Paris Olympics: ಪದಕ ಬೇಟೆಗೆ ಭಾರತ ಭಾರೀ ತಯಾರಿ!: ಒಂದಿಷ್ಟು ಮಾಹಿತಿ ಇಲ್ಲಿದೆ…
Team Udayavani, Jul 23, 2024, 8:57 AM IST
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಸಕಲ ಸಿದ್ಧತೆ ನಡೆಸಿದ್ದು, ಈ ಬಾರಿ ಟೋಕಿಯೊ ಒಲಿಂಪಿಕ್ಸ್ ದಾಖಲೆಯನ್ನೂ ಮೀರಿಸುವ ಗುರಿಯನ್ನು ಕ್ರೀಡಾಪಟುಗಳು ಹೊಂದಿದ್ದಾರೆ. ಈ ಕ್ರೀಡಾಕೂಟಕ್ಕೆ ಭಾರತ ಯಾವ ರೀತಿ ಸಿದ್ಧತೆ ನಡೆಸಿದೆ? ಕ್ರೀಡಾಪಟುಗಳ ಆಯ್ಕೆ, ವ್ಯವಸ್ಥೆ, ತರಬೇತಿ, ಸರಕಾರದಿಂದ ಸಿಕ್ಕ ನೆರವು ಸೇರಿ ಒಂದಿಷ್ಟು ಮಾಹಿತಿ ಇಲ್ಲಿದೆ.
ಕಠಿನ ತರಬೇತಿಯಲ್ಲಿ ನಿರತರಾದ ಕ್ರೀಡಾಪಟುಗಳು
ನೀರಜ್ ಚೋಪ್ರಾ ಚಿನ್ನದ ಹುಡುಗ ನೀರಜ್ ಟರ್ಕಿಯಲ್ಲಿನ ಗ್ಲೋರಿಯಾ ತರಬೇತಿ ಕೇಂದ್ರದಲ್ಲಿ ಇದ್ದು, ಈ ಬಾರಿ 90 ಮೀ.ವರೆಗೆ ತಮ್ಮ ಜಾವೆಲಿನ್ ಎಸೆದು ಚಿನ್ನ ತಮ್ಮದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.
ಪಿ.ವಿ.ಸಿಂಧು: ಸಿಂಧು ಈ ಬಾರಿ ಚಿನ್ನವನ್ನು ಗುರಿಯಾಗಿಸಿ, ಜರ್ಮನಿಯ ಸಾಬ್ರೂìಕೆನ್‌ನಲ್ಲಿರುವ ಹರ್ಮನ್ ನ್ಯೂಬರ್ಗರ್ ನ್ಪೋರ್ಟ್ಸ್ ಸ್ಕೂಲ್‌ನಲ್ಲಿ ತಯಾರಿ ನಡೆಸುತ್ತಿದ್ದಾರೆ.
ಮನು ಭಾಕರ್: 19ರ ಶೂಟರ್ ಮನು ಬಾಕರ್ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಕ್ರೋವೇಶಿಯಾದ ಝಗ್ರೇಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನಿಖಾತ್ ಝರೀನ್: ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಸದ್ಯ ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬಜರಂಗ್ ಪೂನಿಯಾ: ಫ್ರೀಸ್ಟೈಲ್ ಕುಸ್ತಿಪಟು ಬಜರಂಗ್ ಪೂನಿಯಾ 65 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಪ್ರಸ್ತುತ ರಷ್ಯಾದ ವ್ಲಾಡಿಕಾವ್‌ಕಾಜ್‌ನಲಿ ತರಬೇತಿ ಪಡೆಯುತ್ತಿದ್ದಾರೆ.
ಮಣಿಕಾ ಬಾತ್ರಾ: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತೆ ಮಣಿಕಾ ಬಾತ್ರಾ ಈಗಾಗಲೇ ತಯಾರಿ ಆರಂಭಿ ಸಿದ್ದಾರೆ. ಪ್ರಸ್ತುತ ಪುಣೆಯ ಎಸ್‌ಪಿ ಕಾಲೇಜಿನ ಇಂಡಿಯಾ ಖೇಲೆಗಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಶಿವಪಾಲ್ ಸಿಂಗ್: ಜಾವೆಲಿನ್ ಥ್ರೋನಲ್ಲಿ ಭಾರತದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬರಾದ ಶಿವಪಾಲ್ ಸಿಂಗ್ ಪ್ರಸ್ತುತ ಪಟಿಯಾಲಾದ ನೇತಾಜಿ ಸುಭಾಷ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 26 ವರ್ಷದ ಟ್ರ್ಯಾಕ್ ಮತ್ತು ಫೀಲ್ಡ್ ಆ್ಯತ್ಲೀಟ್ ಇತ್ತೀಚೆಗೆ ಗಾಯಗೊಂಡು ಚೇತರಿಕೆ ಕಾಣುತ್ತಿದ್ದಾರೆ.
