ದೋಸ್ತಿ ಸಲುವಾಗಿ ಕಾಂಪಿಟೇಷನ್ ನಡದಂಗೈತಿ!
Team Udayavani, Sep 19, 2021, 9:31 AM IST
ಹಬ್ಬಕ್ಕ ಹೋಗಿದ್ದ ಯಜಮಾನ್ತಿ ತಿಂಗಳಾದ ಮ್ಯಾಲ ವಾಪಸ್ ಬಂದು ಮನ್ಯಾಗ ಏನೇನ್ ವ್ಯತ್ಯಾಸ ಆಗೇತಿ ಅಂತೇಳಿ ಎಲ್ಲಾನೂ ಒಂದ ರೀತಿ ಸಿಬಿಐ, ಇಡಿಯಾರು ದಾಳಿ ಮಾಡಿದಾಗ ಸರ್ಚ್ ಮಾಡ್ತಾರಲ್ಲ ಹಂಗ ಎಲ್ಲಾನೂ ಕ್ಲೀನ್ ಮಾಡು ನೆಪದಾಗ ಮೂಲ್ಯಾಗ ಕಸಾ ಬಿದ್ದಿದ್ದು, ಗ್ಯಾಸ್ ಸ್ಟೋ ಮ್ಯಾಲ್ ಹಾಲ್ ಉಕ್ಕಿಸಿದ್ದು
ನೋಡಿ ವಟಾ ವಟಾ ಅನಕೋಂತನ ಕ್ಲೀನ್ ಮಾಡಾಕತ್ತಿದ್ಲು. ನಾವು ಅದೆಲ್ಲಾನೂ ಕೇಳ್ಸಿದ್ರೂ ಕೇಳಿಸಿದಂಗ ಪ್ರಧಾನಿ ಮೋದಿ ಸಾಹೇಬ್ರಂಗ ಸುಮ್ಮನ ನನ್ನ ಕೆಲಸಾ ನಾ ಮಾಡ್ಕೊಂತ ಕುಂತೆ.
ಅಕಿನೂ ಅಷ್ಟಕ್ಕ ಸುಮ್ನಾಗಲಿಲ್ಲ ರಾಹುಲ್ ಗಾಂಧಿಯಂಗ ಇರೋ ಬರೋದೆಲ್ಲ ಹುಡುಕಿ ಅರೋಪ ಮಾಡೂದು ನಿಲ್ಲಿಸಲಿಲ್ಲಾ. ವಿರೋಧ ಮಾಡಾರು ಹುಟ್ಟಿಕೊಂಡಷ್ಟು ಸಮರ್ಥನೆ ಮಾಡಾರು ಜಾಸ್ತಿ ಹುಟ್ಕೊತಾರಂತ. ಪ್ರಧಾನಿ ಮೋದಿ ಸಾಹೇಬ್ರನ್ನ ಕಾಂಗ್ರೆಸ್ ವಿರೋಧ ಮಾಡಿದಷ್ಟು ಅವರು ಹೆಚ್ಚು ಬಲಿಷ್ಠ ಆಗಾಕತ್ತಾರು. ಕಾಂಗ್ರೆಸ್ ನ್ಯಾರು ವಿರೋಧ ಮಾಡ್ತಾರು ಅನ್ನೂ ಕಾರಣಕ್ಕ ಬಿಜೆಪ್ಯಾರು, ಅವರ ಪರಿವಾರದಾರು ಎಲ್ಲಾರೂ ಮನಿಮಾರು ಬಿಟ್ಟು ಕಾಂಗ್ರೆಸ್‌ನ್ಯಾರ ವಿರುದ್ದ ತಿರುಗಿ ಬೀಳಾಕ ತಲಿಕಟ್ಕೊಂಡು ನಿಂತಿರತಾರು.
