ನೆಸೆದು ಪುಂಖಾನುಪುಂಖ ವಿಕೆಟ್ ಉರುಳಿಸಿ, ವಿಶ್ವಕಪ್ ಎತ್ತಿಹಿಡಿದಿದ್ದ ಉದ್ದಕೂದಲಿನ ಹುಡುಗ, ಅದೇ 30 ವರ್ಷಗಳ ಬಳಿಕ ಪಾಕ್‌ನ ರಾಜಕೀಯ ಮೈದಾನದಲ್ಲಿ ತಬ್ಬಿಬ್ಟಾಗಿ ನಿಂತಿದ್ದಾನೆ. ಒಬ್ಬಂಟಿಯಾಗಿ ಉಳಿದ ಬ್ಯಾಟ್ಸ್‌ಮನ್‌ನಂತೆ ಅಸಹಾಯಕರಾಗಿರುವ ಇಮ್ರಾನ್ ಖಾನ್, ಅಸೆಂಬ್ಲಿ ವಿಸರ್ಜಿಸಿ, 3 ತಿಂಗಳು ಉಸ್ತುವಾರಿ ಪ್ರಧಾನಿಯಾಗಿ ಇರಲಿದ್ದಾರೆ. ಕ್ರಿಕೆಟ್‌ನ ಕಣ್ಣಲ್ಲೇ ಇಮ್ರಾನ್‌ರ ರಾಜಕೀಯದಾಟ ನೋಡುವ ಪ್ರಯತ್ನ ಇಲ್ಲಿದೆ…
“ಡಕೌಟ್’ ಆದ “ನಯಾ ಪಾಕಿಸ್ಥಾನ್’ ಕನಸು :
2018ರಲ್ಲಿ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಬಹುಮತ ಗಳಿಸಿ, ಅಧಿಕಾರದ ಕ್ರೀಸಿಗೆ ಇಳಿದಾಗ, ಪ್ರಧಾನಿ ಇಮ್ರಾನ್ ಖಾನ್ ಬಾಯಲ್ಲಿ ಬಂದ ಚೊಚ್ಚಲ ಘೋಷಣೆ “ನಯಾ ಪಾಕಿಸ್ಥಾನ್ ನಿರ್ಮಾಣ’. ಆದರೆ, ಮುಂದಿನ ಪ್ರತೀ ಹೆಜ್ಜೆಗಳಲ್ಲೂ ಇಮ್ರಾನ್ ಎದುರಿಸಿದ್ದು ಬರೀ ಯಾರ್ಕರ್‌ಗಳನ್ನು. ಆರ್ಥಿಕ ನೀತಿಗಳ ವೈಫಲ್ಯ, ಭ್ರಷ್ಟಾಚಾರ, ಕೊರೊನಾ ಸಂಕಷ್ಟ, ಮೈತ್ರಿಕೂಟದೊಳಗಿನ ಕಿತ್ತಾಟದಂಥ ದೇಶದ ಆಂತರಿಕ ಸಂಗತಿಗಳನ್ನು ನಿಭಾಯಿಸುವಲ್ಲಿ ಇಮ್ರಾನ್ ಸುಸ್ತೋ ಸುಸ್ತು. “ನಾನೊಬ್ಬ ದೋಷಪೂರಿತ ವ್ಯವಸ್ಥೆಯ ದೊರೆ’ ಅಂತಲೇ ಇಮ್ರಾನ್ ಹೇಳಿಕೊಂಡರು. ಕೊನೆಗೂ “ನಯಾ ಪಾಕಿಸ್ಥಾನ್’ ಕನಸೇ “ಡಕೌಟ್’ ಆಗಿಹೋಯಿತು.
ಹಣದುಬ್ಬರದ “ಯಾರ್ಕರ್’ಗೆ ತಬ್ಬಿಬ್ಬು :
ಪಾಕ್ ಆರ್ಥಿಕವಾಗಿ ಯಾವತ್ತೂ ನೆಟ್ಟಗಿದ್ದ ದೇಶವೇ ಅಲ್ಲ. ಇಮ್ರಾನ್ ಕಾಲಿಟ್ಟ ಘಳಿಗೆ ಯಂತೂ ಘೋರ. ಆರ್ಥಿಕ ಸುಧಾರಣೆಗೆ ತಂದ ನೀತಿಗಳಾÂವುವೂ ಫಲಕೊಡಲಿಲ್ಲ. ಕೊರೊನೋತ್ತರ ಕಾಲಘಟ್ಟದಲ್ಲಿ ದಾಖಲೆಯೆಂಬಂತೆ ಶೇ.12ರಷ್ಟು ಆರ್ಥಿಕ ಹಿಂಜ ರಿತಕ್ಕೆ ದೇಶ ಕುಸಿಯಿತು. ಆಹಾರ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಐಎಂಎಫ್, ಲೇವಿ ಹೆಚ್ಚಿಸಿದ್ದು ಕೂಡ ದುಬಾರಿ ಆಗಿದೆ.
