ರಾಮನಗರದಲ್ಲಿ ನನ್ನ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಅಭಿನಂದನೆ: ಡಿಕೆ ಸುರೇಶ್
ಸಚಿವರ ಭಾಷೆ ಸರಿ ಇರಲಿಲ್ಲ, ಗಂಡಸ್ತನದ ಬಗ್ಗೆ ಬೇಕಾದರೆ ಚರ್ಚೆಗೆ ಬರಲಿ
Team Udayavani, Jan 4, 2022, 2:43 PM IST
ಬೆಂಗಳೂರು : ರಾಮನಗರದಲ್ಲಿ ನಡೆದ ಘಟನೆಯನ್ನಾಧರಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು. ಗಂಡಸಾದವರು ಬನ್ನಿ ಎಂದು ಸವಾಲು ಹಾಕಿದರೆ ಸುಮ್ಮನಿರಲು ಸಾಧ್ಯವೇ ಎಂದು ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರು ಭಾಷಣದಲ್ಲಿ ಬಳಸುತ್ತಿರುವ ಭಾಷೆ, ಶೈಲಿ ಸರಿಯಿಲ್ಲ, ಸಾಕು ಎಂದು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸುತ್ತಿದ್ದರೂ ಅವರು ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಮಾಜಿ ಉಪಮುಖ್ಯಮಂತ್ರಿಯಾಗಿ, ಹಾಲಿ ಮಂತ್ರಿಯಾಗಿ, ಉನ್ನತ ಶಿಕ್ಷಣ ಸಚಿವರಾಗಿ ಅವರು ತಮ್ಮ ಮಾತು, ವರ್ತನೆಯಿಂದ ರಾಜ್ಯದ ಎಲ್ಲ ಯುವ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಮುಂದೆ ಗಂಡಸ್ತನದ ಚರ್ಚೆಗೆ ಬರಬೇಕು ಅಂತಿದ್ದರೆ, ಬರಲಿ. ಡಿ.ಕೆ. ಸುರೇಶ್ ಗೆ ಪಲಾಯನ ಮಾಡುವ ಅನಿವಾರ್ಯತೆ ಇಲ್ಲ. ಮತ್ತೊಮ್ಮೆ ಮಂತ್ರಿಯ ನಡವಳಿಕೆ ಪ್ರಚಾರ ಮಾಡಲು ಮುಂದಾಗಿರುವ ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದರು.
ನಿನ್ನೆಯ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವ್ಯಾಖ್ಯಾನ, ಹೇಳಿಕೆ, ಪ್ರತಿ ಹೇಳಿಕೆ ಕೇಳಿದ್ದೇನೆ. ಒಬ್ಬ ಮಂತ್ರಿ ಅನವಶ್ಯಕವಾಗಿ ಸಭೆ ಹೊರತಾಗಿ ನಾವು ಬಿಜೆಪಿಯವರು, ನಾವು ಮಾಡುವುದೇ ಹೀಗೆ, ಗಂಡಸಾದವರು ಬನ್ನಿ ಎಂದು ಮುಖ್ಯಮಂತ್ರಿಗಳ ಮುಂದೆ ಸವಾಲು ಹಾಕಿದಾಗ ಅದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ? ಇದು ನನಗೆ ಮಾತ್ರ ಹಾಕಿದ ಸವಾಲು ಅಲ್ಲ, ಇಡೀ ರಾಮನಗರ ಜಿಲ್ಲೆಯ ಜನರಿಗೆ ಹಾಕಿದ ಸವಾಲು. ಇದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ, ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅಪಮಾನ. ಇಲ್ಲಿ ಡಿ.