ರಷ್ಯಾಕ್ಕೂ ಪ್ರತಿಕೂಲ ತಂದ ಯುದ್ಧ
Team Udayavani, Mar 18, 2022, 6:30 AM IST
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಮೂರು ವಾರಗಳು ಕಳೆದಿವೆ. ಈ ಯುದ್ಧದಿಂದಾಗಿ ಉಕ್ರೇನ್‌ನಲ್ಲಾಗಿರುವ ಸಾವುನೋವು, ಆಸ್ತಿಗಾಗಿರುವ ಹಾನಿ ಇವೆಲ್ಲವುಗಳ ಬಗೆಗೆ ದಿನಕ್ಕೊಂದು ಅಂಕಿಅಂಶಗಳು ಹೊರಬೀಳುತ್ತಿವೆ. ಇದೇ ವೇಳೆ ಯುದ್ಧದ ನೈಜ ದೃಶ್ಯಾವಳಿಗಳು ಟಿವಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುತ್ತಿದ್ದು, ಅಲ್ಲಿನ ಕರಾಳತೆಗೆ ಕನ್ನಡಿ ಹಿಡಿಯುತ್ತಿವೆ. ಇತ್ತ ರಷ್ಯಾ ಯೋಧರೂ ರಣಾಂಗಣದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಯುದ್ಧ ಆರಂಭಗೊಂಡ ಬಳಿಕ ರಷ್ಯಾದ ಮೇಲೆ ಪ್ರತಿದಾಳಿ ನಡೆದಿಲ್ಲ. ಆದಾಗ್ಯೂ ರಷ್ಯಾದ ಜನತೆಗೆ ಯುದ್ಧದ ಬಿಸಿ ಪರೋಕ್ಷವಾಗಿ ತಟ್ಟಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಅಮೆರಿಕ ಸಹಿತ ಯುರೋಪಿಯನ್ ರಾಷ್ಟ್ರಗಳು ಹೇರಿರುವ ಸರಣಿ ನಿರ್ಬಂಧಗಳ ತೀವ್ರ ತೆರನಾದ ಪರಿಣಾಮವನ್ನು ರಷ್ಯಾದ ಜನತೆ ಅನುಭವಿಸುತ್ತಿದ್ದಾರೆ. ಆಹಾರ ಉತ್ಪನ್ನಗಳಿಂದ ಹಿಡಿದು ಎಲ್ಲ ವಲಯಗಳ ಮೇಲೂ ಬೆಲೆ ಏರಿಕೆಯ ಹೊಡೆತ ಬಿದ್ದಿದೆ. ಇದು ದೇಶದ ಜನ ಸಾಮಾನ್ಯರನ್ನು ಕಂಗೆಡಿಸಿದೆ. ವಿಶ್ವದ ಬಲಿಷ್ಠ, ಸರ್ವಸನ್ನದ್ಧ ಮತ್ತು ಸ್ವಾವಲಂಬಿ ರಾಷ್ಟ್ರ ಎಂದು ಕರೆಸಿಕೊಳ್ಳುವ ರಷ್ಯಾದ ಸ್ಥಿತಿ ಸದ್ಯಕ್ಕಂತೂ “ಮಾಡಿದ್ದುಣ್ಣೋ ಮಹಾರಾಯ’ ಎಂಬಂತಾಗಿದೆ.
ತಟ್ಟಿದ ಹಣದುಬ್ಬರದ ಬಿಸಿ: ನ್ಯಾಟೋ ಸದಸ್ಯತ್ವ ಪಡೆಯುವ ಉಕ್ರೇನ್‌ನ ನಿರ್ಧಾರದಿಂದ ಆಕ್ರೋಶಗೊಂಡು ಆ ದೇಶದ ವಿರುದ್ಧ ರಷ್ಯಾ ಸೇನಾ ಆಕ್ರಮಣ ಆರಂಭಿಸಿ 22 ದಿನಗಳು ಕಳೆದಿವೆ. ರಷ್ಯಾ ಸೇನೆ ನಡೆಸುತ್ತಿರುವ ನಿರಂತರ ದಾಳಿಯಿಂದ ಸಂಪೂರ್ಣ ಜರ್ಝರಿತವಾಗಿರುವ ಉಕ್ರೇನ್ ಪದೇಪದೆ ಜಾಗತಿಕ ಸಮುದಾಯದ ನೆರವು ಯಾಚಿಸುತ್ತಿದೆ. ಹಾಗೆಂದು