2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಜಾಗತಿಕವಾಗಿ ಸರಿಯಾಗಿ ಮಳೆ ಸುರಿಯದೇ, ಧಾನ್ಯಗಳಿಗೆ ಹಾನಿ ಸಂಭವ...ಭಾರತದಲ್ಲಿ ಸ್ಥಿತಿ?
Team Udayavani, Jan 1, 2025, 7:59 AM IST
ದೇವತಾನುಗ್ರಹವು ಪ್ರಾಪ್ತವಾಗಿ ಬಹಳ ಶ್ರಮದಿಂದ ಅನ್ನ, ಆಹಾರ ಪದಾರ್ಥಗಳು ಸಮೃದ್ಧಿಗೊಳ್ಳುವುದು. ವಿಶ್ವವಾಪಿ ಶಾಂತಿಗೆ ಆದ್ಯತೆ ನೀಡಲಾಗುವುದು. ಪರಸ್ಪರ ಭಿನ್ನಾಭಿಪ್ರಾಯವಿದ್ದರೂ ವಿವಿಧ ದೇಶದ ಪ್ರಜೆಗಳು ಶತ್ರುತ್ವ ಮರೆತು, ಪರಸ್ಪರ ಮಿತ್ರತ್ವಕ್ಕೆ ಆದ್ಯತೆ ನೀಡುವರು. ವ್ಯಾಪಾರ ವಹಿವಾಟುಗಳಲ್ಲಿ ಗಣನೀಯ ಪ್ರಗತಿಯಾಗಲಿದೆ. ಏಕಾಗ್ರಚಿತ್ತದಿಂದ ಪ್ರಗತಿಯತ್ತ ಗಮನ ಹರಿಸುವರು. ಔಷಧ ಪದಾರ್ಥಗಳು, ಕೃಷಿ ಸಂಬಂಧ ವಿಷಯಗಳಲ್ಲಿ ಸ್ಥಿರ-ಚರ ಆಸ್ತಿಗಳಿಗೆ ಪ್ರಾಶಸ್ತ್ಯ ಬಂದು ಮೌಲ್ಯವೃದ್ಧಿಗೊಳ್ಳುವುದು. ತೈಲ ನಿಕ್ಷೇಪಗಳು, ಸೌಂದರ್ಯ ಪದಾರ್ಥಗಳು, ದ್ರವ ಪದಾರ್ಥಗಳು ಹೇರಳವಾಗಿ ತುಂಬಿ ತುಳುಕುವುದು. ನೂತನ ಯೋಜನೆ, ವಾಹನಗಳ ಉದ್ಯಮ, ಕಟ್ಟಡಗಳು, ವಿವಿಧ ಕಾಮಗಾರಿಗಳು ಜಾರಿಗೊಳ್ಳಲಿರುವುದು. ಅಸ್ತ್ರ-ಶಸ್ತ್ರಗಳ ಪ್ರಾಬಲ್ಯ ಹ್ರಾಸಗೊಳ್ಳುವುದು. ದೀರ್ಘ ಪ್ರಯಾಣ, ಪ್ರವಾಸೋದ್ಯಮ, ಹೊಟೇಲ್ ಉದ್ಯಮಗಳು ಪ್ರಾಧಾನ್ಯ ಪಡೆಯುವುದು. ವಿಶ್ವವ್ಯಾಪಿ ಜನರು ಸದಾ ಆರ್ಥಿಕ ಬಲಿಷ್ಠತೆಗಾಗಿ ವ್ಯಾಪಾರೀ ಮನೋಭಾವದಿಂದ ವ್ಯವಹರಿಸುವಂತಾಗುವರು. ವಿದ್ಯೆ, ಜ್ಞಾನಕ್ಕೆ ಪ್ರಾಧಾನ್ಯ, ಅವಕಾಶ ಕಡಿಮೆಯಾಗಿ ಬದುಕುವ ದಾರಿ ಹುಡುಕುವರು. ಮಾಡುವಂತಹ ವ್ಯವಹಾರಗಳಿಂದ ಹೆಚ್ಚಿನ ಒತ್ತಡ, ಜವಾಬ್ದಾರಿ ಎದುರಿಸಬೇಕಾಗಿ ಬಂದರೂ ಸಫಲತೆ ಕಾಣುವರು. ಧಾರ್ಮಿಕ ಸ್ಥಳಗಳಿಗೆ ಆಪತ್ತು. ನಷ್ಟ-ಕಷ್ಟಗಳು ಎದುರಾಗುವುದು. ಧಾರ್ಮಿಕ ಆಚರಣೆಯಲ್ಲಿ ಅಡೆತಡೆಗಳು ಎದುರಾಗುವುದು. ಧಾರ್ಮಿಕ ಮುಖಂಡರು, ರಾಜಕೀಯ ನಾಯಕರುಗಳಿಗೆ ಆರೋಗ್ಯ ಸಮಸ್ಯೆ, ದೇಹಕ್ಷತಿ, ಶಸ್ತ್ರಕ್ರಿಯೆ ಸಂಭವಿಸುವುದು.
2024ರ ಡಿಸೆಂಬರ್ 15 ರಿಂದ ಜನವರಿ 15 ರ ತನಕ: ನಮ್ಮ ದೇಶದ ಪ್ರಜೆಗಳಲ್ಲಿ ವಾತ ಪ್ರಕೋಪದಿಂದ ಶಾರೀರಿಕ ಪೀಡೆ ಕಂಡುಬರುವುದು. ಮಾಡುವ ವ್ಯವಹಾರಗಳಲ್ಲಿ ಪ್ರತಿಸ್ಪರ್ಧಿಗಳಿಂದ ಒತ್ತಡ, ಪೈಪೋಟಿ ಎದುರಾಗುವುದು. ದೇಶದ ಆರ್ಥಿಕ ಸ್ಥಿತಿ ಪ್ರಗತಿದಾಯಕವಾಗುವುದು. ಷೇರು ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡುಬರುವುದು. ವಿದ್ಯೆ ವಿಚಾರಗಳಲ್ಲಿ ಉತ್ತಮ ಯೋಜನೆಗಳು ಜಾರಿಯಾಗುವುದು. ಉದ್ಯೋಗ ಸೃಷ್ಟಿಗೆ ಸರಕಾರದಿಂದ ಆದ್ಯತೆ. ಭೂಮಿ, ವಾಹನ, ಸ್ಥಿರ ಆಸ್ತಿಗಳ ಮೌಲ್ಯಗಳಲ್ಲಿ ಇಳಿಕೆ. ವ್ಯಾಪಾರ ವಹಿವಾಟುಗಳಲ್ಲಿ ಇಳಿಕೆ. ಭೌಗೋಳಿಕವಾಗಿ ಉತ್ತರ ಭಾರತದ ಜಿಲ್ಲೆಗಳಾದ ಜಮ್ಮು ಕಾಶ್ಮೀರ, ಲಡಾಕ್, ಪಂಜಾಬ್, ಉತ್ತರಾಖಂಡ, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ದೆಹಲಿ, ಮಹಾರಾಷ್ಟç, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಅರಣ್ಯ ಪರ್ವತ ಪ್ರದೇಶಗಳಲ್ಲಿ ದುರ್ಘಟನೆಗಳು, ಅವಘಡಗಳು ಸಂಭವ. ರಾಜಕೀಯ, ಧಾರ್ಮಿಕ ಮುಖಂಡರಿಗೆ ಆಪತ್ತು ಎದುರಾದೀತು. ಅನಗತ್ಯ ಖರ್ಚು ಸಂಭವ.
