ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!
Team Udayavani, Jan 23, 2022, 9:33 AM IST
ಯಜಮಾನ್ತಿ ತವರು ಮನಿಂದ ಬಂದ ಕೂಡ್ಲೆ ಮನಿ ನೋಡಿದಾಕೆ ವಟ ವಟ ಶುರು ಹಚ್ಕೊಂಡ್ಲು. ಬಿಜೆಪ್ಯಾಗ ಬೊಮ್ಮಾಯಿ ಸರ್ಕಾರದ ಬಗ್ಗೆ ಅವರ ಪಕ್ಷದ ಎಂಎಲ್‌ಎಗೋಳ ಒಳಗೊಳಗ ವಟ ವಟ ಅಂದ್ಕೋಂತ ಓಡ್ಯಾಡಾಕತ್ತಾರಂಗ ಅಡಗಿ ಕ್ವಾಣ್ಯಾಗ ಹೋದ್ರು ಒಂದು, ಬಚ್ಚಲ ಕ್ವಾಣ್ಯಾಗ ಹೋದ್ರು ಒಂದು ಬಾಯಿ ಶುರುವ ಇಟ್ಕೊಂಡಿದ್ಲು. ನಾವು ಅಲ್ಲೇ ಇದ್ರು ಬೊಮ್ಮಾಯಿ ಸಾಹೇಬ್ರಂಗ ಯಾವುದೂ ಕೇಳಿಸಿಕೊಳ್ಳದಂಗ ಒಂದ ಪೇಪರನ್ನ ಹೊಳ್ಳಾ ಮಳ್ಳಾ ತಿರುವಿ ಹಾಕ್ಕೋಂತ ಕುಂತೆ.
ಮನ್ಯಾಗ ಹೆಂಡ್ತಿ ಇಲ್ಲದಾಗನೂ ಮನಿ ತೊಳದು ಸ್ವಚ್ ಇಟ್ಕೊಂಡ್ರ ಹೆಂಡ್ತಿ ಇರೂದ್ಕೂ ಇಲ್ಲದಿರೋದ್ಕೂ ಏನ್ ಫರಕ್ ಬೀಳ್ತೆತಿ. ಮದುವ್ಯಾದ ಗಂಡ್ಸು ಒಬ್ನ ಹೊಟೆಲ್ ಊಟಕ್ಕ ಹ್ವಾದ ಅಂದ್ರ ಯಾಕ್ರಿ ಮನ್ಯಾಯವರು ಇಲ್ಲನ ಅಂತ ಕೇಳ್ತಾರು. ಹೆಂಡ್ತಿ ಮನ್ಯಾಗ ಇದ್ರೂ ಹೊಟೆಲ್ ಊಟಾ ಮಾಡಾಕತ್ತಿದ್ದಂದ್ರ ಅಡಗಿ ಮನ್ಯಾಗ ಎದರದೋ ಸಲುವಾಗಿ ಆಂತರಿಕ ಯುದ್ದ ನಡದೈತಿ ಅಂತ ಅರ್ಥ, ಹಂಗ ಮನ್ಯಾಗ ಹೆಂಡ್ತಿ ಇಲ್ಲದಾಗ ಮನಿ ಸ್ಚಚ್ಚ ಇಟ್ಕೊಂಡಾನು ಅಂದ್ರ ಆಜು ಬಾಜು ಮನ್ಯಾರಿಗೂ ಡೌಟ್ ಬರಾಕ್ ಶುರುವಕ್ಕೇತಿ. ಅದು ಆಡಳಿತ ಪಕ್ಷದಾಗ ಇದ್ಕೊಂಡ ಹೈಕಮಾಂಡ್ ಗೆ ಕಳ್ ಪತ್ರಾ ಬರಿಯೋ ಎಂಎಲ್‌ಎಗೋಳಂಗ ತವರು ಮನ್ಯಾಗ ಇರೋ ಹೆಂಡ್ತಿಗಿ ಮುಟ್ಟಿಸಿದ್ರಂದ್ರ ಈಗ ಅಂತಾರಾಷ್ಟ್ರೀಯ ಮಟ್ಟದಾಗ ಜೈವಿಕ ಯುದ್ದ ನಡದಂಗ ಮೊಬೈಲ್‌ನ್ಯಾಗ ಯುದ್ಧ ಶುರುವಕ್ಕೇತಿ. ಆದರ ಸೈಲೆಂಟ್ ಆಗಿ ನಮ್ಮ ಕೆಲಸಾ ನಾವು ಮಾಡ್ಕೊಂಡು ಹೋಗೋದು ಚೊಲೊ ಅಂತ ಸುಮ್ನ ಆದ್ನಿ.