ರಷ್ಯಾ ವಿರುದ್ಧ ಮಂಡಿಯೂರಲು ಉಕ್ರೇನ್ ಸಿದ್ಧವಾಗಿಲ್ಲ. ಅವಕಾಶ ಸಿಕ್ಕಾಗಲೆಲ್ಲ ರಷ್ಯಾ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಮಾತುಕತೆ, ಸಂಧಾನ ಪ್ರಕ್ರಿಯೆ, ಸತತ ಮನವಿಯ ಹೊರತಾಗಿಯೂ ರಷ್ಯಾ, ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿರುವುದು ಜಾಗತಿಕ ಸಮುದಾಯದ ತೀವ್ರ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ವಿಶ್ವದ ಪ್ರಬಲ ರಾಷ್ಟ್ರಗಳು ಮತ್ತು ನ್ಯಾಟೋ ಒಂದರ ಮೇಲೊಂದರಂತೆ ನಿರ್ಬಂಧ, ದಿಗ್ಬಂಧನಗಳನ್ನು ಹೇರುತ್ತಲೇ ಸಾಗಿದೆ. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸದ್ಯ ರಷ್ಯಾದ ಮೇಲೆ ಉಕ್ರೇನ್ ಆಗಲಿ, ನ್ಯಾಟೋ ರಾಷ್ಟ್ರಗಳಾಗಲಿ ಪ್ರತಿದಾಳಿ ನಡೆಸುತ್ತಿಲ್ಲವಾದರೂ ರಷ್ಯಾದ ಜನತೆ ಯುದ್ಧದ ಪರೋಕ್ಷ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ದೇಶಾದ್ಯಂತ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟತೊಡಗಿದ್ದು ಆಹಾರ ಉತ್ಪನ್ನಗಳಾದಿಯಾಗಿ ಎಲ್ಲ ಅಗತ್ಯ ವಸ್ತುಗಳ ಧಾರಣೆ ಹೆಚ್ಚಾಗಿವೆ. ಹಣದುಬ್ಬರದ ಬಿಸಿ ಜನಸಾಮಾನ್ಯರನ್ನು ಕಾಡತೊಡಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರಷ್ಯಾದ ಜನರೇ ಪುತಿನ್‌ರ ವಿರುದ್ಧ ತಿರುಗಿಬಿದ್ದರೂ ಅಚ್ಚರಿ ಇಲ್ಲ. ಹಾಗಾದರೆ ತಾನೇ ಸಾರಿದ ಯುದ್ಧದಿಂದ ರಷ್ಯಾ ಎದುರಿಸುತ್ತಿರುವ ಪರಿಣಾಮ, ಅನುಭವಿಸುತ್ತಿರುವ ಸಂಕಷ್ಟ, ಇವುಗಳಿಗೆ ಕಾರಣಗಳೇನು ಎಂಬುದರ ಚಿತ್ರಣ ಇಲ್ಲಿದೆ.
ಬಹುತೇಕ ಕ್ಷೇತ್ರಗಳ ಮೇಲೆ ಪರಿಣಾಮ: ಯುದ್ಧ ಆರಂಭಗೊಂಡ ಬಳಿಕ
ರಷ್ಯಾದಲ್ಲಿ ಆಹಾರ ಉತ್ಪನ್ನಗಳ ಬೆಲೆ ಶೇ. 45ರಷ್ಟು ಹೆಚ್ಚಾಗಿದೆ. ಇದರ ಜತೆಯಲ್ಲಿ ಟೆಲಿಕಾಂ, ಮೆಡಿಕಲ್, ಆಟೋಮೊಬೈಲ್, ಕೃಷಿ ಮತ್ತು ಎಲೆಕ್ಟ್ರಿಕಲ್ ವಸ್ತುಗಳ ಬೆಲೆಯೂ ಹೆಚ್ಚುತ್ತಲೇ ಸಾಗಿದೆ.
