ಬ್ರಿಟನ್ ರಾಜಮನೆತನದಲ್ಲಿ ಭಿನ್ನಾಭಿಪ್ರಾಯ: ಅರಸೊತ್ತಿಗೆ ತೊರೆಯಲು ಹ್ಯಾರಿ-ಮೇಘನ್ ನಿರ್ಧಾರ
Team Udayavani, Jan 9, 2020, 8:37 PM IST
ಲಂಡನ್: ಒಂದು ಕಾಲದಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳನ್ನು ಆಳಿದ ಬ್ರಿಟನ್ ರಾಜಮನೆತನದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇಡೀ ರಾಜಮನೆತನಕ್ಕೇ ಆಘಾತವೆಂಬಂತೆ, ಪ್ರಿನ್ಸ್ ಹ್ಯಾರಿ ಮತ್ತು ಯುವರಾಣಿ ಪತ್ನಿ ಮೇಘನ್ ರಾಜಮನೆತನದ ಪ್ರಭಾವಳಿಯಿಂದ ಹೊರಬರುವ ಘೋಷಣೆ ಮಾಡಿದ್ದಾರೆ. ನಾವು “ಆರ್ಥಿಕವಾಗಿ ಸ್ವತಂತ್ರಗೊಳ್ಳಲು’ ನಿರ್ಧರಿಸಿದ್ದು, ಯುನೈಟೆಡ್ ಕಿಂಗ್‌ಡಮ್ ಮತ್ತು ಉತ್ತರ ಅಮೆರಿಕಗಳಲ್ಲಿ ಮುಂದಿನ ದಿನಗಳನ್ನು ಕಳೆಯಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದೊಂದು ಆಘಾತಕಾರಿ ನಿರ್ಧಾರ ಎಂದು ರಾಜಮನೆತನ ಬಣ್ಣಿಸಿದೆ.
ಪ್ರಿನ್ಸ್ ಹ್ಯಾರಿ ತಮ್ಮ ತಂದೆ ರಾಜಕುಮಾರ ಚಾರ್ಲ್ಸ್ ಮತ್ತು ರಾಣಿ ಎರಡನೆಯ ಎಲಿಜಬೆತ್ ಜತೆಗೂ ಸಮಾಲೋಚನೆ ನಡೆಸದೆ ಈ ನಿರ್ಧಾರ ಪ್ರಕಟಿಸಿದ್ದಾರೆ. ನಾವು “ಅರಸೊತ್ತಿಗೆಯ ಪ್ರಮುಖರು’ ಸ್ಥಾನಮಾನವನ್ನು ತ್ಯಜಿಸಲಿದ್ದೇವೆ. ಹೊಸ ವರ್ಷದಲ್ಲಿ ದತ್ತಿ ನಿಧಿ ಸ್ಥಾಪಿಸಲೂ ಯೋಚನೆ ಮಾಡಿದ್ದೇವೆ ಎಂದಿದ್ದಾರೆ. ಜತೆಗೆ, ರಾಜಮನೆತನದ ಗೌರವ ವ್ಯಾಪ್ತಿಯಿಂದ ಹೊರಬಂದರೂ, ರಾಣಿ ಎರಡನೇ ಎಲಿಜಬೆತ್‌ಗೆ ನೀಡುತ್ತಿರುವ ಬೆಂಬಲ ಮತ್ತು ಗೌರವ ಮುಂದುವರಿಸುವುದಾಗಿ ಯುವ ಜೋಡಿ ಹೇಳಿಕೊಂಡಿದೆ.
ಸಾಹೋದರ್ಯದ ಮಾತ್ಸರ್ಯ?:
ಪ್ರಿನ್ಸ್ ಹ್ಯಾರಿ ಮತ್ತು ಹಿರಿಯ ಸಹೋದರ ವಿಲಿಯಮ್ಸ್ ನಡುವಿನ ಭಿನ್ನಾಭಿಪ್ರಾಯಗಳೇ ಈ ಘೋಷಣೆಗೆ ಕಾರಣ. ವಿವಿಧ ಕಾರಣಗಳಿಗಾಗಿ ಅವರು ಭಿನ್ನ ನಿಲುವುಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲ್ಟನ್ ಅವರ ಎರಡು ಹುಟ್ಟಿದ ಹಬ್ಬ ಕಾರ್ಯಕ್ರಮಗಳಿಗೆ ಹ್ಯಾರಿ ಮತ್ತು ಮೇಘನ್ ಗೈರಾಗಿದ್ದರು. ಈ ಸಂದರ್ಭದಲ್ಲಿಯೇ ರಾಜಮನೆತನದ ಸದಸ್ಯರ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಗುಮಾನಿ ಹುಟ್ಟಿಕೊಂಡಿತ್ತು.