ಜನವರಿ 15 ರಿಂದ ಫೆಬ್ರವರಿ 14 ರ ತನಕ: ದೇಶದಲ್ಲಿ ಧಾರ್ಮಿಕ ವಿಚಾರಗಳಲ್ಲಿ ಪ್ರಗತಿ, ಅಭಿವೃದ್ಧಿ. ನೂತನ ಯೋಜನೆಗಳಿಗೆ ಚಾಲನೆ. ಸ್ಥಿರ ಚರ ಆಸ್ತಿಗಳ ಸಂಬಂಧ ಹೊಸ ನಿಯಮಗಳ ಚಾಲನೆ. ಹೆಚ್ಚಿದ ಕ್ರಯ ವಿಕ್ರಯದ ವಹಿವಾಟು. ಉದ್ಯೋಗ ಸೃಷ್ಟಿಗೆ ಆದ್ಯತೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಎದುರಾದೀತು. ವಿದ್ಯಾ ಕ್ಷೇತ್ರಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಅಧಿಕ ಒತ್ತಡದ ಪರಿಸ್ಥಿತಿ. ಉದ್ಯೋಗ ಸೃಷ್ಟಿಗೆ ಆದ್ಯತೆ. ಭೌಗೋಳಿಕವಾಗಿ ಉತ್ತರಾಖಂಡ, ನೇಪಾಳ, ಉತ್ತರಪ್ರದೇಶ, ಗೋವಾ, ಮಹಾರಾಷ್ಟ್ರ , ನಷ್ಟ ಕಷ್ಟಗಳು ಎದುರಾಗುವವು. ಉಳಿದ ರಾಜ್ಯಗಳಲ್ಲಿ ಅನುಕೂಲ ಪರಿಸ್ಥಿತಿ. ಮುಖ್ಯವಾಗಿ ಪಶ್ಚಿಮ ಕರ್ನಾತಕ ಹೊರತು, ಕರ್ನಾಟಕದ ಭಾಗ ಹೊರತು, ಉಳಿದ ಕರ್ನಾಟಕ ಭಾಗಗಳಲ್ಲಿ, ತಮಿಳುನಾಡು, ಆಂಧ್ರ, ತೆಲಂಗಾಣ, ಉತ್ತರಪ್ರದೇಶಗಳಲ್ಲಿ ಅಧಿಕ ಅಭಿವೃದ್ಧಿ ಯೋಜನೆಗಳು ಜಾರಿಗೊಳ್ಳುವುದು.
ಫೆಬ್ರುವರಿ 15 ರಿಂದ ಮಾರ್ಚ್ 14 ರ ತನಕ: ದೇಶದಲ್ಲಿ ಸಂಗೀತ, ನೃತ್ಯ, ನಾನಾ ರೀತಿಯ ಕಲೆ, ಸೈನ್ಯ, ಆರಕ್ಷಕ, ತೈಲ, ಮದ್ಯ, ಭೋಜನ ಪದಾರ್ಥಗಳು, ಆಭರಣ, ವಿವಿಧ ರತ್ನಗಳು, ಅಲಂಕಾರಿಕ ವಸ್ತುಗಳಿಗೆ, ಹೊಟೇಲ್ ಉದ್ಯಮಗಳಿಗೆ ಜವಾಬ್ದಾರಿಯುತ ನಿರ್ಣಯಗಳು ಜರಗುವುದು. ಪ್ರಜೆಗಳಲ್ಲಿ ಆರೋಗ್ಯ ಸಮಸ್ಯೆ, ಮುಖ್ಯವಾಗಿ ಗುಜರಾತ್, ಮಹಾರಾಷ್ಟç, ಉತ್ತರಪ್ರದೇಶ, ಉತ್ತರಾಖಂಡ, ನೇಪಾಳದಲ್ಲಿ ಗೋಚರಿಸುವುದು. ಆರ್ಥಿಕ ವಿಚಾರ, ಸಾಹಿತಿಗಳಿಗೆ, ಬರಹಗಾರರಿಗೆ, ಕವಿಗಳಿಗೆ, ವಿದ್ಯೆ ವಿಚಾರಗಳಲ್ಲಿ ಉತ್ತಮ ನಿಯಮಗಳು ಸಂಭವ. ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮ, ಆಮದು, ರಫ್ತು ವ್ಯವಹಾರಗಳಲ್ಲಿ ಗಣನೀಯ ಪ್ರಗತಿ.
ಮಾರ್ಚ್ 15 ರಿಂದ ಎಪ್ರಿಲ್ 14 ರ ವರೆಗೆ: ಈ ಕಾಲಾವಧಿಯಲ್ಲಿ ದೇಶದಲ್ಲಿ ನಾನಾ ರೀತಿಯ ಅಶಾಂತಿ ವಿರೋಧಗಳು ಎದುರಾಗುವುದು. ಗುಜರಾತ್, ಮಹಾರಷ್ಟç, ರಾಜಸ್ಥಾನ, ಛತ್ತೀಸ್‌ಘಡ, ಒರಿಸ್ಸಾ, ಆಂಧ್ರ ಭಾಗಗಳಲ್ಲಿ ಹೆಚ್ಚಿನ ಜಲಸಂಬಂಧಿ ಸಮಸ್ಯೆಗಳು, ಶಾರೀರಿಕ ಪೀಡೆ ಸಹ ಎದುರುಗಾಗಲಿದೆ.
2025ವಿಶ್ವದ ಪ್ರಜೆಗಳ ಪರಿಸ್ಥಿತಿ ಪ್ರಜೆಗಳ ಸ್ವಭಾವದ ಸಂಕ್ಷಿಪ್ತ ಫಲ
ಜಾಗತಿಕವಾಗಿ ಕಳೆದ ಕ್ರೋಧಿ ಸಂವತ್ಸರಕ್ಕೆ ಹೋಲಿಸಿದರೆ ಈ ಸಂವತ್ಸರವು ಶುಭಕಾರಿಯಾಗಿರುವುದು. ಪ್ರಸ್ತುತ ವರ್ಷದಲ್ಲಿ ಶನಿ, ಶುಕ್ರ ಗ್ರಹದ ಯೋಗವು ವಿಶ್ವವ್ಯಾಪಿ ಮನುಕುಲಕ್ಕೆ ಅದೃಷ್ಟ, ಉತ್ತೇಜನ, ವಿಶ್ವಾಸ, ನೂತನ ಆಸೆ ಆಕಾಂಕ್ಷೆಯನ್ನು ಅನುಗ್ರಹಿಸುವರು. ಪ್ರಜೆಗಳ ಆರೋಗ್ಯದಲ್ಲಿ ಸಮಸ್ಯೆಗಳು ಉಲ್ಭಣಿಸಿದರೂ, ಚೇತರಿಸಿಕೊಂಡು ಸುದೃಢವಾಗಿ ಇರುವುದು. ದೇವತಾನುಗ್ರಹವು ಪ್ರಾಪ್ತವಾಗಿ ಬಹಳ ಶ್ರಮದಿಂದ ಅನ್ನ ಆಹಾರ ಪದಾರ್ಥಗಳು ಸಮೃದ್ಧಿಗೊಳ್ಳುವುದು. ವಿಶ್ವವಾಪಿ ಶಾಂತಿಗೆ ಆದ್ಯತೆ ನೀಡಲಾಗುವುದು. ಪರಸ್ಪರ ಭಿನ್ನಾಭಿಪ್ರಾಯವಿದ್ದರೂ ವಿವಿಧ ದೇಶದ ಪ್ರಜೆಗಳು ಶತೃತ್ವ ಮರೆತು, ಪರಸ್ಪರ ಮಿತ್ರತ್ವಕ್ಕೆ ಆದ್ಯತೆ ನೀಡುವರು. ವ್ಯಾಪಾರ ವಹಿವಾಟುಗಳಲ್ಲಿ ಗಣನೀಯ ಪ್ರಗತಿಯಾಗಲಿದೆ. ಏಕಾಗ್ರಚಿತ್ತದಿಂದ ಪ್ರಗತಿಯತ್ತ ಗಮನ ಹರಿಸುವರು. ಔಷಧ ಪದಾರ್ಥಗಳು, ಕೃಷಿ ಸಂಬಂಧ ವಿಷಯಗಳಲ್ಲಿ ಸ್ಥಿರ ಚರ ಆಸ್ತಿಗಳಿಗೆ ಪ್ರಾಶಸ್ತ್ಯ ಬಂದು ಮೌಲ್ಯವೃದ್ಧಿಗೊಳ್ಳುವುದು. ತೈಲನೀಕ್ಷೆಪಗಳು, ಸೌಂದರ್ಯ ಪದಾರ್ಥಗಳು, ದ್ರವ ಪದಾರ್ಥಗಳು ಹೇರಳವಾಗಿ ತುಂಬಿ ತುಳುಕುವುದು. ನೂತನ, ವಾಹನಗಳ ಉದ್ಯಮ, ಕಟ್ಟಡಗಳು ವಿವಿಧ ಕಾಮಗಾರಿಗಳು ಜ್ಯಾರಿಗೊಳ್ಳಲಿರುವುದು. ಅಸ್ತ್ರ ಶಸ್ತ್ರಗಳ ಪ್ರಾಭಲ್ಯತೆ ಹ್ರಾಸಗೊಳ್ಳುವುದು. ದೀರ್ಘಪ್ರಯಾಣ, ಪ್ರವಾಸೋದ್ಯಮ, ಹೋಟೇಲು ಉದ್ಯಮಗಳು ಪ್ರಾಧಾನ್ಯತೆ ಪಡೆಯುವುದು. ವಿಶ್ವವ್ಯಾಪಿ ಜನರು ಸದಾ ಆರ್ಥಿಕ ಬಲಿಷ್ಠತೆಗಾಗಿ ವ್ಯಾಪಾರೀ ಮನೋಭಾವದಿಂದ ವ್ಯವಹರಿಸುವಂತಾಗುವರು. ವಿದ್ಯೆ, ಜ್ಞಾನಕ್ಕೆ ಪ್ರಾಧಾನ್ಯತೆ ಅವಕಾಶ ಕಮ್ಮಿಯಾಗಿ ಬದುಕುವ ದಾರಿ ಹುಡುಕುವರು. ಮಾಡುವಂತಹ ವ್ಯವಹಾರಗಳಿಂದ ಹೆಚ್ಚಿನ ಒತ್ತಡ, ಜವಾಬ್ದಾರಿ ಎದುರಿಸಬೇಕಾಗಿ ಬಂದರೂ ಸಫಲತೆ ಕಾಣುವರು. ಧಾರ್ಮಿಕ ಸ್ಥಳಗಳಿಗೆ ಆಪತ್ತು. ನಷ್ಟಕಷ್ಟಗಳು ಎದುರಾಗುವುದು. ಧಾರ್ಮಿಕ ಆಚರಣೆಯಲ್ಲಿ ಅಡೆತಡೆಗಳು ಎದುರಾಗುವುದು. ಧಾರ್ಮಿಕ ಮುಖಂಡರು, ರಾಜಕೀಯ ನಾಯಕರುಗಳಿಗೆ ಆರೋಗ್ಯ ಸಮಸ್ಯೆ, ದೇಹಕ್ಷತಿ, ಶಸ್ತ್ರಕ್ರಿಯೆ ಸಂಭವಿಸುವುದು.