ದೇಶದಾಗ ಪೆಟ್ರೋಲ್ ಡಿಸೇಲ್ ರೇಟ್ ಸೇರಿದಂಗ ಅಡಗಿ ಮನಿಗಿ ಬೇಕಾಗಿರೋ ಎಲ್ಲಾ ಸಾಮಾನ್ ರೇಟೂ ಗೊತ್ತಿಲ್ಲದಂಗ ಏರಿ ಬಿಟ್ಟಾವು. ನಾವು ಕಾಲೇಜಿನ್ಯಾಗ ಇದ್ದಾಗ ಲೀಟರ್‌ಗೆ ಹತ್ತು ಪೈಸಾ ಜಾಸ್ತಿ ಮಾಡಿದ್ರಂದ್ರ ಅವತ್ತು ನಮ್ಮೂರು ಬಸ್ ಬಂದ್ ಆಗೋದು ಆ ರೀತಿ ಪ್ರತಿಭಟನೆ ಮಾಡಾರು. ಈಗ ತಿಂಗಳದಾಗ ಐವತ್ತು ರೂಪಾಯಿ ಹೆಚ್ಚಾದ್ರೂ ದೇಶ ಸೇವೆ ಹೆಸರ ಮ್ಯಾಲ್ ಮಂದಿ ಗಾಡಿಗಿ ಎಣ್ಣಿ ಹಾಕಿಸೆ ಹಾಕ್ಸಾಕತ್ತೇತಿ. ಗಾಡಿಗೋಳು ನೋಡಿದ್ರ ಯಾಡ್ ದಿನಕ್ಕೊಮ್ಮೆ ನಡು ದಾರ್ಯಾಗನ ಟೋಂ ಟೋಂ ಅಂದ ಬಿಡ್ತಾವು.
ಬ್ಯಾಳಿ, ಎಣ್ಣಿ, ಸೊಬಕಾರ, ಚಾ ಪುಡಿ ರೇಟ್ ಯಾವಾಗ ಏರ್ಯಾವೋ ಗೊತ್ತ ಆಗುದಿಲ್ಲ. ಆ ಕಂಪನ್ಯಾರು, ಹತ್ತು ಪೈಸಾ ಕಡಿಮೆ ಮಾಡಿದ್ರ ಇರೋ ಬರೋ ಟಿವ್ಯಾಗ ಅಡ್ವಟೇಜ್‌ಮೆಂಟ್ ಕೊಟ್ಟು, ಹತ್ತು ಪೈಸಾ ಕಡಿಮೆ ಮಾಡೇವಿ ಅಂತ ಬಡ್ಕೊತಾರು. ಐವತ್ತು ರೂಪಾಯಿಗಟ್ಟಲೇ ಹೆಚ್ಚಿಗಿ ಮಾಡಿದ್ದು ಯಾರಿಗೂ ಗೊತ್ತ ಆಗೂದಿಲ್ಲ.
ಅವರದೂ ಒಂದ್ ರೀತಿ ಹೆಣ್ಮಕ್ಕಳು ತವರು ಮನಿಂದ ಏನರ ಸಣ್ಣ ಅರಬಿ ತಂದ್ರೂ ಊರ ಮಂದಿಗೆಲ್ಲ ತೋರಿಸಿಕ್ಕೊಂಡು ತವರು ಮನಿಂದ ತಂದಿದ್ದು, ನಮ್ಮಪ್ಪಾ ಕೊಡ್ಸಿದ್ದು ಅಂತ ಹೇಳಿ ಪ್ರಚಾರ ತೊಗೊಂಡಂಗ ಹತ್ತು ಪೈಸಾ ಇಳಿಸಿದ್ದು ಪ್ರಚಾರ ತೊಗೊತಾರು. ಅದ ಗಂಡನ ಮನಿ ಕಡಿಂದ ತವರು ಮನಿಗೆ ಪಾರ್ಸಲ್ ಆಗಿರೋದ್ರ ಬಗ್ಗೆ ಯಾರಿಗೂ ಗೊತ್ತ ಇರುದಿಲ್ಲ. ಹಂಗಾಗೇತಿ ಈ ಬೆಲೆ ಏರಿಕೆ ಪರಿಸ್ಥಿತಿ.
