Syrian Rebels: ಸಿರಿಯಾ ಅಧ್ಯಕ್ಷರ ಅರಮನೆಗೆ ಹೋರಾಟಗಾರರ ಲಗ್ಗೆ!
ಬಂಡುಕೋರರ ವಶವಾಗುತ್ತಿದ್ದಂತೆ ಅಸಾದ್ ಬಂಗಲೆಯಲ್ಲಿ ನಾಗರಿಕರ ಮೆರೆದಾಟ, ಪೀಠೊಪಕರಣ, ದೀಪಗಳು ಸೇರಿ ಸಿಕ್ಕಿದ್ದನ್ನೆಲ್ಲ ದೋಚಿ ಹೊತ್ತೂಯ್ದ ಪ್ರತಿಭಟನಾಕಾರರು
Team Udayavani, Dec 9, 2024, 7:50 AM IST
ಡಮಾಸ್ಕಸ್: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ತೆಕ್ಕೆಗೆ ಬೀಳುತ್ತಿದ್ದಂತೆಯೇ ಅಧ್ಯಕ್ಷ ಬಶರ್ ಅಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾವಿರಾರು ನಾಗರಿಕರು, ಹೋರಾಟಗಾರರು ಅಧ್ಯಕ್ಷರ ಅರಮನೆಗೆ ನುಗ್ಗಿ ರಂಪಾಟ ಮಾಡಿದ್ದಾರೆ.
ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಕೆಲವು ದೇಶಗಳಲ್ಲಿ ದಂಗೆ, ಕ್ರಾಂತಿ ಉಂಟಾದ ಬಳಿಕ ಅಧಿಕಾರಸ್ಥರ ಭದ್ರಕೋಟೆಗಳಿಗೆ ಪ್ರತಿಭಟನಕಾರರು ಹೇಗೆ ಲಗ್ಗೆಯಿಟ್ಟಿದ್ದರೋ, ಅದೇ ಮಾದರಿಯ ಘಟನೆ ಸಿರಿಯಾದಲ್ಲೂ ಮರುಕಳಿಸಿದೆ. ಡಮಾಸ್ಕಸ್‌ನಲ್ಲಿರುವ ಅರಮನೆಗೆ ಸಾರ್ವಜನಿಕರು ನುಗ್ಗಿದ ವೀಡಿಯೋ ಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವು ಕಿಡಿಗೇಡಿಗಳು ಅರಮನೆಯ ಸ್ವಾಗತ ಕೊಠಡಿಗೆ ಬೆಂಕಿಯನ್ನೂ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಳಗೆ ನುಗ್ಗಿದವರ ಪೈಕಿ ಕೆಲವರು ಅಲ್ಲಿದ್ದ ಅಸ್ಸಾದ್ ಮತ್ತವರ ಕುಟುಂಬದ ಹಿರಿಯರ ಫೋಟೋಗಳನ್ನು ಪುಡಿಗಟ್ಟಿದ್ದಾರೆ. ಒಳಗಿದ್ದ ಬೆಳೆಬಾಳುವ ವಸ್ತುಗಳನ್ನು, ಅಲಂಕಾರಿಕ ದೀಪಗಳು, ಹೂದಾನಿ, ಪೀಠೊಪಕರಣಗಳನ್ನು ದೋಚಿದ್ದಾರೆ. ಕೆಲವು ಪುರುಷರು ಕುರ್ಚಿ, ಸೋಫಾಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದ ದೃಶ್ಯಗಳೂ ವೈರಲ್ ಆಗಿವೆ.
ದಂಗೆಯ ಮುನ್ನುಡಿ ಬರೆದದ್ದು 14ರ ಬಾಲಕ
2011ರಿಂದ ಸಿರಿಯಾದಲ್ಲಿ ನಡೆಯುತ್ತಿರುವ ಅಂತರ್ಯುದ್ಧಕ್ಕೆ ಮೊದಲ ಕಿಡಿ ಹಚ್ಚಿದ್ದು 14 ವರ್ಷದ ಮೊಯಿಸ್ ಸ್ಯಾಸ್ನೇಹ್ ಎಂಬ ಬಾಲಕ. ಅಧ್ಯಕ್ಷ ಬಷರ್ ಅಸಾದ್‌ರ ಸರ್ವಾಧಿಕಾರಿ ಧೋರಣೆಯಿಂದ ರೋಸಿ ಹೋಗಿದ್ದ ಆತ ಪ್ರತಿಭಟನೆಯ ಭಾಗವಾಗಿ ದಾರಾ ನಗರದ ಗೋಡೆಯೊಂದರ ಮೇಲೆ “ಇದು ನಿಮ್ಮ ಸಮಯ, ಡಾಕ್ಟರ್’ ಎಂದು ಬರೆದಿದ್ದ. ಆದರೆ ಮೊಯಿಸ್ ಮತ್ತು ಆತನ ಸಹಚರರ ಕೃತ್ಯವನ್ನು ಗಂಭೀರವಾಗಿ ಪರಿಣಮಿಸಿದ ಪೊಲೀಸರು ಆತನನ್ನು 26 ದಿನಗಳ ಕಾಲ ಬಂಧಿಸಿ, ಚಿತ್ರಹಿಂಸೆ ನೀಡಿದ್ದರು. 2011 ಮಾ.15ರಂದು ಅಸಾದ್ ಸರ್ಕಾರ ಕಿತ್ತೂಗೆಯುವಂತೆ ಹೋರಾಟ ಶುರುವಾಯಿತು. ಅದುವೇ ಮುಂದಿನ ಹೋರಾಟಗಳಿಗೆ ನಾಂದಿಯಾಯಿತು.