ಭಾರತದಲ್ಲಿ ಸ್ಥಿತಿ
ಈ ಸಂವತ್ಸರದಲ್ಲಿ ಭಾರತದ ಆಡಳಿತದಲ್ಲಿ ಪ್ರಾಂತೀಯ ರಾಜ್ಯಗಳಲ್ಲಿ, ಅನುಕೂಲಕ್ಕಿಂತಲೂ ಪ್ರತಿಕೂಲ ಫಲಗಳೇ ಅಧಿಕವಾಗಿ ಗೋಚರಿಸುವವು. ಅನಗತ್ಯ ಶತ್ರುತ್ವ. ಪ್ರತಿಯೊಂದು ವಿಚಾರಗಳಲ್ಲಿ ಕೃಪಣತೆ, ಅಧಿಕ ಲೆಕ್ಕಾಚಾರ ಕಂಡುಬರುವುದು. ಸಾಲದ ಹೊರೆ, ಆರ್ಥಿಕ ಹಿಂಜರಿತ, ಸುಳ್ಳು ಆಶ್ವಾಸನೆ, ಢಾಂಬಿಕತೆ, ಧಾರ್ಮಿಕ ಸಂಸ್ಥೆಗಳ ಅಧಃಪತನ. ನೀಚಕೃತ್ಯಗಳು, ಸದಾ ಯಾಚನೆ, ದುರಾಚಾರ, ಅನರ್ಥ ಕಾರ್ಯಗಳು ಜರಗುವುದು. ವ್ಯಾಪಾರ ವಹಿವಾಟು, ಪಾಲುದಾರಿಕೆ ವಿಚಾರಗಳಲ್ಲಿ ಇಳಿಮುಖ, ನಷ್ಟಗಳು ಎದುರಾಗುವುದು. ಪ್ರತಿಯೊಬ್ಬರೂ ಬಹಳ ಜಾಗೃತೆಯಿಂದ ಸಂಯಮ, ವಿವೇಕದಿಂದ ಅತಿ ಆಸೆ ಪಡದೆ ಜೀವನ ಶೈಲಿ ನಿಭಾಯಿಸಿದರೆ ಅನುಕೂಲವಾದೀತು. ದಕ್ಷಿಣ ಭಾರತದ ರಾಜ್ಯಗಳು ಹೊರತು, ಉಳಿದ ರಾಜ್ಯಗಳಲ್ಲಿ ಅಧಿಕ ಸಮಸ್ಯೆಗಳು ಎದುರಾಗುವುದು.
ಈ ವರ್ಷದಲ್ಲಿ ಮೇಷಾದಿ ದ್ವಾದಶ ರಾಶಿ ಗೋಚಾರ ಫಲ
ಗ್ರಹ ಗೋಚರ ಫಲಗಳೊಂದಿಗೆ ದಶಾ, ಅಂತರ್‌ದಶಾ, ಅಷ್ಟಕವರ್ಗ, ರಾಶಿ, ಭಾವ, ಯೋಗ, ದೃಷ್ಟಿ, ಇತ್ಯಾದಿ ಹಲವು ಆಯಾಮಗಳಲ್ಲಿ ಜಾತಕವನ್ನು ವಿಮರ್ಶಿಸಿಕೊಳ್ಳಬೇಕು.
ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಿ, ರಕ್ಷಿಸಿ, ಪೋಷಿಸುವುದರಿಂದಲೂ, ತಮ್ಮ ಪೂರ್ವಿಕರಿಂದ ಉಪದೇಶಿಸಿದ, ಅನುಸರಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು, ಗೃಹದಲ್ಲಿ ಇಷ್ಟದೇವತಾ ಉಪಾಸನೆಯನ್ನು, ಭಜನೆ, ಪ್ರಾರ್ಥನೆ, ನವಗ್ರಹ ಸ್ತೋತ್ರ ಪಠಿಸುತ್ತಾ, ದೇವತಾ ಸಾನಿಧ್ಯಗಳ ಸಂದರ್ಶನ ಮಾಡುತ್ತಾ, ಸತ್ಯ, ವಿನಯ, ದಯೆ, ಕರುಣೆ, ಪ್ರೀತಿ, ವಾತ್ಸಲ್ಯ, ಅಹಿಂಸಾ ವಿಶ್ವಾಸ, ಪ್ರಾಮಾಣಿಕತೆಯಿಂದ ಕೂಡಿದ ಜೀವನಕ್ರಮವನ್ನು ನಡೆಸುತ್ತಾ ಬರುವುದರಿಂದ, ನವಗ್ರಹ ದೇವತೆಗಳು ಸುಪ್ರೀತರಾಗಿ, ಇಷ್ಟಾರ್ಥವನ್ನು, ತೃಪ್ತಿ, ಸುಖ ಶಾಂತಿ ನೆಮ್ಮದಿಗಳನ್ನು ಅನುಗ್ರಹಿಸುವರು.
