10 ಸಾವಿರ ಮೀರಿದ ಕೇಸ್, ಸಾವಿನ ಸಂಖ್ಯೆ ಹೆಚ್ಚಳ ; ನಿರ್ಬಂಧಕ್ಕಾಗಿ ಹೆಚ್ಚುತ್ತಿದೆ ಒತ್ತಡ !
ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಸಡಿಲ ನಂತರ ಕೋವಿಡ್ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಸೂಕ್ತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 10,118 ಕ್ಕೆ ಏರಿದ್ದು ಸಾವಿನ ಸಂಖ್ಯೆಯೂ 164ಕ್ಕೆ ತಲುಪಿದೆ. ಬುಧವಾರ ಪ್ರಕರಣಗಳ ಸಂಖ್ಯೆ 397, ಸಾವಿನ ಸಂಖ್ಯೆ 14 ವರದಿಯಾಗಿರುವುದು ಖುದ್ದು ಸರ್ಕಾರಕ್ಕೂ ಆತಂಕ ಮೂಡಿಸಿದೆ. ಈ ಮಧ್ಯೆ ಪೊಲೀಸ್ ಠಾಣೆಗಳು, ಮಾರುಕಟ್ಟೆ , ವ್ಯಾಪಾರ ಸ್ಥಳಗಳು ಸೀಲ್ಡೌನ್ ಆಗಿರುವುದು; ರಾಜ್ಯದಲ್ಲಿ ಕನಕಪುರ, ಮಾಗಡಿ, ಶಿಡ್ಲಘಟ್ಟಗಳಲ್ಲಿ ಸ್ಥಳೀಯ ವರ್ತಕರೇ ಸ್ವಯಂ ಲಾಕ್ಡೌನ್
ತೀರ್ಮಾನ ಕೈಗೊಂಡಿದ್ದು, ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಮನಗರ, ಚನ್ನಪಟ್ಟಣಗಳನ್ನು ಲಾಕ್ಡೌನ್
ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹಾಗೆಯೇ ಬೆಂಗಳೂರು ನಗರದ ಲಾಕ್ಡೌನ್ಗೂ ಒತ್ತಡ ಹೆಚ್ಚತೊಡಗಿದೆ. ಆಡಳಿತಾರೂಢ ಬಿಜೆಪಿಯ ಮತ್ತಷ್ಟು ಶಾಸಕರು ಇದೇ ಅಭಿಪ್ರಾಯ ಹೊಂದಿರುವುದು ಸರ್ಕಾರ ಚಿಂತಿಸುವಂತೆ ಮಾಡಿದೆ.