ಸಾಲಗಳೇ ಅಲ್ಲಿ “ಎಕ್ಸ್ ಟ್ರಾ ರನ್ಸ್’ :
ವಿಶ್ವ ಹಣಕಾಸು ನಿಧಿಯಿಂದ ಅತೀ ಹೆಚ್ಚು ಸಾಲ ಪಡೆದ ದೇಶಗಳ ಪೈಕಿ ಪಾಕಿಸ್ಥಾನವೇ ಮುಂಚೂಣಿ. ಇದನ್ನರಿತೇ ವಿಶ್ವಬ್ಯಾಂಕ್, “ಜಪ್ಪಯ್ಯ ಅಂದ್ರೂ ನಿಮ್ಗೆ ನಯಾಪೈಸೆ ಸಾಲ ನೀಡಲ್ಲ’ ಎಂದೇ ಕಡ್ಡಿ ತುಂಡಾದಂತೆ ಹೇಳಿತ್ತು. ಅಲ್ಲದೆ, ಸಾಲ ಸೇವೆ ಅಮಾನತು ಉಪಕ್ರಮ (ಡಿಎಸ್‌ಎಸ್‌ಐ) ಪಟ್ಟಿಗೂ ಪಾಕಿಸ್ಥಾನವನ್ನು ಸೇರಿಸಿತ್ತು. ಚೀನದಿಂದ ಪಾಕ್ ಮೇಲಿಂದ ಮೇಲೆ ಸಾಲ ಪಡೆಯುತ್ತಲೇ ಇದೆ.
ಕಾಶ್ಮೀರದಿಂದ 370 “ಔಟ್’ :
ಪ್ರಧಾನಿ ಮೋದಿ ಎಸೆದ ಈ “ಗೂಗ್ಲಿ’ಗೆ ಅಕ್ಷರಶಃ ಪಾಕ್ ಅನ್ನು ತಬ್ಬಿಬ್ಬು ಮಾಡಿತ್ತು. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ವಿಶೇಷ ಮಾನ್ಯತೆ ಯನ್ನು ರದ್ದುಗೊಳಿಸಿ, ಶತ್ರುರಾಷ್ಟ್ರದ ಲೆಕ್ಕಾಚಾರ ಬುಡಮೇಲು ಮಾಡಿದರು. ಆಜಾದಿ ಹೋರಾಟಗಳು ನೆಲಕಚ್ಚಿದವು. ಪಾಕ್‌ನ ರಾಜಕೀಯಪಟುಗಳಿಗೆ ಕಾಶ್ಮೀರದ ಟಾಪಿಕ್ಕೇ ನೋಟ್‌ಬ್ಯಾಂಕ್. ಸ್ವತಂತ್ರ ಕಾಶ್ಮೀರದ ಕೂಗಿಗೆ ವಿಶ್ವದ ಮುಂದೆ ಕುಮ್ಮಕ್ಕು ನೀಡುವ ಪಾಕ್‌ನ ಪ್ರಯತ್ನಗಳೆಲ್ಲ ಇಮ್ರಾನ್ ಕಾಲದಲ್ಲಿ ವಿಫಲಗೊಂಡವು.
ಆರ್ಥಿಕತೆಗೆ ದುಬಾರಿಯಾದ 6 ಚೆಂಡುಗಳು :
- ದೇಶದ ಆರ್ಥಿಕತೆಗೆ ದುಬಾರಿಯಾದ ಬಡ್ಡಿ ರಹಿತ “407 ಪಿಕೆಆರ್’ (ಪಾಕಿಸ್ಥಾನ ರೂಪಾಯಿ) ಸಾಲ ಯೋಜನೆ. ಇದರಿಂದ ಪಾಕ್‌ನ ಸಾಲ 50.5 ಟ್ರಿಲಿಯನ್ ಪಿಕೆಆರ್ ತಲುಪಿದೆ. ದೇಶದ ಒಟ್ಟು ಶೇ.70ರಷ್ಟು ಸಾಲ ಕಳೆದ 39 ತಿಂಗಳಲ್ಲೇ ಆಗಿದೆ.
