ಅಭ್ಯರ್ಥಿ ಆಯ್ಕೆಗೆ ಬಿಜೆಪಿ “ಮತ ಪೆಟ್ಟಿಗೆ ಪ್ರಯೋಗ’; ಇದು ಗುಜರಾತ್ ಅಲ್ಲ ಕರ್ನಾಟಕ ಮಾದರಿ
ಯಶಸ್ವಿಯಾದರೆ ದೇಶದ ಇತರೆಡೆ ಅನುಷ್ಠಾನ; ನಾಳೆ ಪ್ರತೀ ಕ್ಷೇತ್ರದಲ್ಲೂ ಮತದಾನ
Team Udayavani, Mar 30, 2023, 6:15 AM IST
ಹುಬ್ಬಳ್ಳಿ:ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಅಭ್ಯರ್ಥಿಯಾರಾಗಬೇಕು ಎಂದು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಿಂದ ಮತದಾನ ಸಹಿತ 10 ಅಂಶಗಳಡಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸಜ್ಜಾಗಿದೆ. ಮಾ.31ರಿಂದ ರಾಜ್ಯದ 39 ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಪ್ರಕ್ರಿಯೆ ಆರಂಭವಾಗಲಿದೆ.
ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೇಶ ವಿವಿಧೆಡೆಗಳಲ್ಲಿ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಇದೇ ಮಾದರಿ ಅನುಷ್ಠಾನಗೊಳಿಸುವ ಸಾಧ್ಯತೆ ಇದ್ದು, ಇದು ಸಾಧ್ಯವಾದರೆ ಅದು ಕರ್ನಾಟಕ ಮಾದರಿ ಎಂದೇ ಹೆಸರಾಗಲಿದೆ.
ರಾಜ್ಯದಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಲೇಬೇಕೆಂಬ ಛಲಕ್ಕೆ ಬಿದ್ದಿರುವ ಬಿಜೆಪಿ ಈಗಾಗಲೇ ರಾಜ್ಯಾದ್ಯಂತ ಜನಸಂಕಲ್ಪ, ವಿಜಯ ಸಂಕಲ್ಪ ಯಾತ್ರೆ, ಸೌಲಭ್ಯಗಳ ನೀಡಿಕೆ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ಉದ್ಘಾಟನೆ ನೆಪದಲ್ಲಿ ರಾಷ್ಟ್ರ ನಾಯಕರನ್ನು ಆಹ್ವಾನಿಸಿ ಸಮಾವೇಶ ನಡೆಸುವ, ಪಕ್ಷದ ವರಿಷ್ಠರಾದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ರೋಡ್ ಶೋ ಇತ್ಯಾದಿ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಅಭ್ಯರ್ಥಿಗಳ ಆಯ್ಕೆಗೆ ಹೊಸ ಯತ್ನಕ್ಕೆ ಮುಂದಡಿ ಇರಿಸಿದೆ.
ಏನಿದು ಕರ್ನಾಟಕ ಮಾಡೆಲ್?: ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ, ತಂತ್ರಗಾರಿಕೆ ವಿಚಾರ ಬಂದಾಗಲೆಲ್ಲ ಗುಜರಾತ್ ಮಾದರಿ, ಉತ್ತರ ಪ್ರದೇಶ ಮಾದರಿ ಅನುಕರಣೆ ಎನ್ನಲಾಗುತ್ತಿತ್ತು. ಅಲ್ಲಿ ಕೈಗೊಂಡ ಪ್ರಯೋಗ-ಕ್ರಮಗಳನ್ನೇ ರಾಜ್ಯದಲ್ಲೂ ಕೈಗೊಳ್ಳಲಾಗುತ್ತದೆ ಎಂದೇ ವ್ಯಾಖ್ಯಾ ನಿಸಲಾಗುತ್ತಿತ್ತು. ಆದರೆ ಇದೀಗ ಬಿಜೆಪಿ ಟಿಕೆಟ್ ನೀಡಿಕೆ ವಿಚಾರದಲ್ಲಿ ಕರ್ನಾಟಕದ್ದೇ ಮಾದರಿ ಪ್ರಯೋಗಕ್ಕೆ ಮುಂದಾಗಿದೆ.
ಆಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಮೀಕ್ಷೆಗಳ ಮೂಲಕ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಬಗೆಗಿನ ಅನಿಸಿಕೆ ಏನಿದೆ, ಅಭ್ಯರ್ಥಿಯಾಗಿಸಿದರೆ ಗೆಲುವಿನ ಲೆಕ್ಕಾಚಾರ ಏನಾಗಬಹುದು ಎಂಬುದು ಸಹಿತ ಒಟ್ಟು 10 ಅಂಶಗಳ ಅಡಿಯಲ್ಲಿ ಅಳೆದು-ತೂಗಿ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸಲು ಬಿಜೆಪಿ ಯೋಜಿಸಿದೆ. ಅಭ್ಯರ್ಥಿ ಆಯ್ಕೆಗೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಮತದಾನ ಹತ್ತು ಅಂಶಗಳಲ್ಲಿ ಒಂದಾಗಿದೆ.
