ವಿಧಾನಸಭೆ ಚುನಾವಣೆ: ಕಾರ್ಯತಂತ್ರ, ಸೇನೆ ಎಲ್ಲವೂ ಸಿದ್ಧ
Team Udayavani, Mar 30, 2023, 6:25 AM IST
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎಲ್ಲ ಪಕ್ಷಗಳೂ ಕಳೆದ ಕೆಲವು ತಿಂಗಳುಗಳಿಂತ ಭರ್ಜರಿ ತಯಾರಿಯನ್ನೇ ನಡೆಸಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದರೆ, ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸಿದೆ. ಜೆಡಿಎಸ್ ಪಂಚರತ್ನ ಯಾತ್ರೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿವೆ. ಈಗ ಮೂರು ಪಕ್ಷಗಳೂ ಮುಂದಿನ ತಯಾರಿಯಾದ ಟಿಕೆಟ್, ಪ್ರಚಾರದತ್ತ ಗಮನ ನೀಡಲು ಮುಂದಾಗಿವೆ.
ಮಹಾಸಂಗಮದ ಹುಮ್ಮಸ್ಸು
ಕಳೆದೆರಡು ದಿನಗಳಿಂದಲೇ ನೀತಿ ಸಂಹಿತೆ ಜಾರಿಯ ನಿರೀಕ್ಷೆ ಯಲ್ಲಿದ್ದ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಗಾಗಿ ಈಗಾಗಲೇ ಭರ್ಜರಿ ಸಿದ್ಧತೆಯನ್ನೇ ನಡೆಸಿದ್ದು, ಅಖಾಡವನ್ನು ರಂಗೇರಿಸಿದೆ.
ಎರಡು ದಿನಗಳ ಹಿಂದಷ್ಟೇ ಕೋರ್ ಕಮಿಟಿ ಸಭೆ ನಡೆಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮಾರ್ಗದರ್ಶನ ಪಡೆದಿರುವ ಬಿಜೆಪಿ ನಾಯಕರು ಕ್ಷೇತ್ರವಾರು ಸಾಕಷ್ಟು ತಯಾರಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ಬಿಜೆಪಿ ಅಬ್ಬರಿಸಿದೆ. ಇನ್ನು ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಆಹ್ವಾನಿಸಲು ಬಿಜೆಪಿ ನಿರ್ಧರಿಸಿದೆ.
ಇದರ ಜತೆಗೆ ತಳಹಂತದಲ್ಲಿ ಪತೀ ಕ್ಷೇತ್ರದಲ್ಲೂ ವಿಸ್ತಾರಕರು ಬಿಜೆಪಿ ಪರ ಸಂದೇಶ ರವಾನೆ ಮಾಡುತ್ತಿದ್ದಾರೆ. ಬೂತ್ ಸಶಕ್ತಿಕರಣಕ್ಕೆ ಅಮಿತ್ ಶಾ ಮತ್ತೆ ಸೂಚನೆ ನೀಡಿದ್ದು, ಪೇಜ್ ಪ್ರಮುಖ್, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳನ್ನು ಪುನರ್ ಸಂಘಟಿಸಲಾಗಿದೆ. ಬಿಜೆಪಿಯ ಪಾರಂಪರಿಕ ಶೈಲಿಯ ಪ್ರಚಾರದ ಜತೆಗೆ ಆಧುನಿಕ ಜಾಲತಾಣಗಳ ಬಳಕೆಯೂ ಪ್ರಭಾವಶಾಲಿಯಾಗಿ ಬಳಕೆಯಾಗುತ್ತಿದೆ. ಚುನಾವಣ ನಿರ್ವಹಣ ಸಮಿತಿ, ಪ್ರಚಾರ ಸಮಿತಿ ರಚನೆಯಾಗಿದ್ದು, ವರಿಷ್ಠರು ಸೂಕ್ಷ್ಮವಾಗಿ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಅದರಲ್ಲಿಯೂ ವಿಶೇಷವಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾರಿಗೊಳಿಸಲು ನಿರ್ಧರಿಸಿರುವ ಎಸ್‌ಸಿ ಒಳಮೀಸಲು ವರ್ಗೀಕರಣ, ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲು ಹಂಚಿಕೆ, ಮುಸ್ಲಿಂರ ಮೀಸಲು ಸೌಲಭ್ಯ ವಜಾ ಇತ್ಯಾದಿ ವಿಚಾರಗಳು