ಬ್ರಿಟನ್ ರಾಜಮನೆತನದ ನೇತೃತ್ವ ವಹಿಸುವ ನಿಟ್ಟಿನಲ್ಲಿ ಪ್ರಿನ್ಸ್ ಹ್ಯಾರಿ ಮತ್ತು ವಿಲಿಯಮ್ಸ್ ನಡುವೆ ಪೈಪೋಟಿ ಇದೆ ಎಂಬ ವ್ಯಾಖ್ಯಾನವೂ ಇದೆ. ಹ್ಯಾರಿ ಅವರು ಈ ನಿಟ್ಟಿನ ಸರತಿಯಲ್ಲಿ ಆರನೆಯವರಾಗಿದ್ದಾರೆ. ಇದೀಗ ಹಿರಿಯ ಸಹೋದರ ವಿಲಿಯಮ್ಸ್ ರಾಜಮನೆತನದ ನೇತೃತ್ವ ವಹಿಸಿಕೊಂಡರೆ ಪತ್ನಿ ಕೇಟ್ ಮಿಡ್ಲ್ಟನ್ ರಾಣಿಯ ಸ್ಥಾನಕ್ಕೆ ಏರಲಿದ್ದಾರೆ.
ಉತ್ತರ ಅಮೆರಿಕ ಏಕೆ?
ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಅಮೆರಿಕದ ಮಾಜಿ ನಟಿ. 2018 ಮೇನಲ್ಲಿ ಅವರ ವಿವಾಹವಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ ಮೇಘನ್ ತಾಯಿ ಇದ್ದಾರೆ. ಹೀಗಾಗಿ, ಅಲ್ಲಿ ಪುತ್ರ ಆರ್ಚ್ ಜತೆಗೆ ವಾಸಿಸುವುದು ಸುಲಭ. ಕೆನಡಾದ ವಾಂಕೂವರ್ ದ್ವೀಪಕ್ಕೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ನಿಮಿತ್ತ ತೆರಳಿದ್ದ ವೇಳೆ ದಂಪತಿ ನಿರ್ಧಾರ ಕೈಗೊಂಡಿದ್ದರು.
ಆರ್ಥಿಕ ಸ್ವಾತಂತ್ರ್ಯವೆಂದರೆ ಹೇಗೆ?:
ಬ್ರಿಟನ್ ರಾಜಮನೆತನದ ಖರ್ಚು ವೆಚ್ಚಗಳನ್ನು ಯುನೈಟೆಡ್ ಕಿಂಗ್‌ಡಮ್ ಸರ್ಕಾರವೇ ನೋಡಿಕೊಳ್ಳುತ್ತದೆ. 2018-19ನೇ ಸಾಲಿನಲ್ಲಿ ರಾಜಮನೆತನದ ವೆಚ್ಚಕ್ಕಾಗಿಯೇ ಸರ್ಕಾರ 82 ಮಿಲಿಯನ್ ಪೌಂಡ್ ವಿನಿಯೋಗ ಮಾಡಲಾಗಿತ್ತು. ಇದೀಗ ಈ ನೆರವನ್ನು ಸ್ವೀಕರಿಸದೇ ಇರಲು ಹ್ಯಾರಿ-ಮೇಘನ್ ನಿರ್ಧರಿಸಿದ್ದಾರೆ. ರಾಜಮನೆತನಕ್ಕೆ ಸೇರಿದ ದಂಪತಿಗೆ ಯಾವುದೇ ಉದ್ಯೋಗ ನಡೆಸಲು ನಿಷೇಧವಿದೆ. ಅವರ ವಿದೇಶ ಪ್ರವಾಸದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಮತ್ತು ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಸಶಸ್ತ್ರ ಭದ್ರತೆಯನ್ನೂ ನೀಡಬೇಕಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.