ಬಂಡುಕೋರ ನಾಯಕ ಗಲಾನಿಗೆ ಅಧಿಕಾರ?
ಅಸಾದ್ ಸರ್ಕಾರವನ್ನು ಪತನಗೊಳಿಸಿದ ಹಯಾತ್ ತಹ್ರೀರ್ ಅಲ್-ಶಾಮ್ ಬಂಡುಕೋರ ಸಂಘಟನೆಯ ನಾಯಕ ಅಬು ಮೊಹಮ್ಮದ್ ಅಲ್ ಗೊಲಾನಿಯೇ ಸಿರಿಯಾದಲ್ಲಿ ಅಧಿಕಾರದ ಚುಕ್ಕಾಣಿ ವಹಿಸಿಕೊಳ್ಳಲಿದ್ದಾನೆ ಎಂದು ಹೇಳಲಾಗುತ್ತಿದೆ. 42 ವರ್ಷದ ಆತನನ್ನು ಅಮೆರಿಕ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ.
ಆತ ಈ ಹಿಂದೆ ಅಲ್ ಖೈದಾ ಉಗ್ರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಅದರ ಜತೆಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಹಯಾತ್ ತಹ್ರೀರ್ ಸಂಘಟನೆಯು ರಾಷ್ಟ್ರೀಯವಾದಿ ಶಕ್ತಿಯಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದು, ತಮ್ಮ ನಡೆಗಳನ್ನು ರಾಜತಾಂತ್ರಿಕ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂಬುದು ಗಮನಾರ್ಹ
ಸಿರಿಯಾ ದಂಗೆಗೆ ಅರಬ್ ಸ್ಪ್ರಿಂಗ್ ಸ್ಫೂರ್ತಿ!
2010ರ ವೇಳೆಗೆ ಆರಂಭವಾದ ‘ಅರಬ್ ಸ್ಪ್ರಿಂಗ್’ ಕ್ರಾಂತಿಯ ಭಾಗವಾಗಿ ಮಧ್ಯಪ್ರಾಚ್ಯದಲ್ಲಿ ಹಲವು ರಾಷ್ಟ್ರಗಳುಪ್ರಜಾಪ್ರಭುತ್ವಕ್ಕೆ ಬೆಂಬಲ, ಒಲವು ತೋರಲು ಆರಂಭಿಸಿದವು. ಇದರಿಂದ ಪ್ರೇರಿತರಾದ ಸಿರಿಯಾದ ನಾಗರಿಕರು 2011ರಲ್ಲಿ ಅಧ್ಯಕ್ಷ ಬಶರ್ ಅಲ್-ಅಸಾದ್ ಆಡಳಿತದ ವಿರುದ್ಧ ಪ್ರತಿರೋಧ ತೋರಲು ಆರಂಭಿಸಿದ್ದರು. ಅದು ನಾಗರಿಕ ಸಂಘರ್ಷವಾಗಿ ಬದಲಾವಣೆಯಾಯಿತು.
