Puthige Swamiji ; ಜಗತ್ತಿನ ವಿವಿಧೆಡೆ 15 ಕೃಷ್ಣಮಂದಿರದ ಸ್ಥಾಪನೆ,108ರ ಗುರಿ
ಪುತ್ತಿಗೆ ಶ್ರೀಗಳ ಸಾಗರೋತ್ತರ ಸಾಧನೆ
Team Udayavani, Jan 15, 2024, 6:45 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಚತುರ್ಥ ಪರ್ಯಾಯ ಪೂಜಾದೀಕ್ಷಿತ ರಾಗಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು 1997ರಲ್ಲಿ ವಿದೇಶಕ್ಕೆ ಮೊತ್ತ ಮೊದಲು ತೆರಳಿದರು. 1998ರಲ್ಲಿಯೂ ಅಮೆರಿಕ ದ ವಿವಿಧೆಡೆ ಪ್ರವಾಸ ಮಾಡಿದರು. 2000ನೆಯ ಇಸವಿ ಬಳಿಕ ಅವರ ಪರಿಕಲ್ಪನೆಗೆ ಸ್ಪಷ್ಟ ದಿಕ್ಕು ತೋರಿತು ಎಂದು ಭಾವಿಸಬಹುದು.
ವಿದೇಶಯಾತ್ರೆಗೆ ಸುದೀರ್ಘ 25 ವರ್ಷಗಳು ಸಲುವ ಈ ಹೊತ್ತಿಗೆ ವಿವಿಧ ದೇಶಗಳಲ್ಲಿ ಒಟ್ಟು 15 ಶ್ರೀಕೃಷ್ಣ ಮಂದಿರಗಳನ್ನು ಸ್ಥಾಪಿಸಿದ್ದಾರೆ. ಅಮೆರಿಕ ದಲ್ಲಿ 11, ಕೆನಡ, ಲಂಡನ್‌ನಲ್ಲಿ ತಲಾ ಒಂದು, ಆಸ್ಟ್ರೇಲಿಯಾದಲ್ಲಿ ಎರಡು ಮಂದಿರಗಳು ಕಾರ್ಯಾಚರಿಸುತ್ತಿವೆ. ನ್ಯೂಜಿಲ್ಯಾಂಡ್, ಸ್ವಿಜರ್‌ಲ್ಯಾಂಡ್, ನೆದರ್ಲೆಂಡ್ ಮೊದಲಾದೆಡೆ ತಾತ್ಕಾಲಿಕ ಸಂಸ್ಕಾರ, ಸಂಸ್ಕೃತಿ ಕೇಂದ್ರಗಳಿವೆ. ಮುಂದೆ ಜಗತ್ತಿನ ವಿವಿಧೆಡೆ 108 ಶ್ರೀಕೃಷ್ಣ ಮಂದಿರ ನಿರ್ಮಿಸುವ ಕನಸು ಹೊತ್ತಿದ್ದಾರೆ.
ಸ್ಥಾಪಿಸಿದ ಮಂದಿರಗಳ ಹೆಸರು ಒಂದೋ ಶ್ರೀಕೃಷ್ಣ ವೃಂದಾವನ ಅಥವಾ ಶ್ರೀವೆಂಕಟಕೃಷ್ಣ ವೃಂದಾವನ. ಅಮೆರಿಕ ದ ನ್ಯೂಜೆರ್ಸಿಯ ಎಡಿಸನ್, ಸ್ಯಾನೋಜೆ, ಹ್ಯೂಸ್ಟನ್‌ನಲ್ಲಿ ಶ್ರೀಕೃಷ್ಣ ವೃಂದಾವನ ಗಳಿದ್ದರೆ, ಫೀನಿಕ್ಸ್, ಲಾಸ್‌ಏಂಜಲೀಸ್‌ನಲ್ಲಿ ಶ್ರೀವೆಂಕಟಕೃಷ್ಣ ವೃಂದಾವನಗಳಿವೆ. ಫೀನಿಕ್ಸ್‌ನಲ್ಲಿ ಸ್ಥಾಪನೆಯಾದ ಮಂದಿರ ಮೊತ್ತ ಮೊದಲನೆಯದು.
