ಇಂಧನ ಬೆಲೆ ಏರಿಕೆಯ ಪೆಟ್ಟು ಜನರ ಕಷ್ಟ ಕಾಣದೇ?
ಕೋವಿಡ್-19ನ ನೇರ ಹಾಗೂ ಪರೋಕ್ಷ ಪರಿಣಾಮಗಳು ದೇಶವಾಸಿಗಳನ್ನು ಕಂಗೆಡಿಸಿವೆ. ಅದರಲ್ಲೂ ಲಾಕ್ಡೌನ್ ಸಮಯದಲ್ಲಿ ಆರ್ಥಿಕತೆಯ ಮೇಲೆ ಬಿದ್ದ ಹೊರೆಯು ಅಪಾರವಾದದ್ದು. ಈ ಪೆಟ್ಟಿನಿಂದ ದೇಶವು ಚೇತರಿಸಿಕೊಳ್ಳಲು ಸಿದ್ಧವಾಗುತ್ತಿರುವ ವೇಳೆಯಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಆಗುತ್ತಿರುವ ಹೆಚ್ಚಳವು ಸಾರ್ವಜನಿಕರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಕಳೆದ 20 ದಿನಗಳಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ನ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಆತಂಕ ಹುಟ್ಟಿಸುತ್ತಿರುವ ಸಂಗತಿಯೆಂದರೆ, ಕೆಲವು ರಾಜ್ಯಗಳಲ್ಲಂತೂ ಡೀಸೆಲ್ನ ಬೆಲೆ ಪೆಟ್ರೋಲನ್ನೂ ಹಿಂದಿಕ್ಕಿರುವುದು! ಹಾಗೆ ನೋಡಿದರೆ, ಜಾಗತಿಕ ಮಾರುಕಟ್ಟೆಯಲ್ಲೇನೂ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿಲ್ಲ. ಹೀಗಿರುವಾಗ, ದೇಶೀಯ ಮಾರುಕಟ್ಟೆಯಲ್ಲೇಕೆ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.