ಒಂದು ಪ್ರತಿಪಕ್ಷಕ್ಕ ಸರ್ಕಾರದ ವಿರುದ್ಧ ಹೋರಾಡಾಕ ಇದಕ್ಕಿಂತ ದೊಡ್ಡ ಅಸ್ತ್ರ ಬೇಕಾಗಿಲ್ಲ ಅನಸ್ತೈತಿ. ಆದ್ರ ದೇಶದಾಗ ರಾಹುಲ್ ಗಾಂಧಿನ ಮುಂದಿಟ್ಕೊಂಡು ಹೋರಾಟ ಮಾಡಾಕ ಅವರ ಪಕ್ಷದಾಗ ಕೆಲವರಿಗೆ ಮನಸಿದ್ದಂಗಿಲ್ಲಾ. ರಾಜ್ಯದಾಗ ಸಿದ್ದರಾಮಯ್ಯ ಡಿಕೆಶಿ ಪ್ರತಿಭಟನೆ ಮಾಡಾಕ ಯಾರ್ ಚಕಡಿ ಹೊಡಿಬೇಕು ಅಂತ ಕಚ್ಚಾಡುದ್ರಾಗ, ಅವರ ಎಮ್ಮೆಲ್ಲೇಗೋಳ ಕೆಳಗ ಬಿದ್ದು ನಡಾ ಮುರಕೊಳ್ಳುವಂಗ ಆಗೇತಿ.
ಡಿ.ಕೆ.ಶಿವಕುಮಾರ್ ಈಗೀನ ಪರಿಸ್ಥಿತಿಗಿಂತ ಮುಂದಿನ ಎಲೆಕ್ಷನ್ ಬಗ್ಗೇನ ಜಾಸ್ತಿ ತಲಿ ಕೆಡಿಸಿಕೊಂಡಂಗ ಕಾಣತೈತಿ. ಹೆಂಗರ ಮಾಡಿ ಒಮ್ಮೆ ಸಿಎಂ ಆಗಬೇಕು ಅಂತೇಳಿ, ಇರೋ ಬರಾರ್ನೆಲ್ಲಾ ಕರದು ಚಾ ಕುಡಿಸಿ ಫೋಟೊ ತಗಸ್ಕೊಳ್ಳಾಕತ್ತಾರು. ಮೆಜಾರಿಟಿ ಬರಲಿಲ್ಲಂದ್ರ ಕಷ್ಟಕ್ಕೇತಿ ಅಂತೇಳಿ ಕುಮಾರಸ್ವಾಮಿ ಜೋಡಿ ದೋಸ್ತಿ ಮಾಡಾಕ ಟ್ರೈ ಮಾಡಾಕತ್ತಾರು. ಆದ್ರ ಸಿದ್ದರಾಮಯ್ಯ ಗೌಡರ ಕೂಡ ದೋಸ್ತಿ ಬಿಲ್‌ಕುಲ್ ಆಗೂದಿಲ್ಲ ಅನ್ನಾರಂಗ ಕಾಣತೈತಿ. ತಮಗ ಮುಖ್ಯಮಂತ್ರಿ ಆಗಾಕ ಅವಕಾಶ ಸಿಗದಿದ್ರ ಅವರಿಬ್ಬರ ದೋಸ್ತಿ ಮಾತ್ರ ಕೂಡ ಬಾರದು ಅನ್ನೊ ಲೆಕ್ಕಾಚಾರ ಇದ್ದಂಗ ಕಾಣತೈತಿ. ಅದ್ಕ ಸದನದಾಗ ಬೊಮ್ಮಾಯಿ ಸಾಹೇಬ್ರಿಗೆ ಹುಷಾರಾಗಿರು ನನ್ನಿಂದ ಏನೂ ತೊಂದರೆ ಆಗೂದಿಲ್ಲ. ನಿಮ್ಮಾರ ನಿಮಗ ತೊಂದ್ರಿ ಕೊಡಬೌದು ಅಂತ ಹಳೆ ದೋಸ್ತ್ಗ ಬಹಿರಂಗ ಬೆಂಬಲ ಕೊಟ್ಟಂಗ ಕಾಣತೈತಿ.