29.03.2025:ಶನಿ ಗ್ರಹ ಮೀನ ರಾಶಿಗೆ ಪ್ರವೇಶ
15.05.2025:ಗುರು ಗ್ರಹ ಮಿಥುನ ರಾಶಿಗೆ ಪ್ರವೇಶ
18.05.2025:ರಾಹು ಗ್ರಹ ಕುಂಭ ರಾಶಿಗೆ ಪ್ರವೇಶ
18.05.2025: ಕೇತು ಗ್ರಹ ಸಿಂಹ ರಾಶಿಗೆ ಪ್ರವೇಶ
ಮೇಷ
ಈ ಕಾಲದಲ್ಲಿ ನೀವು ಹೆಚ್ಚಾಗಿ ಶುಭಫಲವು, ಸಾಮಾನ್ಯ ಅಶುಭಫಲವು ಅನುಭವಕ್ಕೆ ಗೋಚರಿಸುವುದು. ಆರೋಗ್ಯದಲ್ಲಿ ಸುಧಾರಣೆ. ವಿದ್ಯೆ, ಪದವಿ, ಜ್ಞಾನ ಸಂಪಾದನೆ ಮಕ್ಕಳ ವಿಚಾರದಲ್ಲಿ ಸಾಧನೆ, ಸಂತೋಷ, ನೆಮ್ಮದಿ ಲಭಿಸುವುದು. ಸ್ಥಿರ ಚರ ಆಸ್ತಿ ವಿಚಾರಗಳಲ್ಲಿ ಅನುಕೂಲಕರ ಬದಲಾವಣೆಗೊಳ್ಳುವುದು. ನೂತನ ಮಿತ್ರರ ಸಮಾಗಮ ಸಹಾಯ ಲಭಿಸುವುದು. ಆರ್ಥಿಕ ವಿಚಾರದಲ್ಲಿ ನಿರಂತರ ಧನಾರ್ಜನೆ ಉಂಟಾಗುವುದು. ಸ್ಪಷ್ಟವಾದ ಉತ್ತಮ ವಾಕ್ಚತುರತೆಯಿಂದ ವ್ಯವಹರಿಸಿ, ಜನಮೆಚ್ಚುಗೆಗೆ ಪಾತ್ರರಾಗುವಿರಿ. ದಾಂಪತ್ಯದಲ್ಲಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಚರ್ಚೆ ಎದುರಾದರೂ ಹಾನಿಯಾಗದಂತೆ ಎಚ್ಚರ ವಹಿಸುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರ ಕಾರ್ಯೋನ್ಮುಖರಾಗುವಿರಿ. ಸತ್ಕಾರ್ಯಗಳಿಗೆ ಅಧಿಕ ಧನವ್ಯಯ ಸಂಭವಿಸುವುದು. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಗಳಿಸಿ, ಜವಾಬ್ದಾರಿಯಿಂದ ಕಾರ್ಯ ವಿಸ್ತಾರಗೊಳಿಸುವ ಅವಕಾಶ ಬರುವುದು. ಏಕಾಗ್ರತೆಯಿಂದ ಕಾರ್ಯನಿರ್ವಹಿಸಿ, ನೂತನ ಆವಿಷ್ಕಾರ ಬದಲಾವಣೆ ಸಂಭವಿಸುವುದು. ಮಾತೃ ಪಿತೃ ಸಮಾನರಿಂದ ಪ್ರೋತ್ಸಾಹ ಒದಗಿಬರುವುದು. ಮೋಸ, ವಂಚನೆ, ದ್ರೋಹದ ವಿರುದ್ಧ ಸ್ಪಂದನೆ. ಚಿತ್ರಕಲೆ, ಸಂಗೀತ, ಇತ್ಯಾದಿ ನಾನಾ ಕಲೆಗಳಲ್ಲಿ ಆಸಕ್ತಿ. ಸೇವಕ ವರ್ಗದವರಿಂದ, ಶತ್ರುಗಳಿಂದ ಪೈಪೋಟಿ, ಉಪಟಳ ಸಂಭವಿಸಿದರೂ, ಹಿಡಿದಂತ ಕೆಲಸ ಪೂರ್ತಿ ಮಾಡಲು ಹೆಚ್ಚಿನ ಶ್ರಮ ವಹಿಸಿ, ತನ್ನ ಅವಲಂಬಿತರನ್ನು ಸದಾ ರಕ್ಷಿಸುವ ಪ್ರವೃತ್ತಿಯಿಂದ ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ. ಜನರ ಒಡನಾಟದಲ್ಲಿ ಹೆಚ್ಚಿದ ಆಸಕ್ತಿ. ಮುಖ್ಯವಾಗಿ ಗಮನಿಸಬೇಕಾದ ವಿಚಾರ ಪರಿಸ್ಥಿತಿಯನ್ನು ಚೆನ್ನಾಗಿ ಅರಿತು, ತಾಳ್ಮೆಯಿಂದ, ದೃತಿಗೆಡದೆ, ವಿಮರ್ಶಿಸಿ, ಸಮಯಕಾದು ಅಚಲವಾದ ಸ್ಪಷ್ಟ ತೀರ್ಮಾನದಿಂದಲೂ, ದೂರಾಲೋಚನೆಯಿಂದ ಕಾರ್ಯನಿರ್ವಹಿಸಿದರೆ ನೀವೇ ಜಯಶಾಲಿಗಳಾಗುವಿರಿ.
ವೃಷಭ
ದೇವತಾನುಗ್ರಹದಿಂದ ಈ ಕಾಲದಲ್ಲಿ ಬಹಳ ಜವಾಬ್ದಾರಿಯುತ, ಪರಿಶ್ರಮದಿಂದ ನಿಷ್ಠೆ, ಪ್ರೀತಿಯಿಂದ ಕೂಡಿದ ಕಾರ್ಯವೈಖರಿಯಿಂದ ನೀವು ಕೈಗೊಳ್ಳುವ ಎಲ್ಲಾ ವಿಚಾರಗಳಲ್ಲಿ ಯಶಸ್ಸು ಸಫಲತೆ ಕಾಣುವಿರಿ. ಅನಿರೀಕ್ಷಿತ ಧನಾಗಮನ, ಕೀರ್ತಿ ಸಂಪಾದಿಸುವಿರಿ. ಆರೋಗ್ಯದ ಬಗ್ಗೆ ಗಮನಹರಿಸುತ್ತಾ, ಶಿಸ್ತುಬದ್ಧ ನಿಯಮಪಾಲನೆ ಅಗತ್ಯ. ಕೌಟುಂಬಿಕ ಸುಖ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಹಿರಿಯರ ಮಾತಾ ಪಿತೃ, ಗುರುಗಳ ಆಶೀರ್ವಾದ ಪ್ರೀತಿ ಸದಾಕಾಲ ಲಭಿಸಲಿದೆ. ಮಕ್ಕಳ ವಿಚಾರಗಳಲ್ಲಿ ತೃಪ್ತಿ. ವಿಶಾಲ ಯೋಚನೆ, ವಿದ್ಯೆ, ಜ್ಞಾನ ವಿಚಾರದಲ್ಲಿ ಸಂಶೋಧನಾತ್ಮಕ ಸ್ವಭಾವ ಉಂಟಾಗುವುದು. ಸ್ಪಷ್ಟ, ಸ್ವಚ್ಛ, ಸಂಶವಿಲ್ಲದೆ, ಧೈರ್ಯ ಉತ್ಸಾಹದಿಂದ ಬೃಹತ್ ಯೋಜನೆಗಳಲ್ಲಿ ಆಸಕ್ತಿ, ಉತ್ಕೃಷ್ಟ ಸಾಧನೆ ಮಾಡಿದ ತೃಪ್ತಿ ನಿಮ್ಮದಾಗಲಿದೆ. ನಿಮ್ಮ ನಿರ್ಣಯಗಳು, ವಿಚಾರಗಳು ವಿರೋಧಿಗಳನ್ನು ಸ್ತಬ್ಧಗೊಳಿಸುವುದು. ನಿರಂತರ ಸತ್ಕಾರ್ಯ, ಧಾರ್ಮಿಕ ಪ್ರಬುದ್ಧ ಆಚರಣೆಗಳು, ಜನಮನ್ನಣೆಗೆ ಪಾತ್ರವಾಗುವುದು. ಮಾಡುವಂತಹ ಉಪಾಸನೆ, ಪ್ರಾರ್ಥನೆ ಫಲಿಸಿ ದೇವತಾನುಗ್ರಹ ಪಡೆಯುವಿರಿ. ವಿದೇಶ ಪ್ರಯಾಣ ಸಂಭವ. ದೂರದ ವ್ಯವಹಾರಗಳಲ್ಲಿ ಅಧಿಕ ಗೌರವ ಮಾನ್ಯತೆ ಲಭಿಸಲಿದೆ. ಮುಖ್ಯವಾಗಿ ನವಗ್ರಹರ ಗ್ರಹಸ್ಥಿತಿಯ ಅನುಕೂಲತೆಯು ನಿಮಗೆ ಹೆಚ್ಚಾಗಿ ಇರುವುದರಿಂದ ವಿಚಲಿತರಾಗದೆ, ಚಾಂಚಲ್ಯರಹಿತವಾಗಿ, ಧೈರ್ಯದಿಂದಲೂ ಸಂಯಮ, ಪ್ರಾಮಾಣಿಕತೆಯಿಂದಲೂ, ಲೋಭರಹಿತವಾಗಿ ಕಾರ್ಯಪ್ರವೃತ್ತರಾದರೆ ಯಶಸ್ಸು, ಜಯ ಸದಾ ನಿಮ್ಮ ಪಾಲಾಗಿರುವುದು.
