ಸ್ವತಂತ್ರ ಭಾರತದಾಗ ಮದುವಿ ಆಗಿರೊ ಗಂಡ್ಸೂರು ನಾವು!
Team Udayavani, Feb 6, 2022, 12:03 PM IST
ವೀಕ್ ಎಂಡ್ ಅಂತೇಳಿ ಯಜಮಾನ್ತಿ ಕರಕೊಂಡು ಬೈಕ್‌ನ್ಯಾಗ ಹಿಂದ್ ಕುಂದ್ರಿಸಿಕೊಂಡು ಸುಮ್ನ ಒಂದ್ ರೌಂಡ್ ಹೊಡದ ಬರೂನು ಅಂತ ಹೊಂಟಿದ್ದೆ. ರೋಡಿನ್ಯಾಗ ತಗ್ಗು ಇದ್ದಿದ್ದು ನೋಡಿ ಸಡನ್ನಾಗಿ ಬ್ರೇಕ್ ಹಾಕಿದ್ನಿ.
ಯಜಮಾನ್ತಿ, ಧಮ್ ಅಂತ ದುಬ್ಬುಕ್ಕ ಗುದ್ದಿದಾಕೆ, ನೋಡ್ಕೊಂಡು ಹೊಡಿರಿ, ಹಿಂದ್ ಬ್ಯಾರೆ ಹುಡುಗಿ ಕುಂತಾಳು ಅಂದ್ಕೊಂಡಿರೇನ ಅಂದ್ಲು. ಕಾಂಗ್ರೆಸ್‌ನ್ಯಾಗ ಪರಮೇಶ್ವರ್ ಅವರಿಗೆ ಮುಂದಿನ ಸಿಎಂ ನೀವ ಅಂತಲ್ಲಾ ಅಂತ ಕೇಳಿದ್ರ ಅವರು ಆಸೆ ಇದ್ರೂ ಬಾಯಿ ಬಿಟ್ಟು ಹೇಳಬ್ಯಾಡ್ರಿಪಾ ಅಂತ ಅಂದಂಗ, ನಾವು ಕಾಲೇಜ್ ಡೇಸ್‌ನ್ಯಾಗ ಬೈಕ್ ಹಿಂದ ಹುಡುಗಿನ ಹತ್ತಿಸಿಕೊಂಡು ಹಂಪ್ಸ್ ಬಂದಾಗ ಬ್ರೇಕ್ ಹಾಕಿದಾಗ ಯಜಮಾನ್ತಿ ಗುದ್ದಿದ ಬೆನ್ನಿಗೆನ ಹುಡುಗಿ ಕೈ ಟಚ್ ಆಗಿತ್ತು ಅಂತ ಬಾಯಿ ಬಿಟ್ಟು ಹೇಳಾಕ್ ಅಕ್ಕೇತಾ?
ಕಣ್ ಮುಂದ ಗುಂಡಿ ಇರೋದ್ ನೋಡಿದ್ ಮ್ಯಾಲೂ ಯಜಮಾನ್ತಿ ಮುಂದ ಗಂಡು ಧೈರ್ಯ ತೋರಾಕ್ ಅಕ್ಕೇತಾ. ಮೊದ್ಲ ರೋಡಿನ್ಯಾಗ ಗುಂಡಿ ತಪ್ಪಿಸಿ ಸೀದಾ ಮನಿಗಿ ಬಂದು ಮುಟ್ಟೂದ ಹೈರಾಣಾಗಿ ಹೋಗಿರತೈತಿ.