ಇತರ ಸರಕುಗಳ ಧಾರಣೆಯಲ್ಲೂ ಏರಿಕೆ :
ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಯುರೋಪಿಯನ್ ದೇಶಗಳ ವ್ಯವಹಾರದ ಪಾಲು ಶೇ. 40ರಷ್ಟಾಗಿದೆ. ಈ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿದ ಬಳಿಕ ಯುರೋಪಿಯನ್ ದೇಶಗಳಿಂದ ಆಮದು ಸ್ಥಗಿತಗೊಂಡಿದ್ದರೆ ರಷ್ಯಾದ ಕಾರ್ಖಾನೆಗಳನ್ನು ಕಚ್ಚಾ ಸಾಮಗ್ರಿಗಳ ಕೊರತೆ ಬಾಧಿಸತೊಡಗಿದೆ. ಇನ್ನು ದೇಶದಲ್ಲಿ ಅತ್ಯಂತ ಅಗತ್ಯ ಔಷಧಗಳ ದಾಸ್ತಾನು ಕೂಡ ಕಡಿಮೆಯಾಗತೊಡಗಿದ್ದು ಈಗಾಗಲೇ ಕೆಲವೊಂದು ಔಷಧಗಳ ಕೊರತೆ ದೇಶವನ್ನು ಕಾಡಲಾರಂಭಿಸಿದೆ. ಫೆ.26ರಿಂದ ಮಾ.4ರ ವರೆಗಿನ ಅಂಕಿಅಂಶವನ್ನು ಪರಿಗಣಿಸಿದ್ದೇ ಆದಲ್ಲಿ ಗ್ರಾಹಕ ವಸ್ತುಗಳ ಬೆಲೆ ಶೇ.2.2ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿಯೂ ಶೇ. 17ರಷ್ಟು ಹೆಚ್ಚಳವಾಗಿದೆ. ಲ್ಯಾಪ್‌ಟಾಪ್, ಆಟೋಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿಯೂ ಭಾರೀ ಹೆಚ್ಚಳ ದಾಖಲಾಗಿದೆ. ಮಾಸ್ಕೋ ಕೆಫೆಯಲ್ಲಿ ಬಳಸಲಾಗುವ ಕೆಲವೊಂದು ವಸ್ತುಗಳ ಬೆಲೆ ಶೇ. 300ರಷ್ಟು ಏರಿಕೆಯನ್ನು ಕಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏರುಗತಿಯಲ್ಲಿ ಇತರ ವಸ್ತುಗಳ ಬೆಲೆ :
ವಸ್ತು/ ಫೆಬ್ರವರಿ ಆರಂಭ(ರೂ.) / ಮಾರ್ಚ್ ಆರಂಭ(ರೂ.)
ಲ್ಯಾಪ್‌ಟಾಪ್/ 44,548/ 89.027
ರೆಫ್ರಿಜರೇಟರ್ /26,000/ 44,000
ಟಿವಿ ಸೆಟ್/ 14,000/ 17,000
ಕಿಯಾ ರಿಯೊ ಎಸ್ ಕಾರ್/ 12.20ಲಕ್ಷ / 14.72 ಲಕ್ಷ
ದಿನಸಿ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಹೆಚ್ಚಳ :
ರಷ್ಯಾ ಸೇನೆ ಉಕ್ರೇನ್ ವಿರುದ್ಧ ಸಮರ ಸಾರಿದ ಬಳಿಕ ಅಮೆರಿಕ ಸಹಿತ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ರಷ್ಯಾದ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರಿದವು. ಇದರಿಂ ದಾಗಿ ರಷ್ಯಾದ ಕರೆನ್ಸಿ ರೂಬಲ್‌ನ ಮೌಲ್ಯ ಡಾಲರ್ ಎದುರು ಶೇ.30ರಷ್ಟು ಇಳಿಕೆ ಕಂಡಿತು. ಹೀಗಾಗಿ ದೇಶದಲ್ಲಿ ಆಹಾರ ಉತ್ಪನ್ನಗಳ ಬೆಲೆ ಶೇ. 45ರಷ್ಟು ಹೆಚ್ಚಳವಾ ಯಿತು. ಯುದ್ಧದ ಆರಂಭಕ್ಕೂ ಮುನ್ನ ರಷ್ಯಾದಲ್ಲಿ 3,500ರೂ. ಬೆಲೆಯ ದಿನಸಿ ಸಾಮಗ್ರಿಗಳ ಬೆಲೆ ಇದೀಗ 5,100ರೂ. ಆಗಿದೆ. ಕಳೆದೆರಡು ವಾರಗಳ ಅವಧಿಯಲ್ಲಿ ಹಾಲಿನ ಬೆಲೆ ದುಪ್ಪಟ್ಟು ಆಗಿದೆ. ಹಲವಾರು ಮಾಲ್ ಮತ್ತು ಮಳಿಗೆಗಳಲ್ಲಿ ಕೆಲವೊಂದು ಸರಕುಗಳ ಖರೀದಿಗೂ ನಿಷೇಧ ಹೇರಲಾಗಿದೆ. ತತ್‌ಕ್ಷಣ ಯುದ್ಧ ನಿಲ್ಲದೇ ಹೋದಲ್ಲಿ ರಷ್ಯಾದಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಲಿದೆಯಲ್ಲದೆ ಅಭಾವ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ವಸ್ತುಗಳು/ ಯುದ್ಧದ ಮೊದಲು (ರೂ.)/ ಅನಂತರ (ರೂ.)