ಭಾರತದಿಂದ 117 ಮಂದಿ ಕ್ರೀಡಾಪಟುಗಳು ಭಾಗಿ
ಈ ಬಾರಿಯ ಒಲಿಂಪಿಕ್ಸ್‌ಗೆ 117 ಮಂದಿ ಕೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಇದು ಟೋಕಿಯೊ ಒಲಿಂಪಿಕ್ಸ್ ಅನಂತರದ ಅತೀದೊಡ್ಡ ತಂಡವಾಗಿದೆ. ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 121 ಮಂದಿ ಭಾರತೀಯ ಕ್ರೀಡಾಳುಗಳು ಸ್ಪರ್ಧಿಸಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ಗೆ 117 ಸ್ಪರ್ಧಿಗಳು ಹಾಗೂ ಅವರಿಗೆ 140 ಮಂದಿ ಸಹಾಯಕ ಸಿಬಂದಿಯನ್ನು ಕಳುಹಿಸಲು ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಒಟ್ಟು 16 ವಿಭಾಗಗಳಲ್ಲಿ ಭಾರತೀಯರು ಸ್ಪರ್ಧಿಸಲಿ¨ªಾರೆ. 2024ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್ ಸಂಘಟನ ಸಮಿತಿಯ ಮಾನದಂಡಗಳ ಪ್ರಕಾರ ಕ್ರೀಡಾ ಗ್ರಾಮದಲ್ಲಿ ಉಳಿಯಲು ಅನುಮತಿಸುವ ಸಿಬಂದಿ ಮಿತಿ 67. ಕ್ರೀಡಾಪಟುಗಳ ಅಗತ್ಯತೆಗಳನ್ನು ಪೂರೈಸಲು, ಹೆಚ್ಚುವರಿ ತರಬೇತುದಾರರು ಮತ್ತು ಇತರ ಸಹಾಯಕ ಸಿಬಂದಿ ಸೇರಿ 72 ಜನರಿಗೆ ಸರಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದ್ದು, ಅವರ ವಾಸ್ತವ್ಯಕ್ಕಾಗಿ ಕ್ರೀಡಾ ಗ್ರಾಮದ ಹೊರಗಿನ ಹೊಟೇಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ಹೇಗೆ?
ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಆ್ಯತ್ಲೀಟ್‌ಗಳು ವಿಶ್ವ ಆ್ಯತ್ಲೆಟಿಕ್ಸ್‌ನ ಶ್ರೇಯಾಂಕ ಪಟ್ಟಿಗಳಲ್ಲಿ ಸ್ಥಾನ ಪಡೆದಿದ್ದರೆ ನೇರವಾಗಿ ಒಲಿಂಪಿಕ್ಸ್‌ಗೆ ಸ್ಪರ್ಧಿಸುವ ಅರ್ಹತೆಯನ್ನು ಆಟಗಾರರು ಪಡೆಯುತ್ತಾರೆ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಭಾರತೀಯ ಆ್ಯತ್ಲೆಟಿಕ್ಸ್ ಒಕ್ಕೂಟ ನೀಡಿರುವ ಮಾರ್ಗಸೂಚಿಯ ಪ್ರಕಾರ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ತಾರಾ ಕ್ರೀಡಾಪಟುಗಳು ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಶ್ರೇಯಾಂಕ ಪಡೆಯುವುದರಿಂದ ಅವರು ನೇರವಾಗಿ ಸ್ಪರ್ಧಿಸಬಹುದು. ಆದರೆ ಯಾವುದೇ ಅರ್ಹತೆಯನ್ನೂ ಮೀರಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿದೆ.
