ಉಗ್ರ ಸಯೀದ್‌ಗೆ ಗರಿಷ್ಠ ಸಾಧ್ಯ ಕಾನೂನಿನ ಪ್ರಕಾರ ಶಿಕ್ಷೆ: ಅಮೆರಿಕ
Team Udayavani, Jan 19, 2018, 11:09 AM IST
ವಾಷಿಂಗ್ಟನ್ : ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗರಿಷ್ಠ ಸಾಧ್ಯ ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಪಾಕಿಸ್ಥಾನಕ್ಕೆ ಅಮೆರಿಕ ಅತ್ಯಂತ ಖಡಕ್ ಮಾತುಗಳಲ್ಲಿ ಹೇಳಿದೆ.
ಒಂದು ದಿನದ ಹಿಂದಷ್ಟೇ ಪಾಕ್ ಪ್ರಧಾನಿ ಶಾಹಿದ್ ಖಕಾನ್ ಅಬ್ಟಾಸಿ ಅವರು, “ಹಫೀಜ್ ಸಯೀದ್ ವಿರುದ್ಧ ಯಾವುದೇ ಕೇಸಿಲ್ಲ; ಹಾಗಾಗಿ ಆತನನ್ನು ಕಾನೂನು ಪ್ರಕಾರ ಶಿಕ್ಷಿಸುವಂತಿಲ್ಲ’ ಎಂದು ಹೇಳಿದ್ದರು.
ಹಫೀಜ್ ಸಯೀದ್ ನನ್ನು ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಉಗ್ರನೆಂದು ಬಹಳ ಹಿಂದೆಯೇ ಘೋಷಿಸಿದೆ.
“ಪಾಕ್ ಸರಕಾರ ಉಗ್ರ ಹಫೀಜ್ ಸಯೀದ್‌ನನ್ನು ಗರಿಷ್ಠ ಸಾಧ್ಯ ಕಾನೂನಿನ ಪ್ರಕಾರ ಶಿಕ್ಷಿಸುವುದೆಂಬ ವಿಶ್ವಾಸ ಅಮೆರಿಕ್ಕೆ ಇದೆ; ಇದನ್ನು ನಾವು ಪಾಕಿಸ್ಥಾನಕ್ಕೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಹೀತರ್ ನ್ಯೂವರ್ಟ್ ಹೇಳಿದ್ದಾರೆ.
ಒಂದು ದಿನದ ಹಿಂದಷ್ಟೇ ಪಾಕ್ ಪ್ರಧಾನಿ ಅಬ್ಟಾಸಿ ಅವರು ಜಿಯೋ ಟಿವಿಯೊಂದಿಗೆ ಮಾತನಾಡುತ್ತಾ ಹಫೀಜ್ ಸಯೀದ್‌ನನ್ನು ಸಾಹಬ್ ಎಂದು ಗೌರವಪೂರ್ಣವಾಗಿ ಸಂಬೋಧಿಸಿ, ಆತನ ವಿರುದ್ಧ ಯಾವುದೇ ಕೇಸು ಇಲ್ಲ; ಕೇಸು ಇದ್ದಾಗ ಮಾತ್ರವೇ ನಾವು ಕಾನೂನು ಕ್ರಮ ತೆಗೆದುಕೊಳ್ಳಲಲು ಸಾಧ್ಯ’ ಎಂದು ಹೇಳಿದ್ದರು.
ಹಫೀಜ್ ಸಯೀದ್‌ನನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪಾಕ್ ನ್ಯಾಯಾಲಯ ಗೃಹ ಬಂಧನದಿಂದ ಮುಕ್ತಗೊಳಿಸಿತ್ತು. 2008ರಲ್ಲಿ ನಡೆದಿದ್ದ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಹಫೀಜ್ ಸಯೀದ್, 166 ಅಮಾಯಕರ ಸಾವಿಗೆ ಕಾರಣನಾಗಿದ್ದ.