ಎಡಿಸನ್‌ನಲ್ಲಿ ನೃತ್ಯಸೇವೆ
ಒಂದೊಂದು ಶಾಖೆಗಳಲ್ಲಿಯೂ ಅಲ್ಲಲ್ಲಿನ ಭೌಗೋಳಿಕ ಸನ್ನಿವೇಶಕ್ಕೆ ತಕ್ಕುದಾಗಿ ಅಲ್ಲಲ್ಲಿ ವಿಶೇಷ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತಿದೆ. ನ್ಯೂಜೆರ್ಸಿಯಲ್ಲಿ (ಎಡಿಸನ್) ವರ್ಷ ಕ್ಕೊಂದು ಬಾರಿ ವಿಶೇಷ ನೃತ್ಯೋತ್ಸವವನ್ನು ನಡೆಸಲಾಗುತ್ತಿದ್ದು ನೃತ್ಯಪಟುಗಳು ನೃತ್ಯಸೇವೆಯನ್ನು ಸಮರ್ಪಿಸುತ್ತಾರೆ. ಬಲ್ಬ್ ಕಂಡು ಹಿಡಿದ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್‌ನಿಂದಾಗಿ ಈ ಪ್ರದೇಶಕ್ಕೆ ಎಡಿಸನ್ ಎಂಬ ಹೆಸರು ಬಂತು. ಇಂತಹ ಆಧುನಿಕ ಇತಿಹಾಸದ ನಗರದ ಈ ದೇಗುಲದಲ್ಲಿ ಎರಡು ಬಾರಿ ಶ್ರೀನಿವಾಸ ಕಲ್ಯಾಣೋತ್ಸವ, ಗುರುರಾಘವೇಂದ್ರರು, ಪುರಂದರ, ವಿಜಯದಾ
ಸರೇ ಮೊದಲಾದವರ ಆರಾಧನೆ, ಮಧ್ವರು, ಕನಕದಾಸರೇ ಮೊದಲಾ ದವರ ಜಯಂತಿ ಉತ್ಸವಗಳನ್ನು ನಡೆಸಲಾಗುತ್ತಿದೆ.
ಫೀನಿಕ್ಸ್‌ನಲ್ಲಿ ಹವನಗಳು
ಫೀನಿಕ್ಸ್ ಮಠದಲ್ಲಿ ಹವನಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ಅಥರ್ವಸಹಸ್ರಶೀರ್ಷ ಹೋಮ, ಯಜುಸ್ಸಂಹಿತಾಯಾಗ, ನಾಗತನು ತರ್ಪಣಗಳು ನಡೆದಿವೆ. ಸ್ಯಾನೋಜೆ ಮಠದಲ್ಲಿ ಪ್ರತಿ ಸೋಮವಾರ ರುದ್ರಪಾರಾಯಣ, ರುದ್ರಾಭಿಷೇಕಗಳು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಲಾಸ್‌ಏಂಜಲೀಸ್ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪ್ರೌಢಶಿಕ್ಷಣ ಮುಗಿದು ವೃತ್ತಿ ಶಿಕ್ಷಣ ಕೋರ್ಸ್‌ಗೆ ಹೋಗುವವರಿಗೆ ವೃತ್ತಿ ಮಾರ್ಗದರ್ಶನ ಶಿಬಿರವನ್ನು ನಡೆಸಲಾಗುತ್ತಿದೆ. ಶಿಶು ಮಂದಿರ (ಕಿಂಡರ್ ಗಾರ್ಡನ್) ನಡೆಸಲಾಗುತ್ತಿದೆ.
