ವಿಶ್ವ ಗೀತಾ ಪರ್ಯಾಯೋತ್ಸವ ; ಸಾಫ್ಟ್ ವೇರ್ ನಿಂದ ಸ್ಪಿರಿಚುವಲ್ ಎಂಜಿನಿಯರಿಂಗ್ ವರೆಗೆ
ಸನ್ಯಾಸಾಶ್ರಮ ಸ್ವೀಕರಿಸುವ ಒಂದು ವಾರದ ಮೊದಲಷ್ಟೇ ತಂದೆ, ತಾಯಿಗೆ ತಿಳಿದದ್ದು
Team Udayavani, Jan 16, 2024, 2:47 PM IST
ಉಡುಪಿ: ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಮೂಲತಃ ಒಬ್ಬ ಸಾಫ್ಟ್ ವೇರ್ ಎಂಜಿನಿಯರ್. ಅವರು ಸ್ವಾಮೀಜಿಯಾಗುವ ಮುನ್ನ ಏಳು ವರ್ಷ ಬೆಂಗಳೂರಿನಲ್ಲಿ ಎಚ್‌ಪಿ, ಕಾಗ್ನಿಜೆಂಟ್, ಎರಿಕ್ಸನ್ ಕಂಪೆನಿಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದವರು. ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಅಷ್ಟಮಠದ ಯತಿಗಳಾಗಿರುವುದು ಇದೇ ಪ್ರಥಮ.
ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯರ ಮೊದಲ ಮಗನೇ ಕಿರಿಯ ಯತಿಯಾಗಿರುವ ಪ್ರಶಾಂತ ಆಚಾರ್ಯ. ಗುರುರಾಜ ಆಚಾರ್ಯರ ಪೂರ್ವಜರು ಕಾಪು ತಾಲೂಕಿನ ಅಡ್ವೆಯವರು. ಆದರೆ ಗುರುರಾಜ ಆಚಾರ್ಯರು ಜೀವನೋಪಾಯಕ್ಕಾಗಿ ಉಡುಪಿ ಕುಂಜಿಬೆಟ್ಟಿನಲ್ಲಿ ಸ್ವಸ್ತಿಕ್ ಹೊಟೇಲ್ ಎಂಬ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಸುಮಾರು 15 ವರ್ಷಗಳಿಂದ ಆರೋಗ್ಯದ ಕಾರಣಕ್ಕಾಗಿ ಹೊಟೇಲ್ ನಡೆಸುವುದನ್ನು ಬಿಟ್ಟರು.
11.8.1989ರಲ್ಲಿ ಜನಿಸಿದ ಪ್ರಶಾಂತ ಆಚಾರ್ಯರು ಇಂದ್ರಾಳಿ ಹೈಸ್ಕೂಲ್, ಅಳಿಕೆ ವಿದ್ಯಾಲಯ, ಮಣಿಪಾಲ ಪ.ಪೂ. ಕಾಲೇಜು, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದರು. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್‌ನಲ್ಲಿ ಬಿಇ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಆಧ್ಯಾತ್ಮದತ್ತ ವಾಲಿ ಬೆಂಗಳೂರು ಬಸವನಗುಡಿಯಲ್ಲಿರುವ ಪುತ್ತಿಗೆ ಮಠದಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಸಂಪರ್ಕಕ್ಕೆ ಬಂದರು.
ಈ ಅಚಾನಕ್ ಸಂಪರ್ಕವೇ ಮುಂದೆ ಮಠಾಧಿಪತಿಯಾಗಲು ಕಾರಣವಾಯಿತು. ಉಡುಪಿಯಲ್ಲಿ ಹುಟ್ಟಿ ಬೆಳೆದ ಪರಿಣಾಮ
ಶ್ರೀಕೃಷ್ಣಮಠ, ಅಷ್ಟಮಠಗಳ ಪರಿಚಯವೂ ಇತ್ತು. ತಮ್ಮೊಳಗೆ ಇದ್ದ ಅಧ್ಯಾತ್ಮ ಆಸಕ್ತಿಯನ್ನು ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಬಳಿ ಹೇಳಿಕೊಳ್ಳುತ್ತಲೂ ಇದ್ದರು. ಲೌಕಿಕ ಶಿಕ್ಷಣದ ಜತೆ ಧಾರ್ಮಿಕ ಶಿಕ್ಷಣವನ್ನೂ ಪಡೆಯುತ್ತಿದ್ದರು.
ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕೆಂದು ಪ್ರಶಾಂತರು ಪ್ರಾರ್ಥಿಸಿದಾಗಲೂ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರಶಾಂತರ ಗುಣನಡತೆಗಳನ್ನು ಗಮನಿಸುತ್ತಿದ್ದ ಗುರುಗಳು ಜಾತಕ ಪರಿಶೀಲನೆ ಮಾಡಿ ಕೊನೆಗೆ 22.04.2019ರಂದು ಪುತ್ತಿಗೆ ಮೂಲಮಠದಲ್ಲಿ ಸನ್ಯಾಸಾಶ್ರಮ ನೀಡಿ ಶ್ರೀಸುಶ್ರೀಂದ್ರತೀರ್ಥರೆಂದು ನಾಮಕರಣ ಮಾಡಿದರು. ಆಶ್ರಮ ಸ್ವೀಕರಿಸುವಾಗ ಇವರಿಗೆ 29 ವರ್ಷ.
ಸನ್ಯಾಸಾಶ್ರಮ ಸ್ವೀಕರಿಸುವ ಒಂದು ವಾರದ ಮೊದಲಷ್ಟೇ ತಂದೆ, ತಾಯಿಗೆ ತಿಳಿದದ್ದು. “ಅವರಿಗೆ ಶ್ರೀಕೃಷ್ಣನ ಪೂಜೆ ಮಾಡುವ ಆಸಕ್ತಿ ಇತ್ತು. ಆದ್ದರಿಂದ ನಾವೇನೂ ಆಕ್ಷೇಪಿಸಲಿಲ್ಲ’ ಎನ್ನುತ್ತಾರೆ ಗುರುರಾಜ ಆಚಾರ್ಯರು. ಸನ್ಯಾಸ ಸ್ವೀಕರಿಸಿದ ದಿನದಿಂದ ಐದು ವರ್ಷ ಎಲ್ಲಿಗೂ ಹೋಗದೆ ಪುತ್ತಿಗೆ ವಿದ್ಯಾಪೀಠದಲ್ಲಿಯೇ ಶಾಸ್ತ್ರಾಧ್ಯಯನ ನಡೆಸಿದರು. ಇದೀಗ ಗುರುಗಳು ಪರ್ಯಾಯ ಪೂರ್ವಭಾವಿ ಸಂಚಾರ ನಡೆಸುವಾಗ ಅವರಿಗೆ ಸಹಾಯಕರಾಗಿ ಸಂಚಾರ ನಡೆಸಿದ್ದಾರೆ. ಕಿರಿಯ ಶ್ರೀಗಳು ಸಂಪೂರ್ಣ ಗುರುಗಳ ಆಶ್ರಯದಲ್ಲಿ, ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.