ಮಿಥುನ
ಈ ರಾಶಿಯಲ್ಲಿ ಜನಿಸಿದವರು ಪ್ರಸ್ತುತ ವರ್ಷದಲ್ಲಿ ವಿದ್ಯೆ, ಜ್ಞಾನ, ಉನ್ನತ ಪದವಿ, ಪ್ರತಿಭೆ ಈ ವಿಚಾರಗಳಲ್ಲಿ ದೈವವು ನಿಮಗೆ ಸದಾ ಅನುಕೂಲಕಾರಿಯಾಗಲಿದೆ. ಕ್ರೀಡಾಪಟುಗಳಿಗೆ, ಆಟಗಾರರಿಗೆ ಅವಕಾಶಗಳು, ನಾನಾ ರೀತಿಯ ಸೌಲಭ್ಯಗಳು ಒದಗಿ ಬರುವುದು. ಉನ್ನತ ಶಿಕ್ಷಣಕ್ಕಾಗಿ ದೂರ ಸಂಚಾರದ ಯೋಗ. ಯೋಗ್ಯ ಶಿಕ್ಷಣ ಸಂಸ್ಥೆಗಳಲ್ಲಿ ಭಡ್ತಿ ಇತ್ಯಾದಿ ಶುಭಫಲಗಳು ಸಂಭವಿಸುವುದು. ಜನ್ಮಸ್ಥಳದಲ್ಲಿ ಮಾಡುವಂತಹ ಚಟುವಟಿಕೆಗಳ ಹೊರತು ಅನ್ಯ ಪ್ರದೇಶಗಳಲ್ಲಿ ನೀವು ತೋರುವ ನಿಷ್ಠೆ, ವಿಚಾರಧಾರೆ, ಜವಾಬ್ದಾರಿಯು ನಿಮ್ಮ ಸಹೋದ್ಯೋಗಿ ಸಹಚರರಿಂದ ಸಹಕಾರ ಪ್ರೋತ್ಸಾಹ ಲಭಿಸಿ, ಸಕಲಗೌರವ ಲಭಿಸಿ, ಕೀರ್ತಿವಂತರನ್ನಾಗಿಸುವ ಕಾಲವಾಗಿರುವುದು. ಸದಾಚಾರಕ್ಕೆ ಆದ್ಯತೆ ನೀಡಿ. ಧರ್ಮಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಆಮಿಷಕ್ಕೆ ಒಳಗಾಗದಂತೆ ಎಚ್ಚರ ವಹಿಸಿ. ಮಾತಿನಲ್ಲಿ ಸ್ಪಷ್ಟತೆ, ನೇರನುಡಿ, ಕೇಳುಗರಿಗೆ ತತ್ಕಾಲ ಬೇಸರವಾದರೂ, ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶವಿರುವುದಿಲ್ಲ. ಸ್ಥಿರ ಚರ ಆಸ್ತಿಗಳ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಮಾತಾಪಿತರ ಆರೋಗ್ಯದ ಬಗ್ಗೆಯೂ ಅಧಿಕ ಕಾಳಜಿ ಅಗತ್ಯ. ತಾತ್ಕಾಲಿಕವಾಗಿಯೂ, ಸಾಂದರ್ಭಿಕವಾಗಿಯೂ ಮಿತ್ರತ್ವದಿಂದ ಅನುಕೂಲ. ದೀರ್ಘಕಾಲದ ಮಿತೃತ್ವದಿಂದ ನಷ್ಟ ಎದುರಿಸಬೇಕಾಗಬಹುದು. ದಾಂಪತ್ಯ ತೃಪ್ತಿಕರವಾಗಿರುವುದು. ನೃತ್ಯ, ವಾದನ, ಸಂಗೀತಾದಿ ಮನೋರಂಜನೆಗಳಿಗೆ ಆದ್ಯತೆ ಮನಃಸಂತೋಷ. ನಿಯಮಾನುಸಾರ ತಿಳುವಳಿಕೆಯಿಂದ ದೇವತಾ ಉಪಾಸನೆ ಮಾಡುವಿರಿ. ಸಂದರ್ಭಕ್ಕೆ ಸರಿಯಾಗಿ ಸಹಾಯ ಕೂಡಿಬರುವುದು. ನಾನಾ ರೀತಿಯ ಬೆಲೆಬಾಳುವ ಆಭರಣಗಳು, ವಸ್ತುಗಳನ್ನು ಸಂಗ್ರಹಿಸುವ ಕಾಲ.
ಕರ್ಕಾಟಕ
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸ್ತುತ ವರ್ಷವು ಶುಭದಾಯಕವಾಗಲಿದೆ. ಆರೋಗ್ಯ ಸುಧಾರಿಸುವುದು. ಆರ್ಥಿಕ ವಿಚಾರದಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಸ್ಥಿರ ಚರ ಆಸ್ತಿಗಳ ಕ್ರಯವಿಕ್ರಯಗಳಲ್ಲಿ ಸಮಾಧಾನ, ತೃಪ್ತಿ. ಉದ್ಯೋಗ ವ್ಯವಹಾರಗಳು ನಿರಂತರವಾಗಿ ನಿಮ್ಮನ್ನು ಅವಲಂಬಿಸುವುದು. ನಿಮ್ಮ ವೈಯಕ್ತಿಕ ಶ್ರಮವೇ ಪ್ರಧಾನವಾಗಿರುವುದು. ಅನ್ಯರ ಸಹಾಯ ದೊರಕದು. ಅನ್ಯರ ಮೇಲೆ ಅವಲಂಬಿತರಾದಲ್ಲಿ ಯಶಸ್ಸು ಲಭಿಸದು. ಧೈರ್ಯ ಪರಾಕ್ರಮ ಉಪಾಯಗಳು ಸಹಕಾರಿಯಾಗಲಾರದು. ಪ್ರಾಮಾಣಿಕತೆ, ಸ್ಪಷ್ಟತೆಯ ನಡವಳಿಕೆಗಳು ಮಾತ್ರ ಅರ್ಹವಾಗುವುದು. ವಿದ್ಯೆ, ಜ್ಞಾನ, ಪ್ರತಿಭೆ ವಿಚಾರಗಳಲ್ಲಿ ಹಂತಹಂತವಾಗಿ ಅಭಿವೃದ್ಧಿಗೊಳ್ಳುವುದು. ನಿಮ್ಮ ಸ್ವಭಾವದಿಂದ ಅನಗತ್ಯವಾಗಿ ಶತ್ರುಗಳನ್ನು ಸೃಷ್ಟಿಮಾಡಿಕೊಂಡು ಸಮಸ್ಯೆ ಎದುರಿಸುವಿರಿ. ಸಾಧ್ಯವಾದಷ್ಟು ಇಂತಹ ಪ್ರವೃತ್ತಿಗಳಿಂದ ದೂರವಿರಿ. ಇಲ್ಲದಿದ್ದರೆ ಅನಗತ್ಯ ದೈಹಿಕ, ಮಾನಸಿಕ ವ್ಯಾಧಿ ಸಂಭವದ ಲಕ್ಷಣವಿದೆ. ಗುರುಹಿರಿಯರಲ್ಲಿ ಮನಸ್ತಾಪಕ್ಕೆ ಅವಕಾಶ ನೀಡದೆ, ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗಲು ಪ್ರಯತ್ನಿಸಿ. ದೈವಿಕ ಸಾಧನಾ ವಿಚಾರದಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ. ಧರ್ಮಮಾರ್ಗದಲ್ಲಿ ಅನಗತ್ಯ ಅಡಚಣೆಗಳು, ಮೋಸ, ವಂಚನೆಗಳು ಸಂಭವ. ಪಾಲುದರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ. ನೂತನ ಬಂಧುಮಿತ್ರರ ಭೇಟಿ; ಸಮಾಗಮದಿಂದ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮಾತಾ ಪಿತೃ, ಗುರುಗಳ ಆರೋಗ್ಯಕ್ಕೆ ಹೆಚ್ಚು ಗಮನಹರಿಸಿ. ಮುಖ್ಯವಾಗಿ ಈ ಸಂವತ್ಸರದಲ್ಲಿ ತಾಳ್ಮೆ, ಪಾರದರ್ಶಕತೆ, ಅನ್ಯರ ವಿಚಾರದಲ್ಲಿ ಹಸ್ತಕ್ಷೇಪ ಮಾಡದೆ ವ್ಯವಹರಿಸಿದಲ್ಲಿ ಸುಖ ಶಾಂತಿ, ಪ್ರಗತಿ ಪಡೆಯುವಿರಿ.
