ಇದರಿಂದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ
ಒಂದು ರಾಷ್ಟ್ರ ಒಂದು ಚುನಾವಣೆ
Team Udayavani, Mar 18, 2021, 6:10 AM IST
ಏಕಕಾಲಿಕ ಚುನಾವಣೆಯಲ್ಲಿ ಯಾವುದಾದರೂ ರಾಷ್ಟ್ರೀಯ ಪಕ್ಷ ಲೋಕಸಭೆಯಲ್ಲಿ ಮತ್ತು ಬಹುತೇಕ ವಿಧಾನಸಭೆಗಳಲ್ಲಿ ಬಹುಮತ ಸಾಧಿಸಿದರೆ, ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ರಾಷ್ಟ್ರಪತಿ ರೂಪದ ಆಳ್ವಿಕೆಗೆ ನಾಂದಿಯಾಗುವುದಿಲ್ಲವೆ? ಆದ್ದರಿಂದ ಏಕಕಾಲಿಕ ಚುನಾವಣೆಗಳು ಸಂಯುಕ್ತ ವ್ಯವಸ್ಥೆಗೆ ಭಾರೀ ಕೊಡಲು ಪೆಟ್ಟು ನೀಡುತ್ತವೆ.
ಕೇಂದ್ರ ಸರಕಾರ “ಒಂದು ರಾಷ್ಟ್ರ ಒಂದು ಚುನಾವಣೆ’ ಎನ್ನುವ ಮಂತ್ರದ ಮೇಲೆ ದೇಶದಲ್ಲಿ ಲೋಕಸಭೆಗೆ ಮತ್ತು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಬಯಸಿ, ಈ ಬಗ್ಗೆ ದೇಶದಲ್ಲಿ ಕಾನೂನು ತಜ್ಞರ, ರಾಜಕೀಯ ಪಂಡಿತರ ಮತ್ತು ಮತದಾರರ ಅನಿಸಿಕೆಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.
ಇಂತಹ ಒಂದು ಮಹತ್ವದ ವಿಚಾರ ಕೇವಲ “ಒಂದು ರಾಷ್ಟ್ರ ಒಂದು ಪಡಿತರ’ ಅಥವಾ “ಒಂದು ರಾಷ್ಟ್ರ ಒಂದು ಸ್ಪರ್ಧಾತ್ಮಕ ಪರೀಕ್ಷೆ’ ಎಂದು ಹೇಳುವಷ್ಟು ಸುಲಭವಲ್ಲ. ಈ ವಿಷಯದಲ್ಲಿ ಹಲವು ಸಾಧಕ-ಬಾಧಕಗಳಿವೆ ಮತ್ತು ಅತೀ ಸೂಕ್ಷ್ಮವಾಗಿ ಅರಿಯಬೇಕಾದ ಅಂಶಗಳಿವೆ. ಭಾರತ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಹೊಸತೇನಲ್ಲ. 1952, 1957, 1962 ಹಾಗೂ 1967ರಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳಿಗೆ ಚುನಾವಣೆ ನಡೆಸಲಾಗಿದೆ. ಈ ಎಲ್ಲ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಬಹುಮತ ಗಳಿಸಿತಲ್ಲದೆ, ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಆದರೆ 1959ರಲ್ಲಿ ಈ ಪರಿಪಾಠವನ್ನು ಮೊದಲ ಬಾರಿಗೆ ಅಂದಿನ ಕೇಂದ್ರ ಸರಕಾರ ರಾಜ್ಯಾಂಗದ 356 ಕಲಂ ಬಳಸಿ ಕೇರಳದಲ್ಲಿನ ಇಎಂಎಸ್ ನಂಬೂದಿರಿಪಾಡ್ ಅವರ ನೇತೃತ್ವದಲ್ಲಿನ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸುವುದರೊಂದಿಗೆ ಮುರಿಯಿತು. ಅನಂತರ ಕೇರಳ ವಿಧಾನಸಭೆಗೆ 1960ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಬಲ ಕುಗ್ಗಲು ತೊಡಗಿದಾಗ 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಲ, ಒಡಿಶಾ, ಅಂದಿನ ಮದ್ರಾಸ್, ಕೇರಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ಭಾರತೀಯ ಕ್ರಾಂತಿದಳ, ಸೋಶಲಿಸ್ಟ್ ಪಕ್ಷಗಳು, ಸ್ವತಂತ್ರ ಪಕ್ಷ, ಜನಸಂಘ ಮತ್ತು ಕಾಂಗ್ರೆಸ್‌ನಿಂದ ಪಕ್ಷಾಂತರಿಗಳನ್ನು ಒಳಗೊಂಡ ಸರಕಾರ ರಚನೆಯಾದವು. ಆದರೆ ಪಕ್ಷಾಂತರಿಗಳ ಹಾವಳಿಯಿಂದ ಈ ಸರಕಾರಗಳು ಬಹಳ ಕಾಲ ಉಳಿಯಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ 1985ರಲ್ಲಿ ತರಲಾದ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ದೇಶದಲ್ಲಿ ಪಕ್ಷಾಂತರ ಅವಾಂತರ ಒಂದು ತಹಬಂದಿಗೆ ಬಂದಿದೆ. ಆದರೂ ಜಾಣ ಪಕ್ಷಾಂತರಿಗಳು ಪಕ್ಷಬೇಧವಿಲ್ಲದೆ, ನುರಿತ ಮತ್ತು ಅರಿತ ಕಾನೂನುತಜ್ಞರ ಸಹಾಯದಿಂದ ಪಕ್ಷಾಂತರ ಹೊಂದಿ ತಮ್ಮ ಸ್ವಾರ್ಥದ ಇಚ್ಛೆ, ಬಯಕೆ ಮತ್ತು ರಾಜಕೀಯ ಹಂಬಲಗಳನ್ನು ಮತ್ತು ತೆವಲುಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.
ಇದು ಪ್ರಪಂಚದ ಎಲ್ಲ ದೇಶಗಳಲ್ಲಿ ವಿಧಿವತ್ತಾಗಿ ನಡೆಯುತ್ತಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಮಂತ್ರ ಘೋಷಣೆಗೆ ಕೇಂದ್ರ ಚುನಾವಣ ಆಯೋಗದಿಂದ, ಅದೇ ರೀತಿ ಕಾನೂನು ಆಯೋಗದಿಂದ ಹಾಗೂ ನಾಚಿ ಯಪ್ಪನ್ ನೇತೃತ್ವದ ಲೋಕಸಭಾ ಸ್ಥಾಯಿ ಸಮಿತಿಗಳಿಂದ ಒತ್ತು ಸಿಕ್ಕಿದೆ. ಅಲ್ಲದೆ ಈ ಬಗ್ಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ವಿಷಯದ ಬಗ್ಗೆ ವ್ಯಾಪಕವಾಗಿ ವಿವಿಧ ಪಕ್ಷಗಳೊಂದಿಗೆ ಚರ್ಚಿಸಿದ್ದಾರೆ.
ದೇಶದಲ್ಲಿ ಏಕಕಾಲಿಕ ಚುನಾವಣೆ ಬಗ್ಗೆ ಪರ-ವಿರೋಧವಾಗಿ ಸಮರ್ಥನೆ ಮಾಡುವವರು ಇದ್ದಾರೆ. ಪರವಾಗಿರುವವರ ಅಂಶಗಳೆಂದರೆ, ಏಕಕಾಲದ ಚುನಾವಣೆಯಿಂದ ಸರಕಾರದ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಚುನಾವಣೆ ಆಯೋಗವು ಜಾರಿಗೆ ತರುವ ಚುನಾವಣ ನೀತಿ ಸಂಹಿತೆಯಿಂದ ಸರಾಸರಿ 3 ತಿಂಗಳ ಕಾಲ ನಿಂತು ಹೋಗುವ ಮೂಲ ಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ಅನುಷ್ಠಾನಗೊಳ್ಳುತ್ತವೆ ಹಾಗೂ ಚುನಾವಣೆಯಲ್ಲಿ ಕಪ್ಪು ಹಣ ಬಳಸಿ, ನಡೆಸುವ ಚುನಾವಣ ಅವ್ಯವಹಾರ ನಿಂತು ಹೋಗುತ್ತದೆ. ಅಲ್ಲದೆ ಸರಕಾರದ ಯಂತ್ರಗಳಾದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಏಕಕಾಲಿಕ ಚುನಾವಣೆ ನಡೆಸಿದಲ್ಲಿ, ತಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದು ಈ ರೀತಿ ವಾದವನ್ನು ಮಂಡಿಸುತ್ತಾರೆ.
