

ಮಂಗಳೂರು: ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರವಿವಾರ ಮಂಗಳೂರು ಹೊರವಲಯದ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಮಠದ ಗುಡ್ಡೆ (ಬಂಗ್ಲೆ ಗುಡ್ಡೆ )ಯಲ್ಲಿ ಸಂಭವಿಸಿದೆ. ಗುರುಪುರ ತಾರಿಕರಿಯ ನಿವಾಸಿ ಶರೀಫ್- ಶಾಹಿದಾ ದಂಪತಿಯ ಪುತ್ರ ಸರ್ಫಾನ್ (16) ಮತ್ತು ಪುತ್ರಿ ಸಹಲಾ (10) ಮೃತಪಟ್ಟವರು. ಶಾಹಿದಾ (36) ಗಾಯಗೊಂಡಿದ್ದಾರೆ. 10ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮಣ್ಣು ಕುಸಿತದಿಂದಾಗಿ ಮಹಮ್ಮದ್ ಮತ್ತು ಅಶ್ರಫ್ ಅವರ ಮನೆಗಳು ಸಂಪೂರ್ಣ ನೆಲಸಮಗೊಂಡಿದ್ದು ನಾಲ್ಕಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಎರಡು ದಿನಗಳಿಂದ ನಿರಂತರ ಮಳೆ ಸುರಿದ ಪರಿಣಾಮ ಮಹಮ್ಮದ್ ಅವರ ಮನೆ ಪಕ್ಕದ ಗುಡ್ಡ ರವಿವಾರ ಮಧ್ಯಾಹ್ನ ಕುಸಿಯಲಾರಂಭಿಸಿತು. ಈ ವೇಳೆ ಮಕ್ಕಳು ಸಹಿತ 11 ಮಂದಿ ಮನೆಯಲ್ಲಿದ್ದರು. ತತ್ಕ್ಷಣ ಹೊರಗೋಡಿ ಬಂದು ಒಬ್ಬರನ್ನೊಬ್ಬರು ರಕ್ಷಿಸಲು ಯತ್ನಿಸಿದರು. ಅಷ್ಟರಲ್ಲಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದರು. ಅರ್ಧ ತಾಸಿನ ಬಳಿಕ ಮತ್ತೆ ಗುಡ್ಡ ಕುಸಿದು ಅಶ್ರಫ್ ಅವರ ಮನೆಯೂ ನೆಲಸಮಗೊಂಡಿತು. ಆದರೆ ಅಶ್ರಫ್ ಮನೆಯವರು ಅಷ್ಟರಲ್ಲೇ ತೆರಳಿದ್ದರಿಂದ ಪಾರಾದರು.
You seem to have an Ad Blocker on.
To continue reading, please turn it off or whitelist Udayavani.