ಎನಿವರ್ಸರಿಗೂ ಪರ್ಸಂಟೇಜ್ ಕಾಟ ರಾಜ್ಯದಾಗೂ ಕಸಬರಗಿ ಆಟ
Team Udayavani, Apr 24, 2022, 3:14 PM IST
ಮ್ಯಾರೇಜ್ ಎನಿವರ್ಸರಿ ಅಂತೇಳಿ ಯಜಮಾನ್ತಿ ಹೊಸ ಟೆಂಡರ್ ಕಾಲ್ ಫಾರ್ಮ್ ಮಾಡಿದ್ಲು. ಯಜಮಾನ್ತಿ ಟೆಂಡರ್ ಕರದ ಮ್ಯಾಲ್ ರಿಜೆಕ್ಟ್ ಆಪ್ಸನ್ನ ಇಲ್ಲ. ಆತು ಅಂತೇಳಿ ಬಂಗಾರದ ಅಂಗಡಿಗಿ ಕರಕೊಂಡು ಹೋದ್ನಿ.
ಬಂಗಾರ ಅಂಗಡಿ ಅಂದ ಮ್ಯಾಲ ಗ್ರಾಮ ಪಂಚಾಯತಿ ಗಟಾರ ರಿಪೇರಿ, ಸಿಸಿ ರೋಡು, ನಳಾ ಕುಂದ್ರುಸುವಂತ ಸಣ್ ಟೆಂಡರ್ ಅಲ್ಲದು. ನೀರಾವರಿ, ಪಿಡಬ್ಲುಡಿ ಥರಾ ದೊಡ್ಡ ಟೆಂಡರ್ ಬೀಳತೈತಿ. ಪತ್ತಾರನೂ ಒಂದರಕಿಂತ ಒಂದೂ ದಾಗೀಣ ತೋರಿಸಿ, ಇದು ಚೊಲೊ ಕಾಣತೈತಿ ನೋಡ್ರಿ ನಿಮಗ ಅಂತ ಹೇಳಿ ಕನ್ನಡ್ಯಾಗ ಬ್ಯಾರೆ ಹಿಡದು ತೋರಸಾಂವ. ಅಕಿಗಿ ದಾಗೀಣದ ಮ್ಯಾಲ್ ಕಣ್ಣಿದ್ರ, ಅದರ ಮ್ಯಾಲಿನ ರೇಟು ಎಷ್ಟು ಅಂತ ಹಣಿಕಿ ನೋಡಿ, ಹೆದಿರಿಕಿ ಬಂದ್ರೂ ಕಿಸೆದಾಗಿನ ಪರ್ಸ್ ಮುಟ್ಟಿ ಸಮಾಧಾನ ಮಾಡ್ಕೊ ಅಂತ ನನಗ ನಾನ ಹೇಳ್ಕೊಂಡೆ. ಕಡೆಗೂ ಬಂಗಾರ ಅಂಗಡ್ಯಾಂವ ಆಮ್ ಆದ್ಮಿ ಪಾಟ್ಯಾರು ಬಿಜೆಪ್ಯಾರಿಗೆ ಕೇಸರಿ ಟೊಪಗಿ ಹಾಕಿಸಿದಂಗ ನಂಗೂ ಒಂದು ದೊಡ್ಡದ ಟೊಪಗಿನ ಬಿತ್ತು.