ನಾವು ಸಾಲ್ಯಾಗಿದ್ದಾಗ ನಮ್ಮ ಮಾಸ್ತರು ಬೆಂಗಳೂರಾಗ ರೋಡ್ ಅಂದ್ರ ಕನ್ನಡಿ ಇದ್ದಂಗ ಇರತಾವು, ರೋಡಿನ್ಯಾಗ ನಮ್ಮ ಮುಖಾ ನಾವ ನೋಡಬೌದು ಅಂತ ಹೇಳ್ತಿದ್ರು. ಪಾಪ ಅವರು ಮಳೆಗಾಲದಾಗ ಬಂದಿದ್ರು ಅಂತ ಕಾಣತೈತಿ. ಗುಂಡ್ಯಾಗೆಲ್ಲಾ ನೀರು ತುಂಬಿದಾಗ ನೋಡಿಬ್ರೇಕು, ತಗ್ಗಿನ್ಯಾಗ ನಿಂತಿರೋ ನೀರಾಗ ಅವರ ಮುಖಾ ಕಂಡಿರಬೇಕು.
ಸರ್ಕಾರಗೋಳಿಗೆ ಇರೋ ರೋಡಿನ್ಯಾಗಿನ ಗುಂಡಿ ಮುಚ್ಚಾಕ ಆಗದಿದ್ರೂ, ಸ್ಮಾರ್ಟ್ ಸಿಟಿ, ಐಟಿ ಸಿಟಿ, ಗಾರ್ಡನ್ ಸಿಟಿ ಅಂತ ಜಗತ್ತಿನ ಮಂದಿಗೆಲ್ಲಾ ಕಿವ್ಯಾಗ ಲಾಲ್‌ಭಾಗ ಇಡೂ ಕೆಲಸಾ ಮಾಡ್ತಾರು. ಇದೊಂದು ರೀತಿ ಫೇಸ್‌ಬುಕ್‌ನ್ಯಾಗ ಫ್ರೆಂಡಶಿಪ್ ಮಾಡ್ಕೊಂಡು, ಯಾವುದೋ ಹಿರೋಯಿನ್ ಡಿಪಿ ಇಟ್ಕೊಂಡಿರೊ ಹುಡುಗಿ ಫೋಟೊ ನೋಡಿ ಪ್ರಪೋಸ್ ಮಾಡಿ, ಕೇಳಿದಾಗ ಅಮೌಂಟ್ ಟ್ರಾನ್ಸ್ಫರ್ ಮಾಡಿ, ಕಡೆಗೆ ಅಕಿ ಬಣ್ಣ ಗೊತ್ತಾದಾಗ ಬಾಯ್ ಬಡ್ಕೊಳ್ಳೊವಂಗ. ಸರ್ಕಾರದ ಅಭಿವೃದ್ಧಿ ಎಲ್ಲಾ ಪೇಪರ್, ಪೋಸ್ಟರ್‌ನ್ಯಾಗ ಮಾತ್ರ ಆಗಾಕತ್ತೇತಿ ಅಂತ ಕಾಣಾಕತ್ತೇತಿ.
ಬೆಂಗಳೂರಾಗ ಯಾ ರೋಡಿನ್ಯಾಗ ಹೋದ್ರೂ, ಕಾಮಗಾರಿ ನಡೆದಿದೆ, ದುರಸ್ಥಿಯಲ್ಲಿದೆ ಅಂತ ಬೋರ್ಡ್ ಹಾಕಿರ್ತಾರು. ಇದ್ನ ನೋಡಿದ್ರ ದುರಸ್ಥಿ ನಗರ ಅಂತ ಕರಿಬೌದು ಅನಸ್ತೈತಿ.
ಹಂಗ ನೋಡಿದ್ರ ಯಾರಾದ್ರೂ ಗುಂಡಿಗಿ ಬಿದ್ದು ಸತ್ರ, ಆ ಏರಿಯಾಕ್ ಸಂಬಂಧ ಪಟ್ಟ ಅಧಿಕಾರಿ, ಕಾರ್ಪೊರೇಟರ್, ಎಂಎಲ್‌ಎ, ಮಿನಿಸ್ಟರ್ ಎಲ್ಲಾರ ವಿರುದ್ದಾನೂ ಕೊಲೆ ಸಂಚು ಅಂತ ಕೇಸ್ ಹಾಕುವಂತಾ ಕಾನೂನು ಬರಬೇಕು.