ಕೆ. ಸುರೇಶ್ ಎಂಬ ವ್ಯಕ್ತಿ ಕೇವಲ ನೆಪ ಮಾತ್ರ. ಸಚಿವರು ರಾಮನಗರದ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದ್ದಾರೆ. ಆವೇಶ, ತೋಳ್ಬಲ, ಗಂಡಸ್ತನದ ಮಾತು ಸಚಿವರ ಬಾಯಲ್ಲಿ ಯಾಕೆ ಬರುತ್ತದೆ ಎಂದು ಮಾಧ್ಯಮಗಳು, ಬಿಜೆಪಿಯ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಹೇಳಬೇಕು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ಗಂಡಸ್ತನ ಇದೆಯಾ ಎಂದು ಕರೆಯುವುದು ನಿಮ್ಮ ಸಂಸ್ಕೃತಿನಾ? ಬಿಜೆಪಿ ಸಂಸ್ಕಾರನಾ? ಎಂದು ಮಾನ್ಯ ಕಟೀಲ್ ಅವರನ್ನು ಕೇಳಬಯಸುತ್ತೇನೆ. ರಾಮನಗರ ಜಿಲ್ಲೆ ಜನರ ಮುಂದೆ ಆ ರೀತಿ ಮಾತನಾಡುವುದು ಸರಿನಾ? ಅದು ಬಿಜೆಪಿ ಪಕ್ಷದ ಕಾರ್ಯಕ್ರಮ ಅಲ್ಲ, ಸರ್ಕಾರದ ಅಧಿಕೃತ ಕಾರ್ಯಕ್ರಮ. ಮುಖ್ಯಮಂತ್ರಿ ಹಾಗೂ ಆ ಕ್ಷೇತ್ರದ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರ ಮುಂದೆ ಅವರು ಆಡಿದ ಮಾತು ಸರೀನಾ? ಸಿಎಂ ಆಕ್ಷೇಪ ವ್ಯಕ್ತಪಡಿಸಿದಾಗಲೂ ಅವರು ಯಾವ ರೀತಿ ಆವೇಶದಲ್ಲಿ ಮಾತನಾಡಿದ್ದಾರೆ ಎಂದು ರಾಜ್ಯದ ಜನ ನೋಡಿದ್ದಾರೆ. ಮುಖ್ಯಮಂತ್ರಿಗಳು, ಅಲ್ಲಿದ್ದ ಸಚಿವರು, ಶಾಸಕರೂ ನೋಡಿದ್ದಾರೆ ಎಂದರು.
ಹೌದು, ನಾನು ಕ್ಷೇತ್ರದ ಸಂಸತ್ ಸದಸ್ಯನಾಗಿ ಸಚಿವರ ಅನುಚಿತ ಮಾತು ತಡೆಯಲು ಪ್ರಯತ್ನ ಮಾಡಿದೆ. ರಾಮನಗರ ಜಿಲ್ಲೆ ಜನರ ಗೌರವ ಉಳಿಸುವುದು ನನ್ನ ಕರ್ತವ್ಯ. ಸಂಸ್ಕೃತಿ, ಧರ್ಮ ಯಾವುದೂ ಬಿಜೆಪಿ ಮುಂದೆ ಇಲ್ಲ. ಪ್ರಚೋದನಾಕಾರಿ ಹಾಗೂ ಭಾವನಾತ್ಮಕ ವಿಚಾರಗಳಿಗೆ ಒತ್ತು ಕೊಡುವುದು ಬಿಜೆಪಿಯ ಅಜೆಂಡಾ. ಇವೆರಡನ್ನು ಬಿಟ್ಟು ಬೇರೆ ವಿಚಾರ ಅವರಲ್ಲಿ ಇಲ್ಲ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ದೇಶವನ್ನು ಒಡೆದು ಆಳುತ್ತಿದ್ದಾರೆ. ಯುವಕರ ಮನಸ್ಸು ಕೆರಳಿಸುತ್ತಾ ಬಂದಿದ್ದಾರೆ. ಇದು ಅತಿ ಶೀಘ್ರದಲ್ಲೇ ಅಂತ್ಯವಾಗಲಿದೆ.
ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನಗೆ ಕುಮಾರಸ್ವಾಮಿ ಅವರ ಮಾತುಗಳಲ್ಲಿ ನಂಬಿಕೆ ಇಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನನ್ನ ಗಮನ ಏನಿದ್ದರೂ ಜಿಲ್ಲೆಯ ಅಭಿವೃದ್ಧಿ, ಪಕ್ಷದ ವಿಚಾರವಾಗಿಯೇ ಹೊರತು, ಕುಮಾರಸ್ವಾಮಿ ಅವರ ವಿರುದ್ಧವಲ್ಲ. ಕುಮಾರಸ್ವಾಮಿ ಅವರು ಏನು ಹೇಳಿದರೂ ಸಮಯ ಬಂದಾಗ ರಾಜ್ಯದ ಹಾಗೂ ಜಿಲ್ಲೆಯ ಜನ ಉತ್ತರ ನೀಡಲಿದ್ದಾರೆ’ ಎಂದು ಉತ್ತರಿಸಿದರು.
ಒಮಿಕ್ರಾನ್ ಹೆಚ್ಚಾಗುತ್ತಿದ್ದು ಮೇಕೆದಾಟು ಹೋರಾಟ ಹಿಂಪಡೆಯಲು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ ಎಂಬ ಆರೋಗ್ಯ ಸಚಿವರ ಹೇಳಿಕೆಗೆ, ‘ನಾನು ಆರೋಗ್ಯ ಸಚಿವರಿಗೆ ಹೇಳುತ್ತೇನೆ. ಒಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ, ಬಿಜೆಪಿ ದೇಶದಲ್ಲಿ ನಡೆಸುತ್ತಿರುವ ಎಲ್ಲ ರಾಜಕೀಯ ಸಮಾವೇಶ, ರಾಲಿಗಳನ್ನು ನಿಲ್ಲಿಸುವಂತೆ ಮನವಿ ಮಾಡಲಿ’ ಎಂದು ಪ್ರತಿಕ್ರಿಯೆ ನೀಡಿದರು.
ಸೋಂಕು ಹೆಚ್ಚಿದರೆ ಕಾಂಗ್ರೆಸ್ ಹೊಣೆಯಾಗುತ್ತದೆ ಎಂಬ ಹೇಳಿಕೆಗ ಪ್ರತಿಕ್ರಿಯಿಸಿದ ಅವರು, ‘ಈ ದೇಶದಲ್ಲಿ ಸೋಂಕು ಹೆಚ್ಚಿದೆ ಎಂದರೆ ಅದಕ್ಕೆ ಪ್ರಧಾನ ಮಂತ್ರಿಗಳ ರಾಲಿ, ಸಮಾವೇಶ ಕಾರಣ ಎಂದು ನಾನು ಹೇಳುತ್ತೇನೆ’ ಎಂದರು.
ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಈಗಾಗಲೇ ಗುಂಡಾಗಿರಿಯ ಗುತ್ತಿಗೆ ತೆಗೆದುಕೊಂಡಿದ್ದಾರೆ. ಅಶೋಕ್ ಅವರು ನಿನ್ನೆ ಅಶ್ವಥ್ ನಾರಾಯಣ ಅವರ ಶೈಲಿ, ವರ್ತನೆಯನ್ನು ನೋಡಲಿಲ್ಲವೇ? ಅವರಿಗೆ ಅಶ್ವಥ್ ನಾರಾಯಣ ಅವರ ಧಿಮಾಕು ಎಲ್ಲವನ್ನು ತೋರಿಸಿ. ಒಂದು ಹೆಣ್ಣು ಮಗಳು ಅನಿತಾ ಕುಮಾರಸ್ವಾಮಿ ಅವರು ಏನು ಹೇಳಿದರು ಎಂಬುದನ್ನೂ ಅವರು ನೋಡಲಿ. ಅದಕ್ಕೆ ಅಶ್ವಥ್ ನಾರಾಯಣ ಅವರು ಅನಿತಾ ಕುಮಾರಸ್ವಾಮಿಯವರಿಗೆ ಯಾವ ಧಾಟಿಯಲ್ಲಿ ಪ್ರತ್ಯುತ್ತರಿಸಿದರು ಎಂಬುದನ್ನು ನೋಡಲಿ’ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.