ಅಮೆರಿಕ-ಚೀನ ಜಗಳ, ಬಡವಾಗಲಿದೆಯೇ ತೈವಾನ್?
Team Udayavani, Aug 4, 2022, 7:45 AM IST
ಕಳೆದ ಕೆಲವು ದಿನಗಳಿಂದ ಮುಗುಮ್ಮಾಗಿದ್ದ ಚೀನ-ತೈವಾನ್ ನಡುವಿನ ವಿರಸ ಮತ್ತೆ ಈಗ ಹೆಚ್ಚಾಗಿದೆ. ಇದಕ್ಕೆ ಕಾರಣ, ಅಮೆರಿಕದ ಕೆಳಮನೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿಅವರ ತೈವಾನ್ ಭೇಟಿ. ಮಂಗಳವಾರ ತೈಪೈಗೆ ಭೇಟಿ ನೀಡಿದ್ದ ಪೆಲೋಸಿ, ಬುಧವಾರ ದೇಶದಿಂದ ನಿರ್ಗಮಿಸಿಯೂ ಆಗಿದೆ. ಆದರೆ ಇವರ ಭೇಟಿ ಚೀನದ ಕಣ್ಣುಕುಕ್ಕಿಸಿದ್ದು, ತೈವಾನ್ ಸುತ್ತಲು ತನ್ನ ಸೇನೆಯಿಂದ ಕವಾಯತ್ತು ನಡೆಸಿದೆ. ಈ ಮೂಲಕ ಮತ್ತೂಂದು ಯುದ್ಧವಾದೀತೇ ಎಂಬ ಆತಂಕವೂ ಹೆಚ್ಚಾಗಿದೆ.
ಏನಿದು ಚೀನ-ತೈವಾನ್ ಜಗಳ?
ಇದು ಇಂದಿನದಲ್ಲ. ಚೀನ ಮೇನ್‌ಲ್ಯಾಂಡ್ ನ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ (ಪಿಆರ್‌ಸಿ) ಮತ್ತು ತೈವಾನ್‌ನ ರಿಪಬ್ಲಿಕ್ ಆಫ್ ಚೀನ(ಆರ್‌ಎಸಿ) ನಡುವಿನ ಜಗಳವಿದು.
ಅಂದರೆ, 1954ರಲ್ಲಿ ಮೊದಲ ಬಾರಿಗೆ ಚೀನ ಮತ್ತು ಥೈಲ್ಯಾಂಡ್ ನಡುವೆ ಸಂಘರ್ಷ ಉಂಟಾಯಿತು. ಆಗ, ಥೈವಾನ್‌ನಲ್ಲಿದ್ದ ನ್ಯಾಷನಲಿಸ್ಟ್ ಸರಕಾರವು, ತನ್ನ ಎರಡು ದ್ವೀಪಗಳಲ್ಲಿ ಭಾರೀ ಪ್ರಮಾಣದ ಸೇನೆಯನ್ನು ಜಮಾವಣೆ ಮಾಡಿತ್ತು. ಚೀನದ ಕಮ್ಯೂನಿಸ್ಟ್ ಸರಕಾರವು, ತನ್ನ ಸೇನೆಯನ್ನು ಬಳಸಿ, ಯಿಜಿಯಾಂಗ್‌ಶಾನ್ ದ್ವೀಪವನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಪರಸ್ಪರ ಮಾತುಕತೆ ಮೂಲಕವೇ ವಿವಾದ ಬಗೆಹರಿದಿತ್ತಾದರೂ, ಅಮೆರಿಕದ ಮಧ್ಯಪ್ರವೇಶಕ್ಕೂ ದಾರಿ ಮಾಡಿಕೊಟ್ಟಿತ್ತು.