ಬೆಂಗಳೂರು ಪರಿಸ್ಥಿತಿ ಹೆಂಗೈತಪಾ ಅಂದ್ರ ಸೆಂಟ್ರಲ್ ಗೌರ್ನಮೆಂಟ್ ಬಜೆಟ್ ಇದ್ದಂಗ ಕಾಣತೈತಿ. ಈ ಬಜೆಟ್‌ನ್ಯಾಗ ಯಾರಿಗಿ ಎಷ್ಟು ಅನುಕೂಲ ಅಕ್ಕೇತಿ ಅಂತ ಯಾರಿಗೂ ಅರ್ಥ ಆಗಿಲ್ಲ. ಆದ್ರೂ, ಎಲ್ಲಾರೂ ಆತ್ಮನಿರ್ಭರ ಅನ್ನೋ ಮಂತ್ರಾ ಬಿಟ್ಟು ಬ್ಯಾರೇ ಏನೂ ಮಾತ್ಯಾಡವಲ್ಲರು. ನರೇಗಾದಾಗ ದುಡ್ಯಾರಿಗೆ, ರೈತರ ಅಭಿವೃದ್ದಿಗೆ ಕೊಡೊ ದುಡ್ಡು ಕಡಿಮಿ ಮಾಡಿ ಆತ್ಮನಿರ್ಭರ ಅಂದ್ರ, ಬೆಂಗಳೂರು ಕನ್ನಡಿಗರದ್ದು ಅಂತ ನಮಗ ನಾವ ಹೆಮ್ಮೆ ಪಟ್ಕೊಂಡಂಗ ಅನಸ್ತೆತಿ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭಾದಾಗ ಮಾತ್ಯಾಡಿರೋದು ದೇಶದ ಈಗಿನ ಪರಿಸ್ಥಿತಿ ಎತ್ತಿ ತೋರಿಸಿದಂಗ ಕಾಣತೈತಿ. ಕೊರೊನಾದಂತಾ ಟೈಮಿನ್ಯಾಗ ಯಾಡ್ ಭಾರತ ಹುಟ್ಟಿದ್ದಂತೂ ಖರೇನ. ಮೂರು ವರ್ಷದಾಗ ಇಡೀ ದೇಶದ ತೊಂಬತ್ರೊಂಬತರಷ್ಟು ಜನರು ಹೆಂಗರ ಬದುಕಿದ್ರ ಸಾಕು ಅನ್ನು ಪರಿಸ್ಥಿತಿ ಇದ್ರ, ಅದಾನಿ, ಅಂಬಾನಿ ಆಸ್ತಿ ಡಬಲ್, ಥ್ರಿಬಲ್ ಆಗಿ, ಫೇಸ್‌ಬುಕ್ ಮಾಲೀಕ ಝೂಕರ್ ಬರ್ಗ್ನ ಹಿಂದ್ ಸರಿಸ್ಯಾರಂತ.
ಅಧಿಕಾರ ನಡಸಾರ ಅಭಿವೃದ್ದಿ ಆಲೋಚನೆನ ಬ್ಯಾರೆ ಥರಾ ಕಾಣಾಕತ್ತೇತಿ, ಹಿಂಗಾಗಿ ತಗ್ಗು ಬಿದ್ದ ರೋಡಿನ್ಯಾಗ ಸ್ಮಾರ್ಟ್ ಸಿಟಿ ಕಾಣುವಂಗ ಆಗೇತಿ. ಈ ತಗ್ಗು ಹೆಂಗರ ತಪ್ಪಿಸಿ ಪಾರ್ ಆಗಬೌದು ಆದ್ರ, ಸಿಗ್ನಲ್ ಸಂಧ್ಯಾಗ ನಿಂತಿರೋ ಟ್ರಾಫಿಕ್ ಪೊಲಿಸ್ರನ್ನ ತಪ್ಪಸೂದು ಮಾತ್ರ ಭಾಳ ಕಷ್ಟ.