ಹ್ಯೂಸ್ಟನ್‌ನಲ್ಲಿ ಗಣೇಶೋತ್ಸವ
ಹ್ಯೂಸ್ಟನ್‌ನಲ್ಲಿ ಕರಾವಳಿಯವರು ಹೆಚ್ಚಿಗೆ ಇರುವುದರಿಂದ ಗಣೇಶ ಚತುರ್ಥಿಯಂದು ಅದ್ದೂರಿ ಗಣೇಶೋತ್ಸವ, ಶುಕ್ರವಾರದಂದು ಚಂಡಿಕಾ ಹೋಮ, ಬಯಲು ಯಕ್ಷಗಾನವನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಹಿರಿಯ ವಿದ್ವಾಂಸರಾಗಿದ್ದ ಡಾ| ಬನ್ನಂಜೆ ಗೋವಿಂದಾಚಾರ್ಯರ ಅಪೇಕ್ಷೆಯಂತೆ 32 ಅಡಿ ಎತ್ತರದ ಮಧ್ವಾಚಾರ್ಯರ ಶಿಲಾ ವಿಗ್ರಹ ಸ್ಥಾಪನೆಗೆ ಭೂಮಿಪೂಜೆ ನಡೆಸಲಾಗಿದೆ. ಈ ಪ್ರದೇಶಕ್ಕೆ ದೇವಸ್ಥಾನಗಳ ಬೀದಿ (ಟೆಂಪಲ್ ಸ್ಟ್ರೀಟ್) ಎಂಬ ಹೆಸರು ಇದೆ. ಹೀಗಾಗಿ ಬೌದ್ಧ ಮಂದಿರ, ಚಿನ್ಮಯ ಮಿಷನ್ ಮಠ, ಅಷ್ಟಲಕ್ಷ್ಮೀ ಮಂದಿರಗಳ ಸಾಲಿನಲ್ಲಿ ಉಡುಪಿಯ ಮಠವೂ ಸೇರಿರುವುದು ಅರ್ಥಪೂರ್ಣವಾಗಿದೆ.
ಹುಟ್ಟೂರ ಸಂಸ್ಕೃತಿ ಹತ್ತಿರದಲ್ಲಿ
ಎಲ್ಲ ಮಂದಿರಗಳಲ್ಲಿ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ, ಅಮಾವಾಸ್ಯೆ ದಿನ ದುರ್ಗಾ ನಮಸ್ಕಾರ, ಚೌತಿಯಂದು ಗಣ ಹೋಮ, ಗುರುವಾರದಂದು ಶ್ರೀರಾಘ ವೇಂದ್ರ ಅಷ್ಟೋತ್ತರ, ರಾಯರಿಗೆ ಹಸ್ತೋದಕ, ಶನಿವಾರ ಶ್ರೀನಿವಾಸ, ಶ್ರೀಕೃಷ್ಣ ಮುಖ್ಯಪ್ರಾಣರಿಗೆ ಅಭಿಷೇಕ, ಸೋಮವಾರ ರುದ್ರಪಾರಾಯಣ, ರುದ್ರಾಭಿಷೇಕ, ನವರಾತ್ರಿ, ಗಣೇಶ ಚತುರ್ಥಿ, ದೀಪಾವಳಿ, ಯುಗಾದಿ ಮೊದಲಾದ ಧಾರ್ಮಿಕ ಚಟುವಟಿಕೆ ಗಳನ್ನು ಎಲ್ಲ ಶಾಖೆಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಮತ್ತು ಆಸುಪಾಸಿನ ಎಲ್ಲರಿಗೆ ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಬಹಳ ವರ್ಷಗಳಿಂದ ಹುಟ್ಟೂರಿನಿಂದ ದೂರ ಉಳಿದವರಿಗೆ ಹುಟ್ಟೂರ ಊಟ, ಧಾರ್ಮಿಕ ಚಟುವಟಿಕೆಯಂತಹ ಸಂಸ್ಕೃತಿಯನ್ನು ಹತ್ತಿರದಲ್ಲಿ ಅನುಭವಿ ಸುವುದು ಅತ್ಯಪೂರ್ವ. ಅಮೆರಿಕದಲ್ಲಿ ಈಗ ನಿರ್ಮಿಸಿರುವ ಶಾಖೆಗಳು ಒಂದು ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಲಯದಲ್ಲಿವೆ. ಅಂದರೆ ಆ ವ್ಯಾಪ್ತಿಯ ಕನ್ನಡಿಗರು, ಭಾರತೀಯರು ಸಂಸ್ಕಾರ ಕೇಂದ್ರದಿಂದ ದೂರ ಉಳಿಯಬಾರದು ಎಂಬ ಬಯಕೆ ಶ್ರೀಗಳದ್ದು. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯನ್ನು ಇನ್ನಷ್ಟು ಹಿರಿದುಗೊಳಿಸುವ ಇರಾದೆ ಇದೆ.
ಧಾರ್ಮಿಕದ ಜತೆ ಸಾಮಾಜಿಕ ಸೇವೆ
ಆಸ್ಟ್ರೇಲಿಯಾದ ಮೆಲ್ಬರ್ನ್ ಮಠದ ವತಿಯಿಂದ ಕೊರೊನಾ ಕಾಲಘಟ್ಟದಲ್ಲಿ ಆಸ್ಪತ್ರೆಗಳಿಗೆ ಉಚಿತವಾಗಿ ಆಹಾರವನ್ನು ಒದಗಿಸಿರುವುದು, ಕಾಡ್ಗಿಚ್ಚು ಸಂಭವಿಸಿ ಅಪಾರ ನಷ್ಟ ಉಂಟಾಗಿರುವಾಗ ಸಂತ್ರಸ್ತರಿಗೆ ನೆರವಾದದ್ದು ದಾಖಲಾ ರ್ಹವಾಗಿದೆ. ಇವರ ಸೇವಾ ಮನೋ ಭಾವವನ್ನು ಕಂಡ ಆಸ್ಟ್ರೇಲಿಯಾ ಸರಕಾರ ಮಠದ ವಿವಿಧ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ 5 ಲಕ್ಷ ಡಾಲರ್ ಮೊತ್ತವನ್ನು ಮಂಜೂರು ಮಾಡಿದೆ.
ಊರು ಬಿಟ್ಟು ವಿದೇಶಗಳಲ್ಲಿ ನೆಲೆಸಿರುವ ಜನರಿಗೆ ಸಹಜವಾಗಿ ತಮ್ಮ ಮೂಲ ಸಂಸ್ಕೃತಿ ಕೈತಪ್ಪಿ ಹೋಗುತ್ತವೆ.
ಅವರು ಯಾವುದೇ ದೇಶದಲ್ಲಿದ್ದರೂ ಸಂಸ್ಕೃತಿಯ ಬೇರು ಕಡಿತವಾಗಬಾರ ದೆನ್ನುವುದು ಶ್ರೀಪಾದರ ಸದಿಚ್ಛೆ. ಹೀಗಾಗಿ ಶ್ರೀಪಾದರು ಆಧರಿಸಿದ್ದು ಶ್ರೀಕೃಷ್ಣನ ಭಗವದ್ಗೀತೆಯನ್ನು. ಗೀತೆಯ ಜತೆ ಉಪನಿಷತ್ತು, ಹರಿಕಥಾಮೃತಸಾರ, ಸ್ತೋತ್ರಸಾಹಿತ್ಯಗಳನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ.
