ದೇಶ ನಡೆಸಲು ದುಡ್ಡಿಲ್ಲ; ದೇವರೇ ಸೃಷ್ಟಿಸಿದ ಬಿಕ್ಕಟ್ಟಿದು: ಇಮ್ರಾನ್
Team Udayavani, Sep 15, 2018, 11:58 AM IST
ಇಸ್ಲಾಮಾಬಾದ್ : ಪಾಕಿಸ್ಥಾನವನ್ನು ನಡೆಸಲು ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ (ಪಿಟಿಐ) ಸರಕಾರದ ಬಳಿ ದುಡ್ಡಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಹಿಂದಿನ ಸರಕಾರ ದೇಶದ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡುವ ಬದಲು ನಷ್ಟ ಉಂಟುಮಾಡುವ ಯೋಜನೆಗಳನ್ನು ಕೈಗೊಂಡು ದೇಶದ ಆರ್ಥಿಕತೆ ಭಾರೀ ಹಾನಿ ಉಂಟುಮಾಡಿದೆ ಎಂದು ಇಮ್ರಾನ್ ಖಾನ್ ಇಸ್ಲಾಮಾಬಾದ್‌ನಲ್ಲಿ ಸರಕಾರದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ದೇಶದ ಜನಸಂಖ್ಯೆಯ ಬಹುಪಾಲು ಜನರು ಯುವಕರಾಗಿದ್ದು ಅವರು ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ದೇಶ ಸಾಧ್ಯವಾದಷ್ಟು ಬೇಗನೆ ಸಾಲದ ಹೊರೆಯಿಂದ ಮುಕ್ತವಾಗಬೇಕಿದೆ; ನಾವು ಮೊದಲು ನಮ್ಮನ್ನು, ಅನಂತರ ನಮ್ಮ ದೇಶವನ್ನು, ಬದಲಿಸಬೇಕಿದೆ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.
ಸರಕಾರ ಜನರ ಹೊಣೆ ವಹಿಸಬೇಕು; ಹಾಗೆಯೇ ಜನರು ಸರಕಾರ ತಮ್ಮದೆಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು; ದೇವರೇ ಈ ಬಿಕ್ಕಟ್ಟನ್ನು ಸೃಷ್ಟಿಸಿರಬಹುದು, ಏಕೆಂದರೆ ನಾವು ಬದಲಾಗಬೇಕೆಂದೇ ದೇವರ ಬಯಸಿರಬೇಕು’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.