ಬಂಗಾರದ ರೇಟಿನ ಜೋಡಿ ದಾಗೀಣಾ ಮಾಡಿರೋ ಕೆಲಸದ ಪರ್ಸಂಟೇಜ ಜಾಸ್ತಿ ಹಾಕಿದಾ. ಏನ್ರಿ ಇಷ್ಟೊಂದು ಪರ್ಸಂಟೇಜ್ ಹಾಕಿರೆಲ್ಲ ಅಂದ್ರ, ನಮ್ಮದು ಭಾಳ ಕಡಿಮೈತ್ರಿ, ಬ್ಯಾರೆದಾರೆಲ್ಲಾ ಇನ್ನೂ ಜಾಸ್ತಿ ಹಾಕತಾರು ಅಂದಾ. ಈ ಪರ್ಸಂಟೇಜ್ ದಂಧೆ ಎಲ್ಲಿ ಹೋದ್ರು ಐತಿ ಅಂತ ಅನಸ್ತ್. ಮೊದ್ಲ ರಾಜ್ಯದಾಗ ಫಾರ್ಟಿ ಪರ್ಸೆಂಟ್ ಹವಾ ಕೆಜಿಎಫ್ ಚಾಪ್ಟರ್ 2ಕ್ಕಿಂತ ಜೋರ ಓಡಾಕತ್ತೇತಿ. ಸಿನೆಮಾದಾಗ ಏನಿಲ್ಲದಿದ್ರೂ ಬರೇ ಹವಾ ಮ್ಯಾಲ್ ಓಡಿದಂಗ, ಪರ್ಸಂಟೇಜ್ ದಂಧೆ ಒಂದು ಜೀವಾ ಬಲಿ ತೊಗೊಳ್ಳುದ್ರ ಜೋಡಿ, ಈಶ್ವರಪ್ಪ ಅವರ ರಾಜಕೀ ಜೀವನಕ್ಕೂ ಮಂಗಳಾ ಹಾಡುತ ಅಂತ ಅನಸ್ತೈತಿ. ಈ ಕೇಸಿನ್ಯಾಗ ಅವರಿಗೆ ಎಷ್ಟು ಪರ್ಸೆಂಟೇಜ್ ಮುಟ್ಟೇತೊ ಗೊತ್ತಿಲ್ಲ. ಹಂಗಂತ ಅವರೊಬ್ಬರ ಇಲಾಖೆದಾಗಷ್ಟ ಪರ್ಸೆಂಟೇಜ್ ದಂಧೆ ನಡದೈತಿ ಅಂತಿಲ್ಲ. ಅವರದು ಒಂದು ಕೇಸ್ ಹೊರಗ ಬರಗೋಡ ಎಲ್ಲಾ ಇಲಾಖೆದಾಗೂ ಒಬ್ಬೊಬ್ರದ ಕೇಸ್ ಹೊರಗ ಬರಾಕ್ ಶುರುವಾಗಾಕತ್ತಾವು.
ಪರ್ಸಂಟೇಜ್ ಲಿಸ್ಟ್‌ನ್ಯಾಗ ಇರೋ ಮಂತ್ರಿಗೋಳೆಲ್ಲಾ, ಕಂಟ್ರ್ಯಾಕ್ಟರ್ ಅಧ್ಯಕ್ಷ ಕೆಂಪಣ್ಣಂತೇಕ ಹೋಗಿ ಹಿಟ್ ಲಿಸ್ಟ್‌ನಿಂದ ತಮ್ ಹೆಸರು ಕೈ ಬಿಡಂತೇಳಿ ಕಾಲ್ ಬೀಳಾಕತ್ತಾರಂತ. ಪರ್ಸಂಟೇಜ್ ಬರೇ ಕಾಂಟ್ರ್ಯಾಕ್ಟರ್‌ಗೊಳಂತೇಕ ಅಷ್ಟ ಅಲ್ಲಾ, ಇಲೆಕ್ಷನ್ಯಾಗ ಜಾತಿ ಓಟ್ ಹಾಕಸ್ತಾರು ಅಂದ್ಕೊಂಡಿರೋ ಸ್ವಾಮಿಗೋಳ್ನು ಬಿಟ್ಟಿಲ್ಲಂತ. ಅವರೇನೊ ಗುರುಗೋಳ ಸ್ಥಾನದಾಗ ಅದಾರಂತೇಳಿ ಹತ್ತ್ ಪರ್ಸೆಟ್ ರಿಬೇಟ್, ಹಬ್ಟಾ, ಹುಣಿವಿ ಬಂದಾಗ ಅರಬಿ ಅಂಗಡ್ಯಾರು, ಬಂಗಾರದಂಗಡ್ಯಾರು ಆಫರ್ ಕೊಡ್ತಾರಲ್ಲ, ಹಂಗ ಸ್ವಾಮೀಗೋಳಿಗೆ ರಿಬೇಟ್ ಕೊಟ್ಟಾರಂತ.