2013ರಲ್ಲಿ ಬಂಡುಕೋರರ ಸಂಖ್ಯೆ ಹೆಚ್ಚುತ್ತಾ ಸಂಘಟನೆಗಳು ಉದಯಗೊಳ್ಳಲು ಕಾರಣವಾಯಿತು. ಅವುಗಳಲ್ಲಿ “ಇಸ್ಲಾಮಿಕ್ ಸ್ಟೇಟ್’ ಅಥವಾ ದಾಯೆಶ್ ಎಂಬ ಸಂಘಟನೆ ಪ್ರಭಾವ ಹೆಚ್ಚಾಯಿತು. ದೇಶದ ಪ್ರಮುಖ ನಗರಗಳನ್ನು ಈ ಸಂಘಟನೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. 2017ರವರೆಗೂ ಮದ್ಯಪ್ರಾಚ್ಯದಲ್ಲಿ ಪ್ರಭಾವಶಾಲಿಯಾಗಿದ್ದ ಈ ಸಂಘಟನೆಯನ್ನು ಅಮೆರಿಕವು ಹಲವು ರಾಷ್ಟ್ರಗಳ ಬೆಂಬಲದೊಂದಿಗೆ ಹತ್ತಿಕ್ಕಲು ಆರಂಭಿಸಿತು. ಇದರಿಂದ ಸಂಘರ್ಷದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತಾದರೂ, ಬಿಕ್ಕಟ್ಟು ಹಾಗೇ ಉಳಿಯಿತು. 2023ರಲ್ಲಿ ಟರ್ಕಿಯ ಪಡೆಗಳು ಮತ್ತೆ ಸಿರಿಯಾದಲ್ಲಿದ್ದ ಕುರ್ದಿಷ್ ಪಡೆಗಳ ಮೇಲೆ ದಾಳಿಗಳನ್ನು ಆರಂಭಿಸಿತು.
ಮತ್ತೆ ಐಸಿಸ್, ಖೈದಾ ಚಿಗುರೊಡೆಯುತ್ತಾ?
ಬಂಡುಕೋರರು ಮೇಲುಗೈ ಸಾಧಿಸುತ್ತಿದ್ದಂತೆಯೇ ಸಿರಿಯಾ ಐಸಿಸ್ ಉಗ್ರರಿಗೆ ಮತ್ತೆ ನೆಲೆಯಾಗುವುದೇ ಎಂಬ ಆತಂಕವೂ ಮನೆ ಮಾಡಿದೆ. ಹಯಾತ್-ಅಲ್ ಖೈದಾ ಉಗ್ರ ಸಂಘಟನೆಗಳೊಂದಿಗೆ ಹಯಾತ್ ಉತ್ತಮ ಬಾಂಧವ್ಯ ಹೊಂದಿರುವುದು ಈ ಆತಂಕಕ್ಕೆ ಪುಷ್ಟಿ ನೀಡಿದೆ. ಸಿರಿಯಾ ರಾಜಕೀಯ ಬೆಳವಣಿಗೆ ಗಮನಿಸುತ್ತಿರುವ ಹಲವು ತಜ್ಞರು ಕೂಡ ಐಸಿಸ್ ಉಗ್ರರು ಸಿರಿಯಾದಲ್ಲಿ ಮತ್ತೆ ಬೀಡುಬಿಟ್ಟು ದುಷ್ಕೃತ್ಯಗಳಿಗೆ ಸಂಚು ರೂಪಿಸುತ್ತವೆ ಎಂದೇ ವಿಶ್ಲೇಷಿಸಿದ್ದಾರೆ.
12 ದಿನಗಳ ಕ್ಷಿಪ್ರಕ್ರಾಂತಿ
– ನ.27ರಂದು ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಬಂಡುಕೋರರ ಆಕ್ರಮಣ ಶುರು
– 3 ದಿನಗಳಲ್ಲೇ ಸಿರಿಯಾದ ಅಲೆಪ್ಪೋ ನಗರ ಕೈವಶ
– ಬಳಿಕ ಹಾಮಾ, ಹೋಮ್ಸ್ ನಗರ ವಶಕ್ಕೆ.
– ಶುಕ್ರವಾರ “ಕ್ರಾಂತಿಯ ತೊಟ್ಟಿಲು’ ಎಂದೇ ಖ್ಯಾತಿ ಪಡೆದ ದಾರಾ ನಗರದಿಂದ ಹಿಂದೆಸರಿದ ಸೇನೆ
– ಅಲ್ಲಿಂದ ರಾಜಧಾನಿ ಡಮಾಸ್ಕಸ್‌ನತ್ತ ಬಂಡುಕೋರರ ಪಯಣ ಆರಂಭ
– ಭಾನುವಾರ ಬೆಳಗ್ಗೆ 5ಕ್ಕೆ ರಾಜಧಾನಿ ಡಮಾಸ್ಕಸ್‌ಗೆ ಪ್ರವೇಶ
– ಅಂತಾರಾಷ್ಟ್ರೀಯ ಏರ್‌ಪೋರ್ಟ್, ಸರ್ಕಾರಿ ವಾಹಿನಿ, ವ್ಯೂಹಾತ್ಮಕ ಕಟ್ಟಡಗಳು ವಶಕ್ಕೆ
– ಬಂಡುಕೋರರು ದೇಶ ಸಮೀಪಿಸುತ್ತಿರುವಂತೆಯೇ ಪರಾರಿಯಾದ ಅಧ್ಯಕ್ಷ ಅಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.