ಸುಡಾನ್‌ನಲ್ಲಿ ಭಾರತೀಯರಿಗೆ ಆಹಾರ, ನೀರಿನ ಕೊರತೆ: ಹೋಟೆಲ್‌ಗಳಲ್ಲಿ ವಿದ್ಯುತ್ ಕೊರತೆ
Team Udayavani, Apr 21, 2023, 7:30 AM IST
ಖಾರ್ತೋಮ್/ನವದೆಹಲಿ: ಆಂತರಿಕ ಸಂಘರ್ಷದಿಂದ ಜರ್ಝರಿತವಾಗಿರುವ ಸುಡಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರಿಗೆ ಅನ್ನ, ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಉಂಟಾಗಿದೆ. ಅವರು ವಾಸ್ತವ್ಯ ಹೂಡಿರುವ ಹೋಟೆಲ್‌ಗಳಿಗೆ ಬಿರುಸಿನ ಗುಂಡು ಹಾರಾಟದಿಂದಾಗಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿದೆ. ಕಳೆದ ಐದು ದಿನಗಳಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಭಾರತೀಯರೊಬ್ಬರು ಹೇಳಿಕೊಂಡಿದ್ದಾರೆ. ಕರ್ನಾಟಕದ 31 ಮಂದಿ ಸೇರಿದಂತೆ ಸರಿ ಸುಮಾರು 1,500 ಮಂದಿ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದಾರೆ. ಕೇರಳದ ಮೂಲದ ವ್ಯಕ್ತಿ ಸುಡಾನ್ ಸೇನೆ ಮತ್ತು ಅರೆಸೇನೆ ನಡುವಿನ ಕಾಳಗದಲ್ಲಿ ಅಸುನೀಗಿದ್ದಾರೆ.
300ಕ್ಕೂ ಅಧಿಕ ಸಾವು:
ಸುಡಾನ್ ಸೇನೆ ಹಾಗೂ ಅರಸೇನೆ ಪಡೆಗಳ ನಡುವಿನ ಸಂಘರ್ಷದಿಂದಾಗಿ ಈಗಾಗಲೇ 300ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಳಗದಲ್ಲಿ 3,200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕದನವಿರಾಮ ಘೋಷಿಸಿ, ಶಾಂತಿ ಮಾತುಕತೆ ನಡೆಸುವಂತೆ ರ್ಯಾಪಿಡ್ ಸಪೋರ್ಟ್ ಫೋರ್ಸ್ (ಆರ್‌ಎಸ್‌ಎಫ್ ) ಘಟಕ ಸಲಹೆ ನೀಡಿತ್ತು. ಆದರೆ, ಸಲಹೆ ನಿರಾಕರಿಸಿರುವ ಸೇನೆ ಯಾವುದೇ ಕಾರಣಕ್ಕೂ ಅಧಿಕಾರದ ವಿಚಾರದಲ್ಲಿ ರಾಜಿಯಾಗುವುದಿಲ್ಲವೆಂದು ಸ್ಪಷ್ಟ ಪಡಿಸಿದೆ.
ಪರಿಸ್ಥಿತಿ ಬಿಗುವಿನಿಂದ ಕೂಡಿದೆ….
ಸುಡಾನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವುದೇ ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯದ ವಕ್ತಾರ ಅರಿಂಧಮ್ ಬಗಿc ನವದೆಹಲಿಯಲ್ಲಿ ತಿಳಿಸಿದ್ದಾರೆ. ಸದ್ಯ ಆ ದೇಶದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಅಲ್ಲಿನ ಸ್ಥಳೀಯ ಪರಿಸ್ಥಿತಿ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.