ಅಧಿಕಾರ ಹಸ್ತಾಂತರ ಹೇಗಿರಲಿದೆ?
Team Udayavani, Nov 26, 2020, 5:58 AM IST
ಒಂದೆಡೆ ಟ್ರಂಪ್ ಸೋಲೊಪ್ಪಿಕೊಳ್ಳಲು ನಿರಾಕರಿಸುತ್ತಿರುವ ವೇಳೆಯಲ್ಲೇ, ಅವರೆದುರಿನ ಆಯ್ಕೆಗಳೆಲ್ಲ ಒಂದೊಂದಾಗಿ ಮುಚ್ಚಿಕೊಳ್ಳಲಾರಂಭಿಸಿವೆ. ಶ್ವೇತಭವನದ ಅಧಿಕಾರವನ್ನು ಜೋ ಬೈಡೆನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಪ್ರಕ್ರಿಯೆ ಸುಗಮವಾಗಿರಲಿದೆ ಎಂದು ಟ್ರಂಪ್ ಕೂಡ ಅನಿವಾರ್ಯವಾಗಿ ಒಪ್ಪಿಗೆ ನೀಡಿದ್ದಾರೆ! ಅಮೆರಿಕದಲ್ಲಿ ಅಧಿಕಾರ ಹಸ್ತಾಂತರವೆನ್ನುವುದು ಅನ್ಯ ದೇಶಗಳಲ್ಲಿನಂತೆ ಸುಲಭದ ಪ್ರಕ್ರಿಯೆಯಲ್ಲ, ಅಧಿಕಾರದಿಂದ ಹೊರನಡೆಯುತ್ತಿರುವ ತಂಡ ಮತ್ತು ಅಧಿಕಾರಕ್ಕೇರಲು ಸಜ್ಜಾಗಿರುವ ತಂಡದ ನಡುವೆ ತಿಂಗಳುಗಟ್ಟಲೇ ಸಹಭಾಗಿತ್ವದಲ್ಲಿ ನಡೆಯಬೇಕಾದ ಜಟಿಲ ಪ್ರಕ್ರಿಯೆ. ಹಾಗಿದ್ದರೆ ಅಮೆರಿಕದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಹೇಗಿರುತ್ತದೆ? ಏನೇನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ…
ಜಿಎಸ್‌ಸಿಯದ್ದೇ ನಿರ್ಣಾಯಕ ಪಾತ್ರ
ಅಮೆರಿಕದಲ್ಲಿ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್(ಜಿಎಸ್‌ಎ) ಎಂಬ ಸಂಸ್ಥೆಯಿದೆ. ಆದಾಗ್ಯೂ ಇದು ಸರಕಾರದ ಅಧೀನದಲ್ಲೇ ಬಂದರೂ, ಆಡಳಿತದ ಹಸ್ತಕ್ಷೇಪವಿಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಸರಕಾರದ ವಿವಿಧ ಇಲಾಖೆಗಳ ಕಚೇರಿಗಳಿಗೆ ಅಗತ್ಯವಿರುವ ಉತ್ಪನ್ನಗಳು, ಸಾರಿಗೆ ವ್ಯವಸ್ಥೆ, ಸಂಹವನ, ಫೆಡರಲ್ ಉದ್ಯೋಗಿಗಳ ಕಚೇರಿ ಹಾಗೂ ನಿವಾಸದ ವ್ಯವಸ್ಥೆ ಹಾಗೂ ಇತರೆ ನಿರ್ವಹಣಾ ಕೆಲಸಗಳನ್ನು ಜಿಎಸ್‌ಎ ನೋಡಿಕೊಳ್ಳುತ್ತದೆ. ಮುಖ್ಯವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವೇಳೆ ಎರಡೂ ಬದಿಯ ತಂಡದ ನೇತೃತ್ವವನ್ನು ಜಿಎಸ್‌ಎ ವಹಿಸುತ್ತದೆ.