ಸಿಂಹ
ಸಿಂಹರಾಶಿಯಲ್ಲಿ ಜನಿಸಿದ ನಿಮಗೆ ಈ ಸಂವತ್ಸರದಲ್ಲಿ ಸಂಭವಿಸುವ ಗೋಚಾರಫಲಗಳು. ಪ್ರತಿಯೊಂದು ವಿಚಾರದಲ್ಲಿ ನೀವು ತಲ್ಲೀನರಾಗಿ ಅಧಿಕ ಶ್ರಮ ವಹಿಸಿ, ಕಾರ್ಯತತ್ಪರರಾದರೂ ವಿಳಂಬವಾಗಿ ನಿರೀಕ್ಷಿಸಿದ ಫಲ ದೊರಕಲಿಲ್ಲ ಎನ್ನುವ ಬೇಸರ. ಅಧಿಕವ್ಯಯ, ಅನಗತ್ಯ ಪ್ರಯಾಣಾದಿಗಳು ಎದುರಾದೀತು. ವಾಗ್ದಾನ ಮಾಡುವಾಗ ಅತೀ ಎಚ್ಚರಿಕೆ ಅಗತ್ಯ. ಕೊಟ್ಟ ಮಾತನ್ನು ಉಳಿಸಲು ನಿಮ್ಮ ಸುಖ ಸಂಪತ್ತು ಕಳೆದುಕೊಳ್ಳುವ ಸ್ಥಿತಿ ಎದುರಾದೀತು. ವಿವೇಕದಿಂದ ಆತುರತೆ ಮಾಡದೆ ಪೂರ್ವಾಪರ ಸರಿಯಾಗಿ ತಿಳಿದು, ತಾತ್ಕಾಲಿಕ ನಿರ್ಣಯಗಳನ್ನು ಅವಲಂಬಿಸಿದರೆ ಸಫಲತೆ ಸಂಭವ. ದೀರ್ಘಕಾಲೀನ ಇತರ ವಿಚಾರಧಾರೆಗಳು ಸಹಕಾರಿಯಾಗಲಾರದು. ಸ್ಥಾನ ಗೌರವ ಉಳಿಸಲು ಅಧಿಕ ಶ್ರಮ. ಸಾಲದ ಮೊರೆ ಹೋಗುವವರು, ಸಾಲ ಕೊಡುವವರು ಬಹಳ ಎಚ್ಚರದಿಂದ ವ್ಯವಹರಿಸಿ. ಮಾತಾ ಪಿತೃ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ಥಿರ ಚರ ಆಸ್ತಿಗಳ ಕ್ರಯ ವಿಕ್ರಯದಲ್ಲಿ ಪಾರದರ್ಶಕತೆಗೆ ಆದ್ಯತೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ, ಪಾಲುದಾರಿಕೆಗಳಲ್ಲಿ ಗಣನೀಯ ಅಭಿವೃದ್ಧಿ ಸಂಭವ. ನಷ್ಟವಸ್ತುಗಳ ಪರಾಮರ್ಶೆ; ಮರಳಿ ದೊರಕುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಅಧ್ಯಯನ ನಿರತರಿಗೆ, ವಿಪುಲ ಅವಕಾಶಗಳು ಒದಗಿಬರುವುದು. ಸಾಂಸಾರಿಕ ಸುಖ ತೃಪ್ತಿಕರ. ದೀರ್ಘ ಪ್ರಯಾಣ, ವಿದೇಶಿ ವ್ಯವಹಾರಗಳಲ್ಲಿ ತೃಪ್ತಿಕರ ಫಲಿತಾಂಶ ಪಡೆಯುವಿರಿ.
ಕನ್ಯಾ
ಈ ವರ್ಷದಲ್ಲಿ ಶುಭಾಶುಭ ಮಿಶ್ರ ಫಲಗಳು ಅನುಭವಕ್ಕೆ ಬರುವುದು. ಸರಿಯಾದ ಶಿಸ್ತು, ನಿಯಮ ಪಾಲನೆಯಿಂದ ದೈಹಿಕ ಆರೋಗ್ಯವು ಸುಸ್ಥಿತಿಯಲ್ಲಿರುವುದು. ಸಾಂಸಾರಿಕ ಸುಖ ಅತ್ಯುತ್ತಮ. ಕೌಟುಂಬಿಕದಿಅದ ಸುಖ ಸಂತೋಷ ಗಳಿಸುವರಿ. ಗುರು ಹಿರಿಯರ, ಮಾತಾ ಪಿತೃ ಸಮಾನರ ಆಶೀರ್ವಾದ, ಮಾರ್ಗದರ್ಶನದ ಲಾಭ ಪಡೆಯುವಿರಿ. ಪ್ರಯಾಣಾದಿಗಳಲ್ಲಿ ಸುಖ ಸಂತೋಷ ಪ್ರಾಪ್ತಿ. ಆರ್ಥಿಕ ವಿಚಾರದಲ್ಲಿ ನಿರಂತರ ಧನಾಗಮವಾಗಿ ಸಂಪತ್ತಿನ ಅಭಿವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಸಹಾಯ ಲಭಿಸಿ, ನಿರೀಕ್ಷಿಸಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗೃಹ ವಾಹನಾದಿ ಸ್ಥಿರ ಚರ ವಸ್ತುಗಳ ವ್ಯವಹಾರದಲ್ಲಿ ಲಾಭ. ಗೃಹೋಪಕರಣ ವಸ್ತು ಸಂಗ್ರಹ. ವಿದ್ಯೆ ವಿಚಾರದಲ್ಲಿ ಅನಿರೀಕ್ಷಿತ ವಿಪುಲ ಅವಕಾಶ ಒದಗಿ ಬರುವುದು. ವಿದೇಶಿ ಸಂಸ್ಥೆಗಳಿಂದ ಸವಲತ್ತು ಲಭಿಸುವುದು. ಬಹಳ ಜವಾಬ್ದಾರಿಯುತ ನಡವಳಿಕೆಯಿಂದ ಸಮಾಜದಲ್ಲಿ ಸ್ಥಾನ ಮಾನ, ಗೌರವಕ್ಕೆ ಪಾತ್ರರಾಗಿ ಜನಪ್ರಿಯರಾಗುವ ಅವಕಾಶ ಲಭಿಸಲಿದೆ. ಧಾರ್ಮಿಕ ವಿಚಾರಗಳಲ್ಲಿ ಅಡಚಣೆಗಳು ಎದುರಾದಾವು. ಇದರಿಂದ ಮಾನಸಿಕ ಅತೃಪ್ತಿ ಸಂಭವಿಸಿದರೂ, ದೃತಿಗೆಡದೆ, ಜವಾಬ್ದಾರಿಯಿಂದಲೂ, ಸರಿಯಾದ ಯೋಜನೆಗಳಿಂದಲೂ ಕಾರ್ಯಸಾಧನೆಯಾಗುವುದು.
ತುಲಾ
ಈ ವರ್ಷದಲ್ಲಿ ದೈವವು ನಿಮ್ಮ ಮೆಲೆ ವಿಶೇಷ ಕೃಪೆ ಬೀರಿದೆ. ಸದಾಕಾಲ ಚಟುವಟಿಕೆಗಳಿಂದಲೂ, ಮನೋಲ್ಲಾಸದಿಂದ ಉದಯೋನ್ಮುಖವಾಗಿ ಕಾರ್ಯಪ್ರವೃತ್ತರಾಗುವಿರಿ. ವಿಪುಲ ಅವಕಾಶಗಳು ನಿಮ್ಮನ್ನು ಆಶ್ರಯಿಸಲು ಬರುವುದು. ನಿರಂತರ ಅಧ್ಯಯನ, ನೂತನ ವಿಚಾರಧಾರೆಗಳಲ್ಲಿ ತಲ್ಲೀನರಾಗುವಿರಿ. ಈ ಪ್ರಯುಕ್ತ ಸಾಂಸಾರಿಕ ಸುಖದಲ್ಲಿ ಗಮನಹರಿಸಲು ಸಾಧ್ಯವಾಗದೆ ಸ್ವಲ್ಪ ಬೇಸರ ತಂದೀತು. ಆರೋಗ್ಯದಲ್ಲಿ ಗಣನೀಯ ಪ್ರಗತಿ. ಆಸ್ತಿ ಸಂಚಯನ ಸಂಗ್ರಹದಲ್ಲಿ ಆಸಕ್ತಿ. ನಿರಂತರ ಧನಾಗಮದಿಂದ ಆತ್ಮಸ್ಥೈರ್ಯ ವೃದ್ಧಿ. ನಿಮ್ಮ ಕಾರ್ಯಶೈಲಿಯಿಂದ ಎಲ್ಲರನ್ನೂ ಆಕರ್ಷಿತರನ್ನಾಗಿಸುವ ಅವಕಾಶ. ನಿಮ್ಮ ವಿರೋಧಿಗಳು ಪೈಪೋಟಿ ನೀಡದೆ ಸ್ತಬ್ಧರಾಗುವರು. ಪಾಲುದಾರಿಕೆ ಕ್ಷೇತ್ರದಲ್ಲಿ, ಪುರಾತನ ವಿಚಾರಗಳ ಪುನರುತ್ಥಾನಕ್ಕೆ ಅವಕಾಶಗಳು ಒದಗಿ ಬರುವುದು. ಸಂಶೋಧನಾತ್ಮಕ ಗುಣ, ಸ್ವಭಾವದಿಂದ ಆಳವಾದ ಜ್ಞಾನ ಸಂಪಾದನೆ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ಸವಲತ್ತು ಅನುಕೂಲತೆಗಳು ಸಿಗುವುದು. ಸಂದರ್ಭಕ್ಕೆ ಸರಿಯಾಗಿ ಪ್ರದರ್ಶಿಸಿದ ಪ್ರತಿಭೆ ವಿಕಸನವಾಗಿ ಪ್ರಶಸ್ತಿಗೆ ಪಾತ್ರರಾಗಿ ಕೀರ್ತಿವಂತರಾಗುವ ಅವಕಾಶಗಳು ಒದಗಿಬರುವುದು. ಶಿಸ್ತುಬದ್ಧ ಆಚಾರ ವಿಚಾರ ಪಾಲಿಸಿದರೆ, ಸ್ತ್ರೀ ಪುರುಷರು ಪರಸ್ಪರ ಸಹಾಯ ನಿರತರಾಗುವರು. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುವುದು.