ಬಿಜೆಪ್ಯಾರು ಮೊದ್ಲ ಕಾಂಟ್ರ್ಯಾಕ್ಟರ್ ಮಾಡಿರೊ ಫಾರ್ಟಿ ಪರ್ಸೆಂಟೇಜ್ ಆರೋಪಕ್ಕ ತಡಕೊಳ್ಳಾಕ ಆಗದ ಒದ್ಯಾಡಾಕತ್ತಾರು. ಅಂತಾದ್ರಾಗ ದಿಂಗಾಲೇಶ್ವರ ಸ್ವಾಮೀಜಿ ಬ್ಯಾರೇ ಡೈರೆಕ್ಟಾಗಿ ತಮ್ಮಗೂ ಥರ್ಟಿ ಪರ್ಸೆಂಟ್ ಚಾರ್ಜ್ ಮಾಡ್ಯಾರು ಅಂತೇಳಿ ಉರಿ ಬೆಂಕ್ಯಾಗ ತುಪ್ಪಾ ಸುರದಂಗ ಆಗೇತಿ.
ಬಿಜೆಪ್ಯಾರು ಹೆಂಗರ ಮಾಡಿ ಇನ್ನೊಂದು ಸಾರಿ ಅಧಿಕಾರಕ್ಕ ಬರಬೇಕಂತೇಳಿ ಹಿಜಾಬ್, ಆಜಾನ್, ಜಾತ್ರಿ, ಕಲ್ಲಂಗಡಿ ಅಂತೇಳಿ ಹೆಂಗೊ ಒಂದಷ್ಟು ಓಟ್ ಕೂಡ್ಸಾಕತ್ತಿದ್ರಂತ ಕಾಣತೈತಿ. ಈ ಪರ್ಸಂಟೇಜ್ ಕೈಯಾಗ ಸಿಕ್ಕೊಂಡು ಹೊರಗ ಬರುದೆಂಗಂತ ಒದ್ಯಾಡುವಂಗ ಆಗೇತಿ ಅನಸ್ತೈತಿ.
ಈ ಪರ್ಸೆಂಟೇಜ್ ದಂಧೆ ಏನ್ ಈಗ ಶುರುವಾಗೇತಂತೇನಿಲ್ಲ. ಮೈಸೂರು ಮಾರಾಜರ ಕಾಲದಾಗೂ ಈ ದಂಧೇ ನಡಿತಿತ್ತಂತ. ಬ್ರಿಟೀಷರಿಂದ ಹೆಂಗರ ಮಾಡಿ ಮೈಸೂರು ಸಂಸ್ಥಾನಾನ ಬಿಡಿಸಿಕೊಂಡು ಬರಾಕ್ ಅವಾಗ್ನೂ ಲಂಚಾ ಕೊಡ್ತಿದ್ರಂತ. ಈಗ ಬಿಜೆಪ್ಯಾರ ವಿರುದ್ಧ ಹೋರಾಟ ಮಾಡಾಕತ್ತಿರೋ ಕಾಂಗ್ರೆಸ್ನ್ಯಾರ್ ಕಾಲದಾಗೇನ ಇರಲಿಲ್ಲಂತಲ್ಲಾ. ಅವರ ಕಾಲದಾಗ ಹತ್ತು ಹದಿನೈದ್ ಪರ್ಸೆಂಟ್ ಇತ್ತಂತ. ಅದು ನಲವತ್ತಕ್ಕೇರೇತಿ ಅನ್ನೋದಷ್ಟ ಸಮಸ್ಯೆ ಈಗ. ಕಾಂಗ್ರೆಸ್ನ್ಯಾರು ಪರ್ಸಂಟೇಜ್ ಇಲ್ಲದ ತಮ್ಮ ಕ್ಷೇತ್ರದಾಗ ಯಾವುದಾದ್ರೂ ಕಾಮಗಾರಿಗೆ ಗುದ್ದಲಿ ಪೂಜೆ ಮಾಡ್ತಾರ ಕೇಳಿ ನೋಡ್ರಿ.
ಲಂಚಾ ಕೊಡಾರು ಏನ್ ಎಲ್ಲಾನೂ ಫ್ರೀ ಮಾಡಿಕೊಡ್ರಿ ಅನ್ನೂದಿಲ್ಲ. ಖುಷಿಲೇ ಕೊಟ್ಟಷ್ಟು ತೊಗೊಂಡ್ರ, ಚಾ ಪಾನಿ ಖರ್ಚಿಗಿ ಒಂದಷ್ಟು ಕೊಟ್ಟು ಕೆಲಸಾ ಮಾಡಿಸಿಕೊಂಡು ಹೋಗಾಕ ಎಲ್ಲಾರೂ ರೆಡಿ ಅದಾರು. ಆದ್ರ, ಇವರು ಕಿರಾಣಿ ಅಂಗಡ್ಯಾಗ ಅಕ್ಕಿ, ಜ್ವಾಳಾ, ಗೋಧಿ ರೇಟ್ ಹಾಕ್ಕೊಂಡ ಕುಂತಂಗ ಫಿಕ್ಸ್ ರೇಟ್ ಹಾಕ್ಕೊಂಡ ಕುಂತ್ರ ಜನರರ ಹೆಂಗ್ ಸಹಿಸ್ಕೋತಾರು.
ನಮ್ಮ ದೇಶದಾಗ ದೊಡ್ಡ ಸಮಸ್ಯೆ ಅಂದ್ರ ಖುಷಿ ಆಗೇತಿ ಅಂತ ಏನರ ಮಾಡಿದ್ರೆಂದ್ರ ಅದು ಹಂಗ ಅಲಿಖೀತ ಸಂವಿಧಾನದಂಗ ಕಂಟಿನ್ಯೂ ಆಗಿ ಖಾಯಂ ಆಗಿಬಿಡ್ತೆತಿ. ಈ ಪರ್ಸಂಟೇಜ್ ದಂಧೆನೂ ಹಂಗ ಯಾರೋ ಕೆಲಸಾ ಮಾಡಿಸಿಕೊಂಡಾರು ಖುಷಿಗೆ ಏನೋ ಕೊಡೊದು ಶುರು ಮಾಡಿ, ಈಗ ರೇಟ್ ಫಿಕ್ಸ್ ಮಾಡಿ ಬೋರ್ಡ್ ಹಾಕುವಂಗ ಆಗೇತಿ. ಅದ್ಕ ಖುಷಿ ಆಗೇತಂತೇಳಿ ಮನ್ಯಾಗ ಕಸಾ ಹೊಡಿದು, ನೆಲಾ ಒರಸೂದು ಮಾಡಿದ್ರೂ ಕಂಪಲ್ಸಿರಿ ಅಗೂ ಚಾನ್ಸಸ್ ಇರತೈತಿ. ಸ್ವಲ್ಪ ಹುಷಾರಿಂದ ಇರಬೇಕು ಅಂತ ಅನಸ್ತೈತಿ.
