ರಣಭೀಕರ ಅಂಫಾನ್ : ಒಡಿಶಾ, ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಿದ ಚಂಡ ಮಾರುತ !
ನವದೆಹಲಿ: ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಎಂದೇ ಕುಖ್ಯಾತಿ ಗಳಿಸಿಕೊಂಡಿರುವ “ಸೂಪರ್ ಸೈಕ್ಲೋನ್’ ಅಂಫಾನ್ ಚಂಡಮಾರುತ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಭಾರೀ ಹಾನಿಯನ್ನೇ ಸೃಷ್ಟಿಸಿದೆ. ಭಾರತದಲ್ಲಿ ಇಬ್ಬರು, ಬಾಂಗ್ಲಾದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 5,500 ಮನೆಗಳಿಗೆ ಹಾನಿಯಾಗಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಪಶ್ಚಿಮ ಬಂಗಾಳದ ದಿಘಾದಲ್ಲಿ ಅಪ್ಪಳಿಸಿದ ಚಂಡಮಾರುತ ನಂತರದಲ್ಲಿ, ಇನ್ನಷ್ಟು ವೇಗ ಪಡೆದುಕೊಂಡಿತು. ಸಂಜೆ ವೇಳೆಗೆ 190 ಕಿ.ಮೀ. ವೇಗ ಪಡೆದುಕೊಂಡ ಪರಿಣಾಮ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಪಾರ ಹಾನಿಯಾಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿದ್ದರೆ, ಇನ್ನೂ ಕೆಲವೆಡೆ ಮರಗಳೇ ಬುಡಮೇಲಾಗಿವೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.