ವೃಶ್ಚಿಕ
ಸದಾ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಆಸಕ್ತಿ ಭರಿತರಾಗಿ ಸಾಧನೆ ಮಾಡಲು ಪ್ರಯತ್ನಿಸಿ ಸಫಲತೆ ಪಡೆಯುವಿರಿ. ದೀರ್ಘ ಪ್ರಯಾಣ, ದೇಶ ವಿದೇಶಗಳ ಮಿತ್ರರೊಂದಿಗೆ ಸಂಪರ್ಕ ಬೆಳೆಸುವಲ್ಲಿ ಸಫಲತೆ ಕಾಣುವಿರಿ. ರಾಜಕೀಯ, ಸಾಮಾಜಿಕ ಶೈಕ್ಷಣಿಕ ವಿಚಾರಗಳ ಚಟುವಟಿಕೆಗಳಲ್ಲಿ ಜವಾಬ್ದಾರಿ ವಹಿಸಿ, ಸತ್ಕಾರ್ಯಕ್ಕೆ ಧನವ್ಯಯ ಸಂಭವಿಸಿ, ಯಶಸ್ಸು ಗಳಿಸಿ, ಆತ್ಮತೃಪ್ತಿ ಅನುಭವಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಅನಗತ್ಯ ಒತ್ತಡಕ್ಕೆ ಒಳಗಾಗಬಾರದು. ಹಣಕಾಸಿನ ವಿಚಾರದಲ್ಲಿ ವಿಪುಲ ಅವಕಾಶಗಳು ಕೂಡಿ ಬಂದು ನಿರಂತರ ಧನಾಗಮವಾಗಿ ಸಂಪತ್ತು ಕ್ರೋಢೀಕರಿಸಿ, ಸ್ಥಿರ ಚರ ಆಸ್ತಿಗಳ ಸಂಗ್ರಹವಾಗುವುದು. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದಂತೆ ವ್ಯವಹರಿಸಿ. ಸಹೋದರಾದಿಗಳಿಂದಲೂ, ಸಹೋದ್ಯೋಗಿಗಳಿಂದಲೂ, ಸೇವಕ ವರ್ಗದವರಿಂದ ಉತ್ತಮ ಸಹಕಾರ ಲಭಿಸಲಿದೆ. ವಿದ್ಯೆ, ಜ್ಞಾನಾದಿ ವಿಚಾರಗಳಲ್ಲಿ ಅನುಕೂಲ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಎದುರಿಸಿದರೂ ಅಂತಿಮ ಫಲ ಉತ್ಕೃಷ್ಟ ರೀತಿಯಲ್ಲಿ ಸಿಗಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಸ್ಪರ್ಧೆ, ಪೈಪೋಟಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸುವಿರಿ. ಸದಾ ಕಾಲ ನೂತನ, ವಿಶಿಷ್ಟ ಶೈಲಿಯಲ್ಲಿ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು, ಯೋಜನೆಗಳನ್ನು ಸಂಪೂರ್ಣಗೊಳಿಸಿ, ಜನಮನ್ನಣೆ ಪಡೆಯುವಿರಿ.
ಧನು
ಅಧಿಕ ಪರಿಶ್ರಮ ಆತ್ಮವಿಶ್ವಾಸದಿಂದ ಕಾರ್ಯಸಾಧಿಸಿ ಸಫಲತೆ ಲಭಿಸಿದ ಆತ್ಮತೃಪ್ತಿ. ಆರೋಗ್ಯದ ಬಗ್ಗೆ ಗಮನ ಅಗತ್ಯ. ಉದಾಸೀನತೆ ಮಾಡದೆ ಸರಿಯಾದ ನಿಯಮ ಶಿಸ್ತು ಪಾಲಿಸಬೇಕು. ಆರ್ಥಿಕ ವಿಚಾರದಲ್ಲಿ ನಿರಂತರ ಧನ ಸಂಚಯನದ ಅಭಿವೃದ್ಧಿಯಾದರೂ ಅನಗತ್ಯ ಖರ್ಚುಗಳಿಗೆ ಅವಕಾಶ ಸಂಭವ. ಸಾಲಗಾರರಿಂದ ಮುಕ್ತಿ. ದಾಕ್ಷಿಣ್ಯಕ್ಕೆ ಒಳಗಾಗದೆ ವ್ಯವಹರಿಸಿ. ಉದ್ಯೋಗ, ವ್ಯವಹಾರಗಳಲ್ಲಿ ಪರಿವರ್ತನೆ ಸಂಭವ. ಸ್ಥಾನಪಲ್ಲಟ ಸಂದರ್ಭದಲ್ಲಿ ಆತುರವಾಗಿ ನಿರ್ಣಯಿಸದೇ, ಪೂರ್ವಾಪರ ವಿಮರ್ಶೆ ಮಾಡಿ, ನಿರ್ಧಾರಕ್ಕೆ ಬರುವುದು ಸೂಕ್ತ. ಗುರು ಹಿರಿಯರ ಮಾರ್ಗದರ್ಶನದ ಲಾಭ ಪಡೆಯಿರಿ. ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲಕರ ಪರಿಸ್ಥಿತಿ ಒದಗಿಬರಲಿದೆ. ಸಾಂಸಾರಿಕ ಸುಖ ತೃಪ್ತಿಕರ. ಮಾತಾ ಪಿತರ ಆರೋಗ್ಯದ ಕಡೆ ಗಮನ ಅಗತ್ಯ. ಮಕ್ಕಳ ವಿಚಾರದಲ್ಲಿ ಅತೀ ಸಂತಸ ತರುವುದು. ಗಳಿಸಿದ ಸ್ಥಾನ, ಗೌರವಾದಿಗಳನ್ನು ಉಳಿಸಲು ಬಹಳ ಜವಾಬ್ದಾರಿಯುತ ಪರಿಶ್ರಮಪಟ್ಟು ಇನ್ನೂ ಹೆಚ್ಚಿನ ಕೀರ್ತಿ ಸಂಪಾದಿಸುವಿರಿ.