ಬೊಮ್ಮಾಯಿ ಸಾಹೇಬ್ರು ಅವರಷ್ಟಕ್ಕ ಅವರು ಕೆಲಸಾ ಮಾಡಾಕ ಎಲ್ಲಿ ಬಿಡ್ತಾರು. ಮಿನಿಸ್ಟರ್ ಆಗಬೇಕು ಅನ್ನಾರು ಸುಮ್ನ ಕುಂತ್ರ ವರ್ಕೌಟ್ ಆಗುದಿಲ್ಲ ಅಂತೇಳಿ, ಅವಾಗವಾಗ ಅಲ್ಲೆಲ್ಲೆ ಏನರ ಮಾತಾಡ್ಕೋಂತ ಇದ್ರ ಏನರ ಅಕ್ಕೇತಿ ಅಂತ ರೇಣುಕಾಚಾರ್ಯ, ಯತ್ನಾಳ್ ಸಾಹೇಬ್ರು ಇಬ್ರೂ ಸೇರಿ ಫೀಲ್ಡಿಗಿಳದಂಗ ಕಾಣತೈತಿ. ಯಡಿಯೂರಪ್ಪ ಸಾಹೇಬ್ರು ಸಿಎಂ ಸ್ಥಾನದಿಂದ ಇಳಿ ಮಟಾ ರೇಣುಕಾಚಾರ್ಯ, ಯತ್ನಾಳ್ ಗೌಡ್ರು ಇಂಡಿಯಾ ಪಾಕಿಸ್ತಾನ ಅನ್ನಾರಂಗ ಮಾಡಿದ್ರು, ಈಗ ನೋಡಿದ್ರ ಇಂಡಿಯಾ ಚೀನಾ ಭಾಯಿ ಭಾಯಿ ಅಂತ ನೆಹರೂ ಕಾಲದಾಗಿನ ಡೈಲಾಗ್ ಥರಾ ಇಬ್ರೂ ಕೂಡೆ ಹಾಲಿ ಮಂತ್ರಿಗೋಳ್ನ ಇಳಿಸೇಬಿಡಬೇಕು ಅಂತ ಕಸರತ್ತು ನಡಿಸಿದಂಗ ಕಾಣತೈತಿ.
ಮಂತ್ರಿಗೋಳು ಹೆಂಗರ ಮಾಡಿ ಕೊರೊನಾ ಕರ್ಪ್ಯೂ ಹೆಸರ ಮ್ಯಾಲ ಇನ್ನಷ್ಟು ದಿನಾ ದೂಡಿ ಇದೊಂದು ಸಾರಿ ಸಿಕ್ಕಿರೊ ಅಧಿಕಾರ ಅನುಭವಿಸಿ ಬಿಡೋನು ಅನ್ನೋ ಲೆಕ್ಕಾಚಾರದಾಗ ಇದ್ದಂಗ ಕಾಣತೈತಿ. ಹೆಂಗರ ಮಾಡಿ ಐದು ರಾಜ್ಯದ ಇಲೆಕ್ಷನ್ ಮುಗಿ ಮಟಾ ದಾಟಿಸಿದ್ರ ಅಷ್ಟೊತ್ತಿಗೆ ಬಜೆಟ್ ಅಧಿವೇಶನ, ಆ ಮ್ಯಾಲ ಜಿಲ್ಲಾ ಪಂಚಾಯ್ತಿ ಎಲೆಕ್ಷನ್ ಅಂತೇಳಿ ದೂಡಿ ಬಿಟ್ರ ಸರ್ಕಾರದ ಅವಧಿನ ಮುಗಿಸಿ ಬಿಡಬೌದು ಅನ್ನೊ ಲೆಕ್ಕಾಚಾರದಾಗ ಇದ್ದಂಗ ಕಾಣತೈತಿ.