ಏಕಕಾಲಿಕ ಚುನಾವಣೆ ವಿರುದ್ಧ ವಾದ ಮಂಡಿಸುವವರು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಬೇರೆ ಬೇರೆ ವಿಚಾರ ಮತ್ತು ಸಮಸ್ಯೆಗಳ ಆಧಾರದ ಮೇಲೆ ಎದುರಿಸಬೇಕು. ಈ ಚುನಾವಣೆಗಳನ್ನು ಒಂದಕ್ಕೊಂದು ಹೋಲಿಸುವುದು ಅಸಾಧ್ಯ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳೊಂದಿಗೆ ಚುನಾವಣ ವೆಚ್ಚ ಮತ್ತು ತಂತ್ರಗಳಿಗೆ ಸರಿಸಮನಾಗಿ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಏಕಕಾಲ ಚುನಾವಣೆಯಲ್ಲಿ ಫಲಿತಾಂಶಗಳ ಘೋಷಣೆ ಹಲವು ದಿನಗಳಿಗೆ ವಿಸ್ತರಿಸಬೇಕಾಗುತ್ತದೆ. ದೇಶದಲ್ಲಿನ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಬೇಕಾಗುವ ಸಂಪನ್ಮೂಲ, ಸಿಬಂದಿ ಮತ್ತು ಇವಿಎಂಗಳ ಅಗತ್ಯದ ಬಗ್ಗೆ ಯೋಚಿಸಬೇಕು ಎಂದು ವಾದಿಸುತ್ತಾರೆ. ಇದಲ್ಲದೆ ಭಾರತದ ರಾಜ್ಯಾಂಗದ ಕಲಂ 83, 85, 172, 174 ಮತ್ತು 356ಕ್ಕೆ ತಿದ್ದುಪಡಿ ತಂದಲ್ಲಿ ರಾಜ್ಯಾಂಗದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಸನ್ನಿವೇಶಗಳಿವೆ. 1951ರ ಜನಪ್ರತಿನಿಧಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಸಹ ಬೇಕಾಗುತ್ತದೆ ಎನ್ನುವ ವಾದಗಳನ್ನು ಮಂಡಿಸುತ್ತಾರೆ.
ಈ ಎಲ್ಲ ವಾದ-ವಿವಾದಗಳನ್ನು ವಿಶ್ಲೇಷಿಸಿದರೆ ಏಕಕಾಲದ ಚುನಾವಣೆ ಅಷ್ಟೇನು ಸುಲಭ ಸಾಧ್ಯ ಕಾರ್ಯವಲ್ಲ. ಇಂತಹ ವಿಶೇಷ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು, ದಿಲ್ಲಿ ದರ್ಬಾರ್‌ನಿಂದ ದೂರ ಉಳಿದಿರುವ ರಾಜ್ಯಗಳು ದೇಶದ ಐಕ್ಯತೆ ಮತ್ತು ಅಖಂಡತೆಗೆ ಬದ್ಧರಾಗುವರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದು ವೇಳೆ ಲೋಕಸಭೆಗೆ ಮಧ್ಯಾಂತರ ಚುನಾವಣೆ ನಡೆಸಬೇಕಾದ ಸನ್ನಿವೇಶ ಒದಗಿಬಂದರೆ, 31 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿಧಾನಸಭೆಗಳ ಅವಧಿಗೆ ಭಂಗವಾಗುವುದಿಲ್ಲವೆ?