ಮಕರ
ಪ್ರಸ್ತುತ ವರ್ಷದಲ್ಲಿ ಸಂಭವಿಸುವ ಶುಭಾಶುಭ ಫಲ. ದೈಹಿಕ, ಮಾನಸಿಕ ಆರೋಗ್ಯದಲ್ಲಿ ಸುಧಾರಣೆ. ಮೃದುವಾದ ವಾಕ್ಚತುರತೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು. ನಿರಂತರ ಲಾಭ ರೀತಿಯಲ್ಲಿ ಧನಾಗಮ. ಆರ್ಥಿಕ ಮುಗ್ಗಟ್ಟಿನಿಂದ ಬಿಡುಗಡೆ. ಪರರ ಅವಲಂಬನೆ ಮಾಡದೆ ನಿಮ್ಮ ಸ್ವಂತ ಪ್ರಯತ್ನದಿಂದ ಕಾರ್ಯೋನ್ಮುಖರಾದರೆ ಯಶಸ್ಸು ಲಭಿಸಲಿದೆ. ಸ್ಥಿರ ಚರ ಆಸ್ತಿಗಳ ಕ್ರಯವಿಕ್ರಯದಲ್ಲಿ ಸಫಲತೆ. ಮಕ್ಕಳ ವಿಚಾರದಲ್ಲಿ ಪರಿಶ್ರಮ ಎದುರಾದರೂ, ಉತ್ತಮ ಫಲಿತಾಂಶ ಸಿಗುವುದರಿಂದ ಮಾನಸಿಕ ತೃಪ್ತಿ. ವಿದ್ಯೆ, ಜ್ಞಾನಾದಿ ವಿಚಾರಗಳಿಗೆ ಹೊರ ದೇಶದಲ್ಲಿ ಅವಕಾಶ ಒದಗಿ ಬರುವುದು. ನಿರಂತರ ಅಧ್ಯಯನಾಸಕ್ತಿ, ಉತ್ತಮ ವಿಚಾರಧಾರೆ, ಸಂದರ್ಭಕ್ಕೆ ಸರಿಯಾದ ಪ್ರತಿಭೆ ಪ್ರದರ್ಶಿಸಿ, ಗೌರವಾದರಗಳನ್ನು ಪಡೆಯುವಿರಿ. ಹಿತಶತ್ರುಗಳ ಬಾಧೆ ಕಾಡುವುದು. ಸಾಂಸಾರಿಕ ಸುಖ ಅತ್ಯುತ್ತಮವಾಗಿದ್ದು, ಪರಸ್ಪರ ಸಹಕಾರ ಲಭಿಸಲಿದೆ. ಕುಟುಂಬಿಕರಿಂದಲೂ, ಮಾತಾ ಪಿತೃ ಸಮಾನರ ಪ್ರೋತ್ಸಾಹ, ಮಾರ್ಗದರ್ಶನದ ಲಾಭ ಪಡೆಯಲಿದ್ದೀರಿ. ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ಹಾಗೂ ಸನ್ನಿಧಿಗಳ ಸಂದರ್ಶನ ಮಾಡುವಿರಿ.
ಕುಂಭ
ಈ ಕಾಲಾವಧಿಯಲ್ಲಿ ದೈಹಿಕ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣುವಿರಿ. ಸ್ಥಾನಮಾನ ಗೌರವ, ಕೀರ್ತಿಗಳಿಸಲಿದ್ದೀರಿ. ಉತ್ತಮ ಬಂಧುಮಿತ್ರರ ಭೇಟಿ, ಪರಸ್ಪರ ಸಹಕಾರದಿಂದ ಕಾರ್ಯಸಾಧಿಸುವಿರಿ. ಸ್ಥಿರ ಚರ ಆಸ್ತಿಗಳಲ್ಲಿ ನಿರೀಕ್ಷೆಗೂ ಮೀರಿ ಲಾಭ, ಅಭಿವೃದ್ಧಿ ಹೊಂದುವಿರಿ. ಸಂದರ್ಭಕ್ಕೆ ಸರಿಯಾಗಿ ಅದೃಷ್ಟವು ನಿಮ್ಮನ್ನು ಹುಡುಕಿಕೊಂಡು ಬರುವುದು. ಆಮದು, ರಫ್ತು, ದೀರ್ಘ ಪ್ರಯಾಣ, ವಿದೇಶೀ ವ್ಯವಹಾರಗಳಲ್ಲಿ ಅಧಿಕ ಯಶಸ್ಸು, ಕೀರ್ತಿ ಲಾಭ ಸಂಭವ. ಮಾತಾ ಪಿತ, ಗುರು ಹಿರಿಯರ ಸಂಪೂರ್ಣ ಸಹಕಾರ, ಪ್ರೋತ್ಸಾಹ ಸಿಗುವುದು. ಆರ್ಥಿಕ ವಿಚಾರಗಳಲ್ಲಿ ಮುಂಜಾಗೃತಾ ನಿಯಮಗಳು ಅಗತ್ಯ. ಅನಗತ್ಯ ಸಾಲದ ಮೊರೆ ಹೋಗಬಾರದು. ಮಾತಿನಲ್ಲಿ ಸ್ಪಷ್ಟತೆ ಇರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟ ಕಷ್ಟ ಎದುರಾಗುವ ಸಾಧ್ಯತೆ. ಕುಟುಂಬಿಕರೊಂದಿಗೆ ಪಾರದರ್ಶಕತೆ ಅಗತ್ಯ. ಮಕ್ಕಳ, ಸಹೋದರ ಸಹೋದರಿ ವರ್ಗದವರ ಆರೋಗ್ಯ ಗಮನಿಸಿ. ಹಿತಶತ್ರುಗಳಿಂದ ಕಿರುಕುಳ ಎದುರಾದರೂ, ಯಾವುದೇ ರೀತಿ ನಷ್ಟ ಸಂಭವಿಸದು. ಧೈರ್ಯ, ಉತ್ಸಾಹದಿಂದಲೂ ಹಾಗೂ ಸಂದರ್ಭಕ್ಕೆ ಸರಿಯಾಗಿ ಸಿಗುವ ಸಹಾಯದಿಂದ ನೀವು ಕೈಗೆತ್ತಿಕೊಳ್ಳುವ ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ. ಚರಿತ್ರೆ ನಿರ್ಮಿಸಿ, ಸಮಾಜದಲ್ಲಿ ಯೋಗ್ಯ ಸ್ಥಾನ ಮಾನ, ಗೌರವಗಳಿಗೆ ಪಾತ್ರರಾಗುವಿರಿ.
ಮೀನ
ಈ ಕಾಲಾವಧಿಯಲ್ಲಿ ಹಲವಾರು ಸುಖ ದುಃಖ ಅನುಭವಿಸುವ ಸಂಭವ. ಸ್ಥಿರ ಚರ, ಆಸ್ತಿ ವಿಚಾರಗಳಲ್ಲಿ ವ್ಯವಹರಿಸುವಾಗ ಮೋಸ ಆಗದಂತೆ ಎಚ್ಚರ ಅಗತ್ಯ. ಆರ್ಥಿಕ ಅಭಿವೃದ್ಧಿ ಕಂಡರೂ ಸರಿಯಾದ ನಿಯಮ, ಶಿಸ್ತುಪಾಲನೆ ಅಗತ್ಯ. ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯವಾಗಿದ್ದು, ಹೆಚ್ಚಿನ ಉನ್ನತ ಶಿಕ್ಷಣಕ್ಕೆ ವಿಪುಲ ಅವಕಾಶ ಒದಗಿಬರಲಿದೆ. ಧಾರ್ಮಿಕ ಶೃದ್ಧೆ, ಚಟುವಟಿಕೆಗಳಲ್ಲಿ ಸಕ್ರಿಯ ವಾತಾವರಣವಿರುವುದು. ಪಾಲುಗಾರರ ಪರಿಸ್ಥಿತಿ ಅರಿತು ವ್ಯವಹರಿಸಿದರೆ ಅಭಿವೃದ್ಧಿ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲಕರ ಬದಲಾವಣೆ. ಭಡ್ತಿ ಸಂಭವ. ಲಾಭದಾಯಕ ಹೂಡಿಕೆಗಳಲ್ಲಿ ಅಧಿಕ ಧನ ವಿನಿಯೋಗ ಮಾಡುವಿರಿ. ಪರ ಊರಿನಲ್ಲಿ ವ್ಯಹರಿಸುವ ಕಾರ್ಯಗಳಲ್ಲಿ ಸ್ಥಾನ, ಗೌರವ, ಪ್ರತಿಷ್ಠೆ ಲಭಿಸಿದ ತೃಪ್ತಿ. ಪ್ರತಿಕೂಲ ಸಮಯವನ್ನು ಉತ್ತಮವಾಗಿ ನಿಭಾಯಿಸುವಿರಿ. ಹಿತ ಶತ್ರುಗಳ ಸ್ಪರ್ಧೆ, ಪೈಪೋಟಿ ಸಂಭವಿಸಿದರೂ, ಕುಟುಂಬಿಕರಿಂದಲೂ, ಗುರುಹಿರಿಯರಿಂದಲೂ ಸಂದರ್ಭಕ್ಕೆ ಸರಿಯಾಗಿ ಪ್ರೋತ್ಸಾಹ, ಮಾರ್ಗದರ್ಶನ ಒದಗಿಬಂದು, ಆತ್ಮಸ್ಥೈರ್ಯದಿಂದ ಕಾರ್ಯವನ್ನು ನಿರ್ವಹಿಸಿ, ಜಯಶಾಲಿಗಳಾಗುವಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.