ಅದ್ರಾಗ ಬಿಜೆಪಿ ಹೈಕಮಾಂಡ್ ನ್ಯಾರಿಗೂ ಯುಪಿಯೊಳಗ ಹಿಂದುಳಿದ ವರ್ಗದ ನಾಯಕರು ಒಬ್ಬೊಬ್ರ ಕೈ ಕೊಟ್ಟು ಹೊಂಟಿರೋದು ತಲಿ ಕೆಟ್ಟಂಗ ಕಾಣತೈತಿ. ಅವರಿಗೆಲ್ಲಾ ಬಿಜೆಪಿ ಟಿಕೆಟ್ ಕೈ ತಪ್ಪತ್ತಿತ್ತು ಅಂತ ಗೊತ್ತಾಗಿ ಬಿಟ್ಟು ಹೋಗ್ಯಾರು ಅಂತಾರು. ಆದ್ರ, ಸರ್ಕಾರ ಇದ್ದಾಗ ಐದು ವರ್ಷ ಅಧಿಕಾರ ಅನುಭವಿಸಿ ಇಲೆಕ್ಷ್ಯನ್ ಟೈಮಿನ್ಯಾಗ ಪಕ್ಷಾ ಬಿಟ್ಟು ಹೋಗೊ ಚಾಳಿ ಎಲ್ಲಾ ಕಡೆ ಕಾಮನ್ ಆಗೇತಿ.
ಎಲ್ಲಾ ರಾಜ್ಯದ ಇಲೆಕ್ಷ್ಯನ್ಯಾಗೂ ಇದು ಮೊದ್ಲಿಂದಾನೂ ನಡಕೊಂಡು ಬರಾಕತ್ತೇತಿ. ಒಂದು ಸರ್ಕಾರ ಮುಗಿಮಟಾ ಅಧಿಕಾರ ಅನುಭವಿಸಿ ಟಿಕೆಟ್ ಕೊಡ್ಲಿಲ್ಲಾ ಅಂತ ಪಕ್ಷಾ ಬಿಟ್ಟು ಹೋಗೂದ್ಕ ಬ್ರೇಕ್ ಹಾಕಲಿಲ್ಲಾ ಅಂದ್ರ ಈ ಪಕ್ಷಾಂತರ ಬ್ಯಾನಿ ಕೊರೊನಾಕ್ಕಿಂತ ಕೆಟ್ ಪರಿಣಾಮ ಬೀರಕೋಂತ ಹೊಂಟೇತಿ ಅಂತ ಅನಸ್ತೈತಿ.
ಈಗ ನಡ್ಯಾಕತ್ತಿರೊ ಐದು ರಾಜ್ಯಗೋಳ ಇಲೆಕ್ಷ್ಯನ್ಯಾಗ ಬಿಜೆಪ್ಯಾರು ಒಂದ ಕುಟುಂಬದಾಗ ಮಾವಾ ಸೊಸಿಗೆ, ಮಾಜಿ ಸಿಎಂನ ಮಗಗ ಟಿಕೆಟ್ ಕೊಡದನ ಕುಟುಂಬ ರಾಜಕಾರಣಕ್ಕ ಬ್ರೇಕ್ ಹಾಕಾಕ್ ಟ್ರಾಯ್ ಮಾಡಿದಂಗ ಕಾಣತೈತಿ. ಆದ್ರ, ಅವರು ಇಲ್ಲಿ ಟಿಕಿಟ್ ಸಿಗ್ಲಿಲ್ಲ ಅಂದ್ರ ಇನ್ನೊಂದು ಪಕ್ಷ ಐತಿ ಅಂತ ಜಿಗದು ಮಾವಾ ಸೊಸಿ ಕೂಡೆ ಟಿಕೆಟ್ ತೊಗೊಂಡು ಇಲೆಕ್ಷನ್ ನಿಲ್ತಾರು. ಇಲೆಕ್ಷ್ಯನ್ ಟೈಮಿನ್ಯಾಗ ಕಪ್ಪಿಯಂಗ ಜಿಗ್ಯರ‍್ನ ತಡ್ಯಾಕ ಎಲೆಕ್ಷನ್ ವ್ಯವಸ್ಥೆಗೆ ಬದಲಾವಣೆ ತರಾಕ ಮೋದಿ ಸಾಹೇಬ್ರು ಕಾನೂನು ತಿದ್ದುಪಡಿ ತಂದ್ರ, ಅವರು ಏಳು ವರ್ಷ ಅಧಿಕಾರದಾಗ ದೇಶದ ಜನರ ಸಲುವಾಗಿ ಮಾಡಿದ್ದು ಯಾರಿಗೆ ಎಷ್ಟು ಅನುಕೂಲ ಆಗೇತೊ ಗೊತ್ತಿಲ್ಲ. ಈ ಕಾನೂನು ತಿದ್ದುಪಡಿ ಮಾಡೂದ್ರಿಂದ ದೇಶದ ಚನಾವಣೆ ವ್ಯವಸ್ಥೆಗೂ ಮರ್ಯಾದಿ ಬರತೈತಿ. ದೇಶದ ಜನರಿಗೂ ಅನುಕೂಲ ಅಕ್ಕೇತಿ. ದೇಶದ ಜನರಿಗೆ ಅನುಕೂಲ ಆಗುವಂತಾ ಕಾನೂನು ಜಾರಿಗಿ ತರಾಕ ಯಾವ್ ರಾಜಕೀಯ ಪಕ್ಷಕ್ಕೂ ಬ್ಯಾಡಾಗಿರೋದು ದೇಶದ ದುರಂತ ಅಂತ ಅನಸ್ತೈತಿ. ಯಾಕಂದ್ರ ಕಪ್ಪಿ ಕುಲದಾರ‍್ನ ಒಂದ್ ಪಕ್ಷದಾಗ ಇರುವಂಗ ಮಾಡಾಕ ಯಾರಿಗೂ ಮನಸ್ಸಿದ್ದಂಗ ಇಲ್ಲ. ಪಕ್ಷಾ ಬಿಡಾರಿಗೆ ಮರ್ಯಾದಿ ಇಲ್ಲಂದ್ರ ಅರ‍್ನ ಸೇರಿಸಿಕೊಳ್ಳಾರಿಗಾದ್ರೂ ಮರ್ಯಾದಿ ಇರಬೇಕಲ್ಲ!.
ಇದನ್ನೂ ಓದಿ:ಉ.ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಬ್ಬರು ಸಿಎಂ,ಮೂವರು ಡಿಸಿಎಂ: ಅಸಾದುದ್ದೀನ್ ಓವೈಸಿ
ರಾಜ್ಯದಾಗೂ ಮೈತ್ರಿ ಸರ್ಕಾರದಾಗ ಮಂತ್ರಿ ಸ್ಥಾನ ಸಿಗಲಿಲ್ಲ ಅಂತೇಳಿ ಬಿಜೆಪಿಗೆ ಬಂದಾರು ಮಂತ್ರಿ ಆಗಿ, ಇಲ್ಲಿ ಅಧಿಕಾರ ಮುಗುದಕೂಡ್ಲೆ ಮತ್ತ ಕಾಂಗ್ರೆಸ್ ಕಡೆ ಜಿಗ್ಯಾಕ ಒಂದಷ್ಟು ಮಂತ್ರಿಗೋಳು ಪ್ಲ್ಯಾನ್ ಮಾಡ್ಯಾರಂತ. ಅದ್ಕ ಬಿಜೆಪ್ಯಾರು ಕಾಂಗ್ರೆಸ್ ಕಡೆ ಜಿಗಿತೇನಿ ಅನ್ನಾರ್ದು ಮಂತ್ರಿ ಸ್ಥಾನ ಈಗ ಕಸಗೊಂಡು ಪಕ್ಷಾ ಸಂಘಟನೆ ಮಾಡು ಕೆಲಸಾ ಹಚ್ಚಾಕ ಯೋಚನೆ ಮಾಡಾಕತ್ತಾರಂತ. ಇಲ್ಲೇ ಇರಾರಿದ್ರ ಪಕ್ಷಾ ಕಟ್ಟಲಿ, ಬಿಟ್ಟು ಹೋಗಾರಿದ್ರ ಈಗ ಹೋಗ್ಲಿ ಅನ್ನೋ ಲೆಕ್ಕಾಚಾರ ಹಾಕ್ಯಾರಂತ. ಅದೂ ಎಷ್ಟರ ಮಟ್ಟಿಗಿ ವರ್ಕೌಟ್ ಅಕ್ಕೇತೊ ಯಾರಿಗೊತ್ತು? ಯಾಕಂದ್ರ ಬರೇ ನಿಗಮ ಮಂಡಳಿ ಅಧ್ಯಕ್ಷರ್ನ ಬದಲಾಯ್ಸಾಕ ಆರು ತಿಂಗಳಿಂದ ಬಸ್ಕಿ ಹೊಡ್ಯಾಕತ್ತಾರು. ಯಡಿಯೂರಪ್ಪನ ಬೆಂಬಲಿರ‍್ನ ಕೈ ಬಿಟ್ರ ಎಲ್ಲಿ ಬೊಮ್ಮಾಯಿ ಸಾಹೇಬ್ರ ಸರ್ಕಾರದ ಆಯುಷ್ಯ ಮುಗಿತೈತೊ ಅಂತೇಳಿ ಹೆದರಕೋಂತ ಕುಂತಾರಂತ.