ಏಕಕಾಲಿಕ ಚುನಾವಣೆಯಲ್ಲಿ ಸಾಮಾನ್ಯವಾಗಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡುವುದರಿಂದ ಪ್ರಾದೇಶಿಕ ಪಕ್ಷಗಳ ಏಳಿಗೆಗೆ ಮತ್ತು ಬೆಳವಣಿಗೆಗೆ ಧಕ್ಕೆ ಉಂಟಾ ಗುತ್ತದೆ. ಅಲ್ಲದೆ, ಪ್ರಸಕ್ತ ಸರಕಾರದ “ಒಂದು ರಾಷ್ಟ್ರ ಒಂದು ಭಾಷೆ’ ಎನ್ನುವ ಮತ್ತೂಂದು ಮಂತ್ರವನ್ನು ಘೋಷಿಸುತ್ತಿದ್ದು, ಪ್ರಾದೇಶಿಕತೆಯ ಅಸ್ತಿತ್ವ, ನಡೆ, ನುಡಿ, ಜಲ- ನೆಲಗಳಿಗೆ ಸಂಬಂಧಿಸಿದ ವಿಷಯಗಳಿಗೆ ಮನ್ನಣೆ ಇಲ್ಲದೆ, ಧಕ್ಕೆಯುಂಟಾಗುತ್ತದೆ. ರಾಜ್ಯಾಂಗದಲ್ಲಿರುವ ವಿಭಿನ್ನತೆಯಲ್ಲಿ ಸಾಮರಸ್ಯ ಎನ್ನುವ ಹೇಳಿಕೆ ಪೊಳ್ಳು ಆಗುತ್ತದೆ.
ಏಕಕಾಲಿಕ ಚುನಾವಣೆಯಲ್ಲಿ ಯಾವುದಾದರೂ ರಾಷ್ಟ್ರೀಯ ಪಕ್ಷ ಲೋಕಸಭೆಯಲ್ಲಿ ಮತ್ತು ದೇಶದ ಬಹುತೇಕ ವಿಧಾನಸಭೆಗಳಲ್ಲಿ ಬಹುಮತ ಸಾಧಿಸಿದರೆ, ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ರಾಷ್ಟ್ರಪತಿ ರೂಪದ ಆಳ್ವಿಕೆಗೆ ನಾಂದಿಯಾಗುವುದಿಲ್ಲವೆ? ಆದ್ದರಿಂದ ಏಕಕಾಲಿಕ ಚುನಾವಣೆಗಳು ರಾಜ್ಯಾಂಗದಲ್ಲಿನ ಸಂಯುಕ್ತ ವ್ಯವಸ್ಥೆಗೆ ಭಾರೀ ಕೊಡಲು ಪೆಟ್ಟು ನೀಡುತ್ತದೆ.
ಆದ್ದರಿಂದ ಏಕಕಾಲಿಕ ಚುನಾವಣೆಗೆ ದೇಶ ಪರಿಪಕ್ವವಾಗಿಲ್ಲ. ನಮ್ಮ ದೇಶ ಹಳ್ಳಿಗಳ ನಾಡು. ಪ್ರಜಾತಂತ್ರ ಇನ್ನೂ ವೃದ್ಧಿ ಹೊಂದುತ್ತಿದ್ದು, ಮತದಾರ ಪ್ರಬುದ್ಧನಾಗಿ, ದೇಶದಲ್ಲಿ ಪ್ರಜಾಪ್ರಭುತ್ವ ನಡೆಸುವ ನಾಯಕರ ಸಾಮರ್ಥ್ಯ ನೋಡಿ ಮುಂದಿನ ದಿನಗಳಲ್ಲಿ ನಿರ್ಣಯಿಸಲಾಗುವುದು. ಅಲ್ಲಿಯ ವರೆಗೆ ಚಿಂತನ-ಮಂಥನ ನಡೆಯಲಿ. ಸದ್ಯಕ್ಕೆ ಏಕಕಾಲಿಕ ಚುನಾವಣೆ ಅನಗತ್ಯ. ಅದರಂತೆ ಭಾರತದ ರಾಜ್ಯಾಂಗಕ್ಕೆ ತಿದ್ದುಪಡಿ ಅನಗತ್ಯ ಮತ್ತು ಅನವಶ್ಯಕ.
– ಕೆ.ಎ. ತಿಪ್ಪೇಸ್ವಾಮಿ, ಜೆಡಿಎಸ್ ವಿಧಾನ ಪರಿಷತ್ತಿನ ಸದಸ್ಯರು, ನಿವೃತ್ತ ಮಾಹಿತಿ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.