ಆದರೆ, 1958ರಲ್ಲಿ ಎರಡನೇ ಬಾರಿಗೆ ತೈವಾನ್‌ನಲ್ಲಿದ್ದ ನ್ಯಾಷನಲಿಸ್ಟ್ ಸರಕಾರವು, ಕಿನ್ಮನ್ ಮತ್ತು ಮಾಸ್ತು ದ್ವೀಪಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ದೊಡ್ಡ ಪ್ರಮಾಣದ ಯುದ್ಧವನ್ನೇ ಸಾರಿತ್ತು. ಆಗಲೂ ಚೀನದ ಕಮ್ಯೂನಿಸ್ಟ್ ಸರಕಾರ, ತನ್ನ ಸೇನೆಯ ಬಲದಿಂದ ದ್ವೀಪಗಳನ್ನು ಉಳಿಸಿಕೊಳ್ಳುವುದರ ಜತೆಗೆ, ಇಡೀ ತೈವಾನ್ ಅನ್ನೇ ತನ್ನ ವಶಕ್ಕೆ ತೆಗೆದುಕೊಳ್ಳಲು ಹೊರಟಿತು. ಆಗ, ಅಮೆರಿಕ ಸರಕಾರವು, ತೈವಾನ್ ರಕ್ಷಣೆಗೆ ಆಗಮಿಸಿತ್ತು. ಒಂದು ಹಂತದಲ್ಲಿ ಚೀನದ ಮೇಲೆ ಅಣ್ವಸ್ತ್ರ ದಾಳಿ ನಡೆಸಲೂ ಅದು ಸಿದ್ಧತೆ ನಡೆಸಿತ್ತು. ಕಡೆಗೆ ತೈವಾನ್ ದ್ವೀಪವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ವಿಫಲವಾದ ಚೀನ, ಕದನವಿರಾಮ ಘೋಷಿಸಿತ್ತು.
ಮೂರನೇ ಬಾರಿಗೆ, ಅಂದರೆ, 1995ರಲ್ಲಿ ಮತ್ತೂಮ್ಮೆ ಚೀನ ಮತ್ತು ತೈವಾನ್ ನಡುವೆ ವಿರಸ ಮೂಡಿತು. ತೈವಾನ್ ದೇಶವು, ಚೀನದಂತೆ ಕಮ್ಯೂನಿಸ್ಟ್ ಆಡಳಿತದ ಮೊರೆ ಹೋಗದೇ ಪ್ರಜಾಪ್ರಭುತ್ವವನ್ನು ಪಾಲಿಸುವುದಾಗಿ ಹೇಳಿತು. ಜತೆಗೆ, ತೈವಾನ್‌ನ ಅಧ್ಯಕ್ಷ ಲೀ ಟೆಂಗ್ ಹ್ಯೂ ಅಮೆರಿಕದ ಭೇಟಿ ವಿರೋಧಿಸಿ, ತೈವಾನ್ ಸುತ್ತಲು ನೀರಿನಲ್ಲಿ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು.
ಈಗ ಏಕೆ ವಿವಾದ?
ಇಂದಿಗೂ ಚೀನವು ತೈವಾನ್ ಅನ್ನು ಸ್ವತಂತ್ರ ದೇಶವೆಂದು ಒಪ್ಪಿಕೊಂಡಿಲ್ಲ. ಅಷ್ಟೇ ಅಲ್ಲ, ಜಗತ್ತಿನ ಕೆಲವೇ ಕೆಲವು, ಅಂದರೆ 13 ದೇಶಗಳು ಮಾತ್ರ ತೈವಾನ್ ಅನ್ನು ಸ್ವತಂತ್ರ ದೇಶವೆಂದು ಒಪ್ಪಿಕೊಂಡಿವೆ. ಈಗಲೂ ಈ ತೈವಾನ್ ದೇಶವು ಚೀನ ನಿಯಂತ್ರಣದಲ್ಲಿದೆ ಎಂದೇ ಹೇಳಿಕೊಂಡು ಬರಲಾಗುತ್ತಿದೆ. ಆದರೆ ತೈವಾನ್‌ನಲ್ಲಿರುವ ಜನ ಮಾತ್ರ ತಮ್ಮನ್ನು ಚೀನದ ವ್ಯಾಪ್ತಿಗೆ ಒಳಪಟ್ಟವರು ಎಂದು ಹೇಳಲು ಒಪ್ಪುತ್ತಿಲ್ಲ. ವಿಶೇಷವೆಂದರೆ, “ಒಂದು ಚೀನ’ ವ್ಯಾಪ್ತಿಯಲ್ಲಿಯೇ ತೈವಾನ್‌ಇದೆ ಎಂದು ಆ ದೇಶ ವಾದಿಸುತ್ತಿದ್ದರೂ, ತೈವಾನ್ ಜತೆಗೆ, ರಫ್ತು ಮತ್ತು ಆಮದು ವ್ಯವಹಾರಗಳನ್ನೂ ಇರಿಸಿಕೊಂಡಿದೆ. ಆದರೆ, ಅದನ್ನು ಸ್ವತಂತ್ರ ದೇಶವೆಂದು ಮಾತ್ರ ಒಪ್ಪಿಕೊಳ್ಳಲ್ಲ ಎಂದೇ ಹೇಳುತ್ತಿದೆ.