ಅಂತ್ಯಕ್ರಿಯೆಗೂ ಸಹಕಾರ
ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನು ಕಾಡಿದ ಕೊರೋನಾ ಸೋಂಕು ಬದುಕಿದ್ದವರಿಗೆ ಸತ್ತವರ ಹೆಸರಿನಲ್ಲೂ ಸಾಕಷ್ಟು ಕಾಡಿತ್ತು. ಆಗ ಪ್ರಯಾಣ ನಿರ್ಬಂಧವಿದ್ದ ಕಾರಣ ಊರಿನಲ್ಲಿ ಸತ್ತರೆ ಅವರ ಬಂಧುಗಳು ವಿದೇಶದಿಂದ ಬರುವಂತಿರಲಿಲ್ಲ. ವಿದೇಶದಲ್ಲಿ ಸತ್ತರೆ ಊರಿನಲ್ಲಿದ್ದವರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭ ವಿದೇಶಗಳಲ್ಲಿದ್ದ ಪುತ್ತಿಗೆ ಮಠದ ಸಿಬಂದಿ ವರ್ಗ ಮರಣೋತ್ತರ ಕರ್ಮಾಂಗಗಳನ್ನು ಮಾಡಿಸುವಲ್ಲಿ ಮುಂದೆ ನಿಂತು ಧೈರ್ಯ ನೀಡಿತು.
ಅಮೆರಿಕದ ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನ ಮಂದಿರ ಆಕರ್ಷಣೀಯ. ಇಲ್ಲಿ ಸಾಲಿಗ್ರಾಮ ಶಿಲೆಯ ಶ್ರೀಕೃಷ್ಣ ಪ್ರತಿಮೆ ಪೂಜೆಗೊಳ್ಳುತ್ತಿದೆ. 30 ಅಡಿಎತ್ತರದ ದಾರು ಮಂದಿರವನ್ನು ಬರ್ಮಾದ ಸಾಗುವಾನಿ ಮರದಿಂದ ನಿರ್ಮಿಸಲಾಗಿದೆ. ಕುಸುರಿ ಕೆಲಸಗಳು ನಯನ ಮನೋಹರವಾಗಿದೆ. ಮೂಡ ಬಿದಿರೆಯ ಹರೀಶ ಆಚಾರ್ಯ ತಂಡ
ದವರು ಕುಸುರಿ ಕೆಲಸಗಳನ್ನು ನಿರ್ವಹಿ ಸಿದ್ದಾರೆ. ಶ್ರೀಕೃಷ್ಣ ವಿಗ್ರಹವನ್ನು ಮುರು ಡೇಶ್ವರದ ಶಿಲ್ಪಿ ರಾಜು ಕಡೆದಿದ್ದಾರೆ.
ಆನ್‌ಲೈನ್ ತರಗತಿ
ವಿವಿಧ ದೇಶಗಳಲ್ಲಿರುವ ಎಲ್ಲ ವಯೋಮಾನದವರು, ಎಲ್ಲ ವರ್ಗದವರು ಪಾಲ್ಗೊಳ್ಳುವಂತಾಗಲು ನಿತ್ಯ ಒಂದು ಗಂಟೆ ಆನ್‌ಲೈನ್ ಮೂಲಕ ಭಗವದ್ಗೀತೆಯ ತರಗತಿಗಳು ಎರಡು ವರ್ಷಗಳಿಂದ ನಡೆಯುತ್ತಿವೆ. ವಿದೇಶಗಳಲ್ಲಿ ನೆಲೆಸಿರುವ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಆನ್‌ಲೈನ್ ಜ್ಞಾನಸತ್ರದಲ್ಲಿ ಕೇಶವರಾವ್ ತಾಡಿಪತ್ರಿ, ಮೀರಾ ತಾಡಪತ್ರಿ, ಜಯಕೃಷ್ಣ ನೆಲಮಂಗಲ, ಪ್ರಸನ್ನಾಚಾರ್ಯ, ಯೋಗೀಂದ್ರ, ಪುತ್ತಿಗೆ ವಿದ್ಯಾಪೀಠದ ಪ್ರಾಂಶುಪಾಲ ಸುನಿಲ್ ಆಚಾರ್ಯ, ಶ್ರೀಪ್ರಸಾದ್ (ಚಲನಚಿತ್ರ ನಟ ಹುಣಸೂರು ಕೃಷ್ಣಮೂರ್ತಿಯವರ ಮಗ) ಉಪನ್ಯಾಸಗಳನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.