ಹಸ್ತಾಂತರ ಪ್ರಕ್ರಿಯೆ ವೇಳೆ ಏನಾಗುತ್ತದೆ?
ಈಗ ಅಧಿಕಾರದಲ್ಲಿರುವ ಟ್ರಂಪ್‌ರ ತಂಡ, ಇನ್ನು ಮುಂದೆ ಬೈಡೆನ್ ಅವರು ಆಯ್ಕೆ ಮಾಡಿದ ಹಸ್ತಾಂತರ ತಂಡಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕಾಗುತ್ತದೆ. ಕಚೇರಿಗಳ ಕಡತಗಳು, ದತ್ತಾಂಶಗಳು, ಯೋಜನೆಗಳ ಸವಿವರ ಮಾಹಿತಿಯನ್ನು ಹಂಚಿಕೊಳ್ಳಬೇಕು. ಉದಾಹರಣೆಗೆ, ಕೋವಿಡ್ ಲಸಿಕೆ ವಿತರಣೆಯ ದಿನಾಂಕ ಹಾಗೂ ವಿತರಣೆ ಪ್ರಕ್ರಿಯೆಯ ಕುರಿತು ರಚನೆಯಾಗಿರುವ ಟ್ರಂಪ್‌ರ ತಂಡವು, ಈ ಮಾಹಿತಿಯನ್ನೆಲ್ಲ ಹೊಸ ನಿಯೋಜಿತ ಹಸ್ತಾಂತರ ತಂಡದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಅಲ್ಲದೇ ಹಸ್ತಾಂತರ ಪ್ರಕ್ರಿಯೆಯ ವೇಳೆಯಲ್ಲಿ ಜಿಎಸ್‌ಎ ಬೈಡೆನ್‌ರ ತಂಡಕ್ಕೆ ಸರಕಾರದ ಕಚೇರಿಗಳು, ಕಂಪ್ಯೂಟರ್‌ಗಳು ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ.
ಬೈಡೆನ್ ಹಸ್ತಾಂತರ ತಂಡ
ಹಸ್ತಾಂತರ ಪ್ರಕ್ರಿಯೆ ಸುಗಮವಾಗಿರಬೇಕೆಂಬ ಕಾರಣಕ್ಕಾಗಿ ಬಹುಮತ ಪಡೆದ ಪಕ್ಷವು ಹಸ್ತಾಂತರ ತಂಡವನ್ನು ನಿಯೋಜಿಸಿರುತ್ತದೆ. ಜೋ ಬೈಡೆನ್ ಅವರು ಮಾಜಿ ಸೆನೆಟರ್ ಟೆಡ್ ಕೌಫ್ಮ್ಯಾನ್‌ರನ್ನು ತಮ್ಮ ಪಕ್ಷದ ಹಸ್ತಾಂತರ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಟೆಡ್ ಕೌಫ್ಮೆನ್ ಈಗ ಜಿಎಸ್‌ಎ ಮಾರ್ಗದರ್ಶನದಲ್ಲಿ ಮತ್ತು ಟ್ರಂಪ್ ಆಡಳಿತದ ಸಹಭಾಗಿತ್ವದಲ್ಲಿ ಮೇಲ್ವಿಚಾರಣೆ ನಡೆಸಲಿದ್ದಾರೆ. ಹಸ್ತಾಂತರ ತಂಡದ ಮತ್ತೂಂದು ಮುಖ್ಯ ಕೆಲಸವೆಂದರೆ, ಹೊಸ ಅಧ್ಯಕ್ಷರು ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಹೇಗೆ ನೀತಿಯಾಗಿ ರೂಪಿಸಬಹುದು ಎನ್ನುವುದರ ಸಾಧ್ಯತೆಗಳನ್ನು ಹುಡುಕುವುದು ಹಾಗೂ ಅಡ್ಡಿಗಳನ್ನು ನಿವಾರಿಸುವುದು. ಉದಾಹರಣೆಗೆ ಬೈಡೆನ್ ತರಲು ಬಯಸಿರುವ ನೀತಿಗೆ, ಟ್ರಂಪ್ ಆಡಳಿತದ ಈಗಿನ ನಿಯಮಗಳು ಅಡ್ಡಿಪಡಿಸುತ್ತವೆ ಎಂದುಕೊಳ್ಳಿ. ಆಗ ಆ ಅಡ್ಡಿಯನ್ನು ತ್ವರಿತವಾಗಿ ಬಗೆಹರಿಸಿ, ಬೈಡೆನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನವ ನೀತಿ ಜಾರಿಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗೆ ಎರಡೂ ಬದಿಯಲ್ಲಿ ಸಮನ್ವಯತೆ, ಪಾರದರ್ಶಕತೆ ಇರುವುದನ್ನು ಜಿಎಸ್‌ಎ ಖಾತ್ರಿಪಡಿಸುತ್ತದೆ.