ಮನ್ಯಾಗ ಹೆಂಡ್ತಿ ಇದ್ದಾಗ ಹಳೆ ಫ್ರೆಂಡ್ ಕಾಲ್ ಮಾಡಿ, ಇಬ್ಬರೂ ತಾಸ್‌ಗಟ್ಟಲೇ ನಕ್ಕೋಂತ ಮಾತಾಡಿದ್ರ ಹೆಂಡ್ತಿ ಹೊಟ್ಟಿ ಉರಿದ ಇರತೈತಿ? ಸದನದಾಗ ಸಿದ್ದರಾಮಯ್ಯ, ಬೊಮ್ಮಾಯಿ ಸಾಹೇಬ್ರು ಸಾಲ್ ಕೂಲ್ ಆಗಿ ನಡಕೊಳ್ಳಾಕತ್ತಿದ್ದು ನೋಡಿದ್ರ ಮೂಲ ಬಿಜೆಪ್ಯಾರಿಗೆ ಹೊಟ್ಟಿ ಉರದಂಗ ಕಾಣತೈತಿ. ಸ್ವತಃ ಯಡಿಯೂರಪ್ಪ ಅವರಿಗೆ ಸಂಗಟ ಆಗಾಕತ್ತಿದ್ರೂ ಏನೂ ಮಾಡದಂತಾ ಪರಿಸ್ಥಿತಿ ಐತಿ. ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಸೇನಿ ಅನ್ನೋ ಕಾರಣಕ್ಕ ಅವರು ಕೊಟ್ಟಿರೊ ಸರ್ಕಾರಿ ಬಂಗಲೇದಾಗ ಮಕ್ಕಳ್ನ ಕರಕೊಂಡು ಸುಮ್ನ ಕುಂದ್ರುವಂಗ ಆಗೇತಿ.
ಮೋದಿಯವರ್ನ ಪ್ರಧಾನಿ ಮಾಡಾಕ ಬಿಜೆಪಿ ಸೇರೂಬದ್ಲು ಕೆಜೆಪ್ಯಾಗ ಇದ್ದು ಇಪ್ಪತ್ತು ಸೀಟ್ ಗೆದ್ಕೊಂಡಿದ್ರ ಮಗನ ಮಂತ್ರಿ ಸ್ಥಾನಕ್ಕ ಕಸರತ್ತು ಮಾಡೋ ತಲಿಬ್ಯಾನಿನ ಇರತಿರಲಿಲ್ಲ. ವಿಜಯೇಂದ್ರನೂ ಇನ್ನೊಬ್ಬ ಸ್ಟಾಲಿನ್ ಅಥವಾ ಜಗನ್‌ಮೋಹನ್ ರೆಡ್ಡಿ ಆಗಬೌದಿತ್ತು ಅನಸ್ತೈತಿ. ಅಲ್ಲದ ದೊಡ್ಡಗೌಡ್ರ ದೋಸ್ತಿ ಮಾಡಾಕ ಎಲ್ಲಾರೂ ಅವರ ಮರ್ಜಿ ಕಾಯುವಂಗ, ಬಿಜೆಪ್ಯಾರೂ ಯಡಿಯೂರಪ್ಪ ಅವರ ದೋಸ್ತಿಗೆ ಬಾಗಲಾ ಕಾಯು ಪರಿಸ್ಥಿತಿ ಬರತಿತ್ತು ಅನಸ್ತೇತಿ.
ಕುಮಾರಸ್ವಾಮಿ ಸಾಹೇಬ್ರೂ ಯಡಿಯೂರಪ್ಪ ಬಗ್ಗೆ ಸಿಂಪಥಿ ತೋರಸಾಕತ್ತಿದ್ದು ನೋಡಿದ್ರ, ಹಳೆ ದೋಸ್ತಿಗಳ ಲೆಕ್ಕಾಚಾರ ಮುಂದ್ ಬ್ಯಾರೇನ ಆಗುವಂಗ ಕಾಣತೈತಿ. ಎಲ್ಲಾರೂ ಮುಂದಿನ ಸಾರಿ ದೋಸ್ತಿ ಹುಡುಕುದ್ರಾಗ ಬಿಜಿ ಇದ್ದಂಗ ಕಾಣತೈತಿ. ಯಾರ್ ಯಾರಕೂಡ ಏನರ ಮಾಡ್ಕೊಳ್ಳಿ ನಾವು ಬೊಮ್ಮಾಯಿ ಸಾಹೇಬ್ರಂಗ ಎಲ್ಲಾರ ಜೋಡಿನೂ ಹೊಂದ್ಕೊಂಡು ಹೋಗಿ ಬಿಟ್ರ, ಗೌಡ್ರ ದೋಸ್ತಿನೂ ಸಿಗಬೌದು ಕಿರಿಕಿರಿ ಇಲ್ಲಂತ ಸೈಲೆಂಟ್ ಆಗಿ ನನ್ನ ಕೆಲಸ ನಾ ಮಾಡ್ಕೊಂಡು ಸುಮ್ಮನುಳದೆ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.