- ಅತ್ಯಂತ ದುರ್ಬಲ ತೆರಿಗೆ ಸಂಗ್ರಹ. ಪಾಕ್‌ನಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯುವವರ ಪಟ್ಟಿ ಬೆಳೆಯುತ್ತಲೇ ಇದೆ.
- ಕಳಪೆ ವಸ್ತುಗಳ ಉತ್ಪಾದನೆ ಮತ್ತು ಕನಿಷ್ಠ ಮೌಲ್ಯದ ವಸ್ತುಗಳ ರಫ್ತು ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ.
- ರಾಷ್ಟ್ರೀಯ ಸಂಪತ್ತು ಲೂಟಿಕೋರ ರನ್ನು ಶಿಕ್ಷಿಸಲು ರಚಿಸಿದ್ದ ಸ್ಪೆಷಲ್ ಟಾಸ್ಕ್ ಫೋರ್ಸ್ ಮೈಮರೆತು ಕುಳಿತಿದೆ.
- ಇಂಧನ ವಲಯಕ್ಕೆ ಶಕ್ತಿ ತುಂಬಲು ಕೈಗೊಂಡ ಯೋಜನೆಗಳೆಲ್ಲ ಕೈಕೊಟ್ಟಿವೆ. ವಿದ್ಯುತ್ ಮುಗ್ಗಟ್ಟಿನಿಂದ 10 ಸಾವಿರಕ್ಕೂ ಅಧಿಕ ಫ್ಯಾಕ್ಟರಿಗಳು ಮುಚ್ಚಿಹೋಗಿವೆ.
- ನೆಗೆಟಿವ್ ಸುದ್ದಿಗಳಿಂದ ಬೇಸತ್ತ ಇಮ್ರಾನ್ ಖಾನ್, “ಬೆಳಗ್ಗೆ ಪೇಪರ್ ಓದುವುದನ್ನು ಬಿಟ್ಟು, ಟಿವಿಯಲ್ಲಿ ರಾತ್ರಿಯ ಚಾಟ್ ಶೋಗಳನ್ನು ನೋಡಿ’ ಎಂದು ಇತ್ತೀಚೆಗೆ ಕರೆ ಕೊಟ್ಟಿದ್ದರು. ಇದು ಪತ್ರಿಕಾ ಮಾಧ್ಯಮ ಗಳನ್ನು ಮತ್ತಷ್ಟು ಕೆರಳಿಸಿದೆ.
ಆ 2 ಸಂಬಂಧಗಳ ಕ್ಯಾಚ್ ಡ್ರಾಪ್ :
ಸೌದಿ ಅರೇಬಿಯಾ :
ಇಸ್ಲಾಂ ರಾಷ್ಟ್ರಗಳಲ್ಲೇ ಅತೀ ಪ್ರಬಲವಾಗಿರುವ ಸೌದಿ ಅರೇಬಿಯಾ ಜತೆಗಿನ ಪಾಕ್‌ನ ಸಂಬಂಧ ಹಿಂದೆಂದೂ ಇಷ್ಟು ಹದಗೆಟ್ಟಿರಲಿಲ್ಲ. ಇಮ್ರಾನ್ ಆಡಳಿತದಲ್ಲಿ ಪಾಕ್, ಟರ್ಕಿ ಕಡೆ ಹೆಚ್ಚು ವಾಲಿದ್ದು ಸಹಜವಾಗಿ ಸೌದಿ ಅರೇಬಿಯಾವನ್ನು ಕೆರಳಿಸಿತ್ತು. “ಕಾಶ್ಮೀರ ವಿಚಾರದಲ್ಲಿ ಸೌದಿ ನಾಯಕತ್ವದ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ (ಒಐಸಿ) ಕೈಕಟ್ಟಿ ಕೂತಿದೆ’ ಎಂದು ಪಾಕ್ ಆರೋಪಿಸಿದಾಗ, ಸೌದಿ ದೊರೆಗಳು ಕೆಂಡವಾದರು. ಪಾಕ್‌ಗೆ ಒಂದೇ ದಿನದಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಸಾಲ ಕಟ್ಟಲು ಸೌದಿ ಸೂಚಿಸಿತು. ಚೀನದ ಕಾಲಿಗೆ ಬಿದ್ದೂ ಹೇಗೋ ತೀರಿಸಿತು ಕೂಡ. ಪಾಕ್‌ನ ಈ ಅತಂತ್ರ, ಇಬ್ಬಗೆಯ ನೀತಿ ಕಂಡು ಇತರ ಇಸ್ಲಾಂ ರಾಷ್ಟ್ರಗಳು ಅಂತರ ಕಾಯ್ದುಕೊಳ್ಳತೊಡಗಿದವು.