ಬಿಜೆಪಿಗೆ ಅನುಕೂಲ ಕಲ್ಪಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜತೆಗೆ ಕರಾವಳಿ ಭಾಗದಲ್ಲಿ ಹಿಂದುತ್ವದ ಮತಗಳು ಇನ್ನೂ ಕ್ರೋಢಿಕೃತವಾಗಿದೆ ಎಂದು ಬಿಜೆಪಿ ಭಾವಿಸಿದ್ದು, ಹಿರಿತಲೆಗಳಿಗೆ ವಿಶ್ರಾಂತಿ ನೀಡುವ ಮೂಲಕ ಹೊಸಬರಿಗೆ ಅವಕಾಶ ನೀಡುವ ಸೂತ್ರವನ್ನು ರಾಜ್ಯದಲ್ಲೂ ಜಾರಿಗೆ ತರಲು ನಿರ್ಧರಿಸಿದೆ. ಇವೆಲ್ಲವೂ ಬಿಜೆಪಿ ಪರ ಅಲೆ ಸೃಷ್ಟಿಸಬಲ್ಲವೂ ಎಂದು ಪಕ್ಷ ನಂಬಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಮುಂಚೂಣಿಗೆ ತಂದಿದೆ.
ಪ್ಲಸ್ ಏನು?
-ರಾಜ್ಯದಲ್ಲಿ ಇನ್ನೂ ಮಸುಕಾಗದ ಪ್ರಧಾನಿ ಮೋದಿ ವರ್ಚಸ್ಸು
-ಬಿಜೆಪಿಯ ಸಂಘಟನಾತ್ಮಕ ಶಕ್ತಿ
-ಇತ್ತೀಚೆಗೆ ಜಾರಿಗೆ ತಂದ ಮೀಸಲು ನಿರ್ಣಯ
ಮೈನಸ್ ಏನು ?
-ಆಡಳಿತ ವಿರೋಧಿ ಅಲೆ
-ಮುಂಚೂಣಿ ನಾಯಕತ್ವದ ಕೊರತೆ
-ಆಂತರಿಕ ಭಿನ್ನಮತ. ಪಕ್ಷಾಂತರ ಸಮಸ್ಯೆ
ಭರ್ಜರಿ ತಯಾರಿ, ಕೈಪಡೆಯಲ್ಲಿ ಉತ್ಸಾಹ
ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ನೇತೃತ್ವದ ತಂಡಗಳು “ಪ್ರಜಾಧ್ವನಿ’ ಹೆಸರಿನಲ್ಲಿ ಇದುವರೆಗೆ 190 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡಿವೆ. ಜತೆಗೆ ಬಿಜೆಪಿ ಸರಕಾರದ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡಲು ಪ್ರಯತ್ನಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗೆ ಪೂರಕವಾಗಿ ಹಲವು ಸಮಿತಿಗಳನ್ನು ರಚಿಸಿ ಅವುಗಳಿಗೆ ಜವಾಬ್ದಾರಿ ನೀಡಿ ಕಾರ್ಯೋನ್ಮುಖಗೊಳಿಸಿದೆ. ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಪ್ರಚಾರ ಸಮಿತಿ ಹಾಗೂ ಡಾ|ಜಿ.ಪರಮೇಶ್ವರ್ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದ್ದು ಈ ನಿಟ್ಟಿನಲ್ಲಿ ಸಮಿತಿಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್‌ನ ವಾರ್‌ರೂಂ ಸದಾ ತಂತ್ರ-ಪ್ರತಿತಂತ್ರದಲ್ಲಿ ನಿರತವಾಗಿದೆ.