ರಾಜಕೀಯ ನೇಮಕಾತಿಗಳು
ಅಧ್ಯಕ್ಷರಾದವರಿಗೆ ಸರಕಾರದಲ್ಲಿ 4000 ಉದ್ಯೋಗಿಗಳ ನೇಮಕಾತಿ ಅಥವಾ ನಾಮನಿರ್ದೇಶನ ಮಾಡುವ ಅಧಿಕಾರವಿರುತ್ತದೆ. ಹಲವು ಇಲಾಖೆಗಳ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು, ಶ್ವೇತಭವನದ ಸಿಬ್ಬಂದಿ, ಬಿ ಮತ್ತು ಸಿ ವಲಯದ ಕೆಲ ಹುದ್ದೆಗಳು, ಸೇರಿದಂತೆ ವಿವಿಧ ಹುದ್ದೆಗೆ ಕೆಲವರನ್ನು ಬೈಡೆನ್‌ರ ತಂಡ ಈಗಾಗಲೇ ಆಯ್ಕೆ ಮಾಡಿರುತ್ತದೆ. ಟ್ರಂಪ್‌ರಿಂದ ನೇಮಕವಾದ ಇದೇ ಹುದ್ದೆಗಳ ಜನರು ಹೊಸಬರಿಗೆ ಮಾಹಿತಿ ಹಂಚಿಕೊಳ್ಳಬೇಕು.
ಹೊಸ ತಂಡ ಖರ್ಚು ವೆಚ್ಚದ ಕಥೆಯೇನು?
ಅಧಿಕಾರವು ಪೂರ್ಣವಾಗಿ ಹಸ್ತಾಂತರವಾಗುವುದಕ್ಕೆ ಜನವರಿ 20ರ ವರೆಗೂ ಸಮಯವಿದೆ. ಅಲ್ಲಿವರೆಗೂ ಬೈಡೆನ್‌ರ ತಂಡದ ಖರ್ಚುವೆಚ್ಚದ ಕಥೆಯೇನು? ಏಕೆಂದರೆ ಟ್ರಂಪ್ ಈಗಲೂ ಅಧಿಕಾರದಲ್ಲಿ ಇರುವುದರಿಂದ ಸಹಜವಾಗಿಯೇ ಅವರ ತಂಡಕ್ಕೆ ಸರಕಾರದಿಂದ ಸಂಬಳ, ಸವಲತ್ತು ಸಂದಾಯವಾಗುತ್ತಿದೆ. ಅಲ್ಲಿಯವರೆಗೂ ಹೊಸ ತಂಡಕ್ಕೆ ಕಚೇರಿಯ ಸವಲತ್ತು, ಕಂಪ್ಯೂಟರ್, ಸಾರಿಗೆ ವ್ಯವಸ್ಥೆಗೆ ಸರಕಾರವಂತೂ ಹಣ ಕೊಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಈ ಖರ್ಚು ವೆಚ್ಚದ ನಿಭಾವಣೆಗಾಗಿಯೇ ಜಿಎಸ್‌ಎ ಬೈಡೆನ್‌ರ ಹಸ್ತಾಂತರ ತಂಡಕ್ಕೆ 6 ಮಿಲಿಯನ್ ಡಾಲರ್‌ಗಳಷ್ಟು ಹಣ ಪಾವತಿ ಮಾಡಬಹುದು. ಇನ್ನು ಬೈಡೆನ್ ಕೂಡ ಖಾಸಗಿ ದೇಣಿಗೆ ಪಡೆಯಬಹುದು. ಆದರೆ ಇವೆಲ್ಲವೂ ಪಾರದರ್ಶಕವಾಗಿ ಇರಬೇಕು.