ಯಡಿಯೂರಪ್ಪ ಸಾಹೇಬ್ರೂನು ಬಿಜೆಪಿ ಹೈಕಮಾಂಡ್ ಏನೇನ್ ಮಾಡ್ತೈತೊ ನೋಡುನು ಅಂತ ತಮ್ಮ ಫ್ಯೂಚರ್ ಪ್ಲ್ಯಾನ್‌ದು ಸ್ಕೆಚ್ ಹಾಕ್ಕೊಂಡು ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗೋಳ್ನ ಮುಂಜಾನಿಂದ ಸಂಜಿಮಟಾ ನೋಡ್ಕೋಂತ ಕುಂತಾರಂತ.
ಬೊಮ್ಮಾಯಿ ಸಾಹೇಬ್ರಿಗಿ ಸಂಪುಟ ಪುನಾರಚನೆ ಮಾಡಾಕ್ ಹೋದ್ರ ವಿಜಯೇಂದ್ರನ ತೊಗೊಳ್ಳದಿದ್ರ ಕಷ್ಟ ಐತಿ ಅಂತ ಕಾಣತೈತಿ. ಅವರೂ ಒಂದ್ ರೀತಿ ಅಡಕತ್ರ್ಯಾಗ ಸಿಕ್ಕೊಂಡಂಗ ಕಾಣತೈತಿ. ಅವರಿಗೆ ಪ್ರತಿಪಕ್ಷದಾರಗಿಂತ ತಮ್ಮ ಪಕ್ಷದಾರ ಕಾಟಾನ ಜಾಸ್ತಿ ಆದಂಗ ಕಾಣತೈತಿ.
ಹೆಂಡ್ತಿ ರಿಯಲ್ ಅಪೋಜಿಷನ್ ಪಾರ್ಟಿ ಥರಾ ಕೆಲಸ ಮಾಡಿದ್ರ ಅಧಿಕಾರ ನಡಸಾರಿಗೆ ಭಾಳ ಅನಕೂಲ, ಆಡಳಿತ ಪಕ್ಷದಾಗ ಇದ್ಕೊಂಡು ಒಳಗೊಳಗ ಕಿಡ್ಡಿ ಇಡು ಕೆಲಸಾ ಮಾಡಾಕತ್ರ ಸಂಸಾರ ನಡ್ಯೂದು ಭಾಳ ಕಷ್ಟ ಐತಿ. ಬೊಮ್ಮಾಯಿ ಸಾಹೇಬ್ರಿಗೂ ಹಂಗ ಆದಂಗ ಕಾಣತೈತಿ. ಆದ್ರೂ, ಅವರು ಮದುವಿ ಆದ್ ಮ್ಯಾಲ ಹೆಂಡ್ತಿನ ಸಹಿಸಿಕೊಳ್ಳಾಕ್ ಆಗದಿದ್ರ ಮದುವೆರ ಯಾಕ್ ಆಗಬೇಕು ಅನ್ನೋ ಥರಾ, ವಟಾ ವಟಾ ಅನ್ನು ಎಂಎಲ್‌ಎಗೋಳ ಮಾತು ಕೇಳಿದ್ರು ಕೇಳಿಸದಂಗ ಸುಮ್ನ ಗಾಡಿ ಓಡ್ಸಾಕತ್ತಾರಂತ ಕಾಣತೈತಿ. ನಮಗೂ ಸಧ್ಯಕ್ಕ ಬೊಮ್ಮಾಯಿ ಮಾಡೆಲ್ಲ ಚೊಲೊ ಅಂತ ಅನಸ್ತೈತಿ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.