ತಾರಾ ಕ್ರೀಡಾಳುಗಳಿಗೆ ಹೆಚ್ಚು ಅನುದಾನ ಪೂರೈಕೆ
ಕಳೆದ ಆವೃತ್ತಿಯಲ್ಲಿಯ ಪ್ರದರ್ಶನದ ಮೇರೆಗೆ ನೀರಜ್ ಚೋಪ್ರಾ, ಸಾತ್ವಿಕ್-ಚಿರಾಗ್, ಪಿ.ವಿ.ಸಿಂಧು ಮತ್ತಿತರ ತಾರಾ ಕ್ರೀಡಾಪಟುಗಳ ತರಬೇತಿಗಾಗಿ ಹೆಚ್ಚಿನ ಹಣ ನೀಡಲಾಗಿದೆ. ಆರ್ಥಿಕ ಬೆಂಬಲದೊಂದಿಗೆ ಭಾರತೀಯ ಕ್ರೀಡಾಪಟುಗಳು ಹೊಸ ದಾಖಲೆ ನಿರ್ಮಿಸಲು ಸಜ್ಜಾಗುತ್ತಿ¨ªಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ ಸೇರಿದಂತೆ 7 ಪದಕಗಳನ್ನು ಗೆದ್ದು 48ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ ಹೆಚ್ಚಿನ ನಿರೀಕ್ಷೆ ಹೊಂದಿದ್ದು, ಒಂದು ಅಂಕಿಯಲ್ಲಿರುವ ಪದಕಗಳ ಸಂಖ್ಯೆಯನ್ನು ಎರಡಂಕಿಗೆ ಏರಿಸಲು ತಯಾರಿ ನಡೆಸಿದೆ.
ಆಟಗಾರರಿಗೆ ಭಾರೀ ಆರ್ಥಿಕ ಬೆಂಬಲ
ಒಲಿಂಪಿಕ್ಸ್‌ಗಾಗಿ ಕೇಂದ್ರ ಸರಕಾರದ ಜತೆಗೆ ಬಿಸಿಸಿಐ ಕೂಡ ಆರ್ಥಿಕ ನೆರವು ನೀಡಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ 8.5 ಕೋಟಿ ರೂ.ಗಳಷ್ಟು ಸಹಾಯ ಮಾಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇತ್ತ ಕರ್ನಾಟಕದಿಂದ 9 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲಿದ್ದು, ಅವರಿಗೆ ತಲಾ 5 ಲಕ್ಷ ರೂ.ಗಳನ್ನು ಪ್ರೋತ್ಸಾಹಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ್ದಾರೆ.
ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ
ಭಾರತ ಸರಕಾರ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ ಯೋಜನೆಯ ಅಡಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲಿರುವ ಭಾರತೀಯ ಕ್ರೀಡಾಪಟುಗಳ ತರಬೇತಿಗಾಗಿ ದಾಖಲೆಯ 470 ಕೋಟಿ ರೂ. ಹೂಡಿಕೆ ಮಾಡಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ(ಟಿಒಪಿಎಸ್) ಅಡಿಯಲ್ಲಿ ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ 5.38 ಕೋಟಿ ರೂ. ನೀಡಲಾಗಿತ್ತು. ಅದಕ್ಕೆ ಹೋಲಿಸಿದರೆ ಇದು ದಾಖಲೆಯ ಮೊತ್ತವಾಗಿದೆ.
ಯಾವ್ಯಾವ ವಿಭಾಗದಲ್ಲಿ ಎಷ್ಟು ಆಟಗಾರರು
ಆ್ಯತ್ಲೆಟಿಕ್ಸ್- 29
ಶೂಟಿಂಗ್- 21
ಹಾಕಿ – 19
ಟೇಬಲ್ ಟೆನಿಸ್- 8
ಬ್ಯಾಡ್ಮಿಂಟನ್-7
ಆರ್ಚರಿ-6
ಬಾಕ್ಸಿಂಗ್-6
ಕುಸ್ತಿ-6
ಗಾಲ್ಫ್ -4
ಟೆನಿಸ್-3
ಈಜು-2
ಸೇಯ್ಲಿಂಗ್- 2
ಈಕ್ವೆಸ್ಟ್ರಿಯನ್-1
ಜೂಡೋ-1
ರೋಯಿಂಗ್-1
ವೇಯ್ಟ್ ಲಿಫ್ಟಿಂಗ್-1
ಯಾವ ಕ್ರೀಡೆಗೆ ಎಷ್ಟು ಅನುದಾನ
ಆ್ಯತ್ಲೆಟಿಕ್ಸ್- 96.08 ಕೋಟಿ
ಬ್ಯಾಡ್ಮಿಂಟನ್- 72.02 ಕೋಟಿ
ಬಾಕ್ಸಿಂಗ್ – 60.93 ಕೋಟಿ
ಶೂಟಿಂಗ್- 60.42 ಕೋಟಿ
ಹಾಕಿ – 41.29 ಕೋಟಿ
ಬಿಲ್ಲುಗಾರಿಕೆ – 39.18 ಕೋಟಿ
ಕುಸ್ತಿ- 37.80 ಕೋಟಿ
ವೇಯ್ಟ್ ಲಿಫ್ಟಿಂಗ್ – 26.98 ಕೋಟಿ
ಮಾಹಿತಿ: ತೇಜಸ್ವಿನಿ ಸಿ. ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.