ವಿಶೇಷವೆಂದರೆ ಈ ಸಲ ಕಾಂಗ್ರೆಸ್ 50 ದಿನ ಮೊದಲೇ 124 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮೂಲಕ ನಾಮಪತ್ರ ಸಲ್ಲಿಕೆಗೆ ಕೆಲವೇ ಕೆಲವು ದಿನಗಳಿರುವಾಗ ಪಟ್ಟಿ ಬಿಡುಗಡೆ ಮಾಡುವ ಸಂಸ್ಕೃತಿಗೆ ವಿದಾಯ ಹೇಳಿದೆ. ಇದರಿಂದ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೆ ಹೆಚ್ಚಿನ ಸಮಯ ದೊರೆಯಲಿದೆ. ಮೊದಲ ಪಟ್ಟಿ ಬಿಡುಗಡೆ ಬಳಿಕ ಅಲ್ಲಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ಅಸಮಾಧಾನ ನಿವಾರಿಸುವ ಪ್ರಯತ್ನ ನಡೆದಿದೆ.
ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದಕ್ಕೂ ಕಸರತ್ತುಗಳು ನಡೆದಿದೆ. 2ನೇ ಸುತ್ತಿನ ಅಭ್ಯರ್ಥಿಗಳ ಆಯ್ಕೆಗೆ ಸೇರಿದ್ದ ಸ್ಕ್ರೀನಿಂಗ್ ಕಮಿಟಿ 45 ಕ್ಷೇತ್ರಗಳಿಗೆ ಅಂತಿಮ ಸ್ವರೂಪ ನೀಡಿದೆ. ಇನ್ನುಳಿದ 55 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಗುರುವಾರ ಮತ್ತೆ ಸಭೆ ಸೇರಲಿದೆ. ಬಹುತೇಕ ಈ ಸಭೆಯಲ್ಲಿ ಬಾಕಿ ಕೆªàತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ. ಒಂದೇ ಕ್ಷೇತ್ರಕ್ಕೆ 2 ರಿಂದ 3 ಇಲ್ಲವೇ 4 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರೆ ಅವರೆಲ್ಲರನ್ನು ಕೂರಿಸಿ ಸಂಧಾನ ನಡೆಸಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದೆ. ಇನ್ನು ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕಗಾಂಧಿ ಅವರ ಪ್ರವಾಸ ದಿನಗಳನ್ನು ನಿಗದಿಪಡಿಸುವ ಬಗ್ಗೆ ಆರಂಭಿಕ ಚರ್ಚೆಗಳು ನಡೆದಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಕಾಂಗ್ರೆಸ್ ಚುನಾವಣತಂತ್ರಗಾರಿಕೆ, ಪ್ರಚಾರ ಸಭೆಗಳು ಹಾಗೂ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಬಳಸಬಹುದಾದ ಅಸ್ತ್ರಗಳ ಬಗ್ಗೆ ತನ್ನದೇ ಆದ ಯೋಜನೆ ರೂಪಿಸುತ್ತಿದೆ.
ಪ್ಲಸ್ ಏನು?
-ಉಚಿತ ಅಕ್ಕಿ, ವಿದ್ಯುತ್ ಸಹಿತ ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳು.
-ಬಿಜೆಪಿ ಸರಕಾರದ ಮೇಲಿನ ಭ್ರಷ್ಟಾಚಾರ, ಹಗರಣ ಆರೋಪ
– ಪಕ್ಷ ಸಂಘಟನೆಗೆ ಕೈಗೊಂಡ ವಿವಿಧ ಕ್ರಮಗಳಿಂದಾಗಿ ಕೈಪಡೆಯಲ್ಲಿರುವ ಉತ್ಸಾಹ.
ಮೈನಸ್ ಏನು?
-ಸರಕಾರದ ವಿರುದ್ಧ ವಿಪಕ್ಷವಾಗಿ ನಡೆಸಿದ ಯಾವುದೇ ಹೋರಾಟ ತಾರ್ಕಿಕ ಅಂತ್ಯ ಕಾಣದಿರುವುದು.
-ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಹೋರಾಟದ ಹಿಂದೆ ಪಕ್ಷದ ಕೈವಾಡವಿದೆಯೆಂಬ ಆರೋಪ.
-ಡಿಕೆಶಿ-ಸಿದ್ದರಾಮಯ್ಯ ನಡುವಿನ ಶೀತಲ ಸಮರ.