ಇಲ್ಲಿ ಪರಿಸ್ಥಿತಿ ನೋಡಿದ್ರ ಯಾಕೋ ವರ್ಕೌಟ್ ಆಗುದಿಲ್ಲಂತೇಳಿ, ಅಮಿತ್ ಶಾ ಸಾಹೇಬ್ರು ಎಲ್ಲಾ ದಿಲ್ಲಿಂದನ ಮ್ಯಾನೇಜ್ ಮಾಡಾಕ್ ಶುರು ಮಾಡ್ಯಾರಂತ. ಸಂಘ ದಕ್ಷ, ಆರಮ ಎಲ್ಲಾ ಅಲ್ಲಿಂದನ ಹೇಳಾಕತ್ತಾರಂತ. ಇಲ್ಲಿಯಾರು ಬರೇ ಲೆಪ್ಟ್ರೈಟ್ ಮಾಡೂದಷ್ಟ ಅಂತ. ಇಷ್ಟದಿನ ರಾಜ್ಯದಾಗ ಕಾಂಗ್ರೆಸ್ಸು, ಬಿಜೆಪಿ ನಡಕ ಮೆದಿ ಸಿವುಡ್ ಹೊತ್ತಿರೊ ಹೆಣ್ಮಗಳು ಇರತಿದ್ಲು.
ಯಾರಿಗೂ ಅಧಿಕಾರ ಬರದಿದ್ರ ಇಬ್ರಾಗೊಬ್ರು ಅಕಿ ಕೂಡ ಕೂಡ್ಲಿ ಮಾಡ್ಕೊಂಡು ಲಿವಿಂಗ್ ಟುಗೆದರ್ ನಡಸ್ತಿದ್ರು. ಆದ್ರ, ಈ ಸರಿ ಕೇಜ್ರಿವಾಲ್ ಬ್ಯಾರೆ ದಿಲ್ಲಿಂದ ಕಸಬರಗಿ ಹಿಡಕೊಂಡು ಬಂದಾರ. ಹಿಂಗಾಗಿ ರಾಜ್ಯದಾಗ ಇರೋ ಮೂರು ಪಾಟ್ಯಾರಿಗೂ ಬ್ಯಾಸಗ್ಯಾಗ್ನೂ ತಂಡಿ ಹತ್ತಾಕ ಶುರುವಾಗೇತಿ ಅಂತ ಅನಸ್ತೈತಿ. ಕಸಬರಗಿ ಹೊಡತಕ್ಕ ಯಾರ್ ಹೊಕ್ಕಾರೊ ಗೊತ್ತಿಲ್ಲ. ಕೇಜ್ರಿವಾಲ್ ದಿಲ್ಲಿಂದ ಹೊರಗ ಬರೂದು ಕಷ್ಟ ಐತಿ ಅಂದಾರಿಗೆ ಪಂಜಾಬನ್ಯಾಗ ಹೋಗಿ, ನಾ ನೀ ಅನ್ನಾರ್ನೆಲ್ಲಾ ಗೂಡ್ಸಿ ಹಾಕಿದ್ರು, ಅಷ್ಟ ಅಲ್ಲ, ಈಗ ಗುಜರಾತ್‌ನ್ಯಾಗ ಹೋಗಿ ಬಿಜೆಪ್ಯಾರ ನಿದ್ದಿ ಕೆಡಿಸ್ಯಾರಂತ. ರಾಜ್ಯಾದಾಗೂ ಮೂರು ಪಾರ್ಟಿಗಿ ಹೋಗಾಕ ಮನಸ್ ಇಲ್ಲದಿರೊ ಮಂದಿ, ಕಸಬರಗಿ ಹಿಡಕೊಳ್ಳಾಕ ರೆಡಿ ಆಗ್ಯಾರಂತ.