ಪೆಲೋಸಿಗೆ ವಿರೋಧವೇಕೆ?
ಅಮೆರಿಕದ ಕೆಳಮನೆಯ ಸ್ಪೀಕರ್ ಆಗಿರುವ ನ್ಯಾನ್ಸಿ ಪೆಲೋಸಿ ಮೂಲತಃ ಚೀನ ವಿರೋಧಿ ಎಂದೇ ಗುರುತಿಸಿ ಕೊಂಡವರು. ಈ ಹಿಂದಿನಿಂದಲೂ, ಚೀನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಹೇಳಿ ಕೊಂಡು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಸೆನೆಟರ್ ಆಗಿದ್ದಾಗಿನಿಂದಲೂ ನೇರಾ ನೇರ ವಾಗಿಯೇ ಚೀನ ಸರಕಾರದ ಜತೆ ಘರ್ಷಣೆ ಮಾಡಿಕೊಂಡೇ ಬಂದಿದ್ದಾರೆ. ಈ ನಿಲುವಿನಲ್ಲಿರುವ ಪೆಲೋಸಿ ಅವರು, ತೈವಾನ್‌ಗೆ ಭೇಟಿ ನೀಡುತ್ತಿರುವುದು ಚೀನಗೆ ಇಷ್ಟವಾಗಿಲ್ಲ. ಅಲ್ಲದೆ ಚೀನದ ಅನುಮತಿ ಇಲ್ಲದೇ, ತೈವಾನ್‌ಗೆ ಭೇಟಿ ನೀಡುವಂತಿಲ್ಲ ಎಂಬುದು ಆ ದೇಶದ ಮಾತುಗಳು. ಹೀಗಾಗಿಯೇ ಪೆಲೋಸಿ ಭೇಟಿ ನೀಡಿದ ಬಳಿಕ, ಬೇರೆ ಯಾವುದೇ ಸ್ಥಿತಿ ಉದ್ಭವ ವಾದರೂ ಅದಕ್ಕೆ ಅಮೆರಿಕವೇ ಹೊಣೆ. ಬೆಂಕಿ ಜತೆ ಸರಸವಾಡಬೇಡಿ ಎಂದು ಚೀನ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.
1997ರಲ್ಲೂ ಸ್ಪೀಕರ್ ಭೇಟಿ
ಈಗಷ್ಟೇ ಅಲ್ಲ, 1997ರಲ್ಲಿಯೂ ಅಮೆರಿಕ ಸೆನೆಟ್‌ನ ಸ್ಪೀಕರ್ ಗಿಂಗ್ರಿಚ್ ಅವರು ತೈವಾನ್‌ಗೆ ಭೇಟಿ ನೀಡಿದ್ದರು. ಈ ಭೇಟಿ ವಿರುದ್ಧವೂ ಚೀನ ಆಕ್ಷೇಪವೆತ್ತಿತ್ತು. ಆಗ ಮಾತನಾಡಿದ್ದ ಗಿಂಗ್ರಿಚ್ ಅವರು, ಮುಂದೆ ಎಂಥದ್ದೇ ಪರಿಸ್ಥಿತಿಯಲ್ಲಿ ನಾವು ತೈವಾನ್ ಅನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದರು. ವಿಚಿತ್ರವೆಂದರೆ, ಆಗ ಚೀನ ತೀರಾ ಎಚ್ಚರಿಕೆಯಿಂದ ವರ್ತಿಸಿತ್ತು. ಈಗಿನಂತೆ ಅದು ಅಷ್ಟು ಪ್ರಬಲವಾಗಿರಲಿಲ್ಲ. ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಇತ್ತು. ಆದರೆ ಈಗ ಚೀನ ಅಮೆರಿಕಕ್ಕೆ ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಬೆಳೆದಿದೆ. ಅಲ್ಲದೆ ಅಮೆರಿಕಕ್ಕೆ ಪರ್ಯಾಯವೆಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆರ್ಥಿಕತೆಯಿಂದ ಹಿಡಿದು, ರಕ್ಷಣಾತ್ಮಕವಾಗಿಯೂ ಅದು ಪ್ರಬಲವಾಗಿದೆ. ಜತೆಗೆ, ರಷ್ಯಾದ ಬೆಂಬಲವನ್ನೂ ಪಡೆದುಕೊಂಡಿದೆ.