ಬ್ರೆಡ್/ 6-7 /10
ಟೊಮೆಟೋ /105 /143
ದಿನಸಿ/ 3,500/ 5,100
ರಷ್ಯಾದಿಂದ ಕಾಲ್ಕೀಳುತ್ತಿರುವ ಕಂಪೆನಿಗಳು :
ರಷ್ಯಾದ ವಿರುದ್ಧ ಯುರೋಪಿಯನ್ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬಳಿಕ ದೇಶವಿದೇಶಗಳ ಹಲವಾರು ಪ್ರತಿಷ್ಠಿತ ಕಂಪೆನಿಗಳು ರಷ್ಯಾದಲ್ಲಿನ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿವೆ. ಮಾಧ್ಯಮ ವರದಿಗಳ ಪ್ರಕಾರ ಈವರೆಗೆ 59 ಕಂಪೆನಿಗಳು ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಿವೆ. ಈ ಪೈಕಿ ವೋಕ್ಸ್‌ವ್ಯಾಗನ್, ಆ್ಯಪಲ್, ಮೈಕ್ರೋಸಾಫ್ಟ್, ಟೊಯೊಟಾ, ಮೆಕ್‌ಡೊನಾಲ್ಡ್, ಗೂಗಲೇ ಪೇ, ಸ್ಯಾಮ್‌ಸಂಗ್ ಪೇ ಸೇರಿವೆ. ಈ ಬಗ್ಗೆ ರಷ್ಯಾದ ಶ್ರೀಮಂತ ಉದ್ಯಮಿಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದು ವಿಶ್ವದ ದಿಗ್ಗಜ ವಾಣಿಜ್ಯ ಕಂಪೆನಿಗಳು ದೇಶದಲ್ಲಿ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ದೇಶ ಅಭಿವೃದ್ಧಿಯಲ್ಲಿ 100 ವರ್ಷಗಳಷ್ಟು ಹಿಂದೆ ಸರಿಯಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 2022ರ ಜನವರಿಯಲ್ಲಿ ರಷ್ಯಾದ ನಿರುದ್ಯೋಗ ದರ ಶೇ. 4.4ರಷ್ಟಾಗಿದ್ದರೆ ಮುಂದಿನ ತಿಂಗಳಲ್ಲಿ ಇದು ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಬ್ಯಾಂಕ್, ಎಟಿಎಂಗಳ ಮುಂದೆ ಜನರ ಕ್ಯೂ :
ವಿಶ್ವದ ಅತೀದೊಡ್ಡ ಆನ್‌ಲೈನ್ ವಹಿವಾಟು ಸಂಸ್ಥೆಯಾಗಿರುವ ಸ್ವಿಫ್ಟ್ನಿಂದ ರಷ್ಯಾವನ್ನು ಕೈಬಿಟ್ಟ ಬಳಿಕ ದೇಶದ ಹಣಕಾಸು ವ್ಯವಹಾರದ ಮೇಲೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಕಳೆದ 4ದಶಕಗಳಲ್ಲಿಯೇ ಮೊದಲ ಬಾರಿಗೆ ರಷ್ಯಾದ ಕರೆನ್ಸಿಯಾಗಿರುವ ರೂಬಲ್ ತೀವ್ರ ತೆರನಾದ ಕುಸಿತ ಕಂಡಿದೆ. ರಿಸರ್ವ್ ಬ್ಯಾಂಕ್ ಆಫ್ ರಷ್ಯಾ 7.65 ಲ.ರೂ. ಗಳಿಗಿಂತ ಅಧಿಕ ಹಣ ಹಿಂಪಡೆಯುವುದಕ್ಕೆ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಜನರು ಹಣ ಹಿಂಪಡೆಯಲು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಅಂತಾರಾಷ್ಟ್ರೀಯ ಹಣಕಾಸು ವಿನಿಮಯ ವ್ಯವಸ್ಥೆ , ಸ್ವಿಫ್ಟ್ನಿಂದ ಹೊರದಬ್ಬಲ್ಪಟ್ಟರೂ ರಷ್ಯಾವು ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಚೀನದ ಕ್ರಾಸ್ ಬಾರ್ಡರ್ ಇಂಟರ್‌ಬ್ಯಾಂಕ್ ಪೇಮೆಂಟ್ ಸಿಸ್ಟಮ್(ಸಿಐಪಿಎಸ್)ನ ಮೊರೆ ಹೋಗಿದೆ.
ಅಮೆರಿಕನ್ ಡಾಲರ್ ಎದುರು ರೂಬಲ್ ಮೌಲ್ಯ :
1ಡಾಲರ್/ 107 ರೂಬಲ್
ಈ ಹಿಂದಿನ ವರ್ಷಗಳಲ್ಲಿ ರೂಬಲ್ ಮೌಲ್ಯ(1 ಡಾಲರ್‌ಗೆ)
2012ರ ಜೂ.3 /31 ರೂಬಲ್
2015ರ ಡಿ. 30 /73 ರೂಬಲ್
2021ರ ಮಾ. 25/ 75 ರೂಬಲ್
2022ರ ಮಾ.15 /107 ರೂಬಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.