ಮಾ.31ರಿಂದ ರಾಜ್ಯಾದ್ಯಂತ ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಪದಾಧಿಕಾರಿಗಳಿಂದ ಮತದಾನ ನಡೆಯಲಿದೆ. ಕೆಲ ಜಿಲ್ಲೆಗಳಲ್ಲಿ ನಗರ-ಗ್ರಾಮೀಣ ಎಂಬ ಜಿಲ್ಲೆಗಳಿದ್ದು, ಅವುಗಳನ್ನು ವಿಲೀನಗೊಳಿಸಿ ಒಂದೇ ಕಡೆ ಮತದಾನ ನಡೆಸಲಾಗುತ್ತಿದ್ದು, ಇದರಿಂದ ಸುಮಾರು 34 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ವೀಕ್ಷಣೆ ಹಾಗೂ ಮೇಲುಸ್ತುವಾರಿಗೆ ಬಿಜೆಪಿ ರಾಜ್ಯಮಟ್ಟದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವರನ್ನು ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಮತದಾನ ಮುಗಿದ ಅನಂತರದಲ್ಲಿ ಸೀಲ್ ಆಗುವ ಮತ ಪೆಟ್ಟಿಗೆಯನ್ನು ಜಿಲ್ಲೆಗೆ ನಿಯೋಜನೆಗೊಂಡವರು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಹೇಗೆ ನಡೆಯಲಿದೆ ಮತದಾನ?: ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಒಂದು ಜಿಲ್ಲೆಗೆ ಐದಾರು ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಯಾ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರಾಗಬೇಕೆಂದು ಪಕ್ಷದ ಪ್ರಮುಖ ಪದಾಧಿಕಾರಿಗಳ ಅನಿಸಿಕೆ ಸಂಗ್ರಹಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಪೆಟ್ಟಿಗೆ ಇರಿಸಲಾಗುತ್ತದೆ. ಬಿಜೆಪಿಯಲ್ಲಿ ಶಕ್ತಿ ಕೇಂದ್ರಗಳ ಮೇಲ್ಪಟ್ಟ ವಿವಿಧ ವಿಭಾಗಗಳ ಪದಾಧಿಕಾರಿಗಳು ತಮ್ಮ ಕ್ಷೇತ್ರದ ಅಭ್ಯರ್ಥಿಯಾರಾಗಬೇಕೆಂದು ನಿರ್ಧರಿಸುವ ಹಕ್ಕು ನೀಡಲಾಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಈ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬಿಜೆಪಿಯ ಮಾತೃ ಘಟಕದ ಪದಾಧಿಕಾರಿಗಳು, ಮಹಿಳಾ, ರೈತ, ಅಲ್ಪಸಂಖ್ಯಾಕ, ಪರಿಶಿಷ್ಟ ಜಾತಿ-ಪಂಗಡ, ಯುವ ಮೋರ್ಚಾ, ಹಿಂದುಳಿದ, ಕಾರ್ಮಿಕ ಹೀಗೆ ವಿವಿಧ ಘಟಕಗಳ ಆಯಾ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ತಮ್ಮ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ಅವರ ಹೆಸರು ಬರೆದು ಮತ ಪೆಟ್ಟಿಗೆಗೆ ಹಾಕಬೇಕಿದೆ. ಪದಾಧಿಕಾರಿಗಳ ಮೇಲೂ ಪ್ರಭಾವ ಬೀರುವ ಇಲ್ಲವೆ ಹಾಲಿ ಶಾಸಕರು ತಮ್ಮದೇ ಶಕ್ತಿ ಪ್ರದರ್ಶಿಸುವುದಕ್ಕೆ ಅವಕಾಶ ನೀಡದಂತೆ ಬೇರೆ ಜಿಲ್ಲೆಯ ಪಕ್ಷದ ನಾಯಕರನ್ನು ಮೇಲುಸ್ತುವಾರಿಗೆ ನಿಯೋಜಿಸಲಾಗಿದೆ .
ಮೂರು ಹೆಸರುಗಳು ಶಿಫಾರಸು: ಮಾ.31ರಂದು ಆಯಾ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಯಾರೆಂಬುದರ ಬಗ್ಗೆ ಪಕ್ಷದ ಪದಾಧಿಕಾರಿಗಳಿಂದ ಮತದಾನ ನಡೆದ ಅನಂತರ ಮತ ಪೆಟ್ಟಿಗೆಗಳನ್ನು ಬೆಂಗಳೂರಿಗೆ ತಂದು ಅಲ್ಲಿಯೇ ತೆರೆಯಲಾಗುತ್ತದೆ. ಎ.1-2ರಂದು ಬೆಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿಯೂ ಅಭ್ಯರ್ಥಿ ಯಾರಾಗಬೇಕು ಎಂಬುದರ ಅನಿಸಿಕೆಗಳನ್ನು ಸಂಗ್ರಹಿಸಲಾಗುತ್ತದೆ. ಒಂದು ಜಿಲ್ಲೆಗೆ ಅರ್ಧ ತಾಸು ಸಮಯ ನೀಡುವ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.
ರಾಜ್ಯಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪದಾಧಿಕಾರಿಗಳ ಮತದಾನದ ಫಲಿತಾಂಶ ಸೇರಿದಂತೆ ಪಕ್ಷ ನಿಗದಿಪಡಿಸಿದ 10 ಅಂಶಗಳ ಮಾಹಿತಿ ಕ್ರೋಡೀಕರಿಸಲಾಗುತ್ತದೆ. ಒಂದು ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಾಗುತ್ತದೆ. ಸಂಸದೀಯ ಮಂಡಳಿ ಸಭೆಯಲ್ಲಿ ಪ್ರತೀ ಕ್ಷೇತ್ರಕ್ಕೆ ಮೂವರಲ್ಲಿ ಒಬ್ಬರನ್ನು ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.
ಎ.10 ವೇಳೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ?
ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸರ್ಕಸ್ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ಎ.10ರ ವೇಳೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಮತದಾನ ಸಹಿತ 10 ಅಂಶಗಳ ಪರಿಗಣನೆ ನಡುವೆಯೂ ಈಗಾಗಲೇ ಬಿಜೆಪಿ ಹೈಕಮಾಂಡ್ ಕೆಲ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ ಎಂದು ಹೇಳಲಾಗುತ್ತಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.