ಸರಳ – ಸಾಂಪ್ರದಾಯಿಕ ಪರ್ಯಾಯಕ್ಕೆ ನಮ್ಮ ಆದ್ಯತೆ; ಕೃಷ್ಣಾಪುರ ಶ್ರೀ ಸಂದೇಶ
Team Udayavani, Jan 10, 2022, 6:55 AM IST
ಹಿಂದೆಲ್ಲ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿದ್ದ ಪರ್ಯಾಯ ಪೂಜಾ ಹಸ್ತಾಂತರ ವಿಧಿಯು ಕಾಲಕ್ರಮದಲ್ಲಿ ಭಕ್ತರ ಆಶಯದಂತೆ ದೊಡ್ಡ ಉತ್ಸವದ ಸ್ವರೂಪ ಪಡೆದು ಅದರಂತೆ ಕಳೆದ ಅನೇಕ ವರ್ಷಗಳಿಂದ ಸಕಲ ಜನರು, ಸದ್ಭಕ್ತರು, ಸರಕಾರಗಳ ಸಹಭಾಗಿತ್ವವೂ ದೊರೆತು ವೈಭವದಿಂದ ನಡೆಯುತ್ತಿದೆ.
ವಾಸ್ತವದಲ್ಲಿ ನಾವೂ ಸರಳತೆಯೇ ಸೊಬಗು ಎನ್ನುವ ಚಿಂತನೆಯಂತೆ ಸಾಂಪ್ರದಾಯಿಕ ಆಚರಣೆಯಲ್ಲಿಯೇ ಆಸಕ್ತಿ ಹೊಂದಿದವರು. ಆದರೆ ಭಗವಂತನ ಹೆಸರಲ್ಲಿ ಭಕ್ತರು ಸಂಭ್ರಮಿಸುವುದಾದರೆ ವೈಭವದ ಉತ್ಸವ ನಡೆಯಲಿ ಎಂಬ ಆಶಯದಿಂದ ಈ ಬಾರಿಯ ಪರ್ಯಾಯೋತ್ಸವವೂ ಆ ವೈಭವದಲ್ಲೇ ನಡೆಯಲಿ ಎಂದು ಸಮ್ಮತಿಸಿ¨ªೆವು. ಕಳೆದ ಎರಡು ವರ್ಷಗಳಿಂದ ಜಗತ್ತು ಕಂಡು ಕೇಳರಿಯದ ಭೀಕರ ವ್ಯಾಧಿಯ ಕಾರಣದಿಂದ ಗಂಭೀರ ವಿಪತ್ತನ್ನು ಎದುರಿಸುತ್ತಿದ್ದೇವೆ. ಸಾವಿರಾರು ಜನ ಈ ವ್ಯಾಧಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ. ಅನೇಕರು ಅನಾಥರೂ ಆದರು, ಭಾರತವೂ ಸೇರಿದಂತೆ ಜಗತ್ತು ವಿಪರೀತ ಆರ್ಥಿಕ ಸಂಕಷ್ಟ ಎದುರಿಸುವಂತಾಗಿರುವುದು ತೀರಾ ವಿಷಾದನೀಯ.
ಆದರೆ ಭಗವತ್ಸಂಕಲ್ಪದ ಎದುರು ನಾವು ತೃಣರಷ್ಟೇ. ಒಂದು ಹಂತ ಈ ವ್ಯಾಧಿಯು ಜಗತ್ತಿನಿಂದ ದೂರವಾಗುತ್ತಿದೆ ಎಂಬ ಆಶಾಭಾವನೆ ಮೂಡಿ ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಪುನಃ ಹೊಸ ವಿಕೃತಿಯಾಗಿ ಗೋಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹೊತ್ತಲ್ಲಿ ಮತ್ತೆ ಸರಕಾರಗಳು ವ್ಯಾಧಿಮುಕ್ತಿಗಾಗಿ ಪ್ರಯತ್ನಿಸುತ್ತಿವೆ.
ಆತಂಕದ ಈ ಹೊತ್ತಲ್ಲೂ ಸಂಭ್ರಮಾಚರಣೆ ತರವೇ ಎಂಬ ಪ್ರಶ್ನೆ ಸಹಜವಾದದ್ದೇ. ಈ ಹೊತ್ತಲ್ಲಿ ಈ ಮಹಾವ್ಯಾಧಿಯಿಂದ ಜಗತ್ತನ್ನು ಪಾರುಮಾಡಿ ಲೋಕಕ್ಕೆ ಕ್ಷೇಮ ಸಮೃದ್ಧಿಯನ್ನು ಕರುಣಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವುದು ಮತ್ತು ಆ ನಿಟ್ಟಿನಲ್ಲಿ ಪ್ರವೃತ್ತರಾಗಿರುವ ಸರಕಾರ ಮತ್ತು ಸಾಮಾಜಿಕ ವ್ಯವಸ್ಥೆಯೊಂದಿಗೆ ಸಹಕರಿಸುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಬೇಕು. ಎಲ್ಲವೂ ಒಳಿತಾದರೆ ಸಂಭ್ರಮಿಸಲು ಮುಂದೆಯೂ ಸಮಯ ಸಂದರ್ಭಗಳು ಇದ್ದೇ ಇರುತ್ತವೆ. ಆದ್ದರಿಂದ ಪರ್ಯಾಯೋತ್ಸವದ ಹೊತ್ತಲ್ಲೇ ಸರಕಾರ ನಾಡಿನ ಹಿತಕ್ಕಾಗಿ ಕೈಗೊಳ್ಳುವ ಉಪಕ್ರಮಗಳಿಗೆ ನಾವೆಲ್ಲ ಸಹಕರಿಸಲೇಬೇಕಿದ್ದು, ಅನಿವಾರ್ಯವೂ ಅಗಿದೆ. ತೀರಾ ಸಾಂಪ್ರದಾಯಿಕ ವಿಧಿಗಳಿಗೆ ಒತ್ತು ಕೊಟ್ಟು ಸರಳವಾಗಿ ಈ ಪರ್ಯಾಯೋತ್ಸವವನ್ನು ನಡೆಸುವ ಬಗ್ಗೆ ಸಮಿತಿ ಮಾಡಿರುವ ತೀರ್ಮಾನಕ್ಕೆ ನಾಗರಿಕರು, ಭಕ್ತರು ಎಲ್ಲ ರೀತಿಯ ಸಹಕಾರ ನೀಡಿ ಸಹಕರಿಸುವಂತೆ ಅಪೇಕ್ಷಿಸುತ್ತೇವೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು ಸಮಸ್ತ ಸನ್ಮಂಗಲಾನಿ ಭವಂತು.
-ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕೃಷ್ಣಾಪುರ ಮಠ, ಉಡುಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.