ಸಂಪುಟದ ಪ್ರಮುಖ ಸದಸ್ಯರನ್ನು ಘೋಷಿಸಿದ ಬೈಡೆನ್
ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವ ಸಮಯದಲ್ಲೇ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ, ರಾಷ್ಟ್ರೀಯ ಗುಪ್ತಚರ ವಿಭಾಗ, ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ, ರಾಷ್ಟ್ರೀಯ ಭದ್ರತಾ ಸಲಹೆಕಾರ ಮತ್ತು ಹವಾಮಾನ
ಬದಲಾವಣೆ ತಂಡದ ವಿಶೇಷ ರಾಯಭಾರಿಗಳ ಹೆಸರನ್ನು ಘೋಷಿಸಿದ್ದಾರೆ. ಹೀಗೆ ನಿಯೋಜಿತರಾಗಿರುವವರೆಲ್ಲ ಈಗಾಗಲೇ ಸಕ್ರಿಯರಾಗಿದ್ದಾರೆ.
ಹೊರನಡೆಯುವವರ
ಜವಾಬ್ದಾರಿಯೇನು?
ಹೊರನಡೆಯಲಿರುವ ಶ್ವೇತಭವನದ ತಂಡದ ಕೆಲಸವೆಂದರೆ, ಹೊಸ ತಂಡಕ್ಕೆ ಎಲ್ಲ ರೀತಿಯಿಂದಲೂ ಸಹಕರಿಸುವುದು, ರಾಷ್ಟ್ರೀಯ ಭದ್ರತೆಯ ವಿಚಾರಗಳನ್ನು, ಗೌಪ್ಯ ಮಾಹಿತಿಗಳನ್ನು ಹಂಚಿಕೊಳ್ಳುವುದು. ಈ ವಿಚಾರದಲ್ಲಿ ಬುಷ್ ಆಡಳಿತವನ್ನು ಪರಿಣತರು ತುಂಬಾ ಶ್ಲಾ ಸುತ್ತಾರೆ. ಒಬಾಮಾ ಅವರಿಗೆ ಅಧಿಕಾರ ಹಸ್ತಾಂತರಿಸುವುದಕ್ಕೂ ಮುನ್ನ ಬುಷ್ ಒಬಾಮಾರ ತಂಡಕ್ಕೆ ಬಹಳ ಸಹಕರಿಸಿದ್ದರಂತೆ. ಆದರೆ, ಇದೇ ರೀತಿಯ ಸಹಕಾರ ಟ್ರಂಪ್‌ರಿಂದ ಸಿಗುವುದೇ ಎಂದು ಕಾದುನೋಡಬೇಕಿದೆ. ಹಸ್ತಾಂತರ ಪ್ರಕ್ರಿಯೆಯಲ್ಲಿ ಟ್ರಂಪ್ ಅಡ್ಡಿ ಉಂಟುಮಾಡಿದರೆ ಸಮಸ್ಯೆಗೆ ಸಿಲುಕುತ್ತಾರೆ. ಜಿಎಸ್‌ಎ ಸ್ವತಂತ್ರ ಅಂಗವಾಗಿರುವುದರಿಂದ, ಅದರ ಕಾರ್ಯದಲ್ಲಿ ವಿಘ್ನಪಡಿಸಿದ ಆರೋಪವನ್ನು ಅವರು ಎದುರಿಸಬೇಕಾಗುತ್ತದೆ. ಹಾಗೇನಾದರೂ ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ವಿಘ್ನ ನಿವಾರಣೆ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.