ಲಡಾಖ್, ಎಲ್ ಎಸಿ ಬಳಿ ಸೇನೆ ಜಮಾವಣೆ; ಯುದ್ಧ ಸನ್ನದ್ಧರಾಗಿ ಎಂದು ಕರೆ ಕೊಟ್ಟ ಚೀನಾ
ಪ್ಯಾಂಗಾಂಗ್ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳ ವಿಚಾರದಲ್ಲಿ ಬಿಕ್ಕಟ್ಟು ತಲೆದೋರಿದೆ.
Team Udayavani, May 27, 2020, 8:57 AM IST
ನವದೆಹಲಿ:ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ 19 ವೈರಸ್ ಹಾವಳಿ ಒಂದು ತಲುಪುತ್ತಿದ್ದು, ಮತ್ತೊಂದೆಡೆ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರತೊಡಗಿದೆ ಎಂದು ವರದಿ ತಿಳಿಸಿದೆ. ದೌಲತ್ ಬೇಗ್ ಓಲ್ಡಿ ಸಮೀಪ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಭಾರತ ತಿರುಗೇಟು ನೀಡಿದೆ.
ಲಡಾಖ್, ಎಲ್ ಎಸಿ ಬಳಿ ಚೀನಾ, ಭಾರತ ಸೇನೆ ಜಮಾವಣೆ!
ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶ ಎಲ್ ಎಸಿಯ ಎರಡೂ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಬೀಡು ಬಿಟ್ಟಿದ್ದಾರೆ. ಪ್ಯಾಂಗಾಂಗ್ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳ ವಿಚಾರದಲ್ಲಿ ಬಿಕ್ಕಟ್ಟು ತಲೆದೋರಿದೆ. ಅಲ್ಲದೇ ಚೀನಾ 5 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿದೆ ಎಂದು ವರದಿ ತಿಳಿಸಿದೆ.1962ರ ಬಳಿಕ ಚೀನಾ ಮತ್ತು ಭಾರತದ ನಡುವಿನ ನೂತನ ಗಡಿ ಸಂಘರ್ಷ ಇದಾಗಿದ್ದು, ಇದೊಂದು ಅತೀ ದೊಡ್ಡ ಸಂಘರ್ಷವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸುತ್ತಿವೆ.
ಯುದ್ಧ ಸನ್ನದ್ಧರಾಗಿ ಎಂದು ಚೀನಾ ಕರೆ!
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರು ಚೀನಾ ಸೇನೆಗೆ ಯುದ್ಧಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ. ನಾವು ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಎಲ್ಲಾ ರೀತಿಯಿಂದಲೂ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.ಭಾರತದ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕರೆ ನೀಡಿದ್ದಲ್ಲದೇ ಅಮೆರಿಕದ ಜತೆಗೂ ಈ ಸಂಘರ್ಷ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಪಟ್ಟು ಬಿಡದ ಭಾರತ:
ಭಾರತದ ಪ್ರದೇಶದಲ್ಲಿ ನಾವು ಯಾವುದೇ ಬದಲಾವಣೆಗೆ ಅವಕಾಶ ಕೊಡುವುದಿಲ್ಲ. ಈ ವಿಚಾರದಲ್ಲಿ ಚೀನಾದ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಕೂಡಾ ನಮ್ಮ ಸಾಮರ್ಥ್ಯದ ಮೂಲಕ ವಿರೋಧಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಸೇನೆಯ ಮೂರು ಮುಖ್ಯಸ್ಥರ ಜತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಎಲ್ ಎಸಿಯಲ್ಲಿ ನಾವು ಯಾವುದೇ ಬದಲಾವಣೆಗೆ ಅವಕಾಶ ಕೊಡುವುದಿಲ್ಲ. ಈ ಹಿಂದೆಯೂ ನಾವು ಹಲವಾರು ಬಾರಿ ಸಂಘರ್ಷ ಎದುರಿಸಿದ್ದೇವೆ. 2017ರಲ್ಲಿಯೂ ಭಾರತ, ಚೀನಾ ಸೇನೆ ಮುಖಾಮುಖಿಯಾಗಿತ್ತು. ದೋಕಲಾ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸುವುದನ್ನು ಭಾರತ, ಭೂತಾನ್ ವಿರೋಧಿಸಿತ್ತು. ಈ ಸಂಘರ್ಷ 72 ದಿನಗಳ ಕಾಲ ಮುಂದುವರಿದಿತ್ತು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.