ಹಿಜಾಬ್, ಆಜಾನ್ ಗದ್ದಲದಾಗ ಗಂಟಲದಾಗ ಅನ್ನದ ಅಗಳ ಸಿಕ್ಕೊಂಡಾರಂಗ ಒದ್ಯಾಡಾಕತ್ತಿದ್ದ ಕಾಂಗ್ರೆಸ್‌ನ್ಯಾರಿಗೆ ಫಾರ್ಟಿ ಪರ್ಸೆಂಟ್ ಕೇಸ್ ಸ್ಪಷ್ಟ ಟಾನಿಕ್ ಕುಡುದ ಉಸರ್ಯಾಡುವಂಗ ಆಗೇತಿ. ಇಲೆಕ್ಷ್ಯನ್ನಿಗೆ ಇದ್ನ ಇಟ್ಕೊಂಡು ಹೋದ್ರೂ ಹೆಂಗರ ಮೂರಂಕಿ ಲಗತ ಬರಬೌದು ಅನ್ನೋ ಲೆಕ್ಕಾಚಾರ ಐತಂತ. ಆದ್ರ, ಹಿಜಾಬು, ಆಜಾನು, ಜಾತ್ರಿ ಗದ್ದಲದಾಗ ಕಾಂಗ್ರೆಸ್ನ್ಯಾರು ತಮ್ಮ ರಕ್ಷಣೆಗೆ ಬರಲಿಲ್ಲಾ ಅಂತೇಳಿ, ಮುಸಲೂರಿಗೆ ಸಿಟ್ ಬಂದೈತಂತ. ರಾಹುಲ್ ಗಾಂಧಿ ಮುಂದ ಹೋಗಿ ಹೇಳಿದ್ರೂ ಏನೂ ಕೆಲಸ ಆಗಿಲ್ಲಂತ. ಅದ್ಕ ದೊಡ್‌ಗೌಡ್ರು ಇಬ್ರಾಹಿಂನ ಕರಕೊಂಡು ಬಂದು, ಪಕ್ಷದ ಹೆಂಡಲ್ ಅವರ ಕೈಯಾಗ ಕೊಟ್ಟು, ಸ್ಟೇರಿಂಗು, ಬ್ರೇಕು ತಮ್ಮ ಕೈಯಾಗ ಇಟ್ಕೊಂಡಾರಂತ. ಹಿಂಗಾಗಿ ಮುಸ್ಲಿಂಮರು ಕೈ ಹಿಡಿಬೇಕೊ, ಗೌಡ್ರ ಬೆನ್ ಹತ್ತಬೇಕೊ ಅನ್ನೊ ಗೊಂದಲದಾಗ ಅದಾರಂತ. ಇಬ್ರಕಡೆ ಇರಾಕ್ ಮನಸ್ ಇಲ್ಲದಾರು ಕಸಬರಗಿ ಹಿಡ್ಕೊಂಡು ಹೋದ್ರೂ ಆಶ್ಚರ್ಯ ಪಡುವಂಗಿಲ್ಲ.
ಯಾಕಂದ್ರ ಈಗ ರಾಜ್ಯದಾಗ ಆಗಾಕತ್ತಿದ್ ನೋಡಿದ್ರ ಯಾರಿಗಿ ಲಕ್ ಹೊಡಿತೈತೊ ಗೊತ್ತಿಲ್ಲ. ಪರ್ಸಂಟೇಜ್ ಇಲ್ಲದ ಅಂತೂ ಏನೂ ನಡ್ನೂ ದಿಲ್ಲಂತೇಳಿ ನಾವೂ ಹಂಗಷ್ಟ ಹಿಂಗಷ್ಟ ಮಾಡಿ ಇರೂದ್ರಾಗ ಕಡಿಮಿ ಮಾಡಿ ದಾಗೀಣಾ ತೊಗೊಂಡು ಬಂದು, ಇಷ್ಟೆಲ್ಲಾ ಕೊಡ್ಸ್ತೇನಿ ನಾನ್ಯಾಕ ಕಮಿಷನ್ ತೊಗೊಬಾರ್ದು ಅಂತ ಯಜಮಾನ್ತಿಗೆ ಒಂದ್ ಕಪ್ ಚಾ ಮಾಡ್ಕೊಡು ಅನ್ನಿ. ಅಕಿ ಸೀದಾ ಬಂದಾಕೆ ಕೈಯಾಗ ಕಸಬರಗಿ ಹಿಡ್ಕೊಂಡ್ಲು. ಕಮಿಷನ್ ಕಳಂಕ ನಮಗ್ಯಾಕ್ ಅಂತೇಳಿ ನಾನ ಫಸ್ಟ್ ಕ್ಲಾಸ್ ಚಾ ಮಾಡ್ಕೊಂಡು ಕುಡದ್ನಿ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.