ಮ್ಯಾನ್ಮಾರ್‌ನಿಂದ ಎರಡೂವರೆ ಲಕ್ಷ ರೊಹಿಂಗ್ಯಾ ಮುಸ್ಲಿಮರು ಪಲಾಯನ
Team Udayavani, Sep 8, 2017, 11:17 AM IST
ಕೊಕ್ಸ್ ಬಜಾರ್ : ಮ್ಯಾನ್ಮಾರ್‌ನ ರಖೈನ್ ಪ್ರಾಂತ್ಯದಲ್ಲಿ ಕೋಮು ಹಿಂಸೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಳೆದ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 2,50,000 ಮಂದಿ ರೊಹಿಂಗ್ಯಾ ಮುಸ್ಲಿಮರು ಜೀವಭಯದಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ವಿವರ ನೀಡಿದೆ.
ಆತಂಕಕಾರಿ ಬೆಳವಣಿಗೆಯಲ್ಲಿ ಕಳೆದ 2 ವಾರಗಳ ಒಳಗೆ 2,50,00 ಮಂದಿ ನಿರಾಶ್ರಿತ ರೊಹಿಂಗ್ಯಾಗಳು ಬಾಂಗ್ಲಾಕ್ಕೆ ಪಲಾಯನಗೈದಿದ್ದು, ಉಭಯ ದೇಶಗಳ ನಡುವಿನ ನಾಫ್ ನದಿ ದಾಟುವ ವೇಳೆಯಲ್ಲಿ ಹಲವರು ದೋಣಿಗಳು ಮಗುಚಿ ಪ್ರಾಣ ಕಳೆದುಕೊಂಡಿರುವುದಾಗಿ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಹಿಂಸೆಯಿಂತ ತತ್ತರಿಸಿ ಹೋಗಿರುವ ರಖೈನ್ ಹೊತ್ತಿ ಉರಿಯುತ್ತಿದ್ದು ಹಲವರು ಸುಟ್ಟು ಬೂದಿಯಾಗಿದ್ದಾರೆ. ಅಗಸ್ಟ್ 25 ರಂದು ರೊಹಿಂಗ್ಯಾ ಉಗ್ರರು ಬಾಂಬ್ ದಾಳಿ ನಡೆಸಿದ ಬಳಿಕ ಸ್ಥಳೀಯ ಬಹಸಂಖ್ಯಾತ ಬೌದ್ಧರು ರೊಹಿಂಗ್ಯಾಗಳ ಮೇಲೆ ತಿರುಗಿ ಬಿದ್ದಿದ್ದು ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ನಾಫ್ ನದಿಯಲ್ಲಿ ಇದುವರೆಗೆ 17 ಶವಗಳನ್ನು ಪತ್ತೆ ಹಚ್ಚಲಾಗಿದ್ದು ಆ ಪೈಕಿ ಹೆಚ್ಚಿನದ್ದು ಮಹಿಳೆಯರು ಮತ್ತು ಮಕ್ಕಳದ್ದು ಎಂದು ಬಾಂಗ್ಲಾದೇಶದ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ನದಿ ದಾಟುವ ಅವಸರದಲ್ಲಿ 60 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಸಣ್ಣ ದೋಣಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ನದಿ ದಾಟುತ್ತಿರುವುದು ಅವಘಡಗಳಿಗೆ ಕಾರಣವಾಗಿದೆ ಎಂದು ಬಾಂಗ್ಲಾ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ತಯೇಬಾ ಎಂಬ ಸಂತ್ರಸ್ತೆ ಮಾದ್ಯಮಗಳೊಂದಿಗೆ ಮಾತನಾಡಿ ‘ನಾನು ಮತ್ತು ನನ್ನ ಕಟುಂಬ ರಖೈನ್‌ನಿಂದ ತಪ್ಪಿಸಿಕೊಂಡು ಬಂದಿದ್ದು, ಕಳೆದ ನಾಲ್ಕು ದಿನಗಳಿಂದ ಅನ್ನಾಹಾರವಿಲ್ಲದೆ ನದಿ ದಾಟಲು ಕಾಯಬೇಕಾಯಿತು.ಜನರು ಸಿಕ್ಕ ಸಿಕ್ಕ ದೋಣಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ತುಂಬಿಕೊಂಡು ಬಾಂಗ್ಲಾಕ್ಕೆ ಪಲಾಯನ ಗೈಯುತ್ತಿದ್ದಾರೆ. ನಮ್ಮ ಕಣ್ಣೆದುರೆ 2 ದೋಣಿಗಳು ಮುಳುಗಿ ಹಲವು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡರು’ ಎಂದು ಭಯಾನಕತೆಯನ್ನು ವಿವರಿಸಿದರು.