ರಾಷ್ಟ್ರೀಯ ಪಕ್ಷಗಳಿಗಿಂತ ಮುಂದು
2023ರ ವಿಧಾನಸಭೆ ಚುನಾವಣೆಗೆ ಸಿದ್ದತೆ ಮತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ಗಿಂತ ಜೆಡಿಎಸ್ ಮುಂಚೂಣಿಯಲ್ಲಿತ್ತು. “ಮಿಷನ್-123′ ಮುಂದಿಟ್ಟುಕೊಂಡು 2022ರ ಮೇ ತಿಂಗಳಲ್ಲಿ ಜನತಾ ಜಲಾಧಾರೆ ಮತ್ತು ಅಕ್ಟೋಬರ್ ತಿಂಗಳಿಂದ ಪಂಚರತ್ನ ಯಾತ್ರೆ ಆರಂಭಿಸಿತ್ತು. 2022ರ ಡಿಸೆಂಬರ್ 19ರಂದೇ 93 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಈ ವಾರದಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಆದರೆ ಬಿಜೆಪಿ ಕಾಂಗ್ರೆಸ್‌ನ ಅಂತಿಮ ಪಟ್ಟಿ ಬಿಡುಗಡೆಗೆ ಕಾಯಲಾಗುತ್ತಿದೆ. ಆ ಬಳಿಕವೇ ಜೆಡಿಎಸ್‌ನ ಅಂತಿಮ ಪಟ್ಟಿ ಬಿಡುಗಡೆ ಆಗಲಿದೆ. ಈಗಾಗಲೇ 100 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಪೂರ್ಣಗೊಳಿಸಿ ಮೈಸೂರಿನಲ್ಲಿ ಯಶಸ್ವಿಯಾಗಿ ಸಮಾರೋಪ ಸಮಾರಂಭ ಮುಗಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಉಳಿದ ಕ್ಷೇತ್ರಗಳಿಗೆ ಪಂಚರತ್ನ ಯಾತ್ರೆ ಮುಂದುವರಿಸಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿ ಬಿಟ್ಟು ಹೋದ ರಾಜ್ಯದ 25ರಿಂದ 30 ವಿಧಾನಸಭಾ ಕ್ಷೇತ್ರಗಳಲ್ಲಿ “ಮಿನಿ ಪಂಚರತ್ನ ಯಾತ್ರೆ’ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಇದರ ಜತೆಗೆ ಮಾಜ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹೀಂ ನೇತೃತ್ವದ ತಂಡಗಳು ಚುನಾವಣ ಪ್ರಚಾರ ಆರಂಭಿಸಲಿದ್ದಾರೆ.
ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ, ಜನವಿರೋಧಿ ನೀತಿಗಳು ಹಾಗೂ ಕಾಂಗ್ರೆಸ್‌ನ ವೈಫಲ್ಯಗಳೊಂದಿಗೆ ಜನರ ಮುಂದೆ ಹೋಗುತ್ತಿದೆ. ದೇವೇಗೌಡರು, ಕುಮಾರಸ್ವಾಮಿ ಅವರ ಅವಧಿಯಲ್ಲಿ ಆಗಿರುವ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಚುನಾವಣ ಪ್ರಚಾರದ ಪ್ರಮುಖ ವಿಷಯವಾಗಿರಲಿದೆ. ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಅಲ್ಪಸಂಖ್ಯಾಕರು ಮತ್ತು ಹಿಂದುಳಿದ ವರ್ಗಗಳನ್ನು ಓಲೈಸುವುದು ನಮ್ಮ ಆದ್ಯತೆಯಾಗಿರಲಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.
ಪ್ಲಸ್ ಏನು?
-ಮಾಜಿ ಪ್ರಧಾನಿ ದೇವೇಗೌಡರ ಚಹರೆ
-ಪ್ರಾದೇಶಿಕತೆ, ನಾಡು-ನುಡಿ ವಿಚಾರಗಳು.
-ಜನತಾ ಜಲಧಾರೆ, ಪಂಚರತ್ನ ಯಾತ್ರೆ ಯಶಸ್ಸು
ಮೈನಸ್ ಏನು?
-ಉತ್ತರ ಕರ್ನಾಟಕ ಭಾಗದಲ್ಲಿ ಸಂಘಟನೆ ಕೊರತೆ
-ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳು ಇಲ್ಲದಿರುವುದು.
-ಪಕ್ಷ ಬಿಡುವವರ ಸಂಖ್ಯೆ ನಿರಂತರ ಹೆಚ್ಚಾಗುತ್ತಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.