ಅಮೆರಿಕ :
ಚೀನ ಎಂಬ “ಕೀಪರ್’ನ ಸಹವಾಸದಿಂದಾಗಿ ಪಾಕ್- ಅಮೆರಿಕ ನಡುವಿನ ಸಂಬಂಧವೇ ಹಳಸಿದೆ. ಈ ಹಿಂದೆ ಕಷ್ಟದಲ್ಲಿದ್ದಾಗಲೆಲ್ಲ ಅಮೆರಿಕ “ಫ್ರೀ’ಯಾಗಿ ಕೊಡುತ್ತಿದ್ದ ಯುದ್ದಸಾಮಗ್ರಿ, ಆರ್ಥಿಕ ನೆರವನ್ನೆಲ್ಲ ಪಾಕ್ ಸ್ಮರಿಸದೆ, ಕೃತಘ್ನವಾಗಿದೆ. ಅದರಲ್ಲೂ ಅಫ್ಘಾನ್‌ನನ್ನು ಮರಳಿ ತಾಲಿಬಾನ್‌ಗಳ ಕೈಗಿಡುವಲ್ಲಿ ಪಾಕ್ ತೋರಿದ ಅತ್ಯುತ್ಸಾಹ ಹಾಗೂ ಉಕ್ರೇನ್ ಮೇಲೆ ಯುದ್ಧ ಸಾರಿದಾಗ, ಇಮ್ರಾನ್ ದಿಢೀರ್ ಹೋಗಿ ಪುತಿನ್‌ರ ಕೈಕುಲುಕಿದ್ದೆಲ್ಲವೂ ಅಮೆರಿಕದ ಕಣ್ಣು ಕೆಂಪು ಮಾಡಿದೆ.
“ಹಿಟ್ ವಿಕೆಟ್’ ಆಗಿ ನಡೆದ ಮಿತ್ರರು… :
ಪಿಟಿಐ ನೇತೃತ್ವದ ಮೈತ್ರಿಕೂಟ ಸರಕಾರವನ್ನು ಅಲ್ಪಮತಕ್ಕೆ ಇಳಿಸಲು ಕಾರಣವಾದ, ಮಿತ್ರ ಪಕ್ಷಗಳ ಬಂಡಾಯ ಈಗ ಇಮ್ರಾನ್ ಸರಕಾರದ ಉರುಳುವಿಕೆಗೆ ನೇರ ಕಾರಣ. ಪಿಟಿಐ ಜತೆಗೆ ಕೈಜೋಡಿಸಿದ್ದ ಮುತ್ತಾಹಿದಾ ಖ್ವಾಮಿ, ಮೂವ್‌ಮೆಂಟ್ ಪಾಕಿಸ್ಥಾನ್, ಬಲೂಚಿಸ್ಥಾನ್ ಅವಾಮಿ ಪಾರ್ಟಿಗಳು ಈಗ ವಿಪಕ್ಷಗಳ ಕೈಹಿಡಿದಿವೆ. ಟಾರ್ಗೆಟ್ 172 ಸಂಖ್ಯಾಬಲ ತಲುಪಲೂ ಇಮ್ರಾನ್ ಒದ್ದಾಡುತ್ತಿದ್ದಾರೆ.