ಬಾಂಗ್ಲಾಕ್ಕೆ ಬಂದಿರುವ ಹಲವರು ಮ್ಯಾನ್ಮಾರ್ ಸೇನೆಯ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದು , ‘ಸೈನಿಕರು ನಮ್ಮ ಮೇಲೆ ಅತ್ಯಾಚಾರ ನಡೆಸಿದ್ದು, ಚಿತ್ರಹಿಂಸೆ ನೀಡಿ ಹಲವರನ್ನು ಕೊಂದಿದ್ದಾರೆ’ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬಾಂಗ್ಲಾಕ್ಕೆ ಬಂದಿರುವ ಸಂತ್ರಸ್ತರಿಗೆ ಸರಿಯಾದ ಸೂರು ಸಿಗದೆ ಪರದಾಡುತ್ತಿದ್ದು ಮುಜೂರ್ ಮುಸ್ತಫಾ ಎಂಬ ಉದ್ಯಮಿ ಆಹಾರ ನೀಡಲು ಮುಂದೆ ಬಂದಿದ್ದು, ಇನ್ನಷ್ಟು ರೊಹಿಂಗ್ಯಾಗಳು ಬಂದರೆ ಊಟಕ್ಕೂ ಕಷ್ಟವಾಗುವ ಸಾಧ್ಯತೆಗಳಿದ್ದು ಪರಿಸ್ಥಿತಿ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಹಲವರು ಹಸಿವಿನಿಂದ ಸಾವನ್ನಪ್ಪುತಿದ್ದು, ಅಲ್ಲಿ ನೀಡುತ್ತಿರುವ ಆಹಾರ ಯಾರೊಬ್ಬರಿಗೂ ಸಾಲುತ್ತಿಲ್ಲ. ಹಲವರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಚಿಕಿತ್ಸೆಯೂ ಲಭ್ಯವಾಗದೆ ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ಮ್ಯಾನ್ಮಾರ್‌ಗೆ ಸಮನ್ಸ್ ನೀಡಿದ್ದು ಹಿಂಸೆ ನಿಯಂತ್ರಣಕ್ಕೆ ತಂದು ಜನರು ನಮ್ಮ ದೇಶದತ್ತ ನುಸುಳುವುದನ್ನು ತಡೆಯಿರಿ ಎಂದು ಕೇಳಿಕೊಂಡಿದೆ.
ಇದೇ ವೇಳೆ ವಿಶ್ವಸಂಸ್ಥೆ , ಅಂತರಾಷ್ಟ್ರೀಯ ಮಾಧ್ಯಮಗಳು ಮತ್ತು ಎನ್‌ಜಿಓಗಳ ಆರೋಪಗಳನ್ನು ಮ್ಯಾನ್ಮಾರ್ ಸರ್ಕಾರ ತಳ್ಳಿ ಹಾಕಿದ್ದು, ‘ರಖೈನ್‌ನಲ್ಲಿ ಹಿಂಸೆಯಿಂದ ಸಂತ್ರಸ್ತರಾಗಿ 27 ಸಾವಿರ ಬೌದ್ಧರೂ ಪಲಾಯನ ಮಾಡಿದ್ದಾರೆ’ ಎಂದು ಹೇಳಿದೆ.
‘ಇದು ಉಗ್ರರು ಮಾಡಿರುವ ದುಷ್ಕೃತ್ಯ, ಅವರೇ ಬೆಂಕಿ ಹಚ್ಚಿಕೊಂಡು ಆರೋಪ ಮಾಡುತ್ತಿದ್ದು, ಅಗಸ್ಟ್ 25 ರ ನಂತರ 6,600 ರೊಹಿಂಗ್ಯಾ ಮುಸ್ಲಿಮರ ಮನೆಗಳು ಮತ್ತು ಮುಸ್ಲಿಮೇತರ 201 ಮನೆಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಹೇಳಿದೆ.
7 ಮಂದಿ ರೊಹಿಂಗ್ಯಾಗಳು,7 ಮಂದಿ ಹಿಂದುಗಳು ಮತ್ತು 16 ಮಂದಿ ಬೌದ್ಧರನ್ನು ಉಗ್ರರು ಹತ್ಯೆಗೈದಿರುವುದಾಗಿ ಮ್ಯಾನ್ಮಾರ್ ಸರ್ಕಾರ ವಿವರ ನೀಡಿದೆ.ಆದರೆ ಮ್ಯಾನ್ಮಾರ್ ಸೇನೆ ನೀಡಿದ ಪ್ರಕಾರ ಹಿಂಸಾಚಾರದಲ್ಲಿ ಸೈನಿಕರು,ಉಗ್ರರು ಸೇರಿದಂತೆ 2 ವಾರದ ಒಳಗೆ 430 ಜನರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.