ಹಿಂದಿನ ಕಾಲದಾಗ ಗುಡದಾಗ, ಊರಿಂದೂರಿಗೆ ಒಬ್ಬೊಬ್ರ ಹೋಗರ‍್ನ ದಾರಿ ಕಳ್ಳರು ಒಮ್ಮೇಲೆ ದಾಳಿ ಮಾಡಿ ದೋಚ್ಕೊಂಡು ಹೋಗಾರಂಗ ಸಿಗ್ನಲ್ ದಾಟೀದ ಕೂಡ್ಲೆ ಗಬಕ್ ಅಂತ ಹಿಡ್ಕೊಂಡು ಬಿಡ್ತಾರು. ಅವರು ವಸೂಲಿ ಮಾಡೋ ದಂಡದಾಗಾದ್ರೂ ಗುಂಡಿ ಮುಚಬೇಕೋ ಬ್ಯಾಡೊ? ಅವರಷ್ಟ ಅಲ್ಲ, ನೋ ಪಾರ್ಕಿಂಗ್ ಹೆಸರ ಮ್ಯಾಲ್ ಟೋಯಿಂಗ್ ಮಾಡಾರು ಬ್ಯಾರೆ, ಅವರೂ ತುಡುಗ್ರು ಹೊಂಚ್ ಹಾಕಿ ತುಡುಗು ಮಾಡ್ಕೊಂಡು ಹೋದಂಗ ಗಾಡಿ ಎತ್ತೊಂಡು ಹೊಕ್ಕಾರು. ಪೊಲಿಸರು ದಂಡದ ಹೆಸರ ಮ್ಯಾಲ ವಸೂಲಿ ಮಾಡೂದು, ಗುಂಡಿ ಮುಚ್ಚಾಕ ಬಿಬಿಎಂಪ್ಯಾರಿಗಿ ಹೇಳೂದು, ಅವರು ತಮಗ ತಗ್ಗು ಮುಚ್ಚಾಕ ಆಗೂದಿಲ್ಲ ಅಂತೇಳಿ, ಇನ್ನೊಂದು ಸರ್ಕಾರದ ಎಜೆನ್ಸಿಗೆ ಕೊಡೋದು, ಅವರು, ತಮ್ಮ ಕಮಿಷನ್ ತೊಗೊಂಡು ಖಾಸಗಿ ಕಂಪನಿಗೆ ಟೆಂಡರ್ ಕೊಡೋದು, ಆಂವ ಡಾಂಬರ್‌ನ್ಯಾಗ ಚುಮುನಿ ಎಣ್ಣಿ ಮಿಕ್ಸ್ ಮಾಡಿ ರೋಡಿನ್ಯಾಗ ಉಗ್ಗಿ ಹೊಂಟ್ ಬಿಡ್ತಾನು. ಅರ‍್ನ ಕೇಳಾರು ಯಾರು, ಹೇಳಾರು ಯಾರು? ಈ ದೇಶಾನ ರಾಜಕಾರಣಿಗೋಳಿಗಿಂತ ಅಧಿಕಾರಿಗೋಳ ಆಳಾಕತ್ತಾರು ಅಂತ ಅನಸ್ತೆತಿ. ಮುಖ್ಯಮಂತ್ರಿ ಆದೇಶ ಮಾಡಿದ್ರೂ, ಮಾಡಾಕ್ ಆಗೂದಿಲ್ಲ ಅನ್ನೊವಂತ ಅಧಿಕಾರಿಗೋಳು ಅದಾರು, ಯಾಕಂದ್ರ ಅಧಿಕಾರಿಗೋಳು ತಪ್ಪು ಮಾಡಿದ್ರೂ, ಅರ‍್ನ ರಕ್ಷಣೆ ಮಾಡಾಕ ರಾಜಕಾರಣಿಗೋಳದಾರು, ಅವರಿಂದಾನೂ ಆಗಲಿಲ್ಲಾ ಅಂದ್ರ, ಜಾತಿ ಅದಾವು, ಈ ದೇಶದಾಗ ತಪ್ಪು ಮಾಡಿದರ‍್ನ ಕಾನೂನಿಂದ ಕಾಪಾಡಾಕ್ ಆಗದಿದ್ರೂ, ಜಾತಿಯಿಂದ ಅರಾಮ್ ಕಾಪಾಡ್‌ಬೌದು, ಸಂವಿಧಾನ ಬರದ ಅಂಬೇಡ್ಕರ್ ಫೋಟೊನ ಇಡಬ್ಯಾಡ್ರಿ ಅಂತ ಗಣರಾಜ್ಯೋತ್ಸವದ ದಿನಾನ ಓಪನ್ನಾಗಿ ಹೇಳಿದ್ರೂ, ಏನೂ ಮಾಡಾಕ್ ಅಗದಂತಾ ಪರಿಸ್ಥಿತಿ ಐತಿ ಅಂದ್ರ, ಅವರ ರಕ್ಷಣೆಗೆ ನಿಂತಿರೋದು ಕಾನೂನಾ? ಜಾತಿನಾ? ಕಾನೂನು ಜಾತಿಗೆ ಹೆದರಾಕತ್ತೇತಿ ಅಂದ್ರ, ಕಾನೂನ್ಯಾಗ ಏನೋ ದೋಷ ಐತಿ ಅಂತ ಅನಸ್ತೆತಿ. ಅಧಿಕಾರಸ್ತರ ಅನುಕೂಲಕ್ಕ ತಕ್ಕಂಗ ಕಾನೂನು ಬಗ್ಗಾಕತ್ತೇತಿ ಅಂತ ಕಾಣತೈತಿ. ನಮ್ಮ ದೇಶಕ್ಕ ಸ್ವಾತಂತ್ರ್ಯ ಯ ಬಂದಾಗ ಬ್ರಿಟೀಷರ ಜೋಡಿ ಅವರ ಕಾನೂನುಗಳ್ನು ಕಳಸಬೇಕಿತ್ತು. ಅರ‍್ನಷ್ಟ ಕಳಿಸಿ, ಅವರ ಕಾನೂನ ಇಟ್ಕೊಂಡು, ಆಳರ‍್ನ ಮಾತ್ರ ನಮ್ಮರ‍್ನ ಮಾಡ್ಕೊಂಡ್ವಿ, ಆದ್ರ, ಅಧಿಕಾರ ನಡಸಾರಿಗೆ ಬ್ರಿಟೀಷರ ಅಧಿಕಾರದ ರುಚಿ ಹತ್ತಿದಂಗ ಕಾಣತೈತಿ. ಅದ್ಕ ಅವರೂ ಬ್ರೀಟೀಷರ ಕಾನೂನ್ನ ನಮ್ಮ ಮ್ಯಾಲ್ ಹೇರಿ, ಅಧಿಕಾರ ನಡಸಾಕತ್ತಾರು ಅಂತ ಅನಸ್ತೆತಿ. ದೇಶಕ್ಕ ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ಆದ್ರೂ ಜನರು ಮಾತ್ರ ಎಲೆಕ್ಷನ್ ಬಂದಾಗೊಮ್ಮಿ ಓಟ್ ಹಾಕಿ, ಪ್ರಜಾಪ್ರಭುತ್ವದಾಗ ನಾವ ಪ್ರಭುಗೋಳು ಅಂದ್ಕೊಂಡು ಗುಲಾಮಗಿರಿ ಜೀವನ ನಡಸಾಕತ್ತೇವಿ ಅಂತ ಅನಸ್ತೆತಿ.
ಸ್ವತಂತ್ರ ಭಾರತದ ಮದುವಿ ಆಗಿರೋ ಗಂಡ್ಸೂರು ನಾವು, ಯಜಮಾನ್ತಿ ವಿರುದ್ಧ ನಾವ ದಂಗೆ ಏಳೋ ಧೈರ್ಯ ಎಲ್ಲಿ ಬರತೈತಿ. ಇದ್ದಿದ್ದ ರೋಡಿನ್ಯಾಗ ಗುಂಡಿ ತಪ್ಪಿಸಿ ಬೈಕ್‌ನ್ಯಾಗ ಕರಕೊಂಡು ಅಡ್ಯಾಡಬೇಕು ಅಷ್ಟ !
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.