ಕೈಕೊಡುವ “ಓಪನರ್’ ಗಳನ್ನು ನಂಬಿದ್ದೇ ತಪ್ಪು :
ಪಾಕ್‌ನಲ್ಲಿ ಮಿಲಿಟರಿ ಮತ್ತು ಐಎಸ್‌ಐ- ಮುಂಚೂಣಿಯ ಆಟಗಾರರು. ಅದರಲ್ಲೂ ಗುಪ್ತಚರ ಸಂಸ್ಥೆ ಐಎಸ್‌ಐ, ಉಗ್ರರನ್ನು ಪೋಷಿಸುತ್ತಾ, ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಲೇ ಇರುತ್ತದೆ. ಹೀಗಾಗಿ, ಯಾವುದೇ ಸರಕಾರ ಬಂದರೂ ಇವರಿಬ್ಬರನ್ನು ಮುಂದಿಟ್ಟುಕೊಂಡೇ ಹೆಜ್ಜೆ ಇಡುವುದು ಅನಿವಾರ್ಯ. ಈಗ ಇವೆರಡೂ, ಸರಕಾರದ ವಿರುದ್ಧವೇ ತಿರುಗಿಬಿದ್ದಿವೆ. ಅದರಲ್ಲೂ ಸೇನಾ ಮುಖ್ಯಸ್ಥ ಜಾವೇದ್ ಬಾಜ್ವಾ, ಇಮ್ರಾನ್ ಬಯಕೆಗೆ ವಿರುದ್ಧವಾಗಿ ನದೀಮ್ ಅಂಜುಮ್‌ರನ್ನು ಆರಿಸಿ, ತೊಡೆ ತಟ್ಟುತ್ತಿರುವುದು ವಿಪಕ್ಷಗಳಿಗೆ ಖುಷಿಯ ಸಂಗತಿ.
ಅಲ್ಲಿ ಯಾರೂ “ಇನ್ನಿಂಗ್ಸ್’ ಪೂರ್ಣಗೊಳಿಸಿಲ್ಲ! :
ಪಾಕಿಸ್ಥಾನದ ರಾಜಕೀಯ ವ್ಯವಸ್ಥೆ ಇದುವರೆಗೆ ತನ್ನ ಯಾವ ಪ್ರಧಾನಿಗೂ 5 ವರ್ಷ ಆಡಳಿತಾವಧಿಯನ್ನು ಪೂರ್ಣಗೊಳಿಸಲು ಬಿಟ್ಟಿಲ್ಲ. ಈ ಪರಂಪರೆಗೆ ಇಮ್ರಾನ್ ಖಾನ್ ಹೊಸ ಸೇರ್ಪಡೆ ಅಷ್ಟೇ. ಪ್ರಧಾನಿಯನ್ನು ಇಕ್ಕಟ್ಟಿಗೆ ಸಿಲುಕಿಸಿ, ರಾಜೀನಾಮೆ ಕೂಡಿಸಿದ ಮೇಲೂ, ಗೌರವಯುತವಾಗಿ ಬಾಳಲೂ ಪಾಕ್‌ನ ವಾತಾವರಣ ಬಿಡುವುದಿಲ್ಲ. ಒಂದೇ ಅವರನ್ನೆಲ್ಲ ಗಡೀಪಾರು ಮಾಡುವುದು, ಭ್ರಷ್ಟಾಚಾರದ ಆರೋಪ ಹೊರಿಸಿ ಶಿಕ್ಷಿಸುವುದು, ಗುಂಡಿಕ್ಕಿ ಹತ್ಯೆಗೈಯ್ಯುವುದು- ಇದು ಮುಂಚಿನಿಂದಲೂ ನಡೆದುಬಂದಿದೆ. ಗಡೀಪಾರು ಶಿಕ್ಷೆ ಇಮ್ರಾನ್ ಖಾನ್‌ಗೂ ಕಟ್ಟಿಟ್ಟಬುತ್ತಿ ಆಗುವ ಸಾಧ್ಯತೆ ನಿಚ್ಚಳವಾಗಿದೆ.
ಲಾಡೆನ್ ಕುರಿತ ಆ ನೋ ಬಾಲ್ :
ಸಂಸತ್‌ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದ ಆ ಒಂದು ಹೇಳಿಕೆ, ಪಾಕ್‌ನನ್ನು ಜಾಗತಿಕ ಮುಜುಗರಕ್ಕೆ ತಳ್ಳು ವಂತೆ ಮಾಡಿತ್ತು. “ಅಬೋಟ್ಟಾಬಾದ್‌ನಲ್ಲಿ ಅಮೆರಿಕನ್ ಸೇನೆ ಒಸಾಮಾ ಬಿನ್ ಲಾಡೆನ್‌ನನ್ನು ಹುತಾತ್ಮರನ್ನಾಗಿಸಿದ ಆ ಘಟನೆ ನಾಚಿಕೆಗೇಡಿನ ಸಂಗತಿ’ ಎಂದಿದ್ದರು. ಭಯೋತ್ಪಾದಕನಿಗೆ ಹುತಾತ್ಮ ಗೌರವ ನೀಡಿದ್ದಕ್ಕೆ ಪಾಕ್‌ನ ವಿಪಕ್ಷಗಳಲ್ಲದೆ ಇಡೀ ಜಗತ್ತೇ ಆಕ್ರೋಶ ವ್ಯಕ್ತಪಡಿಸಿತ್ತು.