ಅಮೆರಿಕ ಮೂಗು ತೂರಿಸಬಾರದು
ಈಗ ಪೆಲೋಸಿ ಭೇಟಿಗೆ ಚೀನ ವಿರೋಧ ಮಾಡುತ್ತಿರುವುದು ಕೇವಲ ಸೂಚಕವಷ್ಟೇ. ಇದರ ಹಿಂದೆ ದೊಡ್ಡ ತಂತ್ರವೇ ಅಡಗಿದೆ. ಯಾವುದೇ ಕಾರಣಕ್ಕೂ ತೈವಾನ್ ವಿಚಾರದಲ್ಲಿ ಅಮೆರಿಕ ಮೂಗು ತೂರಿಸಬಾರದು ಎಂಬುದು ಚೀನದ ನಿಲುವು. ಈಗಲೂ ತೈವಾನ್ ಅನ್ನು ತನ್ನದೇ ಪ್ರಾಂತವೆಂದು ತಿಳಿದಿರುವ ಚೀನಗೆ, ತನ್ನದೇ ನೆಲದಲ್ಲಿ ಅಮೆರಿಕ ಬೇರೆ ರಾಜಕಾರಣ ಮಾಡಬಾರದು ಎಂದು ಅಲ್ಲಿನ ರಾಜಕಾರಣಿಗಳು ಹೇಳುತ್ತಿದ್ದಾರೆ. ಜತೆಗೆ, ತೈವಾನ್‌ಮತ್ತು ಅಮೆರಿಕ ಹತ್ತಿರವಾದಷ್ಟು, ಚೀನಗೆ ಭದ್ರತೆ ದೃಷ್ಟಿಯಿಂದ ಅಪಾಯ ಹೆಚ್ಚು. ಏಕೆಂದರೆ, ಚೀನದಿಂದ ಕೇವಲ 160 ಕಿ.ಮೀ. ದೂರದಲ್ಲಿದೆ. ಅಂದರೆ ಚೀನದ ಫುಜುವು, ಕ್ವಾಂಗು ಮತ್ತು ಕ್ಲಿಯಾಮೆನ್‌ಗೆ ತೀರಾ ಹತ್ತಿರದಲ್ಲಿದೆ.
ಅಮೆರಿಕದ ವಾದವೇನು?
ತೈವಾನ್ ವಿಚಾರದಲ್ಲಿ ಅಮೆರಿಕ ಬೇರೆಯದ್ದೇ ನಿಲುವು ಹೊಂದಿದೆ. ಅಂದರೆ, ಅದನ್ನು ಚೀನದಿಂದ ಪ್ರತ್ಯೇಕವಾಗಿಯೇ ಮತ್ತು ಪ್ರಜಾಪ್ರಭುತ್ವ ದೇಶವಾಗಿಯೇ ಗುರುತಿಸುವ ಇರಾದೆ ಅದರದ್ದು. ಹೀಗಾಗಿಯೇ, ಒಂದು ವೇಳೆ ಚೀನ ಏನಾದರೂ, ತೈವಾನ್‌ಮೇಲೆ ದಾಳಿ ಮಾಡಿದರೆ, ಅದರ ರಕ್ಷಣೆಗೆ ಬರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಅಲ್ಲದೆ, ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ, ಉಕ್ರೇನ್ ಸಹಾಯಕ್ಕೆ ಹೋದಂತೆಯೇ, ಚೀನ ತೈವಾನ್ ಮೇಲೆ ದಾಳಿ ಮಾಡಿದರೆ, ಸಹಾಯಕ್ಕೆ ಹೋಗುತ್ತೇವೆ ಎಂದು ಈ ಹಿಂದೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.