ಕಡೆಯಲ್ಲಿ ವಿಪಕ್ಷಗಳ ಮೇಲೆ “ಗೂಗ್ಲಿ’ ದಾಳಿ :
ತನ್ನ ನೇತೃತ್ವದ ಸರಕಾರ ಉರುಳಿ ಬೀಳಲಿದೆ ಎಂದು ಗೊತ್ತಾದ ತತ್‌ಕ್ಷಣವೇ, ಆಲ್‌ರೌಂಡರ್ ಇಮ್ರಾನ್, ವೇಗದ ಎಸೆತದಲ್ಲೂ ಗೂಗ್ಲಿ ಎಸೆದಿದ್ದಾರೆ. ಅಸೆಂಬ್ಲಿಯನ್ನು ವಿಸರ್ಜಿಸಿ, ಮೂರು ತಿಂಗಳಲ್ಲಿ ಮತ್ತೆ ಚುನಾವಣೆಗೆ ಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಂಘಟಿತ ವಿಪಕ್ಷಗಳು ಈ ಗೂಗ್ಲಿ ಎಸೆತವನ್ನು ನಿರೀಕ್ಷೆ ಮಾಡಿರಲೇ ಇಲ್ಲ. ಈಗ ಥರ್ಡ್ ಅಂಪೈರ್ ಸ್ಥಾನದಲ್ಲಿರುವ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿವೆ.
ಸುಪ್ರೀಂ ಕೋರ್ಟ್ ಎಂಬ ಥರ್ಡ್ ಅಂಪೈರ್ :
ಅಸೆಂಬ್ಲಿಯಲ್ಲಿ ಅವಿಶ್ವಾಸಕ್ಕೆ ಒಪ್ಪಿಗೆ ನೀಡದೇ, ವಿಸರ್ಜನೆ ಮಾಡಿರುವುದು ಸುಪ್ರೀಂಕೋರ್ಟ್ ಕೆರಳುವಂತೆ ಮಾಡಿದೆ. ವಿಪಕ್ಷಗಳ ಕಡೆಯಿಂದ ಒಂದಷ್ಟು ಅರ್ಜಿ, ಸ್ವಯಂ ಪ್ರೇರಿತವಾಗಿಯೂ ಅರ್ಜಿ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್, ಅಪರೂಪವೆಂಬಂತೆ ರವಿವಾರ ಸಂಜೆ ಕೊಂಚ ಹೊತ್ತು ವಿಚಾರಣೆ ಕೈಗೊತ್ತಿಕೊಂಡಿತ್ತು. ಅಸೆಂಬ್ಲಿಯಲ್ಲಾದ ಬೆಳವಣಿಗೆಗಳ ಬಗ್ಗೆ ವರದಿ ಕೇಳಿ ಸರಕಾರಿ ವಕೀಲರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸೋಮವಾರವೂ ವಿಚಾರಣೆ ನಡೆಯಲಿದೆ.
ವರ್ಕೌಟ್ ಆದ ವಿಪಕ್ಷಗಳ “ಸಂಘಟಿತ ಆಟ’ :
ಬೆಲೆ ಏರಿಕೆ ವಿರುದ್ಧ ಬೀದಿಗಿಳಿದ ಜನರ ಹೋರಾಟಕ್ಕೆ ವಿಪಕ್ಷಗಳು ಮತ್ತಷ್ಟು ಕಿಡಿ ಹಚ್ಚಿ ದ್ದವು. ಬದ್ಧವೈರಿಗಳಂತಿದ್ದ ಪಾಕಿಸ್ಥಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್- ಎನ್)ನ ಮುಖ್ಯಸ್ಥ, ಮಾಜಿ ಪ್ರಧಾನಿ ನವಾಬ್ ಷರೀಫ್ ಜತೆಗೆ ಪಿಪಿಪಿ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಸಂಘಟಿತರಾಗಿ ಸರಕಾರದ ವಿರುದ್ಧ ತೊಡೆ ತಟ್ಟಿ ದ್ದಾರೆ. ಇದಕ್ಕೆ ಸರಕಾರದ ಮಿತ್ರ ಪಕ್ಷಗಳೂ ಕೈಜೋಡಿಸಿರುವುದು, ವಿಪಕ್ಷಗಳ ಸಂಘಟಿತ ಹೋರಾಟಕ್ಕೆ ಸಾಕ್ಷಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.